16 ಏಮ್ಸ್‌ಗಳಿಗೆ ಅಡಿಗಲ್ಲು ಹಾಕಿದ ಬಳಿಕ ಏನೇನಾಗಿದೆ?
ಮಂಡ್ಯದಲ್ಲಿ ಮಾರ್ಚ್ 13ರಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ, ತಮ್ಮ ಸರಕಾರ ಏಮ್ಸ್ ತರಹದ ಸಂಸ್ಥೆಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದೆ ಎಂದು ಹೇಳಿಕೊಂಡರು. ಮಾರನೇ ದಿನ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ''ಮೋದಿ ಯುಗದಲ್ಲಿ ಏಮ್ಸ್ ಥರದ ಸಂಸ್ಥೆಗಳ ಸಂಖ್ಯೆ 7ರಿಂದ 22ಕ್ಕೆ ಏರಿದೆ'' ಎಂದು ಟ್ವೀಟ್ ಮಾಡಿದರು. 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೋದಿ ಸರಕಾರ ಏಮ್ಸ್‌ನಂತಹ ಸಂಸ್ಥೆಗಳನ್ನು ಹೆಚ್ಚಿಸುವ ಆಲೋಚನೆ ಮಾಡಿದ್ದೇನೋ ಹೌದು. ಆದರೆ ಇಲ್ಲಿಯವರೆಗೆ ಒಂದೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ವಿಚಾರವನ್ನು ಕೂಡ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ನೀಡಿದ ಉತ್ತರದಲ್ಲಿ ಬಹಿರಂಗಪಡಿಸಿದ್ದು ಇದೇ ಆರೋಗ್ಯ ಸಚಿವ ಮಾಂಡವೀಯ.
ಫೆಬ್ರವರಿ 3, 2023ರಂದು ಲೋಕಸಭೆಯಲ್ಲಿ ಮಾಂಡವೀಯ ನೀಡಿದ ಉತ್ತರದ ಪ್ರಕಾರ, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಅಡಿಯಲ್ಲಿ 2014ರಿಂದ ಯೋಜಿಸಲಾದ 16 ಏಮ್ಸ್ ಸಂಸ್ಥೆಗಳು ಕಾರ್ಯಾಚರಣೆಯ ವಿವಿಧ ಹಂತಗಳಲ್ಲಿದ್ದು, ಸದ್ಯಕ್ಕೆ ಸೀಮಿತ ಹೊರರೋಗಿ ವಿಭಾಗ (ಒಪಿಡಿ) ಮತ್ತು ಒಳರೋಗಿ ವಿಭಾಗ (ಐಪಿಡಿ) ಸೇವೆಗಳು ಮಾತ್ರ ಲಭ್ಯವಿವೆ.
ಈ 16ರಲ್ಲಿ 2014ರಲ್ಲಿ ಘೋಷಿಸಲಾದ ಕೆಲವೆಂದರೆ, ಏಮ್ಸ್ ಗೋರಖ್‌ಪುರ (ಉತ್ತರ ಪ್ರದೇಶ), ಏಮ್ಸ್ ಮಂಗಳಗಿರಿ (ಆಂಧ್ರ ಪ್ರದೇಶ), ಏಮ್ಸ್ ನಾಗಪುರ (ಮಹಾರಾಷ್ಟ್ರ) ಮತ್ತು ಏಮ್ಸ್ ಕಲ್ಯಾಣಿ (ಪಶ್ಚಿಮ ಬಂಗಾಳ). ಆದರೆ ಇವುಗಳ ಸದ್ಯದ ಸ್ಥಿತಿ ಸೀಮಿತ ಒಪಿಡಿ ಮತ್ತು ಐಪಿಡಿ ಸೇವೆಗಳನ್ನು ಮಾತ್ರ ನೀಡಬಲ್ಲದ್ದಾಗಿದೆಯೇ ಹೊರತು, ಪೂರ್ಣ ಪ್ರಮಾಣ ಮುಟ್ಟಿಲ್ಲ.
ಅವರ ಉತ್ತರದ ಪ್ರಕಾರ, ವಾಜಪೇಯಿ ಸರಕಾರದ ಅವಧಿಯಲ್ಲಿ ರೂಪಿಸಲಾಗಿದ್ದ 6 ಸಂಸ್ಥೆಗಳು ಮಾತ್ರವೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವು ಭೋಪಾಲ್, ಪಾಟ್ನಾ, ರಾಯ್‌ಪುರ, ಹೃಷಿಕೇಶ, ಭುವನೇಶ್ವರ ಮತ್ತು ಜೋಧಪುರದಲ್ಲಿವೆ.
