ಶಾಸಕ, ಸಂಸದರ ಇಚ್ಛಾಶಕ್ತಿಯ ಕೊರತೆಯಿಂದ ನಮಗೆ ವಂಚನೆ: ಎಂಆರ್‌ಪಿಎಲ್‌ ನಾಲ್ಕನೇ ಹಂತದ ನಿರ್ವಸಿತರ ಆರೋಪ

ಚುನಾವಣೆ ಬಹಿಷ್ಕರಿಸಿದ ಕುತ್ತೆತ್ತೂರು, ತೆಂಕ ಎಕ್ಕಾರು, ಪೆರ್ಮುದೆ, ಮೂಳೂರು-ಕಂದಾವರ ಗ್ರಾಮ ನಿವಾಸಿಗಳು

Update: 2023-03-31 17:10 GMT

ಸುರತ್ಕಲ್‌: ಶಾಸಕ ಉಮನಾಥ ಕೋಟ್ಯಾನ್‌ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಇಚ್ಚಾಶಕ್ತಿಯ ಕೊರತೆಯಿಂದ ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ನಿರ್ವಸಿತರಿಗೆ ನ್ಯಾಯೋಚಿತ ಪರಿಹಾರ ಮತ್ತು ಉದ್ಯೋಗಾವಕಾಶಗಳಿಂದ ವಂಚಿಸಲಾಗುತ್ತಿದೆ ಎಂದು ಕುತ್ತೆತ್ತೂರು, ತೆಂಕ ಎಕ್ಕಾರು, ಪೆರ್ಮುದೆ, ಮೂಳೂರು-ಕಂದಾವರ ಗ್ರಾಮಸ್ಥರು ಆರೋಪ ಮಾಡಿದ್ದು, ಈ ಬಾರಿಯ ಚುನಾವಣೆಯನ್ನು ಭಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

ದೇಶದ ಅಭಿವೃದ್ಧಿ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ಗಮನಿಸಿ ಅವರಿಗೆ ಉದ್ಯೋಗ ದೊರೆಯುವ ಭರವಸೆಯಲ್ಲಿ ಎಂಆರ್‌ಪಿಎಲ್‌ಗೆ ನಮ್ಮ ಸ್ಥಳ ನೀಡಿ ಈಗ 7 ವರ್ಷವಾಯಿತು. ಇಲ್ಲಿಯ ವರೆಗೆ ನೀಡಿದ್ದ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಭೂಮಿಯ ಪರಿಹಾರ ಒಂದನ್ನು ಬಿಟ್ಟು ಯಾವುದೇ ಭರವಸೆ ಈಡೇರಿಸಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌,  ಕೆಐಎಡಿಬಿ ಮತ್ತು ಎಂಆರ್‌ಪಿಎಲ್‌ ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗಿದ್ದು, ಸಂತ್ರಸ್ತರನ್ನು ಹೊರಗಿಡಲಾಗಿದೆ. ಇದು ಯಾವ ರೀತಿಯ ಸಮಿತಿ ಎಂದು ಅರ್ಥವಾಗುತ್ತಿಲ್ಲ ಎಂದು ಎಂಆರ್‌ಪಿಎಲ್‌ 4ನೇ ಹಂತದ ನಿರ್ವಸಿತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ ಪ್ರಶ್ನಿಸಿದ್ದಾರೆ.

ನಮಗೆ ಪ್ಯಾಕೇಜ್‌ ವಿತರಣೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಎಲ್ಲಾ ದಾಖಲೆ ಪತ್ರಗಳು ಸರಿಪಡಿಸಿಕೊಂಡು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿದೆ. ಆದರೆ ನಮ್ಮ ಶಾಸಕರು, ಸಂಸದರ ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆಯಿಂದಾಗಿ ನಾವು ಈ ಸ್ಥಿತಿಗೆ ತಲುಪುವಂತಾಗಿದೆ. ನಮ್ಮ ನಿವೇಶನಕ್ಕೆ ಪರಿಹಾರ ನೀಡಿದ್ದು ಬಿಟ್ಟರೆ, ಉದ್ಯೋಗದ ಭರವಸೆ, ನಿವೇಶನದ ಭರವಸೆ, ಮರಮಟ್ಟುಗಳು, ಕೃಷಿ ಮೊದಲಾದವುಗಳಿಗೆ ಪರಿಹಾರ ವಿತರಣೆಯಾಗಿಲ್ಲ. ಈ ಕುರಿತು ಕಳೆದ ಮೂರು ವರ್ಷಗಳಿಂದ ಶಾಸಕ ಉಮಾನಾಥ ಕೋಟ್ಯಾನ್‌ ಮತ್ತು ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಹಲವು ಬಾರಿ ಭೇಟಿಯಾಗಿ ಮಾತುಕತೆಗೆ ಮುಂದಾದಗಲೂ ಇಂದು ನಾಳೆ ಎಂದು ನಮ್ಮನ್ನು ಹಿಂದೆ ಕಳುಹಿಸುತ್ತಿದ್ದಾರೆ ಹೊರತು ನಮ್ಮ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಕಳೆದ ವಾರ ಊರಿನ ಹಿರಿಯರೊಂದಿಗೆ ಸಂಸದರನ್ನು ಭೇಟಿಯಾಗಲು ಹೋದಾಗಲೂ ಅವರು ನಮ್ಮನ್ನು ತಿರಸ್ಕರಿಸಿ ಹಿಂದೆ ಕಳುಹಿಸಿದ್ದಾರೆ ಎಂದು ಹೇಳಿದರು.

