ಗಾಂಧೀಜಿ-ಅಂಬೇಡ್ಕರ್ ಐತಿಹಾಸಿಕ ಭೇಟಿ

Update: 2023-04-13 19:30 GMT

1931 ಆಗಸ್ಟ್ 6ರಂದು ಗಾಂಧೀಜಿ ಅಂಬೇಡ್ಕರ್‌ಗೆ ಪತ್ರ ಕಳಿಸಿ, ''ಸಮಯವಿದ್ದರೆ ಇಂದು ರಾತ್ರಿ 8 ಗಂಟೆಗೆ ಬಂದು ನನ್ನನ್ನು ಭೇಟಿಯಾಗಿ. ಮಣಿಭವನಕ್ಕೆ ಬರುವುದು ನಿಮಗೆ ಅನನುಕೂಲವಾಗಿದ್ದರೆ, ತಾವು ಇರುವಲ್ಲಿಗೆ ಬರಲು ಸಂತೋಷ ಪಡುತ್ತೇನೆ'' ಎಂದು ಬರೆದಿದ್ದರು. ಆಗಷ್ಟೇ ಸಾಂಗ್ಲಿಯಿಂದ ಬಂದಿದ್ದ ಅಂಬೇಡ್ಕರ್ ಬಳಲಿಕೆ ಮತ್ತು ಜ್ವರದಿಂದ ಬಳಲುತ್ತಿದ್ದು ಇನ್ನೊಮ್ಮೆ ಭೇಟಿಯಾಗುತ್ತೇನೆ, ಎಂದು ಉತ್ತರ ಬರೆದರು. ಆಗಸ್ಟ್ 14ರಂದು ಅಂಬೇಡ್ಕರ್ ತಮ್ಮ ಸಂಗಾತಿಗಳಾದ ದೇವ್‌ರಾವ್ ನಾಯಕ್, ಶಿವತಾರಾಕರ್, ಪ್ರಧಾನ್, ಭಾವುರಾವ್ ಗಾಯಕ್‌ವಾಡ್ ಮತ್ತು ಕದ್ರೇಕರ್ ಅವರೊಂದಿಗೆ ಮಧ್ಯಾಹ್ನ 2 ಗಂಟೆಗೆ ಮಣಿಭವನ ತಲುಪಿದರು. ಗಾಂಧೀಜಿ ತಮ್ಮ ಸಂಗಡಿಗರು ಮತ್ತು ವಿದೇಶಿ ಮಹಿಳೆಯೊಬ್ಬರ ಜೊತೆಗೆ ಮಾತನಾಡುತ್ತಿದ್ದರು. ಅಂಬೇಡ್ಕರ್ ಮತ್ತು ಸಂಗಾತಿಗಳು ಗಾಂಧೀಜಿಗೆ ನಮಸ್ಕರಿಸಿ ಅಲ್ಲೇ ಹತ್ತಿರ ಹಾಸಿದ್ದ ಜಮಖಾನಾದ ಮೇಲೆ ಕುಳಿತುಕೊಂಡರು. ಗಾಂಧೀಜಿ ಅವರು ಯುರೋಪಿಯನ್ನರು ಅಥವಾ ಮುಸ್ಲಿಮ್ ಮುಖಂಡರು ಬಂದಾಗ ಎದ್ದು ನಿಂತು ಸ್ವಾಗತಿಸುವುದು ವಾಡಿಕೆ. ಇದು ಅಂಬೇಡ್ಕರ್ ಸಂಗಾತಿಗಳಿಗೆ ತಿಳಿದ ಸಂಗತಿಯೇ ಅಗಿದ್ದು, ಗಾಂಧೀಜಿ, ಅಂಬೇಡ್ಕರ್ ಅವರ ಬಗ್ಗೆ ನಿರ್ಲಕ್ಷ ತೋರಿಸಿದ್ದನ್ನು ಗಮನಿಸಿದ ಅವರಲ್ಲಿ ಸ್ವಲ್ಪ ಬೇಸರ ಮೂಡಿತು. ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ನಡುವೆ ಇದು ಮೊದಲ ಭೇಟಿಯಾಗಿತ್ತು. ಕೊನೆಪಕ್ಷ ಕುಳಿತುಕೊಳ್ಳುವಂತೆಯೂ ಅವರಿಗೆ ಹೇಳಲಿಲ್ಲ. ನಂತರ ಎದ್ದು ಬಂದ ಗಾಂಧೀಜಿ, ಅಂಬೇಡ್ಕರ್ ಅವರ ಜೊತೆಗೆ ಚುಟುಕು ಕುಶಲೋಪರಿ ವಿಚಾರಿಸಿದ ಮೇಲೆ ಅಸಲಿ ವಿಷಯಕ್ಕೆ ಬಂದರು. ಗಾಂಧಿ: ''ಒಳ್ಳೆಯದು, ಡಾಕ್ಟರ್ ನಿಮಗೆ ಏನು ಹೇಳುವುದಿದೆಯೋ ಹೇಳಿ.''