ಈ ಸೀಮಿತ ಒಪಿಡಿ ಮತ್ತು ಐಪಿಡಿ ಸೇವೆಗಳೆಂದರೇನು ಎಂಬುದನ್ನು ಸರಕಾರವೇನೂ ಬಿಡಿಸಿ ಹೇಳಿಲ್ಲವಾದರೂ, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಗೌರವ ಪ್ರಾಧ್ಯಾಪಕ ಕೆ. ಶ್ರೀನಾಥ್ ರೆಡ್ಡಿ ಪ್ರಕಾರ, ಪೂರ್ಣ ಪ್ರಮಾಣದ ಒಪಿಡಿ ಎಂದರೆ ಎಲ್ಲಾ ವಿಭಾಗಗಳು ಎಂದರ್ಥ. ಈಗಿನ ಸ್ಥಿತಿಯಲ್ಲಿ ಕೆಲ ಆಯ್ದ ರೋಗಿಗಳಿಗಷ್ಟೇ ಇಲ್ಲಿ ಸಮಾಲೋಚನೆ ಸಾಧ್ಯ. ಇನ್ನು ಸೀಮಿತ ಐಪಿಡಿ ಸೇವೆಗಳೆಂದರೆ ಕೆಲವೇ ಕೆಲವು ಮೂಲಭೂತ ಸೇವೆಗಳನ್ನು ಒಳಗೊಂಡಿರುವುದು. ಇದು ಜಿಲ್ಲಾ ಮಟ್ಟದ ಆಸ್ಪತ್ರೆಗಳು ನೀಡಬಹುದಾದ ಸೇವೆ ಅಥವಾ ಅದಕ್ಕಿಂತ ಕಡಿಮೆ ಮಟ್ಟ.
ನಿಜವಾಗಿಯೂ ಅಲ್ಲಿ ಎಷ್ಟು ರೋಗಿಗಳಿಗೆ ಸೇವೆ ಒದಗಿಸಲಾಗಿದೆ ಎಂಬುದನ್ನು ತಿಳಿದರೆ ಮಾತ್ರವೇ ಅವುಗಳ ಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಬಹುದು ಎನ್ನುತ್ತಾರೆ ರೆಡ್ಡಿ.
ಗುವಾಹಟಿಯ ಏಮ್ಸ್‌ಗೆ ಮೋದಿ ಅಡಿಗಲ್ಲು ಹಾಕಿದ್ದು 2017ರಲ್ಲಿ. ಅದರ ವೆಬ್‌ಸೈಟ್ ಪ್ರಕಾರ ಈವರೆಗೂ ಅದು ಯಾವುದೇ ಒಪಿಡಿ ಅಥವಾ ಐಪಿಡಿ ಸೇವೆಗಳನ್ನು ನೀಡುತ್ತಿಲ್ಲ. ವಾಸ್ತವವಾಗಿ, ವೆಬ್‌ಸೈಟ್ ಪ್ರಕಾರ ಸಂಸ್ಥೆ ಒಂದೇ ಒಂದು ಕ್ಲಿನಿಕಲ್ ವಿಭಾಗವನ್ನೂ ಹೊಂದಿಲ್ಲ. 2023ರಲ್ಲಿ ಸಂಸ್ಥೆ ಔಪಚಾರಿಕವಾಗಿ ಕಾರ್ಯಾರಂಭ ಮಾಡಲಿದೆ ಎಂದು ಕಳೆದ ಡಿಸೆಂಬರ್‌ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಹೇಳಿದ್ದರೆಂಬುದು ಮಾಧ್ಯಮ ವರದಿಗಳಲ್ಲಿದೆ.
