ರಾಹುಲ್ ಅನರ್ಹತೆ ಪ್ರಕರಣ: ವಿದೇಶಗಳಿಂದ ದೃಢೀಕರಣ ಅಗತ್ಯವಿಲ್ಲವೆಂದು ದಿಗ್ವಿಜಯ್ ಸಿಂಗ್‌ಗೆ ಕಪಿಲ್ ಸಿಬಲ್ ತಿರುಗೇಟು
ಹೊಸ ದಿಲ್ಲಿ: ರಾಹುಲ್ ಗಾಂಧಿ ಅನರ್ಹತೆ ಪ್ರಕರಣವನ್ನು ಪರಿಗಣಿಸಿದ್ದಕ್ಕೆ ಜರ್ಮನಿಯ ವಿದೇಶಾಂಗ ಸಚಿವಾಲಯಕ್ಜೆ ಧನ್ಯವಾದ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಕೇವಲ ಬಿಜೆಪಿ ಪಕ್ಷದಿಂದ ಮಾತ್ರ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬದಲಿಗೆ ಪುರಾತನ ಪಕ್ಷವಾದ ಕಾಂಗ್ರೆಸ್ ಕೂಡಾ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಭಾರತೀಯ ಪ್ರಜಾಪ್ರಭುತ್ವಕ್ಕೆ ಆಗುವ ಯಾವುದೇ ಧಕ್ಕೆಯನ್ನು ಆಂತರಿಕವಾಗಿಯೇ ನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿದೆ. ಆ ಮೂಲಕ ಹಲವಾರು ವಿವಾದಗಳ ಕೇಂದ್ರ ಬಿಂದುವಾಗಿರುವ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯಿಂದ ಉಂಟಾಗಿರುವ ಹಾನಿಯನ್ನು ಕಾಂಗ್ರೆಸ್ ಪಕ್ಷವು ಸರಿಪಡಿಸಿಕೊಳ್ಳಲು ಮುಂದಾಗಿದೆ.
ಈ ನಡುವೆ ಖ್ಯಾತ ವಕೀಲ ಹಾಗೂ ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೂಡಾ ದಿಗ್ವಿಜಯ್ ಸಿಂಗ್ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ನಮಗೆ ವಿದೇಶಗಳಿಂದ ಯಾವುದೇ ದೃಢೀಕರಣ ಬೇಕಿಲ್ಲ ಎಂದು ಕಿಡಿ ಕಾರಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕಪಿಲ್ ಸಿಬಲ್, "ಭಾರತದಲ್ಲಿ ಪ್ರಜಾಪ್ರಭುತ್ವ ರಾಜಿಯಾಗಿರುವುದನ್ನು ಪರಿಗಣನೆಗೆ ತೆಗೆದುಕೊಂಡಿರುವುದಕ್ಕೆ ದಿಗ್ವಿಜಯ್ ಸಿಂಗ್ ಬರ್ಲಿನ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ನನ್ನ ಅನಿಸಿಕೆಯ ಪ್ರಕಾರ, ನಾವು ಮುಂದೆ ನಡೆಯಲು ಯಾವುದೇ ಊರುಗೋಲು ನೆರವಿನ ಅಗತ್ಯವಿಲ್ಲ, ನಮಗೆ ವಿದೇಶಗಳ ದೃಢೀಕರಣದ ಅಗತ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ರಾಹುಲ್ ಗಾಂಧಿ ಅನರ್ಹತೆ ಪ್ರಕರಣವನ್ನು ಪರಿಗಣಿಸಿದ್ದಕ್ಕಾಗಿ ಜರ್ಮನಿಯ ವಿದೇಶಾಂಗ ಸಚಿವಾಲಯ ಹಾಗೂ ಆ ವಿಡಿಯೊವನ್ನು ಪೋಸ್ಟ್ ಮಾಡಿದ್ದ ಡಾಯಿಚ್ ವೆಲ್ ಸುದ್ದಿ ಸಂಸ್ಥೆಯ ಪ್ರಧಾನ ಅಂತಾರಾಷ್ಟ್ರೀಯ ಸಂಪಾದಕ ರಿಚರ್ಡ್ ವಾಕರ್ ಅವರಿಗೆ ಧನ್ಯವಾದ ಸಲ್ಲಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯು ವ್ಯಾಪಕ ಟೀಕೆಗೆ ಗುರಿಯಾಗಿತ್ತು.