ಕತ್ತಲ ಒಡಲೊಳಗೆ ಅಕ್ಷರದ ಕನಸು ಬಿತ್ತಿದ ಜ್ಯೋತಿಬಾ ಫುಲೆ

ಇಂದು ಜ್ಯೋತಿಬಾ ಫುಲೆ ಜನ್ಮದಿನ

Update: 2023-04-11 08:29 GMT

ಸಾಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆಗೆ ದುಡಿದ ಮಹನೀಯರ ಸಾಲಿನಲ್ಲಿ ಮುಂಚೂಣಿಯ ಹೆಸರು ಜ್ಯೋತಿರಾವ್ ಫುಲೆ. ಜ್ಯೋತಿ ಬಾ ಫುಲೆ ಎಂದೇ ಪರಿಚಿತರು. ಅವರು ಸ್ಥಾಪಿಸಿದ್ದ ಸತ್ಯಶೋಧಕ ಸಮಾಜ ಈ ನಿಟ್ಟಿನಲ್ಲಿ ಮಾಡಿದ ಕೆಲಸ ದೊಡ್ಡದು. ಪುಣೆಯಲ್ಲಿ 1827ರಲ್ಲಿ ಜನಿಸಿದ ಜ್ಯೋತಿಬಾ, ಹೂಗಾರ ಸಮಾಜಕ್ಕೆ ಸೇರಿದವರು. ಫುಲೆ ಎಂದರೆ ಹೂ ಎಂದು ಅರ್ಥ. ಚಿಕ್ಕ ವಯಸ್ಸಿನಲ್ಲಿಯೇ ದೇಶದ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ, ಪುರಾಣಗಳನ್ನು ಕಟುವಾಗಿ ವಿಮರ್ಶಿಸಿ ಮಾತನಾಡುವ ಸಾಮರ್ಥ್ಯ ಹೊಂದಿದ್ದರು.

13ನೇ ವಯಸ್ಸಿನಲ್ಲಿಯೇ ಅವರಿಗೆ ಮದುವೆಯಾಗುತ್ತದೆ. ಅವರಿಗಿಂತ ನಾಲ್ಕು ವರ್ಷ ಕಿರಿಯಳಾದ ಸಾವಿತ್ರಿಬಾಯಿ ಅವರಿಗೆ ಓದಬೇಕೆಂಬ ಆಸೆ. ಆಗ ಜ್ಯೋತಿ ಬಾ ಪತ್ನಿಗೆ ಶಿಕ್ಷಣ ಕೊಡಿಸಲು ಮುಂದಾಗುತ್ತಾರೆ. ಶಾಲೆ ಕಲಿಯದ ತನ್ನ ಪತ್ನಿಯಂತಹ ಹುಡುಗಿಯರಿಗೆ ಶಾಲೆ ಶುರು ಮಾಡುವ, ಅಕ್ಷರ ಕಲಿಯಲೇಬಾರದ ಅಸ್ಪೃಶ್ಯರಿಗೂ ಶಾಲೆ ತೆರೆಯುವ ಕನಸೊಂದು ಅವರಲ್ಲಿ ಮೊಳೆಯುವುದು ಆಗಲೇ. ಅಸ್ಪೃಶ್ಯ, ತಳ ಸಮುದಾಯದ ವಿದ್ಯಾರ್ಥಿಗಳು ಹಾಗೂ ಹೆಣ್ಣುಮಕ್ಕಳಿಗೆ ಇಂಗ್ಲಿಷ್ ಕಲಿಸಲೇಬೇಕೆಂಬ ಹಂಬಲವೂ ಮೂಡುತ್ತದೆ. ಹೆಂಡತಿ ಸಾವಿತ್ರಿಬಾಯಿಯನ್ನು ಅಹ್ಮದ್ ನಗರದ ಮಿಸ್ ಫರಾರ್ ಫಾರ್ಮಲ್ ಶಾಲೆಗೆ ಶಿಕ್ಷಕ ತರಬೇತಿ ಪಡೆಯಲೆಂದು ಕಳಿಸಿದರು. ಅನಕ್ಷರಸ್ಥೆಯಾಗಿ ಜ್ಯೋತಿಬಾ ಮನೆಗೆ ಕಾಲಿಟ್ಟ ಸಾವಿತ್ರಿಬಾಯಿ ದೇಶದ ಇತರ ಹೆಣ್ಣು ಮಕ್ಕಳಿಗೂ ಅಕ್ಷರ ಕಲಿಸುವ ಮಹದಾಸೆ ಹೊತ್ತು ಮೊದಲ ಮಹಿಳಾ ಶಿಕ್ಷಕಿಯಾಗುವುದು ಸಾಧ್ಯವಾಗುತ್ತದೆ.