ಸಂಸತ್ತಿನಲ್ಲಿ ಉತ್ತರ ನೀಡುವಾಗ ಆರೋಗ್ಯ ಮಂತ್ರಿ ಹೇಳಿದ್ದೇನೆಂದರೆ, ಈ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆ ಕೇಂದ್ರ ಸರಕಾರದ ಜವಾಬ್ದಾರಿಯಾಗಿದ್ದರೂ, ಸೀಮಿತವಾಗಿಯಾದರೂ ರಾಜ್ಯ ಸರಕಾರಗಳ ಪಾತ್ರವೂ ಇದೆ. ಹೊಸ ಏಮ್ಸ್ ಯೋಜನೆಗಳ ಪ್ರಗತಿಯನ್ನು ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭೂಮಿ ವರ್ಗಾವಣೆ ಸೇರಿದಂತೆ ರಾಜ್ಯ ಸರಕಾರದಿಂದ ಆಗಬೇಕಾದ ಹಲವು ಕೆಲಸಗಳನ್ನು ಇದು ಅವಲಂಬಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರದ ಮಾಜಿ ಮುಖ್ಯಸ್ಥ ಟಿ.ಸುಂದರರಾಮನ್ ಪ್ರಕಾರ, ಅಧ್ಯಾಪಕರು, ವೈದ್ಯರು ಸೇರಿದಂತೆ ಮಾನವ ಸಂಪನ್ಮೂಲ ಅಲಭ್ಯತೆ ಈ ವಿಳಂಬಕ್ಕೆ ಕಾರಣವಾಗಿರಬಹುದು. ಇಲ್ಲದೇ ಹೋದಲ್ಲಿ ಪೂರ್ಣ ಮಟ್ಟದಲ್ಲಿ ಸಜ್ಜಾಗಲು ಸರಾಸರಿ ಐದು ವರ್ಷಗಳಿಗಿಂತ ಹೆಚ್ಚು ಸಮಯ ಹಿಡಿಯದು.
ಹಾಗಾದರೆ, ಮಾನವ ಸಂಪನ್ಮೂಲ ಎಲ್ಲಿದೆ? ನಿಜವಾಗಿಯೂ ಅಧ್ಯಾಪಕರ ಕೊರತೆ ಇದೆಯೆ? ಅಂಕಿಅಂಶಗಳ ಪ್ರಕಾರ, ಹೌದು.
ಡಿಸೆಂಬರ್ 20, 2022ರಂದು ರಾಜ್ಯಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ನೀಡಿದ ಉತ್ತರದ ಪ್ರಕಾರ, ಈ 16 ಸಂಸ್ಥೆಗಳಲ್ಲಿ ಹೆಚ್ಚಿನವು ಅನುಮೋದಿತ ಸಾಮರ್ಥ್ಯದ ಅರ್ಧದಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಅಧ್ಯಾಪಕರ ಕೊರತೆ ಎದುರಿಸುತ್ತಿವೆ. ರಾಜ್‌ಕೋಟ್‌ನ ಏಮ್ಸ್‌ನಲ್ಲಿ 40 ಅಧ್ಯಾಪಕರಷ್ಟೇ ಇದ್ದು, ಅಲ್ಲಿ ಬೇಕಿರುವುದು 183 ಬೋಧಕರು.
ಮಾಂಡವೀಯ ಉತ್ತರದಲ್ಲಿರುವಂತೆ ಪೂರ್ಣಮಟ್ಟದಲ್ಲಿ ಕಾರ್ಯನಿರ್ವಹಿಸುವ ವಾಜಪೇಯಿ ಕಾಲದ ಆರು ಏಮ್ಸ್‌ಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಿಲ್ಲ. ಪವಾರ್ ಉತ್ತರದ ಪ್ರಕಾರ, ಪಾಟ್ನಾದ ಏಮ್ಸ್‌ನಲ್ಲಿ 162 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆದರೆ ಬೇಕಿರುವುದು 305 ಬೋಧಕರು.
ಇನ್ನು ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬೋಧಕೇತರ ಹುದ್ದೆಗಳ ಸ್ಥಿತಿಯಂತೂ ಇನ್ನಷ್ಟು ಕೆಟ್ಟದ್ದಾಗಿದೆ. ಗುವಾಹಟಿಯ ಏಮ್ಸ್‌ನಲ್ಲಿ ಮಂಜೂರಾದ 1,026 ಹುದ್ದೆಗಳಿಗೆ ಬದಲಾಗಿ 95 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಮಂಗಳಗಿರಿಯ ಏಮ್ಸ್‌ನಲ್ಲಿ ಅಗತ್ಯ 1,054 ಸಿಬ್ಬಂದಿ ಬದಲಿಗೆ ಭರ್ತಿ ಮಾಡಲಾಗಿರುವುದು 474 ಹುದ್ದೆಗಳನ್ನು ಮಾತ್ರ.
