ಜನಮನ

Update: 2023-03-11 19:30 GMT

ನಾಲ್ಕು ಜನ ಮೆಚ್ಚುವ ಹಾಗೆ ಇರಬೇಕು ಅಂತಾನೋ, ನೋಡಿದವರು ಏನು ಹೇಳಲ್ಲ? ಅಂತಾನೋ, ಮನೇಲಿ ಗಂಜಿಗೂ ಗತಿ ಇಲ್ಲದೆ ಇದ್ದರೂ ನಾಲ್ಕು ಜನರ ಮುಂದೆ ತಲೆ ತಗ್ಗಿಸೋ ಹಾಗೆ ಆಗಬಾರದು, ಸಮಾಜದಲ್ಲಿ ಮಾನ ಮರ್ಯಾದೆ ಮುಖ್ಯ ಅಂತಾನೋ; ಒಟ್ಟಾರೆ ವ್ಯಕ್ತಿಯ ಅರ್ಹತೆ ಮತ್ತು ಅನರ್ಹತೆಗಳು ಸಮೂಹಗಳ ಮನ್ನಣೆಯ ಆಧಾರದಲ್ಲಿ ಅಳೆಯುವಂತಾಗಿರುವುದು ಏನೇನೂ ಹೊಸತಲ್ಲ. ಇನ್ನು ಒಬ್ಬ ವ್ಯಕ್ತಿಯ ಜೀವನ ಮತ್ತು ಸಾಧನೆ ಎಷ್ಟು ಹೆಚ್ಚು ಜನಗಳಿಗೆ ತಲುಪಿದೆ ಮತ್ತು ಅವರಿಂದ ಪ್ರಶಂಸೆಗೆ ಒಳಗಾಗಿದೆ ಎನ್ನುವುದರ ಆಧಾರದಲ್ಲಿ ಜನಪ್ರಿಯತೆಯನ್ನು ಅಳೆಯಲಾಗುವುದು.