ಗುಲಾಮಗಿರಿಯ ಬಗ್ಗೆ ಬರೆದ ಒಂದು ಪುಸ್ತಕದಲ್ಲಿ ಅವರು ಇಡೀ ಸಾಮಾಜಿಕ ವ್ಯವಸ್ಥೆಯನ್ನು, ಮೇಲ್ಜಾತಿಯ ಅಟ್ಟಹಾಸವನ್ನು ಟೀಕಿಸುತ್ತಾರೆ. ಜಾತಿ ತಾರತಮ್ಯ, ಶೂದ್ರರ ದೀನ ಸ್ಥಿತಿಗೆ ಕಾರಣವಾದ ಸಾಮಾಜಿಕ ಚೌಕಟ್ಟನ್ನು ಪೂರ್ತಿ ಬದಲಾಯಿಸಲು ನಿರ್ಧರಿಸಿ ಅವರು 1873ರಲ್ಲಿ ಸ್ಥಾಪಿಸಿದ್ದೇ ಸತ್ಯಶೋಧಕ ಸಮಾಜ. ಪುರಾಣ, ಸ್ಮತಿಗಳನ್ನು ಬಲವಾಗಿ ಟೀಕಿಸಿದ ಅವರು, ಮನುಷ್ಯ ತನ್ನ ಸದ್ಗುಣಗಳಿಂದ ಹಿರಿತನ ಪಡೆಯುತ್ತಾನೆಯೇ ಹೊರತು ಹುಟ್ಟಿನಿಂದಲ್ಲ ಎಂದು ಪ್ರತಿಪಾದಿಸುತ್ತಾರೆ.

ಕೆಳಜಾತಿಯ ಮಹಿಳೆಯರಿಂದಲೇ ಆರಂಭಿಸಲು ಮುಂದಾಗಿ 1851ರಲ್ಲಿ ಮೊದಲ ಶಾಲೆ ಆರಂಭಿಸುತ್ತಿದ್ದಂತೆಯೇ ಅನೇಕರು ಜ್ಯೋತಿ ಬಾ ತಂದೆಗೆ ದೂರುತ್ತಾರೆ. ಆಗ ಮನೆಯಿಂದಲೇ ದೂರವಾಗಿ, ತನ್ನ ಗುರಿಸಾಧನೆಗೆ ಕಾರ್ಯೋನ್ಮುಖರಾಗುವ ಫುಲೆ, ಮುಂದೆ ಹಲವಾರು ಮಹಿಳಾ ಶಾಲೆ ತೆರೆಯುತ್ತಾರೆ. ತಮ್ಮ ಮನೆಯೊಳಗೂ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತಾರೆ. ಇಂಗ್ಲಿಷ್ ಶಿಕ್ಷಣ, ತಾಂತ್ರಿಕ ಶಿಕ್ಷಣಕ್ಕೂ ಆದ್ಯತೆ ಕೊಡಬೇಕಿರುವುದರ ಅಗತ್ಯವನ್ನೂ ಆಗಲೇ ಪ್ರತಿಪಾದಿಸಿದ್ದವರು ಅವರು. ಫುಲೆ ದಂಪತಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸರಣಿ ಶಾಲೆಗಳನ್ನು ಶುರು ಮಾಡಿದರು. ಹೆಣ್ಣುಮಕ್ಕಳಿಗೂ, ಅಸ್ಪೃಶ್ಯ ಸಮುದಾಯದ ವಿದ್ಯಾರ್ಥಿಗಳಿಗೂ ಶಿಕ್ಷಣ ನೀಡುವ ಸಂಸ್ಥೆಗಳ ಮೂಲಕ ಅವರು ದೊಡ್ಡ ಕ್ರಾಂತಿಯನ್ನೇ ಮಾಡಿದರು. ದಲಿತ ಕೇರಿಯಲ್ಲಿ ವಾಸವಿದ್ದ ಫುಲೆ ದಂಪತಿ ಆರಂಭಿಸಿದ ಮೊದಲ ಶಾಲೆಯಲ್ಲಿ ದಲಿತ, ಮುಸ್ಲಿಮ್ ಹೆಣ್ಣುಮಕ್ಕಳೇ ಹೆಚ್ಚಿದ್ದರು. 1851ರಲ್ಲಿ ಪುಣೆಯಲ್ಲಿ ಎರಡು ಶಾಲೆಗಳು ಆರಂಭವಾದವು. ಈ ಶಾಲೆಗಾಗಿ ಮುಸ್ಲಿಮ್ ಕುಟುಂಬವೊಂದು ತಮ್ಮ ದೊಡ್ಡ ಮನೆಯನ್ನೇ ಬಿಟ್ಟುಕೊಟ್ಟಿತ್ತು. 1856ರ ಹೊತ್ತಿಗೆ 258 ಅಸ್ಪೃಶ್ಯ ಮಕ್ಕಳು ಶಾಲೆ ಕಲಿಯುವುದು ಸಾಧ್ಯವಾಗಿತ್ತು.

