ತೆಂಗಿನ ಹಂಗು ತೊರೆಯಲು ಸಾಧ್ಯವೇ?

ತೆಂಗಿನಮರವು ಬಹುಪಯೋಗಿಯಾದ್ದರಿಂದ ಅದನ್ನು ‘ಕಲ್ಪವೃಕ್ಷ’ ಎಂದು ಉಲ್ಲೇಖಿಸಿರುವುದು ಸೂಕ್ತವಾಗಿದೆ. ತೆಂಗಿನ ಮರದಿಂದ ಸಿಗುವ ಪ್ರತಿಯೊಂದು ವಸ್ತುವೂ ಮನುಕುಲಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ. ತೆಂಗು ಆಹಾರವಾಗಿ, ಪಾನೀಯವಾಗಿ, ಇಂಧನವಾಗಿ ಮತ್ತು ಮನೆ ನಿರ್ಮಾಣದಂತಹ ಕೆಲಸಗಳಿಗೆ ಬಳಕೆಯಾಗುತ್ತಿದೆ. ಭಾರತದಲ್ಲಿ ಲಕ್ಷಾಂತರ ಕುಟುಂಬಗಳು ತೆಂಗನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿವೆ.

Update: 2024-09-01 06:16 GMT

ಇತ್ತೀಚೆಗೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಿ ಹಬ್ಬ ಮುಗಿಯಿತು. ನಾವು ಚಿಕ್ಕವರಿದ್ದಾಗ ಪಂಚಮಿ ಹಬ್ಬದಲ್ಲಿ ಜೂಜಾಟ ಬಲು ಜೋರಾಗಿ ನಡೆಯುತ್ತಿತ್ತು. ಬಹುತೇಕ ದೈಹಿಕ ಕಸರತ್ತುಗಳು ಅಲ್ಲಿ ಪ್ರದರ್ಶನವಾಗುತ್ತಿದ್ದವು. ಕಲ್ಲಿನ ಗುಂಡನ್ನು ಎತ್ತುವುದು, ಬಂಡಿಗಾಲಿ ಬಿಚ್ಚಿ ತೊಡಿಸುವುದು, ಹಲ್ಲಿನಿಂದ ಮರದ ನೇಗಿಲು ಎತ್ತುವುದು ಮುಂತಾದ ಸ್ಪರ್ಧೆಗಳು ನಡೆಯುತ್ತಿದ್ದವು. ಇವುಗಳ ಜೊತೆಗೆ ನಿಂಬೆಹಣ್ಣು, ತೆಂಗಿನಕಾಯಿ ಎಸೆಯುವ ಸ್ಪರ್ಧೆಗಳು ಸಾಮಾನ್ಯವಾಗಿದ್ದವು. ತೆಂಗಿನ ಕಾಯಿಯನ್ನು ಪಾದದ ಮೇಲೆ ಇಟ್ಟುಕೊಂಡು ಜಾಡಿಸಿ ಒಗೆಯುವುದು ಒಂದು ವಿಭಿನ್ನ ಕಸರತ್ತಿನ ಆಟವಾಗಿತ್ತು. ಚಿಕ್ಕವರಾದ ನಾವು ತೆಂಗಿನ ಕಾಯಿ ಸ್ಪರ್ಧಾಳುಗಳ ಹಿಂದೆ ಮುಂದೆ ಓಡಾಡುತ್ತಾ ಇಡೀ ಊರು ಸುತ್ತುತ್ತಿದ್ದೆವು.

