ಡೇರಿ ಉತ್ಪನ್ನಗಳ ಆಮದಿಗೆ ಅವಕಾಶ ನೀಡದಿರುವುದಕ್ಕೆ ರೈತರ ಪ್ರತಿರೋಧ ಕಾರಣವೇ?

ನಂದಿನಿ-ಅಮುಲ್ ವ್ಹೈಟ್ ವಾರ್

Update: 2023-04-14 08:37 GMT

ಸರಣಿ - 1

ಬಡತನದ ರೇಖೆಗಿಂತ ಕೆಳಗಿರುವ ಒಂದು ದೊಡ್ಡ ಜನಸಂಖ್ಯೆಗೆ ಇಂದಿಗೂ ಕ್ಷೀರಭಾಗ್ಯವೇ ಇಲ್ಲ ಎನ್ನುವಂತಿದೆ ನಮ್ಮ ಪರಿಸ್ಥಿತಿ. ಹಾಗಾಗಿ, ಇಂದಿಗೂ ನಮ್ಮಲ್ಲಿ ಸಂಗ್ರಹಣೆ, ಸಂಸ್ಕರಣೆ ಮತ್ತು ಪೂರೈಕೆಯ ಕ್ಷೇತ್ರಗಳಲ್ಲಿ ಡೇರಿ ಉದ್ಯಮ ಇನ್ನೂ ಹತ್ತುಪಟ್ಟು ಬೆಳೆಯುವುದಕ್ಕೆ ವಿಪುಲ ಅವಕಾಶಗಳಿವೆ. ಆದರೆ ಈ ಅವಕಾಶಗಳನ್ನು ಯಾರಿಗೆ ದೊರಕಿಸಿಕೊಡಬೇಕು ಎನ್ನುವುದು ದೇಶವನ್ನಾಳುವ ಪ್ರಭುತ್ವದ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಅವಲಂಬಿಸುತ್ತದೆ.

ಅಮುಲ್ ಜೊತೆಗೆ ನಂದಿನಿ ವಿಲೀನವಾಗುವುದಾಗಲೀ ಅಥವಾ ಅಮುಲ್ ತನ್ನ ವ್ಯಾಪಾರವನ್ನು ಕರ್ನಾಟಕಕ್ಕೆ ವಿಸ್ತರಿಸಿ ನಂದಿನಿಯನ್ನು ಮಂಕಾಗಿಸುವುದಾಗಲೀ ಆಯಿತೆಂದರೆ - ಆ ಪ್ರಕ್ರಿಯೆಯೇ ದೇಶದ ಸಹಕಾರಿ ಕ್ಷೇತ್ರವನ್ನು ಮುಳುಗಿಸಿ ಸಾಹುಕಾರಿ ಬಂಡವಾಳಶಾಹಿ ಪಾರಮ್ಯಕ್ಕೆ ಅನುವು ಮಾಡಿಕೊಟ್ಟಂತೆ. ದೇಶದ ಜನಾಡಳಿತವನ್ನು ಬಂಡವಾಳಶಾಹಿ ಆಡಳಿತಕ್ಕೆ ದಾರಿಮಾಡುವುದರ ಮುಂದುವರಿಕೆ. ಅದು ಭಾರತದ ಪರಿಕಲ್ಪನೆಗೆ ಬೀಳುವ ಮತ್ತೊಂದು ಮಾರಣಾಂತಿಕ ಏಟು. ವಿಪರ್ಯಾಸವೆಂದರೆ, ಗುಜರಾತಿನಲ್ಲೇ ಆರಂಭವಾದ ಈ ಸಹಕಾರಿ ಹಾಲು ಕ್ರಾಂತಿ (ವ್ಹೈಟ್ ರೆವಲ್ಯೂಷನ್) ಇಂದು ಗುಜರಾತಿಗರಿಂದಲೇ ಮಣ್ಣುಮುಕ್ಕುತ್ತಿರುವುದು.

