2018ರಿಂದೀಚೆಗೆ ದಲಿತರ ಮೇಲೆ ಅಪರಾಧ ನಡೆದ 1,89,945 ಪ್ರಕರಣ ದಾಖಲು: ಎನ್‌ಸಿಆರ್‌ಬಿ ವರದಿ ಉಲ್ಲೇಖಿಸಿದ ಕೇಂದ್ರ
ಹೊಸದಿಲ್ಲಿ, ಮಾ.21: 2018ರಿಂದ ಮೊದಲ್ಗೊಂಡು ನಾಲ್ಕು ವರ್ಷಗಳಲ್ಲಿ ದೇಶಾದ್ಯಂತ ದಲಿತ ಸಮುದಾಯದವರ ವಿರುದ್ಧ 1,89,945 ಅಪರಾಧಗಳು ನಡೆದಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯನ್ನು ಉಲ್ಲೇಖಿಸಿ ಕೇಂದ್ರ ಸರಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.
2018ರಿಂದೀಚೆಗೆ ದಲಿತರ ಮೇಲೆ ನಡೆದ ದಾಳಿಗಳ ಸಂಖ್ಯೆಯ ಕುರಿತ ಅಂಕಿಅಂಶಗಳನ್ನು ಕೋರಿದ ಬಿಎಸ್ಪಿ ಸಂಸದ ಗಿರೀಶ್ ಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಂದರ್ಭದಲ್ಲಿ ಕೇಂದ್ರ ಸಹಾಯಕ ಗೃಹ ಸಚಿವ ಅಜಯ್ ಕುಮಾರ್ ಮಿಶ್ರಾ ಈ ವಿವರಗಳನ್ನು ನೀಡಿದ್ದಾರೆ. ದಲಿತರ ಮೇಲಿನ ಅಪರಾಧ ಘಟನೆಗಳ ಬಗ್ಗೆ ಕಣ್ಗಾವಲಿರಿಸಲು ಯಾವುದೇ ಕಾರ್ಯವಿಧಾನವೇನಾದರೂ ಇದ್ದಲ್ಲಿ ಅದನ್ನು ತಿಳಿಸುವಂತೆ ಗಿರೀಶ್ ಚಂದ್ರ ಅವರು ಸರಕಾರವನ್ನು ಆಗ್ರಹಿಸಿದ್ದರು.
2021ರಲ್ಲಿ ಪ್ರಕಟವಾದ ಭಾರತದಲ್ಲಿ ಅಪರಾಧ ಎಂಬ ಶೀರ್ಷಿಕೆಯ ವರದಿದಲ್ಲಿ ಎನ್‌ಸಿಆರ್‌ಬಿ ಯು ಈ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಅದನ್ನು ಆಧರಿಸಿ ಈ ಮಾಹಿತಿಯನ್ನು ನೀಡಿರುವುದಾಗಿ ಅವರು ಹೇಳಿದರು.
ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಯು ಸಂಪೂರ್ಣವಾಗಿ ರಾಜ್ಯ ಸರಕಾರಗಳ ವ್ಯಾಪ್ತಿಗೆ ಬರುತ್ತವೆಯಾದರೂ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಕೇಂದ್ರ ಸರಕಾರವು ರಾಜ್ಯಗಳು/ಕೇಂದ್ರಾಡಳಿತಕ್ಕೆ ಕಾಲಕಾಲಕ್ಕೆ ಸಲಹೆ,ಸೂಚನೆಗಳನ್ನು ನೀಡುತ್ತಾ ಬಂದಿದೆಯೆಂದು ಸಚಿವರು ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಜನಪ್ರತಿನಿಧಿಗಳ ಮೇಲೆ ದಾಳಿಗಳು ನಡೆದಿರುವ ಕುರಿತಾಗಿ ಸದನದಲ್ಲಿ ಎಐಎಂಐಎಂ ವರಿಷ್ಠ ಅಸಾದುದ್ದೀನ್ ಉವೈಸಿ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕೇಂದ್ರ ಗೃಹ ಸಚಿವಾಲಯ ಇಂತಹ ನಾಲ್ಕು ಪ್ರಕರಣಗಳನ್ನು ದಿಲ್ಲಿ ಪೊಲೀಸರು ದಾಖಲಿಸಿಕೊಂಡಿರುವುದಾಗಿ ತಿಳಿಸಿದೆ.
ಉವೈಸಿ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಅವರು, ‘‘ ಜನಪ್ರತಿನಿಧಿಗಳ ಮೇಲೆ ನಡೆದ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿ 16 ಮಂದಿಯನ್ನು ಬಂಧಿಸಲಾಗಿದೆ. ಇಂತಹ ಘಟನೆಗಳು ನಡೆಯುವುದನ್ನು ತಪ್ಪಿಸಲು ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಕಣ್ಗಾವಲಿರಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಹಾಗೂ ಇಂತಹ ಚಟುವಟಿಕೆಗಳಲ್ಲಿ ಶಾಮೀಲಾದ ವ್ಯಕ್ತಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.