ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ ರಚನೆಗೆ ಕೇಂದ್ರ ನಿರ್ಧಾರ

Update: 2023-03-25 02:11 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಧಿತ ವ್ಯಾಜ್ಯಗಳ ಪರಿಹಾರಕ್ಕೆ ಮೇಲ್ಮನವಿ ನ್ಯಾಯಮಂಡಳಿಯನ್ನು ಸ್ಥಾಪಿಸಲಿದ್ದು, ಈ ಸಂಬಂಧ ಹಣಕಾಸು ಮಸೂದೆಯ ತಿದ್ದುಪಡಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದರು.

ಮೇಲ್ಮನವಿ ಪ್ರಾಧಿಕಾರ ಅಥವಾ ಪರಿಷ್ಕರಣಾ ಪ್ರಾಧಿಕಾರದ ತೀರ್ಪಿನ ವಿರುದ್ಧ ಸಲ್ಲಿಕೆಯಾಗುವ ಮೇಲ್ಮನವಿಯ ವಿಚಾರಣೆ ನಡೆಸಲು ಇಂಥ ನ್ಯಾಯಮಂಡಳಿ ರಚಿಸುವ ಪ್ರಸ್ತಾವಕ್ಕೆ ಜಿಎಸ್‌ಟಿ ಮಂಡಳಿ ಕಳೆದ ತಿಂಗಳು ಒಪ್ಪಿಗೆ ನೀಡಿತ್ತು. ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಹಲವು ತಿಂಗಳುಗಳು ಬೇಕಾಗುತ್ತವೆ ಎಂಬ ಕಾರಣಕ್ಕೆ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿ ಸ್ಥಾಪನೆ ವಿಚಾರ ಕೇಂದ್ರ ಹಾಗೂ ರಾಜ್ಯಗಳ ನಡುವಿನ ವ್ಯಾಜ್ಯಕ್ಕೆ ಕಾರಣವಾಗಿತ್ತು.

ಶುಕ್ರವಾರ ಲೋಕಸಭೆಯಲ್ಲಿ ಅನುಮೋದನೆಗೊಂಡ ಹಣಕಾಸು ಮಸೂದೆಯ ಪ್ರಕಾರ, ಸರ್ಕಾರ ಹೊಸದಿಲ್ಲಿಯಲ್ಲಿ ಮೇಲ್ಮನವಿ ನ್ಯಾಯಮಂಡಳಿಯ ಪ್ರಧಾನ ಪೀಠವನ್ನು ಸ್ಥಾಪಿಸಲಿದೆ. ಇದರಲ್ಲಿ ಅಧ್ಯಕ್ಷ, ನ್ಯಾಯಾಂಗ ಸದಸ್ಯ ಮತ್ತು ರಾಜ್ಯ ಹಾಗೂ ಕೇಂದ್ರವನ್ನು ಪ್ರತಿನಿಧಿಸುವ ಇಬ್ಬರು ತಾಂತ್ರಿಕ ಸದಸ್ಯರು ಇರುತ್ತಾರೆ. ರಾಜ್ಯಗಳ ಮನವಿಯ ಮೇರೆಗೆ ರಾಜ್ಯ ಪೀಠಗಳನ್ನು ಕೂಡಾ ಸ್ಥಾಪಿಸಲು ಅವಕಾಶವಿದೆ. ಇದರಲ್ಲಿ ಇಬ್ಬರು ನ್ಯಾಯಾಂಗ ಸದಸ್ಯರು ಹಾಗೂ ರಾಜ್ಯ ಹಾಗೂ ಕೇಂದ್ರವನ್ನು ಪ್ರತಿನಿಧಿಸುವ ಇಬ್ಬರು ತಾಂತ್ರಿಕ ಸದಸ್ಯರು ಇರುತ್ತಾರೆ.

ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಈಗಾಗಲೇ ಹೇಳಿಕೆ ನೀಡಿರುವಂತೆ ಒಬ್ಬ ಸದಸ್ಯರು 50 ಲಕ್ಷ ರೂಪಾಯಿವರೆಗಿನ ಪ್ರಕರಣಗಳನ್ನು ನಿರ್ಧರಿಸಲಿದ್ದಾರೆ ಹಾಗೂ ಈ ಮಿತಿಯಿಂದ ಮೇಲ್ಪಟ್ಟ ಪ್ರಕರಣಗಳ ವಿಚಾರಣೆಯನ್ನು ಒಬ್ಬ ತಾಂತ್ರಿಕ ಸದಸ್ಯ ಹಾಗೂ ಒಬ್ಬ ನ್ಯಾಯಾಂಗ ಸದಸ್ಯರು ನಡೆಸಲಿದ್ದಾರೆ.

Similar News