ಸೂಕ್ತ ಸಮರ್ಥನೆ ಇಲ್ಲದೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಬೇಡಿ: ನ್ಯಾಯಾಧೀಶರುಗಳಿಗೆ ಸುಪ್ರೀಂ ಕೋರ್ಟ್‌ ತಾಕೀತು

Update: 2023-03-22 10:50 GMT

ಹೊಸದಿಲ್ಲಿ: ಸೂಕ್ತ ಸಮರ್ಥನೆ ಇಲ್ಲದೇ ಇರದ ಹೊರತು ನ್ಯಾಯಾಲಯಗಳಲ್ಲಿ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದರ ವಿರುದ್ಧ ನ್ಯಾಯಾಧೀಶರುಗಳಿಗೆ ಸುಪ್ರೀಂ ಕೋರ್ಟ್‌ (Supreme Court) ಇಂದು ಎಚ್ಚರಿಕೆ ನೀಡಿದೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶ ಎಚ್‌ ಪಿ ಸಂದೇಶ್‌ ಅವರು ವ್ಯಕ್ತಪಡಿಸಿದ ಕೆಲವೊಂದು ಮೌಖಿಕ ಅಭಿಪ್ರಾಯಗಳನ್ನು ಪ್ರಶ್ನಿಸಿ ಕರ್ನಾಟಕ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌, ಬೆಂಗಳೂರಿನ ಮಾಜಿ ಉಪ ಆಯುಕ್ತರಾದ ಜೆ ಮಂಜುನಾಥ್‌ ಮತ್ತು ಕರ್ನಾಟಕ ಎಸಿಬಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸನುದ್ದೀನ್‌ ಅಮಾನುಲ್ಲಾ ಅವರ ಪೀಠ ನಡೆಸುತ್ತಿರುವಾಗ ಮೇಲಿನ ಎಚ್ಚರಿಕೆಯನ್ನು ನೀಡಿದೆ.

ಅರ್ಜಿದಾರರ ವಿರುದ್ಧ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ರದ್ದುಪಡಿಸುವ ಕುರಿತಂತೆ ಆದೇಶ ನೀಡಿದ ಸುಪ್ರೀಂ ಕೋರ್ಟ್‌ ಅದೇ ಸಮಯ ಇಂತಹ ಅಭಿಪ್ರಾಯಗಳ ಕುರಿತಾದ ತನ್ನ ಮಹತ್ವದ ಹೇಳಿಕೆ ನೀಡಿದೆ.

"ಈಗ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರವಿರುವುದರಿಂದ ನ್ಯಾಯಾಲಯಗಳಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳು ಬಹಳಷ್ಟು ದೂರಗಾಮಿ ಪರಿಣಾಮ ಬೀರುತ್ತದೆ. ಈ ಪ್ರಕರಣದಲ್ಲಾದಂತೆ, ಸಂಬಂಧಿತರಿಗೆ ಸಾಕಷ್ಟು ಮಾನಹಾನಿ ಉಂಟು ಮಾಡಬಹುದು. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಸಂಬಂಧಿತರ ಕುರಿತು ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದರ ಕುರಿತಂತೆ ಬಹಳಷ್ಟು ಎಚ್ಚರಿಕೆ ವಹಿಸಬೇಕು ಹಾಗೂ ನ್ಯಾಯದಾನಕ್ಕೆ ಇಂತಹ ಅಭಿಪ್ರಾಯ ಅಗತ್ಯವೆಂದಾದಲ್ಲಿ ಮಾತ್ರ ವ್ಯಕ್ತಪಡಿಸಬೇಕು," ಎಂದು ಹೇಳಿದೆ.

ಭ್ರಷ್ಟಾಚಾರ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ವೇಳೆ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರಾದ ಸಂದೇಶ್‌ ಅವರು ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರದೇ ಇದ್ದವರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿ ಎಸಿಬಿ ಈ ಪ್ರಕರಣದಲ್ಲಿ ಉಪಾಯುಕ್ತರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದರಲ್ಲದೆ, ಎಸಿಬಿ ವಿರುದ್ಧ ಹರಿಹಾಯ್ದಿದ್ದಕ್ಕೆ ತಮಗೆ ವರ್ಗಾವಣೆಯ ಬೆದರಿಕೆಗಳೂ ಬರುತ್ತಿವೆ ಎಂದಿದ್ದರು. ಈ ಕಲಾಪವು ಹೈಕೋರ್ಟಿನ ಯುಟ್ಯೂಬ್‌ ವಾಹಿನಿಯಲ್ಲಿ ನೇರ ಪ್ರಸಾರಗೊಂಡಿತ್ತು.

ಇದರಿಂದ ತಮಗೆ ಸಾಕಷ್ಟು ಮಾನಹಾನಿಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್:‌ 100 ಕ್ಕೂ ಅಧಿಕ ಎಫ್‌ಐಆರ್‌, 6 ಮಂದಿಯನ್ನು ಬಂಧಿಸಿದ ದಿಲ್ಲಿ ಪೊಲೀಸ್

Similar News