ಅಂಬೇಡ್ಕರ್: ''ಏನೋ ಮಾತನಾಡುವುದಿದೆ ಎಂದು ನೀವು ಹೇಳಿ ಕಳಿಸಿದ್ದಕ್ಕಾಗಿ ನಾನು ಬಂದಿರುವೆ. ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ಕೇಳಿರಿ, ನಾನು ಉತ್ತರಿಸುವೆ.''

ಗಾಂಧಿ: (ಅಂಬೇಡ್ಕರ್‌ರನ್ನು ತೀಕ್ಷ್ಣವಾಗಿ ನೋಡುತ್ತ) ''ನನ್ನ ಬಗ್ಗೆ ಹಾಗೂ ಕಾಂಗ್ರೆಸ್ ಬಗ್ಗೆ ನಿಮಗೆ ಕೆಲವೊಂದು ಆಕ್ಷ್ಷೆೇಪಣೆಗಳಿವೆ ಎಂದು ನಾನು ತಿಳಿದುಕೊಂಡಿರುವೆ. ನಾನು ಶಾಲಾ ಬಾಲಕನಾಗಿದ್ದಾಗಿನಿಂದ ಅಸ್ಪಶ್ಯ ಸಮಸ್ಯೆಯ ಬಗ್ಗೆ ಆಲೋಚಿಸುತ್ತಾ ಬಂದಿದ್ದೇನೆ. ಆಗ ನೀವಿನ್ನೂ ಹುಟ್ಟಿರಲಿಲ್ಲ. ಅಸ್ಪಶ್ಯತೆ ನಿರ್ಮೂಲನೆ ಎಂಬ ವಿಷಯವನ್ನು ಕಾಂಗ್ರೆಸ್ ಕಾರ್ಯಕ್ರಮ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ನಾನು ಎಷ್ಟೊಂದು ಹೆಣಗಿದ್ದೇನೆ ಎಂಬುದು ನಿಮಗೆ ಅಂದಾಜಿರಲಿಕ್ಕಿಲ್ಲ. ಅದೊಂದು ಧಾರ್ಮಿಕ ಹಾಗೂ ಸಾಮಾಜಿಕ ವಿಷಯವೆಂದೂ, ಅದನ್ನು ಭಾರತ ಸ್ವಾತಂತ್ರ್ಯ ಪಡೆದುಕೊಳ್ಳುವ ರಾಜಕೀಯ ಪ್ರಶ್ನೆಯೊಂದಿಗೆ ತಳಕು ಹಾಕಬಾರದೆಂದು ನನ್ನ ಎಲ್ಲಾ ಕಾಂಗ್ರೆಸ್ ಮಿತ್ರರು ಬೇಡಿಕೊಂಡರು. ಆದರೂ ನಾನು ಅವರನ್ನೆಲ್ಲ ಒಪ್ಪಿಸಿ ಈ ಕಾರ್ಯಕ್ರಮ ಕಾಂಗ್ರೆಸ್ ಪಟ್ಟಿಯಲ್ಲಿ ಸೇರುವಂತೆ ಮಾಡಿರುವೆ. ಅಷ್ಟೇ ಅಲ್ಲ, ಇದುವರೆಗೂ ಅಸ್ಪಶ್ಯತೆಯ ನಿರ್ಮೂಲನೆ ಕುರಿತಂತೆ ನಡೆಸಿದ ಕಾರ್ಯಕ್ರಮಗಳಿಗಾಗಿ ಕಾಂಗ್ರೆಸ್ ಸುಮಾರು 20 ಲಕ್ಷ ರೂ. ಖರ್ಚು ಮಾಡಿದೆ. ನಾನು ಮತ್ತು ಕಾಂಗ್ರೆಸ್ ಇಷ್ಟೆಲ್ಲ ಮಾಡಿದ್ದರೂ ನೀವು ಮತ್ತು ನಿಮ್ಮಂತಹವರು ನನ್ನನ್ನು ಮತ್ತು ಕಾಂಗ್ರೆಸನ್ನು ಕಠೋರವಾಗಿ ವಿರೋಧಿಸುತ್ತಿರುವುದು ನನಗೆ ಆಶ್ಚರ್ಯ ಉಂಟುಮಾಡಿದೆ. ಈ ಬಗ್ಗೆ ನೀವು ಏನಾದರೂ ಹೇಳುವುದಿದ್ದರೆ ಹೇಳಿ.''