ಕಳೆದ ಡಿಸೆಂಬರಿನಲ್ಲಿ ಒಕ್ಕೂಟ ಸರಕಾರದ ಸಹಕಾರಿ ಸಚಿವರಾದ ಅಮಿತ್ ಶಾ ಮಂಡ್ಯದ ಗೆಜ್ಜಲಗೆರೆಯಲ್ಲಿ ಅತ್ಯಾಧುನಿಕ ಹಾಲು ಸಂಸ್ಕರಣ ಘಟಕವನ್ನು ಉದ್ಘಾಟಿಸುವಾಗ, ನಂದಿನಿಯನ್ನು ಅಮುಲ್‌ನಲ್ಲಿ ವಿಲೀನಗೊಳಿಸುತ್ತೇವೆ ಎಂದು ಹೇಳಿದ್ದೇ, ನಮ್ಮ ರೈತರೇ ಕಟ್ಟಿ ಬೆಳೆಸಿದ ಕರ್ನಾಟಕ ಹಾಲು ಮಹಾಮಂಡಳಿಯ(ಕೆಎಂಎಫ್) ಅಸ್ತಿತ್ವಕ್ಕೆ ಸಂಚಕಾರ ಬರಲಿದೆ ಎನ್ನುವ ಆತಂಕ ಕನ್ನಡನಾಡಿನಲ್ಲಿ ಮನೆ ಮಾಡಿತು. ಆ ನಂತರದ ಸರಕಾರಿ ಹೇಳಿಕೆಗಳು ಅದನ್ನು ಸ್ವಲ್ಪಮಟ್ಟಿಗೆ ತಣ್ಣಗಾಗಿಸಿತ್ತಾದರೂ, ಬೆಂಗಳೂರಲ್ಲಿ ತಾಜಾ ಹಾಲು ಸರಬರಾಜು ಮಾಡುತ್ತೇವೆ ಎನ್ನುವ ಜಾಹೀರಾತನ್ನು ಇದೇ ಎಪ್ರಿಲ್ ೫ರಂದು ಅಮುಲ್ ಪ್ರಕಟಿಸಿದ ನಂತರ ಆ ಆತಂಕ ಮುಗಿಲು ಮುಟ್ಟಿದೆ.

ಈ ವಿದ್ಯಮಾನಗಳು ಇಲ್ಲಿಂದಲೇ ಆರಂಭವಾಗದೇ ಅದರ ಹಿಂದೆ ಒಕ್ಕೂಟ ಸರಕಾರ ಮತ್ತು ಕಾರ್ಪೊರೇಟ್ ಧಣಿಗಳ ಜನವಿರೋಧಿ ಮೈತ್ರಿಯ ಯೋಜಿತ ಸಂಚೇ ಇದೆ ಎನ್ನುವುದನ್ನು, ಅದರ ಕ್ರೋನಾಲಜಿಯನ್ನು ಮೊನ್ನೆಯಷ್ಟೇ ಇದೇ ಪತ್ರಿಕೆಯಲ್ಲಿ ವಿಷದವಾಗಿ ಓದಿದ್ದೀರಿ. ನಾನು ಮತ್ತೆ ಆ ವಿವರಗಳಿಗೆ ಹೋಗುವುದಿಲ್ಲ.

೨೦೧೯ರಲ್ಲಿ ಏಶ್ಯ-ಪೆಸಿಫಿಕ್ ದೇಶಗಳ ವ್ಯಾಪಾರ ಒಪ್ಪಂದದ ಪ್ರಸ್ತಾವ Regional Comprehensive Economic Partnership (ಆರ್‌ಸಿಇಪಿ) ಸುದ್ದಿ ಮಾಡಿತ್ತು. ೧೯೯೫ರಲ್ಲಿ ಗ್ಯಾಟ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ಮೇಲೆ, ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದಿಂದಾಗಿ ನಮ್ಮೆಲ್ಲ ನೆಲಮೂಲ, ಜನಸಹಭಾಗಿ ಕ್ಷೇತ್ರಗಳು ಹೇಗೆ ನಲುಗಿವೆ ಎನ್ನುವುದನ್ನು ನಾವು ನಿತ್ಯವೂ ಕಾಣುತ್ತಿದ್ದೇವೆ. ಗ್ಯಾಟ್, ಟ್ರಿಮ್ಸ್, ಟ್ರಿಪ್ಸ್ ಒಪ್ಪಂದಗಳು ನಮ್ಮ ದೇಶದ ಸಂಪನ್ಮೂಲಗಳನ್ನು ಲೂಟಿ ಮಾಡಲು ಮತ್ತು ದೊಡ್ಡ ಗ್ರಾಹಕ ಮಾರುಕಟ್ಟೆಯನ್ನು ಪ್ರವೇಶಿಸಲು ಜಾಗತಿಕ ಬಂಡವಾಳಶಾಹಿಗಳಿಗೆ ದಿಡ್ಡೀಬಾಗಿಲನ್ನು ತೆರೆದರೆ, ಆರ್‌ಸಿಇಪಿ ಎನ್ನುವ ಮತ್ತೊಂದು ವ್ಯಾಪಾರಿ ಒಪ್ಪಂದ ತೆರೆದ ಬಾಗಿಲನ್ನು ಇನ್ನಷ್ಟು ದೊಡ್ಡದಾಗಿ ತೆರೆಯುವುದೇ ಆಗಿತ್ತು.