ಮೊನ್ನೆ ಪಂಚಮಿಯಂದು ಒಂದು ತಂಡವು ಜೂಜಾಡುತ್ತಾ ಬಂದಾಗ ಬಾಲ್ಯದ ದಿನಗಳು ನೆನಪಾದವು. ಅದರಲ್ಲೂ ತೆಂಗಿನಕಾಯಿ ಸ್ಪರ್ಧೆ ನೆನಪಾಗಿತ್ತು. ಅದಕ್ಕೆ ಕಾರಣವೂ ಇದೆ. ತೆಂಗಿನಕಾಯಿ ಎಲ್ಲರಿಗೂ ಬೇಕಾದ ವಸ್ತು. ಆಹಾರದಿಂದ ಪೂಜೆ ಪುನಸ್ಕಾರದವರೆಗಿನ ವಿವಿಧ ಕೆಲಸ ಕಾರ್ಯಗಳಿಗೆ ತೆಂಗಿನಕಾಯಿ ಬೇಕೇ ಬೇಕು. ಇಂತಹ ಮಹತ್ವ ಪಡೆದ ತೆಂಗಿನಕಾಯಿಗೆ ಒಂದು ದಿನ ಸಾಕೇ ಎಂಬ ಪ್ರಶ್ನೆ ಉದ್ಭವಿಸಿತು.

‘ಸೆಪ್ಟಂಬರ್-2ರಂದು ವಿಶ್ವ ತೆಂಗು ದಿನ’ವೆಂದು ಆಚರಿಸಲಾಗುತ್ತದೆ. ಕೋಕೋಸ್ ಕುಲದ ಉಳಿದ ಏಕೈಕ ಜಾತಿಯೆಂದರೆ ತೆಂಗಿನ ಮರ. ಇದು ತಾಳೆ ಮರಗಳ ಅರೆಕೇಸಿ ಕುಟುಂಬಕ್ಕೆ ಸೇರಿದೆ. ಇದನ್ನು ಆಹಾರ, ಇಂಧನ, ಸೌಂದರ್ಯವರ್ಧಕಗಳು, ಸಾಂಪ್ರದಾಯಿಕ ಔಷಧಗಳು ಮತ್ತು ಕಟ್ಟಡ ಸಾಮಗ್ರಿಗಳನ್ನು ತಯಾರಿಸಲು ಬಳಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯದ ವಿಷಯದಲ್ಲಿ ತೆಂಗಿನಕಾಯಿ ಮಹತ್ವದ ಸ್ಥಾನ ಪಡೆದಿದೆ. ತೆಂಗಿನ ಮರದ ‘ಎಳನೀರು’ ಎಂದು ಜನಜನಿತವಾದ ಎಳೆ ತೆಂಗಿನಕಾಯಿ ನೀರು ಆರೋಗ್ಯಕ್ಕೆ ಜೀವಂತ ಜಲ ಎಂದೇ ಪ್ರತಿಬಿಂತವಾಗಿದೆ. ಕಲಬೆರಕೆಯಾಗದ ಏಕೈಕ ಪಾನೀಯ ಎಂದರೆ ಅದು ತೆಂಗಿನಕಾಯಿ ನೀರು ಮಾತ್ರ ಎನ್ನಬಹುದು. ಅದರಲ್ಲಿನ ಆರೋಗ್ಯ ಗುಣಗಳು ಅಪಾರ. ಅದಕ್ಕೆಂದೇ ವೈದ್ಯರು ದಿನಕ್ಕೆ ಒಂದು ಕಪ್ನಷ್ಟು ತೆಂಗಿನನೀರು ಕುಡಿಯುವುದು ಆರೋಗ್ಯವನ್ನು ಕಾಪಾಡುತ್ತದೆ ಎಂದು ಸಲಹೆ ಮಾಡುತ್ತಾರೆ. ಇನ್ನು ಬಲಿತ ಕೊಬ್ಬರಿಯ ಸಂಸ್ಕರಣೆಯಿಂದ ತೆಗೆದ ಹಾಲು ಸಹ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಸಿ ಕೊಬ್ಬರಿಯಿಂದ ತೆಗೆದ ಹಾಲು ಎಲ್ಲೆಡೆ ದೊರೆಯುತ್ತದೆ. ಇದು ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿರುತ್ತದೆ. ಆದ್ದರಿಂದ ನಿಯಮಿತವಾಗಿ ಸೇವಿಸುವುದು ಒಳಿತು.