ಅಂಬೇಡ್ಕರ್: ''ಮಹಾತ್ಮಾಜಿ, ನಾನು ಹುಟ್ಟುವುದಕ್ಕಿಂತ ಮೊದಲಿನಿಂದಲೇ ನೀವು ಅಸ್ಪಶ್ಯತೆ ಸಮಸ್ಯೆಯ ಬಗ್ಗೆ ಆಲೋಚನೆ ಮಾಡುತ್ತಾ ಬಂದಿದ್ದೀರಿ ಎಂಬುದನ್ನು ನಾನು ನಂಬುತ್ತೇನೆ. ಹಿರಿಯರು ಮತ್ತು ವೃದ್ಧರು ಯಾವಾಗಲೂ ತಮ್ಮ ವಯಸ್ಸನ್ನು ಉದಾಹರಿಸಿ, ಕಿರಿಯರೊಂದಿಗೆ ಮಾತನಾಡುತ್ತಾರೆ ಎಂಬುದನ್ನು ನಾನು ಬಲ್ಲೆ. ನಿಮ್ಮಿಂದಾಗಿಯೇ ಕಾಂಗ್ರೆಸ್ ಅಸ್ಪಶ್ಯತೆ ಸಮಸ್ಯೆಗೆ ಸ್ಪಂದಿಸಿದೆ ಎಂಬುದೂ ನನಗೆ ತಿಳಿದಿದೆ. ಆದರೆ ಕಾಂಗ್ರೆಸ್ ನಿಸ್ಸಂಕೋಚವಾಗಿ ಸಮಸ್ಯೆಯನ್ನು ಗುರುತಿಸುವುದಕ್ಕಿಂತ ಹೆಚ್ಚಿನದೇನನ್ನೂ ಮಾಡಿಲ್ಲ. ಇದುವರೆಗೂ 20 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ನೀವು ಹೇಳುತ್ತಿದ್ದೀರಿ. ಅದು ವ್ಯರ್ಥ ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ. ಸರಿಯಾದ ಸಲಹೆ, ಸಹಕಾರವನ್ನು ಪಡೆದಿದ್ದರೆ ಇಷ್ಟು ಹಣದಲ್ಲಿ ಹಿಂದೂ ಸವರ್ಣೀಯರಲ್ಲಿ ಅಪಾರ ವೈಚಾರಿಕತೆ, ಜಾಗೃತಿ ಹಾಗೂ ನಿಮ್ನವರ್ಗಗಳ ಆರ್ಥಿಕ ಸ್ಥಿತಿಯಲ್ಲಿ ವಿಶೇಷವಾದ ಸುಧಾರಣೆಯನ್ನು ತರಬಹುದಾಗಿತ್ತು.

