ನಾನೇನು ಮಾಡಲಿ, ಕೆಲಸ ಬಿಡಲೇ: ಪೂಜಾರ ಬೌಲಿಂಗ್ ಚಿತ್ರ ಟ್ವೀಟಿಸಿ ಅಶ್ವಿನ್ ಪ್ರಶ್ನೆ

ಚೇತೇಶ್ವರ್ ಪೂಜಾರ ಪ್ರತಿಕ್ರಿಯೆ ಏನು?

Update: 2023-03-14 09:41 GMT

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ದದ ಅಹಮದಾಬಾದ್ ಟೆಸ್ಟ್ ನೀರಸ ಡ್ರಾದತ್ತ ಸಾಗುತ್ತಿರುವಾಗ ಭಾರತ ಕ್ರಿಕೆಟ್ ತಂಡ 5ನೇ ದಿನವಾದ ಸೋಮವಾರ ಚೆಂಡನ್ನು ‘ನೆಟ್ ಬೌಲರ್ ಗಳಾದ ಚೇತೇಶ್ವರ್ ಪೂಜಾರ ಹಾಗೂ  ಶುಭ್ ಮನ್ ಗಿಲ್ ಕೈಗೆ ನೀಡಿತು. ಉಭಯ ತಂಡಗಳು ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು  ನಿರ್ಧರಿಸುವ ಮೊದಲು ಇಬ್ಬರೂ ತಲಾ ಒಂದು ಓವರ್ ಬೌಲಿಂಗ್  ಮಾಡಿದರು. ಹಿರಿಯ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್ , ಅಹಮದಾಬಾದ್ ಟೆಸ್ಟ್‌ನಲ್ಲಿ ಪೂಜಾರ ಬೌಲಿಂಗ್ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡು ಮಾಡಿರುವ ಟ್ವೀಟ್ ಗೆ ಪೂಜಾರ ತಕ್ಕ ಉತ್ತರ ನೀಡಿದ್ದು, ಈ ಇಬ್ಬರ ಸಂಭಾಷಣೆ ಟ್ವಿಟರ್ ನಲ್ಲಿ ಗಮನ ಸೆಳೆದಿದೆ.

 “ನಾನೇನು ಮಾಡಲಿ, ಕೆಲಸವನ್ನು ಬಿಟ್ಟುಬಿಡಲೇ’’ ಎಂದು ಪೂಜಾರ ಬೌಲಿಂಗ್ ಮಾಡುತ್ತಿರುವ ಚಿತ್ರದೊಂದಿಗೆ ಅಶ್ವಿನ್  ಟ್ವೀಟಿಸಿದರು.

ಅದಕ್ಕೆ ಪ್ರತ್ಯುತ್ತರ ನೀಡಿದ ಪೂಜಾರ: “ಇಲ್ಲ,. ನಾಗ್ಪುರದಲ್ಲಿ ವನ್ ಡೌನ್ ನಲ್ಲಿ ಆಡಿದ್ದಕ್ಕೆ ಧನ್ಯವಾದ ಹೇಳಲು ಹೀಗೆ ಮಾಡಿದೆ’’ ಎಂದು ಟ್ವೀಟಿಸಿದರು..

ಅಶ್ವಿನ್ ನಂತರ ಪೂಜಾರಗೆ ಪ್ರತಿಕ್ರಿಯಿಸುತ್ತಾ: "ನಿಮ್ಮ ಉದ್ದೇಶವನ್ನು ಪ್ರಶಂಸಿಸಲಾಗಿದೆ. ಆದರೆ ಇದು ಯಾವ ರೀತಿಯ ಪೇ ಬ್ಯಾಕ್ ಎಂಬ ಬಗ್ಗೆ ನನಗೆ  ಆಶ್ಚರ್ಯವಾಗಿದೆ ಎಂದರು.

ಭಾರತ ಟೆಸ್ಟ್ ಬ್ಯಾಟರ್ ಪೂಜಾರ ಮತ್ತೆ ಉತ್ತರಿಸುತ್ತಾ, "ನಿಮಗೆ ಸಾಕಷ್ಟು ವಿಶ್ರಾಂತಿ ನೀಡುವುದರಿಂದ ಭವಿಷ್ಯದಲ್ಲಿ ಅಗತ್ಯವಿದ್ದರೆ ನೀವು ಮತ್ತೆ ವನ್ ಡೌನ್ ಗೆ ಹೋಗಬಹುದು" ಎಂದು ಹೇಳಿದರು.

ಅಶ್ವಿನ್ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ಗೆಲುವಿನಲ್ಲಿ ಅತಿದೊಡ್ಡ  ಕೊಡುಗೆ ನೀಡಿದವರಲ್ಲಿ ಒಬ್ಬರು. ಆಫ್‌ಸ್ಪಿನ್ನರ್ 25  ವಿಕೆಟ್ ಗಳನ್ನು ಗಳಿಸಿ ಅಗ್ರ ವಿಕೆಟ್-ಟೇಕರ್ ಆಗಿ ಸರಣಿಯನ್ನು ಮುಕ್ತಾಯಗೊಳಿಸಿದರು. ಸರಣಿಯಲ್ಲಿ 22 ವಿಕೆಟ್‌ಗಳನ್ನು ಗಳಿಸಿದ ರವೀಂದ್ರ ಜಡೇಜಾ ಅವರೊಂದಿಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಹಂಚಿಕೊಂಡರು.

Similar News