ತೆಂಗು ಕೆಲವು ಉನ್ನತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉದಾಹರಿಸ ಲಾಗಿದೆ. ತೆಂಗಿನ ನೀರು ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸ್ನಾಯುಗಳು ಮತ್ತು ನರಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತವೆ. ತೆಂಗಿನ ನೀರು ಆಸ್ಕೋರ್ಬಿಕ್ ಆಮ್ಲ, ಬಿ-ಜೀವಸತ್ವಗಳು ಮತ್ತು ಪ್ರೊಟೀನ್ಗಳಲ್ಲಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆಗಳಲ್ಲಿ ಸಮೃದ್ಧವಾಗಿದೆ ಮತ್ತು ಸಂಪೂರ್ಣವಾಗಿ ಕೊಬ್ಬಿನಿಂದ ಮುಕ್ತವಾಗಿದೆ. ತೆಂಗಿನ ಆಕ್ಸಿಡೇಟಿವ್ ಅಂಗಾಂಶ ಹಾನಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಅದರಲ್ಲಿನ ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್ಗಳು ಮತ್ತು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ಮೂಲವನ್ನು ಹೊಂದಿರುತ್ತದೆ. ತೆಂಗಿನೆಣ್ಣೆಯು ಉತ್ತಮ ಆಹಾರ ಮತ್ತು ಔಷಧವಾಗಿದೆ ಮತ್ತು ಇದನ್ನು ಸೌಂದರ್ಯವರ್ಧಕವಾಗಿ ಬಳಸಬಹುದು.

ತೆಂಗಿನಮರವು ಬಹುಪಯೋಗಿ ಯಾದ್ದರಿಂದ ಅದನ್ನು ‘ಕಲ್ಪವೃಕ್ಷ’ ಎಂದು ಉಲ್ಲೇಖಿಸಿರುವುದು ಸೂಕ್ತವಾಗಿದೆ. ತೆಂಗಿನ ಮರದಿಂದ ಸಿಗುವ ಪ್ರತಿಯೊಂದು ವಸ್ತುವೂ ಮನುಕುಲಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ. ತೆಂಗು ಆಹಾರವಾಗಿ, ಪಾನೀಯವಾಗಿ, ಇಂಧನವಾಗಿ ಮತ್ತು ಮನೆ ನಿರ್ಮಾಣದಂತಹ ಕೆಲಸಗಳಿಗೆ ಬಳಕೆಯಾಗುತ್ತಿದೆ. ಭಾರತದಲ್ಲಿ ಲಕ್ಷಾಂತರ ಕುಟುಂಬಗಳು ತೆಂಗನ್ನು ತಮ್ಮ ಜೀವನೋಪಾಯಕ್ಕಾಗಿ ಅವಲಂಬಿಸಿವೆ. ನೇರವಾಗಿ ಅಥವಾ ಪರೋಕ್ಷವಾಗಿ ಭಾರತವು ಪ್ರಪಂಚದಲ್ಲಿ ತೆಂಗಿನಕಾಯಿ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶವು ಭಾರತದಲ್ಲಿ ತೆಂಗು ಉತ್ಪಾದಿಸುವ ಪ್ರಮುಖ ರಾಜ್ಯಗಳಾಗಿದ್ದು, ವಿಸ್ತೀರ್ಣ ಮತ್ತು ಉತ್ಪಾದನೆಯ 90 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿದೆ. ವೈಜ್ಞಾನಿಕ ಕೃಷಿ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ತೆಂಗಿನ ಉತ್ಪಾದಕತೆಯನ್ನು ಹೆಚ್ಚಿಸಲು ಉತ್ತಮ ಅವಕಾಶವಿದೆ.