ವಿಧವಾ ವಿವಾಹಕ್ಕ್ಕೂ ಬೆಂಬಲವಾಗಿ ನಿಂತರು ಈ ದಂಪತಿ. ವಿಧವೆಯರು ಮತ್ತವರ ಮಕ್ಕಳಿಗೆಂದೇ ಇವರು ಆಶ್ರಮ ಸ್ಥಾಪಿಸಿದ್ದು ಆ ಕಾಲದ ಅತ್ಯಂತ ಮಹತ್ವದ ಮತ್ತು ದಿಟ್ಟ ಕಾರ್ಯವಾಗಿತ್ತು. 1864ರಲ್ಲಿ ಒಬ್ಬ ಚಿತ್ಪಾವನ ಬ್ರಾಹ್ಮಣ ವಿಧವೆಗೆ ಮರುಮದುವೆ ಮಾಡಿಸಿದರು. 1884ರ ಹೊತ್ತಿಗೆ 34 ಬ್ರಾಹ್ಮಣ ವಿಧವೆಯರು ಅವರ ಆಶ್ರಮದಲ್ಲಿದ್ದರು. 1874ರಲ್ಲಿ ವಿಧವೆಯೊಬ್ಬರ ಮಗುವನ್ನು ತಾವೇ ದತ್ತು ಪಡೆದು ಸಾಕಲು ನಿರ್ಧರಿಸಿದರು. ಶುರುವಾದ ಮೂರು ವರ್ಷಗಳಲ್ಲಿ ಅಂದರೆ 1876ರಲ್ಲಿ ಸತ್ಯಶೋಧಕ ಸಮಾಜಕ್ಕೆ 316 ಜನ ಸದಸ್ಯರಾಗಿದ್ದರು. ಸರಳ ಹಾಗೂ ಪುರೋಹಿತರಿಲ್ಲದ ಮದುವೆಗಳಿಗೆ ಸತ್ಯಶೋಧಕ ಸಮಾಜ, ಫುಲೆ ದಂಪತಿ ಬೆಂಬಲವಾಗಿ ನಿಂತರು. ಇದಕ್ಕೂ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾಗದೆ ಇರಲಿಲ್ಲ. 1889ರಲ್ಲಿ ದತ್ತುಮಗ ಯಶವಂತನಿಗೆ ಫುಲೆ ಅಂತರ್ಜಾತಿ ಮದುವೆ ಮಾಡಿಸಿದರು.