ಒಂದು ವೇಳೆ ಹೆಚ್ಚು ಜನರಿಂದ ಖಂಡನೆಗೆ ಒಳಗಾಗುತ್ತಿದ್ದಾರೆಂದರೆ ಅದೇ ರೀತಿಯಲ್ಲಿ ಆ ವ್ಯಕ್ತಿ ಮನ್ನಣೆಗೆ ಒಳಗಾಗಿಸುವಂತಹ ಜನರನ್ನೂ ಹುಡುಕಿಕೊಳ್ಳುವನು. ಒಟ್ಟಾರೆ ವ್ಯಕ್ತಿಯ ಆಲೋಚನೆಗಳು ಅದೆಷ್ಟೇ ವ್ಯಕ್ತಿಗತವಾಗಿದ್ದರೂ ಅವನು ಅಥವಾ ಅವಳು ತನ್ನ ಆತ್ಮಗೌರವವನ್ನು ಸಮಾಜದ ಮನ್ನಣೆಯ ಆಯಾಮದಿಂದಲೇ ನೋಡುವುದು ಮತ್ತು ಅದರಂತೆಯೇ ಪ್ರಕಟಿಸಿಕೊಳ್ಳುವುದು ಅನಿವಾರ್ಯ ಎಂಬಂತಾಗಿಬಿಡುತ್ತದೆ. ತಾನು ತನಗೆ ಎಷ್ಟರ ಮಟ್ಟಿಗೆ ಮೌಲ್ಯವನ್ನು ಕೊಟ್ಟುಕೊಳ್ಳುತ್ತೇನೆ ಎಂಬುದೇ ಸಾಮಾಜಿಕ ಮಾನ್ಯತೆ, ಜನ ಮನ್ನಣೆಯ ಮೇಲೆ ನಿರ್ಧಾರಿತವಾದಾಗ, ಸಮೂಹಗಳು ಹೊಗಳಿದಾಗ ವ್ಯಕ್ತಿ ಉಬ್ಬುವುದು, ತೆಗಳಿದಾಗ ಕುಗ್ಗುವುದು ಅನುಕ್ರಮವಾಗಿ ನಡೆದುಬರುವಂತಹುದೇ ಆಗಿರುತ್ತದೆ. ನಾನೂ ಎಲ್ಲರಂತೆ (ಅವರು ಗುರುತಿಸುವಂತಹ ಉತ್ತಮಸ್ಥಿತಿಯ ಅನುಸಾರ) ಚೆನ್ನಾಗಿ ಬಾಳಬೇಕು, ಎಲ್ಲರಿಂದ ಪ್ರಶಂಸೆಗೊಳಗಾಗಬೇಕು, ಯಾರಿಂದಲೂ ಖಂಡನೆಗೆ ಒಳಗಾಗಬಾರದು; ಹೀಗೆ ಸಾಮಾನ್ಯವಾದ ಸಾಮಾಜಿಕ ಮನ್ನಣೆಯೊಳಗೆ ಒಳಗಾಗುವುದು ಒಂದು ರೀತಿ. ಇದು ಮುಂದುವರಿದಂತೆ ಈ ಸಮಾಜವು ಉನ್ನತವೆಂದು ಗುರುತಿಸುವ ಸ್ಥಾನಮಾನದಲ್ಲಿ ನಾನಿರಬೇಕು, ಆ ಅಧಿಕಾರದಲ್ಲಿ ಇತರರನ್ನು ನನ್ನ ಹತೋಟಿಯಲ್ಲಿಟ್ಟುಕೊಂಡು ಅವರು ನನ್ನ ಆಜ್ಞಾನುವರ್ತಿಗಳಾಗಿರಬೇಕು, ನನ್ನ ಮಾತಿಗೆ ಎದುರಾಡಿದರೆ ನನ್ನ ಕೋಪದ ಶಿಕ್ಷೆ ಮತ್ತು ನನ್ನ ಮೆಚ್ಚುಗೆಗೆ ಒಳಗಾದರೆ ಕರುಣೆ ಮತ್ತು ಔದಾರ್ಯದ ಭಿಕ್ಷೆ ಕೊಡುವಂತಿರಬೇಕು ಎಂಬುದು ಇನ್ನೊಂದು ಆಯಾಮ.