ನಮ್ಮ ನ್ಯಾಯೋಜಿತ ಭರವಸೆಗಳನ್ನು ಈಡೇರಿಸಲು ಜಿಲ್ಲಾಧಿಕಾರಿ, ಎಂಆರ್‌ಪಿಎಲ್‌ ಅಧಿಕಾರಿಗಳು ಸಿದ್ಧರಿದ್ದಾರೆ ಆದರೆ, ಶಾಸಕ ಉಮಾನಾಥ ಕೋಟ್ಯಾನ್‌ ಮತ್ತು ಸಂಸದ ನಳಿನ್‌ ಕುಮಾರ್‌ ಅವರ ಇಚ್ಚಾಶಕ್ತಿ ಮತ್ತು ರಾಜಕೀಯಕ್ಕಾಗಿ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಹಾಗಾಗಿ ಮುಂದಿನ ಒಂದು ತಿಂಗಳ ಒಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸಂತ್ರಸ್ತರಾಗಿರುವ ಕುತ್ತೆತ್ತೂರು, ಪೆರ್ಮುದೆ, ಮೂಳೂರು-ಕಂದಾವರ ಗ್ರಾಮಗಳ ಸುಮಾರು 12 ಸಾವಿರ ಮತದಾರರು ಚುನಾವಣೆಯನ್ನು ಭಹಿಷ್ಕರಿಸಲಿದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ, ಜನಪ್ರತಿನಿಧಿಗಳು, ಎಂಆರ್‌ಪಿಎಲ್‌ನವರ ಭರವಸೆಗಳನ್ನು ಕೇಳಿ ಇದ್ದ ಜಮೀನುನನ್ನು ಎಂಆರ್‌ಪಿಎಲ್‌ ಗೆ ನೀಡಿ  ಬೀದಿಗೆ ಬಿದ್ದಿದ್ದೇವೆ. ಶಾಸಕರು ಮತ್ತು ಸಂಸದರು ನಮ್ಮ ಸಮಸ್ಯೆಗಳಿಗೆ ಕಿವಿಯೇ ಕೊಡುತ್ತಿಲ್ಲ. ನೋಡುವ, ಮಾಡುವ ಎಂದು ಹೇಳಿಕೊಂಡು ಪರಿಹಾರ ವಿತರಣೆಯನ್ನು ಹಿಂದೆ ಹಿಂದೆ ಹಾಕುತ್ತಿದ್ದಾರೆ ಬಿಟ್ಟು ಬೇರೇನೂ ಮಾಡುತ್ತಿಲ್ಲ ಎಂದು ಸಂತ್ರಸ್ತರಾಗಿರುವ ದೇವಾದರ ಶೆಟ್ಟಿ ಕುತ್ತೆತ್ತೂರು ಆರೋಪಿಸಿದ್ದಾರೆ.

