ಫಡ್ನವೀಸ್ ಪತ್ನಿಗೆ ಲಂಚದ ಆಮಿಷವೊಡ್ಡಿದ ಆರೋಪಿ ಅನಿಷ್ಕಾಗೆ 14 ದಿನಗಳ ನ್ಯಾಯಾಂಗ ಕಸ್ಟಡಿ

Update: 2023-03-24 16:30 GMT

ಮುಂಬೈ,ಮಾ.25: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಅವರಿಗೆ ಲಂಚದ ಅಮಿಷವೊಡ್ಡಿದ ಹಾಗೂ ಬೆದರಿಕೆ ಹಾಕಿದ ಆರೋಪಗಳಿಗೆ ಸಂಬಂಧಿಸಿ ಮುಂಬೈನ ಫ್ಯಾಶನ್ ವಿನ್ಯಾಸಕಿ ಅನಿಷ್ಕಾ ಜೈಸಿಂಘಾನಿ ಅವರಿಗೆ ಮುಂಬೈನ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದೆ. ಪೊಲೀಸ್ ರಿಮಾಂಡ್ ಅವಧಿಯನ್ನು ವಿಸ್ತರಿಸಬೇಕೆಂಬ ಮುಂಬೈ ಪೊಲೀಸರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಅಮೃತಾ ಫಡ್ನವೀಸ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಫೆಬ್ರವರಿ 20ರಂದು ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಮಾರ್ಚ್ 16ರಂದು ದಾಖಲಾದ ಪ್ರಕರಣವನ್ನು ಆಧರಿಸಿ ಅನಿಷ್ಕಾರನ್ನು ಮುಂಬೈ ನಗರ ಪೊಲೀಸರು ಬಂಧಿಸಿದ್ದರು.

ಅನಿಷ್ಕಾ ಅವರ ಪೊಲೀಸ್ ರಿಮಾಂಡ್ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಪೊಲೀಸರು ಸೆಶನ್ಸ್ ನ್ಯಾಯಾಧೀಶ ಡಿ.ಡಿ. ಅಲ್ಮಾಲೆ ಅವರ ಮುಂದೆ ಹಾಜರುಪಡಿಸಿದ್ದರು.

ಪೊಲೀಸರ ಪರವಾಗಿ ವಾದಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಜಯ್ ಮಿಸಾರ್ ಅವರು ಸಾಕ್ಷಗಳೊಂದಿಗೆ ಅವರನ್ನು ಪ್ರಶ್ನಿಸಲು ಇನ್ನೂ ಮೂರು ದಿನಗಳವರೆಗೆ ತಮ್ಮ ಕಸ್ಟಡಿಗೆ ಒಪ್ಪಿಸಬೇಕೆಂದು ಮನವಿ ಮಾಡಿದ್ದರು.

ಅನಿಷ್ಕಾರ ಪೊಲೀಸ್ ಕಸ್ಟಡಿಯ ಅವಧಿಯನ್ನು ವಿಸ್ತರಿಸಬೇಕೆಂಬ ವಾದಕ್ಕೆ ಯಾವುದೇ ನೆಲೆಗಟ್ಟಿಲ್ಲವೆಂದು ಅನಿಷ್ಕಾರ ನ್ಯಾಯವಾದಿ ಮನಾನ್ ಸಾಂಘಾಯಿ ತಿಳಿಸಿದರು.

ಇತ್ತಂಡಗಳ ವಾದವನ್ನು ಆಲಿಸಿದ ನ್ಯಾಯಾಲಯವು ಪೊಲೀಸ್ ತನಿಖಾಧಿಕಾರಿಗಳ ಮನವಿಯನ್ನು ತಿರಸ್ಕರಿಸಿತು ಹಾಗೂ ಆರೋಪಿಯನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವಂತೆ ಸೂಚಿಸಿತು.

Similar News