ಇದಕ್ಕೆ ಸ್ವಲ್ಪವ್ಯತಿರಿಕ್ತವಾಗಿ ಎಲ್ಲರೂ ತನ್ನನ್ನು ಮೆಚ್ಚುತ್ತಲೇ, ಆರಾಧಿಸುತ್ತಲೇ ಇದ್ದು ತಾನು ಶ್ರೀಮಂತಿಕೆ, ಜನಾನುರಾಗವನ್ನು ಹೊಂದುತ್ತಾ ಅತ್ಯುತ್ತಮ ಜೀವನ ಮಟ್ಟವನ್ನು ಹೊಂದಿರುವುದು. ಮತ್ತೊಂದು ಬಗೆಯೆಂದರೆ, ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟವರ ಸಮೂಹದಲ್ಲಿ ಅವರ ಜೀವನಮಟ್ಟವನ್ನು ಸುಧಾರಿಸಲು, ಗೌರವವನ್ನು ಸಂಪಾದಿಸಿಕೊಡಲು ಹೆಣಗಾಡುತ್ತಾ ಅವರ ನಡುವಿನಲ್ಲಿ ಇರುತ್ತಲೇ ಮುಂದಾಳತ್ವವಹಿಸುವುದು ಅಥವಾ ಅದರ ಭಾಗವಾಗಿರುವುದು. ಒಟ್ಟಾರೆ ಒಬ್ಬ ವ್ಯಕ್ತಿಗೆ ಜನ ಬೇಕು. ಸಣ್ಣ ಪ್ರಮಾಣದಲ್ಲೋ, ದೊಡ್ಡ ಪ್ರಮಾಣದಲ್ಲೋ; ಒಟ್ಟಾರೆ ಸಮೂಹದ ಭಾಗವಾಗಿಯೇ ಮನುಷ್ಯ ತಾನು ಸಂಘಜೀವಿ ಎಂಬ ಪ್ರಮುಖ ಲಕ್ಷಣವನ್ನು ತಾನೇ ಗುರುತಿಸಿಕೊಂಡು ಅದನ್ನು ಬಲಪಡಿಸುತ್ತಿರುತ್ತಾನೆ. ವ್ಯಕ್ತಿಯ ಮನಸ್ಸಿಗೆ ಇದೇ ಅತ್ಯಂತ ಸವಾಲಿನ ವಿಷಯ. ಯಾವುದೇ ವ್ಯಕ್ತಿ ಹುಟ್ಟುವ ಮುನ್ನವೇ ಆ ವ್ಯಕ್ತಿಯನ್ನು ನಿಯಂತ್ರಿಸುವ ಸೂತ್ರಗಳು ಮತ್ತು ಬಂಧಿಸುವ ಚೌಕಟ್ಟುಗಳು ವ್ಯವಸ್ಥಿತವಾಗಿಯೇ ನಿರ್ಧಾರವಾಗಿರುತ್ತದೆ. ಹಾಗಾಗಿ ವ್ಯಕ್ತಿ ಮಗುವಾಗಿ ಹುಟ್ಟಿದ ಕೂಡಲೇ ಜೈವಿಕವಾದ ಗೋಡೆಗಳಿಂದ ಹೊರಗೆ ಬಂದು ಸಮಾಜದ ಬಲೆಯಲ್ಲಿ ಸಿಕ್ಕಿಬೀಳುವುದು ಸಾಂಘಿಕ ಸಹಜತೆ.