ನಮ್ಮ ಸ್ಥಳ ಅವರಿಗೆ ನೀಡಿ 7 ವರ್ಷವಾಯಿತು. ಜಾಗದ ಹಣ ಮಾತ್ರ ನೀಡಿ ನಮ್ಮನ್ನು ವಂಚಿಸುತ್ತಿದ್ದಾರೆ. ನಮ್ಮ ಜಮೀನುಗಳನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಹಾಗಾಗಿ ನಮಗೆ ಸಾಗುವಳಿ ಮಾಡಲೂ ಸಾಧ್ಯವಾಗದೇ, ಜಮೀನುಗಳನ್ನು ಹಡೀಲು ಬಿಟ್ಟಿದ್ದೇವೆ. ಮನೆ, ದನಕರುಗಳ ಕೊಟ್ಟಿಗೆ ಎಲ್ಲವೂ ಬಿದ್ದು ಹೋಗುತ್ತಿವೆ. ದುರಸ್ತಿ ಪಡಿಸಲಾಗುತ್ತಿಲ್ಲ. ನಮ್ಮ ಶಾಸಕ, ಸಂಸದರಾಗಲೀ ನಮ್ಮ ಬಳಿಗೆ ಬಂದು ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ಹಾಗಾಗಿ ಈ ಬಾರಿ ಸಂತ್ರಸ್ತರಾಗಿರುವ 500 ಮನೆಗಳ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಲಿದ್ದೇವೆ ಎದು ಸಂತ್ರಸ್ತೆ ಗುಣವತಿ ಶೆಟ್ಟಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಜಾಗದ ಒಂದು ಹಣ ನೀಡಿದ್ದಾರೆ. ಸ್ಥಳ ನೀಡುವಾಗ ಹಲವು ಭರವಸೆಗಳನ್ನು ನೀಡಿದ್ದರು. ಹಾಗಾಗಿ ನಾನು ಗಲ್ಫ್‌ನಲ್ಲಿದ್ದ ಕೆಲಸ ಬಿಟ್ಟು ಊರಿಗೆ ಬಂದೆ. ಈಗ ಊರಿಗೆ ಬಂದು 3 ವರ್ಷವಾಯಿತು. ಇವರ ಭರವಸೆ ನಂಬಿ ಬಂದು ನಾನು ಇದ್ದ ಕೆಲಸವನ್ನೂ ಕಳೆದುಕೊಂಡು ನಿರುದ್ಯೋಗಿಯಾಗಿ ಮನೆಯಲ್ಲೇ ಕಳೆಯುವಂತಾಗಿದೆ. ನಾವು ಕೃಷಿ ಮಾಡಲೂ ಸಾಧ್ಯವಾಗುತ್ತಿಲ್ಲ. ನಮ್ಮ ಜಾಗ ಈಗ ಕೆಐಎಡಿಬಿಯ ಹೆಸರಿಗಾಗಿದೆ. ನಮ್ಮ ಆರ್‌ಟಿಸಿ ತೆಗೆಯುವಾಗ ಅವರ ಹೆಸರಿನಲ್ಲಿ ಬರುತ್ತಿದೆ. ಪುರ್ವಸತಿಯ ಭರವಸೆ ನೀಡಲಾತ್ತು. ಅದನ್ನೂ ಸರಿಯಾಗಿ ನೀಡಿಲ್ಲ. ನಮ್ಮ ಭರವಸೆಗಳು ಚುನಾವಣೆಗೂ ಮುನ್ನ ಈಡೇರದಿದ್ದರೆ, ನಾವು ಈ ಬಾರಿ ಮತದಾನ ಮಾಡುವುದಿಲ್ಲ. ಚುನಾವಣೆ ಬಹಿಷ್ಕರಿಸುವುದಾಗಿ ನಿರ್ಧರಿಸಿದೇವೆ ಎಂದು ಸಂತ್ರಸ್ತ ಭರತ್‌ ಶೆಟ್ಟಿ ಹೇಳಿದ್ದಾರೆ.

"ನಾವು ವೋಟು ಕೊಟ್ಟು ಆರಿಸಿದ ಜನಪ್ರತಿನಿಧಿಗಳು ಯಾರೂ ನಮ್ಮ ಸಂಪರ್ಕಕ್ಕೆ ಬರುತ್ತಿಲ್ಲ. ಹಲವು ಬಾರಿ ನಾವು ಅವರ ಕಚೇರಿಗಳಿಗೆ ಅಲೆದಾಡಿದರೂ ಅವರು ನಾಳೆ, ನಾಳಿದ್ದು ಎಂದು ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ಉದ್ಯೋಗ ನೀಡಿಲ್ಲ. ಕೃಷಿಯ ಪ್ಯಾಕೇಜ್‌ ನೀಡಿಲ್ಲ. ಸ್ಥಳವನ್ನು ಅವರ ಹೆಸರಿಗೆ ಮಾಡಿಕೊಂಡು ಅದರ ಹಣವನ್ನು ನೀಡಿದ್ದಾರೆ. ಬೇರೆ ಯಾವುದೇ ಪರಿಹಾರ ನೀಡದೆ ನಮ್ಮನ್ನು ವಂಚಿಸುತ್ತಿದ್ದಾರೆ".