ಭಾರತದ ಡೇರಿ ಉತ್ಪನ್ನಗಳ ಮಾರುಕಟ್ಟೆಯ ಗಾತ್ರ ಎಷ್ಟು ದೊಡ್ಡದೆಂದರೆ, ಅದರಲ್ಲಿ ಅಮುಲ್, ನಂದಿನಿ ಮೊದಲಾದ ಬೃಹತ್ ಸಹಕಾರಿ ಸಂಸ್ಥೆಗಳ ಪಾಲು ಶೇ. ೮ರಿಂದ ೯ ಅಷ್ಟೇ. ಸಣ್ಣ, ಪುಟ್ಟ ಖಾಸಗಿ ಕಂಪೆನಿಗಳ ಪಾಲು ಶೇ. ಒಂದರಿಂದ ಎರಡು ಇದ್ದರೆ, ಮಿಕ್ಕ ಶೇ. ೯೦ನ್ನು ಅಸಂಘಟಿತ ವಲಯ ತುಂಬುತ್ತಿದೆ. ಮತ್ತೊಂದು ವಿಚಾರವೆಂದರೆ ಇಂದು ಭಾರತವೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ ಎನಿಸಿಕೊಂಡಿದೆ. ೧೯೫೦ರಲ್ಲಿ ಭಾರತದ ಪ್ರತಿದಿನದ ತಲಾವಾರು ಹಾಲುತ್ಪನ್ನದ ಲಭ್ಯತೆ ೧೩೦ ಗ್ರಾಂ ಇದ್ದರೆ, ೨೦೧೮ರಲ್ಲಿ ಅದು ೩೭೪ ಗ್ರಾಂಗೆ ಏರಿತು. ಇದು ಜಾಗತಿಕ ಸರಾಸರಿ ೨೯೪ ಗ್ರಾಂಗಿಂತ ಹೆಚ್ಚು. ಹೀಗಿದ್ದರೂ, ಹಂಚಿಕೆ ಅಸಮಾನವಾಗಿದೆ. ಬಡತನದ ರೇಖೆಗಿಂತ ಕೆಳಗಿರುವ ಒಂದು ದೊಡ್ಡ ಜನಸಂಖ್ಯೆಗೆ ಇಂದಿಗೂ ಕ್ಷೀರಭಾಗ್ಯವೇ ಇಲ್ಲ ಎನ್ನುವಂತಿದೆ ನಮ್ಮ ಪರಿಸ್ಥಿತಿ. ಹಾಗಾಗಿ, ಇಂದಿಗೂ ನಮ್ಮಲ್ಲಿ ಸಂಗ್ರಹಣೆ, ಸಂಸ್ಕರಣೆ ಮತ್ತು ಪೂರೈಕೆಯ ಕ್ಷೇತ್ರಗಳಲ್ಲಿ ಡೇರಿ ಉದ್ಯಮ ಇನ್ನೂ ಹತ್ತುಪಟ್ಟು ಬೆಳೆಯುವುದಕ್ಕೆ ವಿಪುಲ ಅವಕಾಶಗಳಿವೆ. ಆದರೆ ಈ ಅವಕಾಶಗಳನ್ನು ಯಾರಿಗೆ ದೊರಕಿಸಿಕೊಡಬೇಕು ಎನ್ನುವುದು ದೇಶವನ್ನಾಳುವ ಪ್ರಭುತ್ವದ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಅವಲಂಬಿಸುತ್ತದೆ.       

ಭಾರತ ಡೇರಿ ಉತ್ಪನ್ನಗಳ ಆಮದಿಗೆ ದೊಡ್ಡಮಟ್ಟದಲ್ಲಿ ಅವಕಾಶ ಕೊಟ್ಟಿಲ್ಲ. ಇಷ್ಟು ದೊಡ್ಡ ಬೆಳವಣಿಗೆಗೆ ಅವಕಾಶವಿರುವ ಮಾರುಕಟ್ಟೆಗೆ ನುಗ್ಗಲು ನ್ಯೂಝಿಲ್ಯಾಂಡ್ ದೇಶದ ಫಾಂಟೆರಾ, ಫ್ರಾನ್ಸ್‌ನ ಲ್ಯಾಕ್ಟಾಲಿಸ್, ನೆಸ್ಲೆ, ಗ್ಲ್ಯಾಕ್ಸೋ, ಮುಂತಾದ ಜಾಗತಿಕ ಡೇರಿ ವಲಯದ ಮೆಗಾ ಕಾರ್ಪೊರೇಟುಗಳು ದಶಕಗಳಿಂದ ಡೇರಿ ಆಮದಿನ ಬಾಗಿಲು ತೆರೆಯುವಂತೆ ನಮ್ಮ ದೇಶದ ಮೇಲೆ ಒತ್ತಡ ಹೇರುತ್ತಲೇ ಇದ್ದವು. ಆರ್‌ಸಿಇಪಿ ಒಪ್ಪಂದ ಇದಕ್ಕೆ ಅವಕಾಶ ನೀಡುತ್ತದೆಂದು ಆ ಕಂಪೆನಿಗಳಲ್ಲಿ ಆಶಾಭಾವ ಮೂಡಿದ್ದು ಸಹಜ. ಆದರೆ, ಭಾಗೀದಾರ ದೇಶಗಳ ನಡುವೆ ಒಪ್ಪಂದ ಏರ್ಪಡುವ ಕೊನೇ ಘಳಿಗೆಯಲ್ಲಿ ಭಾರತ ತಾನು ಆರ್‌ಸಿಇಪಿಯ ಭಾಗವಾಗುವುದಿಲ್ಲವೆಂದು ಹಿಂದೆಗೆದುಕೊಂಡಿತು.