ಇವೆಲ್ಲದರ ನಡುವೆಯೂ ಅವರ, ಜಾತಿರಹಿತ ಸಮಾಜದ ಕನಸಿಗೆ ಬೆಂಬಲ ಸಿಗಲಿಲ್ಲ. ಅವರ ಶೈಕ್ಷಣಿಕ ಕೆಲಸಗಳನ್ನು ಬೆಂಬಲಿಸಿದ್ದ ಶಾಹು ಮಹಾರಾಜರು ಕೂಡ ಸತ್ಯಶೋಧಕ ಸಮಾಜವನ್ನು ಒಪ್ಪಲಿಲ್ಲ. ಫುಲೆಯವರ ಎಲ್ಲ ಕೃತಿಗಳನ್ನು ಸಂಕಲಿಸಿ ಪ್ರಕಟಿಸಿದ ಜಿ.ಜಿ. ಅಧಿಕಾರಿ ಹೇಳುವಂತೆ, ಬ್ರಾಹ್ಮಣರು, ಮರಾಠರು ಇವರ ಸಮಾಜದ ಅನುಯಾಯಿಗಳಾಗಲಿಲ್ಲ. ಕೆಲವು ಕೆಳ ಜಾತಿ ವರ್ಗಗಳು ಬ್ರಾಹ್ಮಣರನ್ನು ಟೀಕಿಸುವ ಬಗ್ಗೆ ಉತ್ಸಾಹ ತಳೆದರೂ ಜಾತಿರಹಿತ ಸಮಾಜದ ಕಲ್ಪನೆಯನ್ನು ಪ್ರತಿಪಾದಿಸಲಿಲ್ಲ. ಈ ಅನುಯಾಯಿಗಳು ತಮ್ಮ ತಮ್ಮ ಜಾತಿಗಳ ಕೋಶಗಳಿಂದ ಹೊರಬರಲಿಲ್ಲ. ಶಾಹು ಮಹಾರಾಜರು ಕೂಡ ಇದಕ್ಕೆ ಹೊರತಾಗಿರಲಿಲ್ಲ.

ಆದರೆ ಫುಲೆಯವರು ಮಾಡಿದ ಪ್ರಚಾರ, ಬರೆದ ವೈಚಾರಿಕ ಪುಸ್ತಕಗಳು, ಅಸ್ಪೃಶ್ಯತೆಯ ನಿವಾರಣೆ ಮತ್ತು ಮಹಿಳೆಯರ ಪುರೋಗಮನಕ್ಕೆ ಅವರು ನೀಡಿದ ಕಾಣಿಕೆ ಮುಂದಿನ ಸಮಾಜ ಸುಧಾರಕರಿಗೆ, ವಿಶೇಷವಾಗಿ ಡಾ. ಅಂಬೇಡ್ಕರ್ ಅಂಥವರಿಗೆ ನೆಲವನ್ನು ಹದಮಾಡಿಕೊಟ್ಟಿತು ಎಂಬುದು ಮಾತ್ರ ನಿಜ. ದೇಶಾದ್ಯಂತ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆಯವರ ಆಶಯಗಳಿಂದ ಪ್ರೇರಿತವಾದ ಹಲವು ಚಳವಳಿಗಳು ಈ ಸಮಾಜವನ್ನು ವೈಚಾರಿಕವಾಗಿ ಜೀವಂತವಾಗಿರಿಸುವ ಹಾದಿಯಲ್ಲಿವೆ. ಮಹಿಳೆಯರ ಮತ್ತು ಶೂದ್ರಾತಿಶೂದ್ರರ ಶಿಕ್ಷಣಕ್ಕಾಗಿ ಹೋರಾಡಿದ ಚೇತನದ ನೆನಪು ಶತಮಾನದ ನಂತರವೂ ಹಸಿರಾಗಿದೆ. ಅವರ ಕನಸುಗಳು ನೂರಾರು ಟಿಸಿಲೊಡೆದು ಹೂವಾಗಿ ಫಲ ಕೊಡುತ್ತಲೇ ಇವೆ.

Similar News