- ಕರುಣಾಕರ ಶೆಟ್ಟಿ, ಸಂತ್ರಸ್ತ

"ಎಂಆರ್‌ಪಿಎಲ್‌ಗೆ ಭೂ ಸ್ವಾಧಿನಕ್ಕಾಗಿ ನಮ್ಮ ಪರಿಸರ ಕೇಳಿದ್ದರು. ಕೆಲವೊಂದು ಭರವಸೆಗಳನ್ನು ನೀಡಿದ ಹಿನ್ನಲೆಯಲ್ಲಿ ಅವರನ್ನು ನಂಬಿ ನಮ್ಮ ನಿವೇಶನ ನೀಡಿದ್ದೇವೆ. ಆದರೆ, ಅವರು ನಿವೇಶನದ ಪರಿಹಾರ ಬಿಟ್ಟು ಬೇರೆ ಯಾವುದೇ ಪರಿಹಾರ ನೀಡಿಲ್ಲ. ಮನೆಗಳು ಬಿದ್ದು ಹೋಗುತ್ತಿವೆ. ದುರಸ್ತಿ ಮಾಡಲಾಗುತ್ತಿಲ್ಲ. ಕೃಷಿ ಇನ್ನು ಮಾಡುವುದು ನಮ್ಮ ಕನಸು ಮಾತ್ರ. ನಮ್ಮ ಸ್ವಂತ ಮನೆ ದುರಸ್ತ ಮಾಡಬೇಕಾದರೂ ಅನುಮತಿ ಬೇಕಿದೆ. ಅಲ್ಲದೆ, ಈಗಾಗಲೇ ನಮ್ಮ ಎಲ್ಲವನ್ನೂ ಎಂಆರ್‌ಪಿಎಲ್‌ಗೆ ಬಿಟ್ಟು ಕೊಟ್ಟಿರುವುದರಿಂದ ದುರಸ್ತಿ, ಕೃಷಿ ಏನು ಮಾಡಿಯೂ ಪ್ರಯೋಜನವಿಲ್ಲ. ಸವಲತ್ತುಗಳ ಭರವಸೆ ನೀಡಿದ್ದರು. 7 ವರ್ಷವಾದರೂ ಯಾವುದೇ ಸವಲತ್ತು ನೀಡಿಲ್ಲ. ನಾವು ಎಷ್ಟು ಬೆನ್ನು ಬಿದ್ದರೂ ನಮ್ಮನ್ನು ಯಾರೂ ಕೇಳುವವರಿಲ್ಲ. ಜನ ಪ್ರತಿನಿಧಿಗಳಿಗೆ ನಮ್ಮ ಜೊತೆ ನಿಲ್ಲಬೇಕೆನ್ನು ಇಚ್ಚಾ ಶಕ್ತಿಯೇ ಇಲ್ಲ. ನಮಗೆ ನೀಡಿರುವ ಭರವಸೆಗಳನ್ನು ಈಡೇರಿಸದಿದ್ದರೆ, ಚುನಾವಣೆ ಭಹಿಷ್ಕರಿಸಲಿದ್ದೇವೆ. ಅದಕ್ಕೂ ಬಗ್ಗದಿದ್ದರೆ ನಮ್ಮ ಮಕ್ಕಳ ಭವಿಷ್ಯದ ಹಿತ ದೃಷ್ಠಿಯಿಂದ ಹಾಗೂ ನಮ್ಮನ್ನು ಈಗಾಗಲೇ ಬೀದಿಗೆ ಹಾಕಿದ್ದಾರೆ. ಹಾಗಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ".
-ಸುರೇಶ್‌ ರಾವ್‌, ಸಂತ್ರಸ್ತ ಕುತ್ತೆತ್ತೂರು

"ನಾವು ಮನೆಯಲ್ಲಿ ಮೂವರು ಹೆಂಗಸರೇ ಇದ್ದೇವೆ. ನಮ್ಮ ಮನೆಯಲ್ಲಿ ಗಂಡು ದಿಕ್ಕು ಇಲ್ಲ. ನನ್ನ ಗಂಡ ಸರಕಾರ, ಎಂಆರ್‌ಪಿಎಲ್‌ನ ಭರವಸೆ ನಂಬಿ ಮೋಸ ಹೋಗಿ ಬೀದಿಗೆ ಬಿದ್ದಿದ್ದೇವೆ ಎಂದು ಹೇಳುತ್ತಾ ಕೊರಗಿ ಕೊರಗಿ ಒಂದು ವರ್ಷದ ಹಿಂದೆ ನಿಧರಾದರು. ಅತೀ ಶೀಘ್ರದಲ್ಲಿ ಭರವಸೆ ನೀಡಿದಂತೆ ಎಲ್ಲಾ ಪರಿಹಾರಗಳನ್ನು ಸರಕಾರ, ಜಿಲ್ಲಾಧಿಕಾರಿಯವರು ತೆಗೆಸಿ ಕೊಟ್ಟರೆ ತುಂಬಾ ಉಪಕಾರವಾಗುತ್ತದೆ. ನಾವು ಹೋಗೋ ಬದುಕಿಕೊಳ್ಳುತ್ತೇವೆ ಎಂದು 80 ವರ್ಷದ ಗಿರಿಜಾ ಪೂಜಾರ್ತಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ಕಣ್ಣೀರಿಟ್ಟರು.