ಕರ್ನಾಟಕದಲ್ಲಿ ತೆಂಗಿನ ಕೃಷಿಯು ಮುಖ್ಯವಾಗಿ 10 ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದೆ. ಮತ್ತೊಂದೆಡೆ ಇತ್ತೀಚಿನ ವರ್ಷಗಳಲ್ಲಿ ಕೃಷಿ ಪದ್ಧತಿ ಮತ್ತು ತಳಿಗಳಲ್ಲಿನ ಸುಧಾರಣೆಗಳು ಹೆಚ್ಚಿನ ಇಳುವರಿ ತೆಂಗಿನ ಮರಗಳನ್ನು ಉತ್ಪಾದಿಸಿವೆ. ಈ ನಿಟ್ಟಿನಲ್ಲಿ ತೆಂಗಿನಕಾಯಿ ವ್ಯಾಪಕವಾಗಿ ಹರಡಿಕೊಂಡಿದ್ದರೂ ಅದರ ಉತ್ಪಾದನೆಯು ಕರ್ನಾಟಕ ರಾಜ್ಯದಲ್ಲಿ ತೀವ್ರ ಏರಿಳಿತಗಳಿಗೆ ಒಳಗಾಗುತ್ತದೆ. ಇದಕ್ಕೆ ವಿವಿಧ ಕಾರಣಗಳಿವೆ. ಹೆಚ್ಚಿನ ತಾಪಮಾನವು ತೆಂಗಿನ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗಿದೆ. ಭಾರತದಲ್ಲಿನ ಪ್ರಮುಖ ಉಷ್ಣವಲಯದ ಬೆಳೆಯಾದ ತೆಂಗಿನಕಾಯಿಯು ಹೆಚ್ಚಿನ ತಾಪಮಾನದ ಕಾರಣದಿಂದಾಗಿ ಉತ್ಪಾದನೆಯಲ್ಲಿ ಕುಸಿತವನ್ನು ಕಾಣುತ್ತಿದೆ. ಈ ಕೊರತೆ ನೀಗಿಸಲು ಸಂಶೋಧಕರು ಮತ್ತು ರೈತರು ತೆಂಗಿನ ತೋಟಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಎದುರಿಸಲು ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಮಲ್ಚಿಂಗ್, ಅಂತರ-ಬೆಳೆ ಮತ್ತು ಸುಧಾರಿತ ನೀರಾವರಿ ವಿಧಾನಗಳಂತಹ ಕೃಷಿ ಮತ್ತು ಆನುವಂಶಿಕ ಹೊಂದಾಣಿಕೆಯ ತಂತ್ರಗಳನ್ನು ಅನ್ವೇಷಿಸುತ್ತಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಪ್ರಕಾರ, ತೆಂಗಿನ ಬೆಳವಣಿಗೆ ಮತ್ತು ಇಳುವರಿಗೆ ಸೂಕ್ತವಾದ ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಮತ್ತು ಸಾಪೇಕ್ಷ ಆರ್ದ್ರತೆಯು ಶೇ. 60 ಕ್ಕಿಂತ ಹೆಚ್ಚು ಇರಬೇಕು. ಆದರೆ 2024ರ ಮಾರ್ಚ್ನಿಂದ ಜೂನ್ ಸರಾಸರಿ ತಾಪಮಾನ 35 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿದ್ದುದು ನಮಗೆಲ್ಲಾ ಅನುಭವಕ್ಕೆ ಬಂದಿದೆ. ಜೊತೆಗೆ ಕಡಿಮೆ ಸಾಪೇಕ್ಷ ಆರ್ದ್ರತೆ ಶೇ. 30ರಿಂದ ಶೇ. 50. ಇಂತಹ ಪರಿಸ್ಥಿತಿಗಳು ತೆಂಗಿನ ಮರಗಳಿಗೆ ಸೂಕ್ತವಲ್ಲ. ಹಾಗಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಕೆಯ ಕೊರತೆಗೆ ಕಾರಣವಾಯಿತು. ತೆಂಗಿನಕಾಯಿ ಪೂರೈಕೆ ಕೊರತೆಯಿಂದಾಗಿ ಬೆಲೆ ಏರಿಕೆಯಾಗಿದೆ.