ಇನ್ನು ಕಾಂಗ್ರೆಸ್ ಈ ಸಮಸ್ಯೆಯನ್ನು ಒಪ್ಪಿಕೊಂಡಿರುವ ವಿಚಾರ. ಕಾಂಗ್ರೆಸ್ ಇದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆಯೇ ಎಂಬ ಪ್ರಶ್ನೆಯನ್ನು ನಾನು ಹಾಕಬೇಕಾಗುತ್ತದೆ. ಏಕೆಂದರೆ, ಪ್ರಾಮಾಣಿಕವಾಗಿ ಈ ಒಪ್ಪಿಗೆ ಇದ್ದಲ್ಲಿ, ನಿಮ್ಮಲ್ಲಿ ಖಾದಿ ಧರಿಸುವ ಬಗ್ಗೆ ಕಡ್ಡಾಯ ನಿರ್ಣಯ ಮಾಡಿದ್ದೀರಲ್ಲ, ಹಾಗೆ ಅಸ್ಪಶ್ಯತೆಯ ಆಚರಣೆಗೆ ಸಂಬಂಧಿಸಿದಂತೆಯೂ ನೀವು ಕಡ್ಡಾಯ ನಿರ್ಣಯವನ್ನು ಕೈಗೊಳ್ಳಬೇಕಿತ್ತು. ಅಸ್ಪಶ್ಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದನ್ನು, ಅಸ್ಪಶ್ಯ ವಿದ್ಯಾರ್ಥಿಗಳಿಗೆ ನೆರವಾಗುವುದನ್ನು, ಅಸ್ಪಶ್ಯರೊಂದಿಗೆ ವಾರದಲ್ಲೊಂದು ಸಲವಾದರೂ ಊಟ ಮಾಡುವುದನ್ನು ಕಾಂಗ್ರೆಸ್ ಕಡ್ಡಾಯ ಮಾಡಬಹುದಿತ್ತು. ಇದನ್ನು ಪಾಲಿಸದಿದ್ದರೆ ಕಾಂಗ್ರೆಸ್ ಸದಸ್ಯತ್ವ ನೀಡಲಾಗುವುದಿಲ್ಲ ಎಂದು ನಿಯಮ ಮಾಡಬಹುದಿತ್ತು. ಹೀಗೊಂದು ವೇಳೆ ಮಾಡಿದ್ದರೆ, ಈಗ ಕಾಣುತ್ತಿದೆಯಲ್ಲ, ಕಾಂಗ್ರೆಸ್ ನಿರ್ಣಯವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಉಲ್ಲಂಘಿಸುತ್ತಿರುವ ನಗೆಪಾಟಿಲಿನ ಪ್ರಸಂಗವನ್ನು ತಪ್ಪಿಸಬಹುದಾಗಿತ್ತು.''

''ಕಾಂಗ್ರೆಸ್‌ಗೆ ಶಕ್ತಿಬೇಕಾಗಿದೆ. ಇಂಥ ನಿಬಂಧನೆ ಹಾಕುವುದರಿಂದ ಕಾಂಗ್ರೆಸ್‌ಗೆ ಶಕ್ತಿ ಬರುವುದಿಲ್ಲ, ಎಂದು ನೀವು ಹೇಳಬಹುದು. ಇದಕ್ಕೆ ನಾನು, ಹಾಗಾದರೆ ಕಾಂಗ್ರೆಸ್‌ಗೆ ತತ್ವ ಬೇಕಾಗಿಲ್ಲ, ಬರೀ ಶಕ್ತಿ ಬೇಕಾಗಿದೆಯೇನು? ಎಂದು ಕೇಳಬೇಕಾಗುತ್ತದೆ. ನಿಮ್ಮ ಮೇಲೆ ಮತ್ತು ಕಾಂಗ್ರೆಸ್ ಮೇಲೆ ನಾನು ಮಾಡುತ್ತಿರುವ ಆರೋಪ ಇದೇ ಆಗಿದೆ. ಭಾರತೀಯರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಹೃದಯವಂತಿಕೆಯನ್ನು ಬ್ರಿಟಿಷರು ತೋರಿಸುತ್ತಿಲ್ಲ ಎಂದು ನೀವು ಆರೋಪಿಸುತ್ತೀರಿ. ನಾನು ಇದೇ ಆರೋಪವನ್ನು