ದಯವಿಟ್ಟು ನೀವು ಈಗಲಾದರೂ ಕೇಳಿಸಿಕೊಳ್ಳುತ್ತೀರಾ?: ಡೆತ್ ನೋಟ್ ನಲ್ಲಿ 17 ವರ್ಷದ ಬಾಲಕಿಯ ಮನವಿ
ಕೆಲ ದಿನಗಳ ಹಿಂದೆ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಉತ್ತರಪ್ರದೇಶದ ಬಾಲಕಿ ಹೇಳಿದ್ದೇನು?
ಮೊರಾದಾಬಾದ್: 10 ದಿನಗಳ ಹಿಂದೆ ತನ್ನ ಮನೆಯ ಬಳಿ ಮೂರ್ನಾಲ್ಕು ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೊಬ್ಬಳು ರವಿವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಗ್ರಾಮದಿಂದ ವರದಿಯಾಗಿದೆ. ಈ 17 ವರ್ಷದ ಬಾಲಕಿಯು ಎರಡು ಪುಟಗಳ ಮರಣ ಪತ್ರ ಬರೆದಿಟ್ಟಿದ್ದು, ಅದರಲ್ಲಿ ತನಗೆ ಕಿರುಕುಳ ನೀಡಿದ ನಾಲ್ಕು ಮಂದಿ ಹಾಗೂ ಈ ಕುರಿತು ಪೊಲೀಸರ ನಿಷ್ಕ್ರಿಯತೆ ಕುರಿತು ಆರೋಪಿಸಿದ್ದಾಳೆ. ಮಾರ್ಚ್ 8ರಂದು ಬಾಲಕಿಯ ಕುಟುಂಬದ ಸದಸ್ಯರು ತಮ್ಮ ನಿವಾಸದ ಬಳಿ ವಾಸಿಸುತ್ತಿರುವ ನಾಲ್ಕು ಮಂದಿಯ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದರು ಮತ್ತು ಈ ಸಂಬಂಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು indianexpress.com ವರದಿ ಮಾಡಿದೆ.
ನಾಲ್ಕು ಮಂದಿ ನನಗೆ ದೀರ್ಘ ಕಾಲದಿಂದ ಕಿರುಕುಳ ನೀಡುತ್ತಿದ್ದರು ಮತ್ತು ಅವರು ಶ್ರೀಮಂತರಾಗಿದ್ದುದರಿಂದ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆ ಬಾಲಕಿಯು ತನ್ನ ಮರಣ ಪತ್ರದಲ್ಲಿ ಆರೋಪಿಸಿದ್ದಾಳೆ.
"ಈ ಮಂದಿ ನನ್ನ ಕನಸು ನಿಜವಾಗಲೂ ಅವಕಾಶ ನೀಡಲಿಲ್ಲ.. ಅವರನ್ನು ಎದುರಿಸುವ ಧೈರ್ಯ ಇನ್ನು ನನ್ನಲ್ಲಿ ಉಳಿದಿಲ್ಲ. ಆದರೆ, ನನ್ನ ಕುಟುಂಬ ತೊಂದರೆಗೊಳಗಾಗಬಾರದು. ಸ್ವಾಮಿ, (ಪ್ರಾಧಿಕಾರಗಳು) ದಯವಿಟ್ಟು ಈಗಲಾದರೂ ಕೇಳಿಸಿಕೊಳ್ಳುತ್ತೀರಾ? ಆ ಮಂದಿಯನ್ನು ನನ್ನ ಸಾವಿನ ನಂತರ ಶಿಕ್ಷಿಸಿ... ಅದರಿಂದ ಬಡ ಬಾಲಕಿಯರು ಬದುಕಬಹುದು ಮತ್ತು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು" ಎಂದು ಮೃತ ಬಾಲಕಿಯು ತನ್ನ ಮರಣ ಪತ್ರದಲ್ಲಿ ಬರೆದಿದ್ದಾಳೆ.
ಅವರು ನನ್ನನ್ನು ಕೊಲೆ ಮಾಡಲು ಯತ್ನಿಸಿದರು ಮತ್ತು ಅವರು ನನಗೆ ಕಿರುಕುಳ ನೀಡುತ್ತಾರೆ ಎಂದು ಶಾಲೆಗೆ ಹೋಗುವುದನ್ನು ನಿಲ್ಲಿಸಿದೆ. ಅವರು ನನ್ನ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಅವರು ಮನೆಯ ಮಹಡಿ ಮೇಲೇರಿ ನನಗೆ ಚಾಕು ತೋರಿಸಿ ಬೆದರಿಸುತ್ತಿದ್ದರು. ಇದನ್ನು ಕಂಡ ನನ್ನ ಪೋಷಕರು, ಅವರ ವಿರುದ್ಧ ದೂರು ದಾಖಲಿಸಿದರು. ಆದರೆ, ಯಾರೂ ಏನೂ ಕ್ರಮ ಕೈಗೊಳ್ಳಲಿಲ್ಲ ಎಂದೂ ಆಕೆ ಅಳಲು ತೋಡಿಕೊಂಡಿದ್ದಾಳೆ.
ಈ ಸಂಬಂಧ ಮೊರಾದಾಬಾದ್ ಪೊಲೀಸರು ವಿಕೇಶ್ ಹಾಗೂ ಅಮೃತ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಗ್ರಾಮಸ್ಥರು ಆರೋಪಿಗಳು ಬಾಲಕಿಗೆ ಕಿರುಕುಳ ನೀಡುತ್ತಿದ್ದರು ಎಂಬ ಮಾತನ್ನು ಸಮರ್ಥಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೊರಾದಾಬಾದ್ ವಿಶೇಷ ಪೊಲೀಸ್ ವರಿಷ್ಠಾಧಿಕಾರಿ ಹೇಮರಾಜ್ ಮೀನಾ, ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಆರೋಪಿಗಳು ಬಾಲಕಿಯ ನೆರೆಮನೆಯಲ್ಲಿ ವಾಸಿಸುತ್ತಿದ್ದರು. ಮಾರ್ಚ್ 8ರಂದು ಮೃತ ಬಾಲಕಿಯ ಕುಟುಂಬದ ಸದಸ್ಯರು ಕಿರುಕುಳದ ದೂರು ನೀಡಿದ್ದರು ಮತ್ತು ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಸಮರ್ಪಕ ಕಾನೂನು ಕ್ರಮ ಕೈಗೊಳ್ಳದ ಕಾರಣ ನಾವು ಸಬ್ ಇನ್ಸ್‌ಪೆಕ್ಟರ್ ಸಚಿನ್ ಮಲಿಕ್‌ರನ್ನು ಅಮಾನತುಗೊಳಿಸಿದ್ದೇವೆ. ಮರಣ ಪತ್ರದಲ್ಲಿ ನಮೂದಿಸಲಾಗಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದೇವೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ, ಮಹಿಳೆಯ ಘನತೆಗೆ ಕುಂದುಂಟು ಮಾಡಿದ ಆರೋಪ, ವಿವಸ್ತ್ರಗೊಳಿಸಿದ ಆರೋಪ, ಇಣುಕಿ ನೋಡಿದ ಆರೋಪ, ಅಣಕಿಸಿದ ಆರೋಪ, ಮನೆಯ ಅತಿಕ್ರಮ ಪ್ರವೇಶ, ಕ್ರಿಮಿನಲ್ ಸಂಚು ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.