ಕೇವಲ ತಾಪಮಾನ ಏರಿಕೆಯಲ್ಲದೆ ಮಣ್ಣಿನ ತೇವಾಂಶ ಸಂರಕ್ಷಣೆ, ಬೇಸಿಗೆ ನೀರಾವರಿ, ಹನಿ ನೀರಾವರಿ ಮತ್ತು ರಸಗೊಬ್ಬರಗಳ ಅನ್ವಯದಂತಹ ಕೃಷಿ ರೂಪಾಂತರಗಳು ಸಹ ತೆಂಗಿನಕಾಯಿ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿನ ನಷ್ಟವನ್ನು ಉಂಟುಮಾಡಿವೆ. ಇದರಿಂದ ಉತ್ಪಾದನೆಯು ಗಣನೀಯವಾಗಿ ಕಡಿಮೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಇಳುವರಿ ಕಡಿಮೆಯಾಗುತ್ತಿದೆ. ಇಳುವರಿಯನ್ನು ಹೆಚ್ಚಿಸಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಅದಕ್ಕಾಗಿ ರೈತರಿಗೆ ಸೂಕ್ತ ತರಬೇತಿ ಮತ್ತು ಶಿಕ್ಷಣದ ಅಗತ್ಯವಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು, ಸಕಾಲಿಕ ಮತ್ತು ಸೂಕ್ತವಾದ ಫಲೀಕರಣ, ದಿನನಿತ್ಯದ ನೀರಾವರಿ, ಕೀಟ ಮತ್ತು ರೋಗ ನಿಯಂತ್ರಣ, ಸರಿಯಾದ ಸಮರುವಿಕೆಯನ್ನು, ಸಕಾಲಿಕ ಮತ್ತು ಪರಿಣಾಮಕಾರಿ ಕೊಯ್ಲು ಮತ್ತು ತೆಂಗಿನ ಸುಗ್ಗಿಯ ಇಳುವರಿಯನ್ನು ಹೆಚ್ಚಿಸಲು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಲು ರೈತರಿಗೆ ತರಬೇತಿಯ ಅಗತ್ಯವಿದೆ.

ಇಳುವರಿ ಹೆಚ್ಚಿಸಲು ಕೈಗೊಳ್ಳಬೇಕಾದ ಹೊಸ ವಿಧಾನಗಳ ಕುರಿತು, ಮಾರುಕಟ್ಟೆ ವ್ಯವಸ್ಥೆ ಕುರಿತು ಅಗತ್ಯ ಮಾಹಿತಿ ನೀಡುವ ಕೆಲಸ ಆಗಬೇಕಿದೆ. ತೆಂಗಿನ ಮರಗಳ ಆರೋಗ್ಯ ರಕ್ಷಣೆಯಲ್ಲಿ ರೈತರು ವಹಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಬೇಕಾಗಿದೆ. ನಿಯಮಿತ ಮೇಲ್ವಿಚಾರಣೆ, ಆರಂಭಿಕ ರೋಗನಿರ್ಣಯ ಮತ್ತು ತ್ವರಿತ ಚಿಕಿತ್ಸೆಯು ಎಲ್ಲಾ ಪರಿಣಾಮಕಾರಿ ಕೀಟ ಮತ್ತು ರೋಗ ನಿಯಂತ್ರಣ ತಂತ್ರಗಳ ಬಗ್ಗೆ ರೈತರು ಅಗತ್ಯ ಶಿಕ್ಷಣ ಪಡೆಯಬೇಕಾಗಿದೆ. ಶಿಕ್ಷಣವು ಹಾನಿ ಮತ್ತು ಉತ್ಪಾದನೆಯ ಮೇಲೆ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶ್ವ ತೆಂಗಿನ ಕಾಯಿ ದಿನವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿ ಎಂಬ ಆಶಯ ನಮ್ಮದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಆರ್. ಬಿ. ಗುರುಬಸವರಾಜ

contributor

Similar News