ನಿಮ್ಮ ಮೇಲೆ ಮತ್ತು ಕಾಂಗ್ರೆಸ್ ಮೇಲೆ ಮಾಡುತ್ತಿದ್ದೇನೆ. ನೀವಾಗಲಿ, ಹಿಂದೂಗಳಾಗಲಿ, ಕಾಂಗ್ರೆಸಾಗಲಿ ನಿಮ್ನವರ್ಗಗಳ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಹೃದಯವಂತಿಕೆಯನ್ನು ತೋರುತ್ತಿಲ್ಲ. ಅದು ಆಗುವವರೆಗೂ ನಾನಾಗಲಿ ನಿಮ್ನವರ್ಗಗಳಾಗಲಿ, ನಿಮ್ಮನ್ನು, ಹಿಂದೂಗಳು ಅಥವಾ ಕಾಂಗ್ರೆಸನ್ನು ನಂಬಲು ಸಾಧ್ಯವಿಲ್ಲ.'' ''..ನಾವು ಸ್ವಸಹಾಯ ಮತ್ತು ಸ್ವಗೌರವದಲ್ಲಿ ನಂಬಿಕೆ ಇಟ್ಟಿದ್ದೇವೆ. ಮಹಾತ್ಮರಲ್ಲಿ, ಮಹಾನಾಯಕರಲ್ಲಿ ವಿಶ್ವಾಸವಿಡಲು ನಾವು ಸಿದ್ಧರಿಲ್ಲ. ಈ ವಿಚಾರದಲ್ಲಿ ನಾನು ಖಂಡಿತವಾದಿ. ಮಹಾತ್ಮರು ಧೂಳಿನ ಅಲೆ ಎಬ್ಬಿಸುತ್ತಾರೆ. ಆದರೆ ಶೋಷಿತ ಸಮುದಾಯದ ಸ್ಥಾನಮಾನವನ್ನು ಹೆಚ್ಚಿಸುವುದಿಲ್ಲ ಎಂಬುದನ್ನು ಚರಿತ್ರೆಯೇ ಹೇಳುತ್ತದೆ. ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ನಾವು ನಡೆಸಿರುವ ಚಳವಳಿಯನ್ನು ಕಾಂಗ್ರೆಸಿಗರು ವಿರೋಧಿಸುವುದೇಕೆ? ನನ್ನನ್ನು ದೇಶದ್ರೋಹಿ ಎಂದು ಟೀಕಿಸುವುದೇಕೆ?'' ಅಂಬೇಡ್ಕರ್ ಕೆಲವು ಕ್ಷಣಗಳು ಭಾವೋದ್ರೇಕಕ್ಕೆ ಒಳಗಾಗಿ ಗದ್ಗತಿತರಾದರು. ಅಂಬೇಡ್ಕರ್ (ತೀಕ್ಷ್ಣ ನೋಟ ಬೀರುತ್ತಾ): ''ಗಾಂಧೀಜಿ, ನನಗೆ ತಾಯ್ನಾಡು ಎಂಬುದಿಲ್ಲ.'' ಗಾಂಧೀಜಿ: 

(ಅಂಬೇಡ್ಕರ್ ಮಾತನ್ನು ತುಂಡರಿಸಿ ತೀವ್ರ ಆಶ್ಚರ್ಯದಿಂದ) ''ನಿಮಗೆ ಖಂಡಿತ ತಾಯ್ನಡಿದೆ. ಆದ್ದರಿಂದಲೇ ನೀವು ದುಂಡು ಮೇಜಿನ ಪರಿಷತ್ತಿನಲ್ಲಿ ಭಾರತದ ಸ್ವರಾಜ್ಯಕ್ಕಾಗಿ ಅಷ್ಟೊಂದು ಖಡಾಖಂಡಿತವಾಗಿ ಮಾತನಾಡಿದ್ದೀರಿ. ನಾನು ಅದನ್ನು ಪತ್ರಿಕಾ ವರದಿಗಳಲ್ಲಿ ಗಮನಿಸಿದ್ದೇನೆ.'' ಅಂಬೇಡ್ಕರ್: 