"ಎಂಆರ್‌ಪಿಎಲ್‌ನಲ್ಲಿ ಕೆಲಸಕ್ಕಾಗಿ ನನ್ನ ಮಗ ಕೋರ್ಸ್‌ ಮಾಡಿ ಈಗ 7 ವರ್ಷವಾಯಿತು. ಇನ್ನೂ ಆತನಿಗೆ ಕೆಲಸ ಸಿಕ್ಕಿಲ್ಲ. ಈಗಲೂ ಉದ್ಯೋಗ ಸಿಗದೇ ಮನೆಯಲ್ಲಿದ್ದಾನೆ. ಏಳು ವರ್ಷದಿಂದ ಶಾಸಕರು, ಸಂಸದರಿಗೆ ವಿನಂತಿಸಿದರೂ ನಾಳೆ ನಾಳೆ ಎಂದು ಹೇಳಿಕೊಂಡು ದಿನ ದೂಡುತ್ತಿದ್ದಾರೆ. ಶಾಸಕರು ನಮ್ಮ ಯಾವುದೇ ಕೆಲಸಗಳನ್ನು ಮಾಡಿಲ್ಲ. ನಾಲ್ಕನೇ ಹಂತದಲ್ಲಿ 500 ಮನೆಗಳ ನಿವಾಸಿಗಳು ನಿರ್ವಸಿತರಾಗಿದ್ದಾರೆ. ಕಳೆದ ವಾರವೂ ಸಂಸದರನ್ನು ಭೇಟಿ ಮಾಡಿದ್ದೆವು. ಆಗಲೂ ಅವರು ನಾಳೆ ಎಂದೇ ನಮ್ಮನ್ನು ಹಿಂದೆ ಕಳುಹಿಸಿದರು. ಇನ್ನೂ ಚುನಾವಣೆ ಘೋಷಣೆಯಾಗಿದೆ. ಇನ್ನು ಯಾವಾಗ ಮಾಡುವುದು? ಉದ್ಯೋಗ ನೀಡಲು ಎಂಆರ್‌ಪಿಎಲ್‌ನವರು ಸಿದ್ಧರಿದ್ದಾರೆ. ಆದರೆ, ನಮ್ಮ ಶಾಸಕರು, ಸಂಸದರ ಇಚ್ಚಾಶಕ್ತಿಯ ಕೊರತೆಯಿಂದ ನಮ್ಮ ಸ್ಥಿತಿ ಹೀಗಾಗಿದೆ. ಪರಿಹಾರ ನೀಡಲು ಸಾಧ್ಯವಿಲ್ಲ ಎಂದಾದರೆ, ಡಿನೋಟಿಫಿಕೇಶನ್‌ ಮಾಡಲಿ. ನಾವುಯ ನಮ್ಮ ಸ್ಥಳಗಳಲ್ಲೇ ಬದುಕು ಕಟ್ಟಿ ಕೊಳ್ಳುತ್ತೇವೆ. ಪರಿಹಾರದ ಹೆಸರಿನಲ್ಲಿ ನಮಗೆ 30 ಅಡಿಯಷ್ಟು ನೀರು ನಿಲ್ಲುವ ನಿವೇಶನ ನೀಡಲು ಮುಂದಾಗಿದ್ದಾರೆ. ಮೊದಲು ಎಂಆರ್‌ಪಿಎಲ್‌ ಅಧಿಕಾರಿಗಳು ಅಲ್ಲಿ ಒಂದು ವರ್ಷ ಮನೆ ಮಾಡಿ ಜೀವನ ಮಾಡಲಿ, ಬಳಿಕ ನಾವು ಅಲ್ಲಿಗೆ ಸ್ಥಳಾಂತರವಾಗುತ್ತೇವೆ".

-ಜಿ.ಕೆ. ಪೂವಪ್ಪ ಸಂತ್ರಸ್ತರು ಪೆರ್ಮುದೆ.

Similar News