ಈ ಪ್ರಮುಖ ಸಂಸ್ಥೆಗಳು ಮಾನವ ಸಂಪನ್ಮೂಲದ ಕೊರತೆಯನ್ನು ಏಕೆ ಎದುರಿಸುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಪವಾರ್ ರಾಜ್ಯಸಭೆಯಲ್ಲಿ ಹೇಳಿದ್ದು, ಆಯ್ಕೆಯಲ್ಲಿ ಉನ್ನತ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡುವುದು ಈ ಮಾನದಂಡದ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ ಎಂದು.
ಈ ನಡುವೆ, ಈ ಸಂಸ್ಥೆಗಳ ಭವಿಷ್ಯವನ್ನೇ ಹಾಳು ಮಾಡುವಂಥ ನಡೆಯೆಂದರೆ, ಗುತ್ತಿಗೆ ಆಧಾರದ ಮೇಲೆಯೂ ಏಮ್ಸ್‌ನಲ್ಲಿ ವೈದ್ಯರ ನೇಮಕಕ್ಕೆ ಸರಕಾರ ಮುಂದಾಗಿರುವುದು. 2015ರಲ್ಲಿ ದಿಲ್ಲಿ ಏಮ್ಸ್ ಕುರಿತು ಸಂಸದೀಯ ಸಮಿತಿಯ ವರದಿ ಇದನ್ನು ಬಲವಾಗಿ ವಿರೋಧಿಸಿದ್ದರೂ, ಅಂತಹ ನೇಮಕಾತಿಗಾಗಿ ಜಾಹೀರಾತುಗಳನ್ನು ಕೊಡಲಾಗುತ್ತಿದೆ.
ಗುತ್ತಿಗೆ ಆಧಾರಿತ ಉದ್ಯೋಗ ವ್ಯಕ್ತಿಯ ವೃತ್ತಿ ಅಭದ್ರತೆಗೆ ಕಾರಣವಾಗುವುದರಿಂದ ಗುತ್ತಿಗೆ ಉದ್ಯೋಗಿ ನಿರಂತರವಾಗಿ ಹೊಸ ಉದ್ಯೋಗಗಳನ್ನು ಹುಡುಕಬೇಕಾಗುತ್ತದೆ, ಇದು ಒಂದು ವ್ಯವಸ್ಥೆಯ ಧ್ಯೇಯಗಳನ್ನೇ ವಿರೂಪಗೊಳಿಸುತ್ತದೆ. ಹಾಗಾಗಿ ಗುತ್ತಿಗೆ ನೇಮಕಾತಿಗಳನ್ನು ದೂರವಿಡಬೇಕು ಎಂದೇ ಆ ಸಂಸದೀಯ ವರದಿ ಪ್ರತಿಪಾದಿಸಿದೆ.
ಇಷ್ಟಕ್ಕೂ ಈ ಸಂಸ್ಥೆಗಳನ್ನು ರಾಜ್ಯಕ್ಕೊಂದು ಎಂಬಂತೆ ಸ್ಥಾಪಿಸಲೇಬೇಕೆಂಬ ಹಠಕ್ಕೆ ಏಕೆ ಬೀಳಲಾಯಿತು ಎಂಬ ಪ್ರಶ್ನೆಗಳೂ ಇವೆ. ಮಹಾನಗರಗಳಿಂದ ದೂರದಲ್ಲಿರುವ ನಗರಗಳಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು ಎಂಬುದೇ ಉದ್ದೇಶವಾಗಿದ್ದರೆ, ಜಿಲ್ಲಾ ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯ ಬಲಪಡಿಸುವುದು ಮತ್ತು ತಜ್ಞರನ್ನು ಒದಗಿಸುವ ಮೂಲಕ ಪ್ರಾಥಮಿಕ ಹಂತದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಈ ಗುರಿಯನ್ನು ಸಾಧಿಸಲು ಅವಕಾಶವಿದೆ ಎನ್ನುತ್ತಾರೆ ಪರಿಣತರು. ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣ ಆರೋಗ್ಯ ಅಂಕಿಅಂಶಗಳ ಪ್ರಕಾರ, ದೇಶದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ತಜ್ಞರ ಕೊರತೆಯೇ ಶೇ. 80ರಷ್ಟಿದೆ.
(ಕೃಪೆ: thewire.in)