''ನನಗೊಂದು ತಾಯ್ನಡಿದೆ ಎಂದು ನೀವು ಹೇಳುತ್ತಿದ್ದೀರಿ. ಆದರೆ ನಾನು ಮತ್ತೊಮ್ಮೆ ಹೇಳುತ್ತೇನೆ. ನನಗೆ ತಾಯ್ನೆಡೊಂದಿದೆ ಎಂಬ ಭಾವನೆಯೇ ನನಗೆ ಬರುತ್ತಿಲ್ಲ. ಈ ನಾಡಿನಲ್ಲಿ, ಈ ಧರ್ಮದಲ್ಲಿ ನಮ್ಮನ್ನು ನಾಯಿ-ಬೆಕ್ಕುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿದೆ. ಕುಡಿಯಲು ನಮಗೆ ನೀರೂ ಸಿಗುತ್ತಿಲ್ಲ, ಸ್ವಾಭಿಮಾನ ಇರುವ ನಿಮ್ನವರ್ಗದವರ್ಯಾರು ಈ ನಾಡನ್ನು ತಮ್ಮ ತಾಯ್ನಾಡು ಎಂದು ಒಪ್ಪುವುದಿಲ್ಲ. ನಮ್ಮ ಮೇಲೆ ಶತಮಾನಗಳಿಂದ ತೀವ್ರ ಅನ್ಯಾಯ ನಡೆದಿದೆ. ನಮ್ಮ ಯಾತನೆಯ ಪ್ರಮಾಣ ಎಷ್ಟಿದೆ ಎಂದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಒಂದು ವೇಳೆ ಈ ನಾಡಿನವರನ್ನು ವಿರೋಧಿಸಿ, ಅನ್ಯರನ್ನು ಬೆಂಬಲಿಸಿದರೆ ಅದಕ್ಕೆ ನಾವು ಹೊಣೆಗಾರರಾಗುವುದಿಲ್ಲ. ಬದಲಾಗಿ ಈ ನಾಡಿನವರೇ ಹೊಣೆಗಾರರಾಗಬೇಕುತ್ತದೆ.'' ''..ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಿದ್ದಾರೆ. ಇದಕ್ಕಾಗಿ ನನಗೆ ಹೆಚ್ಚಿನ ನೋವೇನೂ ಇಲ್ಲ. ಏಕೆಂದರೆ ನಾನು ನಿಮ್ನವರ್ಗಗಳವರನ್ನು ಹೇಗೆ ಮುನ್ನಡೆಸಿಕೊಂಡು ಹೋಗುತ್ತಿದ್ದೇನೊ, ನಾನಾಗಲಿ ನಿಮ್ನವರ್ಗಗಳವರಾಗಲಿ ಕಾರಣರಲ್ಲ, ಬದಲಾಗಿ ನನ್ನನ್ನು ದೇಶದ್ರೋಹಿ ಎಂದು ಕರೆಯುತ್ತಿರುವ ವರ್ತನೆ ಅದಕ್ಕೆ ಕಾರಣವಾಗಿದೆ.

ಯಾವ ನಾಡಿಗಾಗಿ ಅವರು ದನಿ ಎತ್ತುತ್ತಿದ್ದಾರೋ ಆ ನಾಡೇ ಕಾರಣವಾಗಿದೆ. ದುಂಡು ಮೇಜಿನ ಪರಿಷತ್ತಿನಲ್ಲಿ ನಾನು ಸ್ವರಾಜ್ಯ ಭಾರತದ ಬಗ್ಗೆ ಮಾತನಾಡಿದ್ದಕ್ಕಾಗಿ ನೀವು ಮೆಚ್ಚುಗೆಯ ಮಾತನಾಡಿದ್ದೀರಿ, ಧನ್ಯವಾದಗಳು. ಆದರೆ ನಾನು ಅಲ್ಲಿ ನನ್ನ ಆತ್ಮಸಾಕ್ಷಿ ತಿಳಿಸಿದಂತೆ ಮಾತಾಡಿದ್ದೇನೆ. ಈ ದೇಶದವರನ್ನು ನಂಬುವುದಕ್ಕಿಂತ ಹೆಚ್ಚಾಗಿ ನಾನು ನನ್ನ ಆತ್ಮಸಾಕ್ಷಿಯನ್ನು ನಂಬುತ್ತೇನೆ. ಕೇಡು ಬಯಸಲು ಇಚ್ಛಿಸದ ನನ್ನ ಆತ್ಮಸಾಕ್ಷಿ ಇಲ್ಲಿ ನನ್ನಿಂದ ಅಂತಹ ಮಾತುಗಳನ್ನು ಆಡಿಸಿದೆ.'' ''..