ಪಶ್ಚಿಮ ಬಂಗಾಳ: ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ
ಬರ್ಧಮಾನ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್‌ನ ಶಕ್ತಿಗಢದಲ್ಲಿ ಶನಿವಾರ ಸಂಜೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ರಾಜು ಝಾ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರ್ಗಾಪುರ ಮೂಲದ ಉದ್ಯಮಿ ರಾಜು ಝಾ ಹಾಗೂ ಕೆಲವು ಸಹೋದ್ಯೋಗಿಗಳು ಕೋಲ್ಕತ್ತಾಗೆ ತೆರಳುತ್ತಿದ್ದಾಗ ಶಕ್ತಿಗಢದ ಮಿಠಾಯಿ ಅಂಗಡಿಯ ಹೊರಗೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿ ರಾಜು ಝಾ ಸೇರಿದಂತೆ ಮೂವರು ಇದ್ದರು. ಆರೋಪಿಯ ಉದ್ದೇಶ ಏನಿತ್ತು ಎಂದು ಗೊತ್ತಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬರ್ಧಮಾನ್ ಎಸ್ಪಿ ಕಮ್ನಾಸಿಸ್ ಸೇನ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಝಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎಡರಂಗದ ಆಡಳಿತದ ಅವಧಿಯಲ್ಲಿ, ಝಾ ಅವರು ಸಿಲ್ಪಾಂಚಲ್‌ನಲ್ಲಿ ಅಕ್ರಮ ಕಲ್ಲಿದ್ದಲು ವ್ಯವಹಾರ ನಡೆಸುತ್ತಿದ್ದ ಎಂದು ಆರೋಪಿಸಲಾಗಿತ್ತು.