ಕರ್ನಾಟಕ ಸೇರಿ ವಿವಿಧ ರೆಡ್‌ಕ್ರಾಸ್ ಶಾಖೆಗಳಿಗೆ ಸಿಬಿಐ ವಿಚಾರಣೆ ಬಿಸಿ
ಹೊಸದಿಲ್ಲಿ: ನಾಲ್ಕು ರಾಜ್ಯಗಳಲ್ಲಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಪ್ರಾದೇಶಿಕ ಶಾಖೆಗಳಲ್ಲಿ ಭ್ರಷ್ಟಾಚಾರ ಮತ್ತು ಹಣಕಾಸು ದುರುಪಯೋಗ ಪಡೆದಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ತಮಿಳುನಾಡು, ಕೇರಳ, ಕರ್ನಾಟಕ, ಅಸ್ಸಾಂ ಹಾಗೂ ಅಂಡಮಾನ್ & ನಿಕೋಬಾರ್‌ನಲ್ಲಿ ಅವ್ಯವಹಾರ ಆರೋಪ ಕೇಳಿಬಂದಿತ್ತು.
ತಮಿಳುನಾಡಿನಲ್ಲಿ ರಾಜ್ಯ ಶಾಖೆಯ ಕಾರ್ಯನಿರ್ವಹಣೆಯಲ್ಲಿ ಗಂಭೀರ ಆರೋಪಗಳು ರಾಜ್ಯಪಾಲರ ಗಮನಕ್ಕೆ ಬಂದಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯಪಾಲರು ಕೋರಿದ್ದರು ಎಂದು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. "ತಮಿಳುನಾಡು ಶಾಖೆಯ ಆರೋಪಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಿಬಿಐ ತನಿಖೆ ವಿರುದ್ಧ ಚೆನ್ನೈನಲ್ಲಿ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದಾರೆ" ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು 2019ರಲ್ಲಿ ಹಣದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವ್ಯವಸ್ಥಾಪನಾ ಸಮಿತಿ ವಿಸರ್ಜನೆಗೆ ರಾಷ್ಟ್ರೀಯ ಕೇಂದ್ರ ಕಚೇರಿ ಶಿಫಾರಸ್ಸು ಮಾಡಿತ್ತು.
ಕರ್ನಾಟಕದಲ್ಲಿ ರಾಜ್ಯಶಾಖೆಯ ಮಾಜಿ ಅಧ್ಯಕ್ಷರು ರೆಡ್‌ಕ್ರಾಸ್ ಹೆಸರಿನಲ್ಲಿ ಟ್ರಸ್ಟ್ ನೋಂದಾಯಿಸಿದ್ದಾರೆ. ಎಫ್‌ಐಆರ್ ದಾಖಲಿಸಿದ ಬಳಿಕ ಟ್ರಸ್ಟ್ ವಿಸರ್ಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಅಸ್ಸಾಂನಲ್ಲಿ ರಾಜ್ಯ ನಿರ್ವಹಣಾ ಸಮಿತಿಯ ಚುನಾವಣೆ ವಿಳಂಬದ ಬಗ್ಗೆ ಮತ್ತು ಭೂ ವ್ಯಾಜ್ಯದ ಬಗ್ಗೆ ತನಿಖೇ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.