ಶತಮಾನಗಳಿಂದ ನಿರಂತರವಾಗಿ ನಾನಾರೀತಿಯ ಅವಮಾನ, ಅನ್ಯಾಯ, ಗುಲಾಮಗಿರಿಗೆ ದೂಡಲ್ಪಟ್ಟಿರುವ ನನ್ನ ಜನರಿಗೆ ಮಾನವ ಹಕ್ಕುಗಳನ್ನು ದೊರಕಿಸಿಕೊಡುವ ಭರದಲ್ಲಿ ಒಂದು ವೇಳೆ ನನ್ನಿಂದ ಈ ನಾಡಿಗೆ ಯಾವುದೇ ರೀತಿಯಲ್ಲಿ ಅಪಚಾರವಾದರೆ, ನನ್ನ ಮಟ್ಟಿಗೆ ಪಾಪವೆನಿಸದು. ಏಕೆಂದರೆ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಂಡಿದ್ದೇನೆ. ಈ ನಾಡಿಗೆ ಯಾವುದೇ ರೀತಿಯ ಅಪಾಯವನ್ನು ತಾರದೆಯೇ, ನನ್ನ ಜನರಿಗೆ ಮಾನವ ಹಕ್ಕುಗಳನ್ನು ಪಡೆದುಕೊಳ್ಳಲು ನಾನು ಕಾರ್ಯೋನ್ಮುಖನಾಗಿರುವೆ. ನನ್ನ ಆತ್ಮಸಾಕ್ಷಿ ಹೀಗೆ ಮಾರ್ಗದರ್ಶನ ಮಾಡುತ್ತಿದೆ.'' ಎಂದು ಮಾತು ನಿಲ್ಲಿಸಿದರು.

ಅಂಬೇಡ್ಕರ್ ಅವರು ಮಾತುಗಳನ್ನು ಕೇಳಿಸಿಕೊಂಡ ಬಳಿಕ ಗಾಂಧೀಜಿ ಅವರ ಮುಖ ಬಿಳಿಚಿಕೊಂಡು, ಚಡಪಡಿಸತೊಡಗಿದರು. ಗಾಂಧೀಜಿ ಇನ್ನೇನೊ ಪ್ರತಿಕ್ರಿಯೆ ನೀಡಲಿದ್ದು, ಅಷ್ಟರಲ್ಲಿ ಅಂಬೇಡ್ಕರ್, ಗಾಂಧೀಜಿ ಅವರಿಗೆ ಒಂದು ಪ್ರಶ್ನೆ ಹಾಕಿದರು. ಅಂಬೇಡ್ಕರ್: ''ಅಸ್ಪಶ್ಯರಿಗಿಂತ ಮುಸ್ಲಿಮರು ಮತ್ತು ಕ್ರೈಸ್ತರು ಮುಂದುವರಿದಿದ್ದಾರೆಂದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಮೊದಲನೆ ದುಂಡು ಮೇಜಿನ ಪರಿಷತ್ತಿನಲ್ಲಿ ಮುಸ್ಲಿಮರ ಬೇಡಿಕೆಗಳನ್ನು ಮಾನ್ಯ ಮಾಡಲಾಯಿತು ಮತ್ತು ಅವರಿಗೆ ರಾಜಕೀಯ ರಕ್ಷಣಾತ್ಮಕ ನಿಬಂಧನೆಗಳನ್ನು ನೀಡಲು ಒಪ್ಪಿಕೊಳ್ಳಲಾಯಿತು. ಕಾಂಗ್ರೆಸ್ ಕೂಡ ಅವರ ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಪರಿಷತ್ತಿನ ಮೊದಲನೇ ಅಧಿವೇಶನದಲ್ಲಿ ನಿಮ್ನವರ್ಗಗಳ ರಾಜಕೀಯ ಹಕ್ಕುಗಳನ್ನು ಮಾನ್ಯ ಮಾಡಿದೆ. ಅವರಿಗೆ ಅಗತ್ಯವಾದ ಪ್ರಾತಿನಿಧ್ಯವನ್ನು ಮತ್ತು ರಾಜಕೀಯ ರಕ್ಷಣಾತ್ಮಕ ನಿಬಂಧನೆಗಳನ್ನು ನೀಡಲು ಒಪ್ಪಲಾಗಿದೆ. ಇದರಿಂದ ನಿಮ್ನವರ್ಗಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂಬುದು ನಮ್ಮ ಅಭಿಪ್ರಾಯ, ಇದಕ್ಕೆ ನೀವೇನು ಹೇಳುತ್ತೀರಿ?''
