ಅದಾನಿ ವಿವಾದ, ರಾಹುಲ್ ಗಾಂಧಿ ಅನರ್ಹತೆ: ಸಂಸತ್ತಿನಲ್ಲಿ ಕಪ್ಪು ಶರ್ಟ್ ಧರಿಸಿ ಪ್ರತಿಭಟಿಸಿದ ಕಾಂಗ್ರೆಸ್

ಖರ್ಗೆ ನೇತೃತ್ವದ ಬೃಹತ್ ಕಾರ್ಯತಂತ್ರ ಸಭೆಯಲ್ಲಿ ಭಾಗವಹಿಸಿದ ಸಮಾನಮನಸ್ಕ ಪಕ್ಷಗಳು

Update: 2023-03-27 07:27 GMT

ಹೊಸದಿಲ್ಲಿ: ಅದಾನಿ ವಿವಾದ ಹಾಗೂ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ಸೋಮವಾರ ಸಂಸತ್ತಿನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

ಸದನದಲ್ಲಿನ ಕಾರ್ಯತಂತ್ರದ ಬಗ್ಗೆ ಸಂಸತ್ತಿನಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಮಾನ ಮನಸ್ಕ ವಿರೋಧ ಪಕ್ಷದ ನಾಯಕರು ಚರ್ಚಿಸಿದರು. ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಕೂಡ ಸೇರಿಕೊಂಡಿದೆ.

ಅದಾನಿ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳ ಬೇಡಿಕೆಯ ನಡುವೆ ಸೋಮವಾರ ಸಂಸತ್ತು ಮೂರನೇ ವಾರವೂ ಸ್ಥಗಿತಗೊಂಡಿತು.

   ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರದಲ್ಲಿ ಉಳಿಯುವುದಾಗಿ ಹೇಳಿರುವ ತೃಣಮೂಲ ಕಾಂಗ್ರೆಸ್ ಇಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ನಡೆದ ಬೃಹತ್ ಕಾರ್ಯತಂತ್ರದ ಸಭೆಯಲ್ಲಿ ಭಾಗವಹಿಸಿದೆ.

ಪ್ರಸೂನ್ ಬ್ಯಾನರ್ಜಿ ಹಾಗೂ  ಜವಾಹರ್ ಸಿರ್ಕಾರ್ ಅವರು ಟಿಎಂಸಿಯನ್ನು ಪ್ರತಿನಿಧಿಸಿದ್ದರು, ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವ ಬಗ್ಗೆ ಪ್ರತಿಪಕ್ಷಗಳ ಕಾರ್ಯತಂತ್ರವನ್ನು ಚರ್ಚಿಸಲಾಯಿತು. ಇತರ ವಿಷಯಗಳಲ್ಲಿ ಜಂಟಿ ರಂಗದಿಂದ ದೂರವಿದ್ದರೂ ಪ್ರತಿಪಕ್ಷಗಳು ಒಂದಾಗಬೇಕು ಎಂದು ಪಕ್ಷ ಹೇಳಿದೆ.

"ಪ್ರಜಾಪ್ರಭುತ್ವವನ್ನು ರಕ್ಷಿಸಲು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದಗಳು. ಅದಕ್ಕಾಗಿಯೇ ನಾನು ನಿನ್ನೆ ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ ಮತ್ತು ಇಂದು ಕೂಡ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವ ಹಾಗೂ  ಸಂವಿಧಾನವನ್ನು ರಕ್ಷಿಸಲು ಮತ್ತು ಜನರನ್ನು ರಕ್ಷಿಸಲು ಯಾರಾದರೂ ಮುಂದೆ ಬಂದರೆ ನಾವು ಸ್ವಾಗತಿಸುತ್ತೇವೆ. ನಮ್ಮನ್ನು ಬೆಂಬಲಿಸುವ ಜನರಿಗೆ ನಾವು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ'' ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

ರಾಹುಲ್ ಗಾಂಧಿಯವರ ಅನರ್ಹತೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಾಂಗ್ರೆಸ್ ಸಂಸದರು ಕಪ್ಪು ಶರ್ಟ್ ಧರಿಸಿ  ಸಂಸತ್ತಿಗೆ ಆಗಮಿಸಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್‌ನ ಪ್ರತಿಸ್ಪರ್ಧಿಯಾದ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಜೊತೆಗೆ "ಕಪ್ಪು ಅಂಗಿ" ಪ್ರತಿಭಟನೆಯಲ್ಲಿ ಸೇರಿಕೊಂಡಿತು.

17 ವಿರೋಧ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಎಸ್ ಪಿ, ಜೆಡಿಯು,ಬಿಆರ್ ಎಸ್, ಸಿಪಿಎಂ,ಆರ್ ಜೆಡಿ, ಎನ್ ಸಿಪಿ, ಸಿಪಿಐ, ಐಯುಎಂಲ್, ಎಂಡಿಎಂಕೆ, ಕೆಸಿ, ಟಿಎಂಸಿ, ಆರ್ ಎಸ್ ಪಿ, ಎಎಪಿ, ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ ಹಾಗೂ  ಶಿವಸೇನೆ (UBT) ಸಭೆಯಲ್ಲಿ ಭಾಗವಹಿಸಿದ್ದವು.

ಬಿಜೆಪಿಯ ತೀವ್ರ ಟೀಕಾಕಾರರಾಗಿರುವ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದರು.

Similar News