ʼಸರ್ಕಾರದಿಂದ ಉಚಿತ ರಿಚಾರ್ಜ್ʼ: ವೈರಲ್ ಸಂದೇಶದ ವಾಸ್ತವಾಂಶವೇನು?
ಹೊಸದಿಲ್ಲಿ: ಕೇಂದ್ರ ಸರ್ಕಾರವು ಎಲ್ಲ ಬಳಕೆದಾರರಿಗೂ ರೂ. 239/- ಮೊತ್ತದ ಉಚಿತ ರೀಚಾರ್ಜ್ ಅನ್ನು 28 ದಿನಗಳ ಅವಧಿಗೆ ನೀಡಲಿದೆ ಎಂಬ ವೈರಲ್ ಸಂದೇಶದ ಕುರಿತು ಪತ್ರಿಕಾ ಮಾಹಿತಿ ದಳದ (PIB) ಫ್ಯಾಕ್ಟ್ ಚೆಕ್ ಘಟಕವು ಸ್ಪಷ್ಟೀಕರಣ ನೀಡಿದೆ. ಲಿಂಕ್ ಒಂದನ್ನು ಒತ್ತಿದರೆ ಬಳಕೆದಾರರು ಉಚಿತ ರೀಚಾರ್ಜ್ ಪಡೆಯಬಹುದು ಎಂಬ ಸಂದೇಶ ವಾಟ್ಸ್ ಆ್ಯಪ್ ಮೂಲಕ ಹರಿದಾಡಿದೆ.
"ಕೇಂದ್ರ ಸರ್ಕಾರವು "ಉಚಿತ ಮೊಬೈಲ್ ರೀಚಾರ್ಜ್ ಯೋಜನೆ"ಯಡಿ 28 ದಿನಗಳ ಅವಧಿಗೆ ರೂ. 239/- ಮೊತ್ತದ ಉಚಿತ ರೀಚಾರ್ಜ್ ಸೌಲಭ್ಯ ಒದಗಿಸಲಿದೆ ಎಂಬ ವಾಟ್ಸ್ ಆ್ಯಪ್ ಸಂದೇಶ ಹರಿದಾಡುತ್ತಿದೆ. ಈ ಪ್ರತಿಪಾದನೆಯು ನಕಲಿಯಾಗಿದೆ. ಭಾರತ ಸರ್ಕಾರದಿಂದ ಇಂತಹ ಯಾವುದೇ ಪ್ರಕಟಣೆ ಹೊರಡಿಸಲಾಗಿಲ್ಲ" ಎಂದು PIB ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದೆ. ಈ ಟ್ವೀಟ್‌ನೊಂದಿಗೆ ನಕಲಿ ಸಂದೇಶದ ಚಿತ್ರವನ್ನೂ ಅದು ಹಂಚಿಕೊಂಡಿದೆ.
ಈ ಸಂದೇಶದಲ್ಲಿ, "ಪ್ರಧಾನಿ ನರೇಂದ್ರ ಮೋದಿಯವರ ಉಚಿತ ಮೊಬೈಲ್ ರೀಚಾರ್ಜ್ ಯೋಜನೆಯಡಿ ಎಲ್ಲ ಭಾರತೀಯ ಬಳಕೆದಾರರಿಗೂ 28 ದಿನಗಳ ಅವಧಿಗೆ ರೂ. 239!- ಮೊತ್ತದ ಉಚಿತ ರೀಚಾರ್ಜ್ ಮಾಡುವ ಭರವಸೆ ನೀಡಲಾಗಿದೆ. ಆದ್ದರಿಂದ ಈ ಕೆಳಗಿನ ನೀಲಿ ಲಿಂಕ್ ಒತ್ತುವ ಮೂಲಕ ನಿಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡಿಕೊಳ್ಳಿ. ಈ ಲಿಂಕ್ ನಿಂದ ನಾನು 28 ದಿನಗಳ ಅವಧಿಗೆ ರೀಚಾರ್ಜ್ ಮಾಡಿಕೊಂಡಿದ್ದೇನೆ. ನೀವೂ ಕೂಡಾ ಈ ಕೆಳಗಿನ ಕೊಂಡಿಯನ್ನು ಒತ್ತುವ ಮೂಲಕ 28 ದಿನಗಳ ಅವಧಿಗೆ ಉಚಿತ ರೀಚಾರ್ಜ್ ಮಾಡಿಕೊಳ್ಳಬಹುದು (ಕೊನೆಯ ದಿನಾಂಕ ಮಾರ್ಚ್ 30, 2023) ಎಂದು ಹೇಳಲಾಗಿದೆ.
"ಭಾರತ ಸರ್ಕಾರವು ಉಚಿತ ರೀಚಾರ್ಜ್ ಸೌಲಭ್ಯ ಒದಗಿಸುತ್ತಿಲ್ಲ" ಎಂದೂ ಪಿಐಬಿಯ ಫ್ಯಾಕ್ಟ್ ಚೆಕ್ ಘಟಕ ಸ್ಪಷ್ಟಪಡಿಸಿದೆ.