ಆ ಬಲೆಯನ್ನು ಸಂಸ್ಕೃತಿಯೆನ್ನುವಿರೋ, ಧರ್ಮವೆನ್ನುವಿರೋ, ಸಂಪ್ರದಾಯ ಎನ್ನುವಿರೋ; ಒಟ್ಟಾರೆ ಒಂದು ಮಾನವ ಸಮೂಹಗಳು ತಮ್ಮ ಸಾಂಘಿಕ ಜೀವನದ ಸುಸೂತ್ರ ನಿರ್ವಹಣೆಗೆಂದು ನಿರ್ಮಿಸಿಕೊಂಡಿರುವವೇ ಅಥವಾ ರೂಪುಗೊಂಡಿಸುವವೇ ಆಗಿರುತ್ತವೆ. ಹಾಗಾಗಿ ಹಿರಿಯ ವ್ಯಕ್ತಿಯು ಹಕ್ಕುದಾರಿಕೆಯಿಂದಲೂ ಮತ್ತು ಅಭಿಮಾನದಿಂದಲೂ ತನ್ನ ಸಮಾಜದ ನವಜಾತ ಸದಸ್ಯನ ಆ ಚೌಕಟ್ಟುಗಳ ಆಯಾಮಗಳಿಗೆ ಒಗ್ಗಿಸಲು ಪ್ರಯತ್ನಿಸುತ್ತಾನೆ. ಅದನ್ನೆಲ್ಲಾ ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯಗಳೆಂಬ ಅತ್ಯುನ್ನತ ಮೌಲ್ಯವನ್ನು ಆರೋಪಿಸಿರುವ ವಿಷಯಗಳನ್ನಾಗಿ ಸಮಾಜದ ಹೊಸ ಸದಸ್ಯನಿಗೆ ಮನದಟ್ಟು ಮಾಡಿಸುತ್ತಿರುತ್ತಾನೆ. ಹೊಸ ಸದಸ್ಯನಿಗೆ ತಾನು ಹುಟ್ಟುವ ಮುಂಚಿನ ಸಾಂಘಿಕ ಪದ್ಧತಿಯ ವಿಷಯಗಳ ವ್ಯಾಪ್ತಿಯನ್ನು ಮೀರಿದ ವಿಷಯಗಳು ಪರಿಚಯವಾಗುತ್ತವೆ. ಆಗ ಅದಕ್ಕೆ ವಾಲುವಾಗ ಅವನನ್ನು ತಮ್ಮ ಸಾಂಘಿಕ ಶಿಸ್ತಿನಲ್ಲಿ ಇರಿಸಿಕೊಳ್ಳಲು ಇಚ್ಛಿಸಿದ್ದವರ ಕೋಪಕ್ಕೆ ಗುರಿಯಾಗುತ್ತಾನೆ. ಸಮಾಜದಲ್ಲಿನ ಪಿರಮಿಡ್‌ನಲ್ಲಿ ಎತ್ತರದ ಸ್ಥಾನ ತಮ್ಮದೇ ಇರಬೇಕೆಂದು ಅಘೋಷಿತ ಪೈಪೋಟಿಯಲ್ಲಿ ಸ್ಪರ್ಧಾಳುಗಳಾಗಿರುವುದರಿಂದ ತಮ್ಮ ಸಾಮುದಾಯಿಕ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಗಳೇ ಶ್ರೇಷ್ಠವೆಂದು ಮನದಟ್ಟು ಮಾಡಿಸಲು ಶತಾಯಗತಾಯ ಪ್ರಯತ್ನವೂ ಆಗುತ್ತಿರುತ್ತದೆ. ತಮ್ಮದರ ಶ್ರೇಷ್ಠತೆಯು ಮತ್ತೊಬ್ಬರ ಕನಿಷ್ಠತೆಯನ್ನು ಆಧರಿಸಿರುವಂತಹ ಜನಮನವೇ ಅಥವಾ ಸಂಕಲಿತ ಮನಸ್ಥಿತಿಯೇ ಇದಾಗಿರುವುದರಿಂದ ಇನ್ನೊಂದು ಸಮುದಾಯ ಅಥವಾ ಸಮೂಹವನ್ನು ಖಂಡಿಸುವುದರಲ್ಲಿ ಮತ್ತು ತಮ್ಮದನ್ನು ಮಂಡಿಸುವುದರಲ್ಲಿ ನಿರತವಾಗಿರುತ್ತದೆ. ವ್ಯಕ್ತಿಯ ವ್ಯಕ್ತಿಗತವಾದ ಮನಸ್ಸೋ ಛಿದ್ರ ಛಿದ್ರ. ಅತ್ತ ಕಡೆ ತಾನಂದುಕೊಂಡಂತೆ ಇರಲಾಗದು, ಇತ್ತ ಕಡೆ ಇವರ ಚೌಕಟ್ಟಿನಲ್ಲಿಯೇ ಇರಲೂ ಆಗದು. 'ಜನಕ್ಕಂಜಿ ನಡೆಯದೇ ಮನಕ್ಕಂಜಿ ನಡೆ' ಎಂದು ಆತ್ಮಗೌರವವನ್ನು ಎತ್ತಿ ಹಿಡಿಯುವ ದಾರ್ಶನಿಕರೇನೋ ಹೇಳಿಬಿಟ್ಟರು. ಆದರೆ ಜನಮನದ ಒಟ್ಟಾರೆ ಆಶಯವೇ ವ್ಯಕ್ತಿಯ ಆತ್ಮಗೌರವವು ಜನಾಧೀನ ಅಥವಾ ಸಾಮಾಜಿಕ ಸಂಸ್ಥೆಗಳ ಚೌಕಟ್ಟಿನಲ್ಲಿರುವಂತೆಯೇ ರೂಪಿಸಿರಲಾಗಿರುತ್ತದೆ.

ಇದು ಮುಗಿಯದ ಕತೆ

Similar News

ನಾಸ್ತಿಕ ಮದ
ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು