ಆರ್‌ಟಿಐ ಕಾರ್ಯಕರ್ತರಾಗಿ ಬದಲಾಗುತ್ತಿರುವ ಜೈಲಿನ ಕೈದಿಗಳು ಮಾಡುತ್ತಿರುವುದೇನು ಗೊತ್ತೇ?
ಹೊಸ ದಿಲ್ಲಿ: ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣಗಳಿಂದ ಹಿಡಿದು ಆಸ್ಪತ್ರೆ ಸೇವೆ, ಕಾರಾಗೃಹದಲ್ಲಿನ ಆಹಾರ ವಿವರದವರೆಗೆ ಮಾಹಿತಿ ಪಡೆಯಲು ದಿಲ್ಲಿ ಕಾರಾಗೃಹದಲ್ಲಿರುವ ಕೈದಿಗಳು ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಬದಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯನ್ನು ಹೊರ ಜಗತ್ತಿನ ಮಾಹಿತಿ ಅಥವಾ ಕಾರಾಗೃಹದಲ್ಲಿ ಕನಿಷ್ಠ ಉತ್ತಮ ಸೌಲಭ್ಯ ಪಡೆಯಲು ಬಳಸಿಕೊಳ್ಳುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ತಿಹಾರ್,ರೋಹಿಣಿ ಹಾಗೂ ಮಂಡೋಲಿ ಕಾರಾಗೃಹದ ಕೈದಿಗಳು ಕಳೆದ ಎರಡು ವರ್ಷಗಳಲ್ಲಿ 500 ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದಾರೆ ಎಂದು ಬಂದೀಖಾನೆ ಅಧಿಕಾರಿಯೊಬ್ಬರು The Indian Express ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬಹುತೇಕ ಮನವಿಗಳು ಬಂದೀಖಾನೆ ಆಡಳಿತದ ಕುರಿತಾಗಿದ್ದರೆ, ಉಳಿದವು ಪೊಲೀಸರಿಂದ ಕೈದಿಗಳು ಬಯಸಿರುವ ತಮ್ಮ ವಿರುದ್ಧದ ಪ್ರಕರಣಗಳ ಮಾಹಿತಿ ಅಥವಾ ನ್ಯಾಯಾಲಯ ದಾಖಲೆಗಳನ್ನು ಪಡೆಯಲು ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಮಾಹಿತಿ ಹಕ್ಕು ಅರ್ಜಿಗಳನ್ನು ತೀರಾ ಅಪಾಯಕಾರಿ ಕೈದಿಗಳು ಸಲ್ಲಿಸಿದ್ದಾರೆ. "ಭೂಗತ ಪಾತಕಿಗಳು ಹಾಗೂ ಸರಣಿ ಅಪರಾಧಿಗಳನ್ನೊಳಗೊಂಡಂತೆ ಬಹುತೇಕ ತೀರಾ ಅಪಾಯಕಾರಿ ಕೈದಿಗಳು ಹೆಚ್ಚು ಕಾರಾಗೃಹ ಸೌಲಭ್ಯಗಳನ್ನು ಪಡೆಯಲು ಪದೇ ಪದೇ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ" ಎಂದು ಹೆಸರೇಳಲಿಚ್ಛಿಸದ ಬಂದೀಖಾನೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಅವರು ಕೈದಿಗಳಿಗೆ ನಿರ್ದಿಷ್ಟ ಆಹಾರ ದೊರೆಯುತ್ತದೋ ಇಲ್ಲವೋ ಅಥವಾ ಬಂದೀಖಾನೆ ಉಪಾಹಾರ ಗೃಹದಲ್ಲಿ ದೊರೆಯುವ ನಿರ್ದಿಷ್ಟ ಆಹಾರದ ದರವೆಷ್ಟು ಎಂಬ ಕುರಿತು ಮಾಹಿತಿ ಬಯಸುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಕೈದಿಗಳು ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸಿರುವ ಮತ್ತೋರ್ವ ಬಂದೀಖಾನೆ ಅಧಿಕಾರಿ, ಕೈದಿಗಳು ಸಾಮಾನ್ಯವಾಗಿ ತಮ್ಮ ಕೈಬರಹದಲ್ಲಿ ಅರ್ಜಿ ಬರೆಯುತ್ತಾರೆ ಮತ್ತದನ್ನು ಬಂದೀಖಾನೆ ವರಿಷ್ಠಾಧಿಕಾರಿಗೆ ಸಲ್ಲಿಸುತ್ತಾರೆ. ಬಂದೀಖಾನೆ ವರಿಷ್ಠಾಧಿಕಾರಿಗಳು ಆ ಅರ್ಜಿಗಳನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ವರ್ಗಾಯಿಸುತ್ತಾರೆ ಎಂದು ತಿಳಿಸಿದ್ದಾರೆ.
ಬಂದೀಖಾನೆ ತಜ್ಞ ಹಾಗೂ ತಿಹಾರ್ ಬಂದೀಖಾನೆಯ ಮಾಜಿ ಕಾನೂನು ಅಧಿಕಾರಿ ಸುನೀಲ್ ಗುಪ್ತಾ ಪ್ರಕಾರ, ಬಹುತೇಕ ಕೈದಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಳ್ಳುವುದು ತಿಳಿದಿದೆ. ಒಂದು ವೇಳೆ ಪ್ರಾಥಮಿಕ ಮಾಹಿತಿ ತೃಪ್ತಿಕರವಾಗಿಲ್ಲದಿದ್ದರೆ ಅವರು ಮುಖ್ಯ ಮಾಹಿತಿ ಆಯುಕ್ತರಿಗೂ ಮನವಿ ಸಲ್ಲಿಸುತ್ತಾರೆ ಎನ್ನುತ್ತಾರೆ.
"ಕೈದಿಗಳಿಗೆ ಜಾಮೀನು ಪಡೆಯುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಒದಗಿಸಲು ಅಥವಾ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಲು ಪದೇ ಪದೇ ವೈದ್ಯಕೀಯ ದಾಖಲೆಗಳ ಅಗತ್ಯ ಬೀಳುತ್ತದೆ" ಎಂದೂ ಅವರು ತಿಳಿಸಿದ್ದಾರೆ.