ಗಾಂಧೀಜಿ: ''ಹಿಂದೂಗಳಿಂದ ಅಸ್ಪಶ್ಯರನ್ನು ರಾಜಕೀಯವಾಗಿ ಪ್ರತ್ಯೇಕಿಸುವುದಕ್ಕೆ ನನ್ನ ಕಡು ವಿರೋಧವಿದೆ. ಅದು ಇಬ್ಬರಿಗೂ ಆತ್ಮಾಹತ್ಯಾಕಾರಿ ನಿಲುವಾಗುತ್ತದೆ.''

ಅಂಬೇಡ್ಕರ್: (ಎದ್ದು ನಿಂತುಕೊಳ್ಳುತ್ತಾ) ''ನಿಮ್ಮ ನಿರ್ಭಿಡೆ ಅಭಿಪ್ರಾಯಕ್ಕೆ ಧನ್ಯವಾದ. ಈ ಸಮಸ್ಯೆಯ ವಿಚಾರದಲ್ಲಿ ನಾವು ಮತ್ತು ನೀವು ಎಲ್ಲಿ ನಿಂತಿದ್ದೇವೆ ಎಂಬುದು ನನಗೆ ತಿಳಿದಿದ್ದು ಒಳ್ಳೆಯದಾಯಿತು. ನಾವಿನ್ನು ಬರುತ್ತೇವೆ'' ಎಂದು ಹೇಳಿ ಹೊರಟುಬಿಟ್ಟರು.

ಮೊದಲನೇ ಭೇಟಿಯಲ್ಲೆ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಮಾತುಕತೆ ತುಂಬಾ ಗಂಭೀರ ಸನ್ನಿವೇಶದಲ್ಲಿ ಅಂತ್ಯಗೊಂಡಿತ್ತು. ಭಾರತದ ಜನತೆಯನ್ನು ಸಮ್ಮೋಹನಗೊಳಿಸಿದ್ದ ಗಾಂಧೀಜಿ ಭಾರತದ ರಾಜಕೀಯದಲ್ಲಿ ಏಕಮೇವಾದ್ವಿತೀಯ ನಾಯಕರೂ ಮತ್ತು ಕಾಂಗ್ರೆಸ್‌ನಲ್ಲಿ ಪ್ರಶ್ನಾತೀತರೂ ಆಗಿದ್ದರು. ಇಂತಹ ಗಾಂಧೀಜಿಯೊಂದಿಗೆ ಬಹಳ ನಿಷ್ಠುರವಾಗಿ ಮಾತನಾಡಿ ಅವರ ಅಭಿಪ್ರಾಯವನ್ನು ತಿರಸ್ಕರಿಸಿದ ಅಂಬೇಡ್ಕರ್, ಗಾಂಧೀಜಿ ಜೊತೆಗೆ ಸರಿಪಡಿಸಲಾಗದ ಸಂಬಂಧವನ್ನು ನಿರ್ಮಾಣ ಮಾಡಿಬಿಟ್ಟ್ಟಿದ್ದರು. ಒಂದು ರೀತಿಯಲ್ಲಿ ಇಬ್ಬರ ಮಧ್ಯ ಯುದ್ಧವೇ ಆರಂಭವಾಗಿತ್ತು. ಗಾಂಧೀಜಿ ಅವರಿಗೆ ಮೊದಲಿಗೆ ಅಂಬೇಡ್ಕರ್ ಅವರ ಜಾತಿ ಗೊತ್ತಿರಲಿಲ್ಲ. ಅಂಬೇಡ್ಕರ್ ನಿಮ್ನವರ್ಗಗಳ ಬಗ್ಗೆ ಅತೀವ ಕಾಳಜಿ ವಹಿಸಿರುವ ಒಬ್ಬ ಬ್ರಾಹ್ಮಣನಾಗಿರಬೇಕು ಎಂದು ಗಾಂಧೀಜಿ ಭಾವಿಸಿದ್ದರಂತೆ! ಗಾಂಧೀಜಿಗೆ ಅಂಬೇಡ್ಕರ್ ಅವರ ಜಾತಿ ಗೊತ್ತಾಗಿದ್ದು ಇಬ್ಬರೂ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಂಡಾಗಲೇ ಎಂದು ಹೇಳಲಾಗುತ್ತದೆ.

Similar News