ಇದಕ್ಕೆ ಒಂದು ಕಾರಣ, ಆರ್‌ಸಿಇಪಿಯಲ್ಲಿ ಚೀನಾ ಪ್ರಬಲ ಪಾಲುದಾರ ರಾಷ್ಟ್ರವಾಗಿದ್ದು, ಅದರ ಮೂಲಕ ತಾನು ಏಶ್ಯ-ಪೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಸೂಪರ್ ಪವರ್ ಆಗುವ ಒಳ ಆಲೋಚನೆ ಆ ದೇಶಕ್ಕಿತ್ತು. ಈ ಬಗ್ಗೆ ಅಮೆರಿಕದ ಅಂದಿನ ಅಧ್ಯಕ್ಷ ಟ್ರಂಪ್ ಮೋದಿಯವರನ್ನು ಎಚ್ಚರಿಸಿದ್ದರು. ಎರಡನೆಯದು, ನಮ್ಮ ದೇಶ ಆರ್‌ಸಿಇಪಿಯ ಭಾಗವಾಗುವುದರಿಂದ ನಮ್ಮಲ್ಲಿನ ಹೈನುಗಾರಿಕೆಯಲ್ಲಿ ನಿರತ ರೈತರಿಗೆ ಮತ್ತು ಸಹಕಾರೀ ಹೈನು ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ನಮ್ಮ ರೈತರು ದೊಡ್ಡ ಪ್ರತಿರೋಧ ಒಡ್ಡಿದರು. ದೇಶದ ರೈತರ ಆತಂಕವನ್ನು ದೂರಮಾಡಲು ಮೋದಿಯವರು ಆರ್‌ಸಿಇಪಿಗೆ ಸಹಿ ಹಾಕುವುದರಿಂದ ಹಿಂದೆಗೆದುಕೊಂಡರು ಎಂದು ಸುದ್ದಿಯಾಯಿತು.

ಈ ಎರಡು ಕಾರಣಗಳಿಗಿಂತಲೂ ಹೆಚ್ಚು ನಂಬಲರ್ಹವಾದ ಕಾರಣ ಮತ್ತೊಂದಿದೆ ಅನಿಸುತ್ತದೆ. ಡೇರಿ ಉತ್ಪನ್ನಗಳಿಗೆ ಭಾರತದಲ್ಲಿ ಇಷ್ಟು ದೊಡ್ಡ ಮಾರುಕಟ್ಟೆ ಇದೆ, ಬೆಳವಣಿಗೆಗೆ ದೊಡ್ಡ ಅವಕಾಶವಿದೆ ಎಂದಾಗ, ನಮ್ಮದೇ ದೇಶದ ಬೃಹತ್ ಕಾರ್ಪೊರೇಟುಗಳಿಗೆ ಅದು ಕಣ್ಣಿಗೆ ಬೀಳದೇ? ದಶಕಗಳಿಂದಲೂ ಭಾರತದ ಮತ್ತು ಜಗತ್ತಿನ ಹೈನು ಮಾರುಕಟ್ಟೆಯ ಮೇಲೆ ನಮ್ಮ ಬಂಡವಾಳಶಾಹಿಗಳ ಕಣ್ಣು ಇದ್ದೇ ಇತ್ತು. ಆರ್‌ಸಿಇಪಿಯಿಂದಾಗಿ ತಮ್ಮ ಭವಿಷ್ಯದ ಯೋಜನೆಗಳಿಗೆ ತೊಡಕಾಗುತ್ತದೆ ಎಂದು ಕಂಡುಕೊಂಡ ಈ ಕಾರ್ಪೊರೇಟುಗಳು ಮೋದಿ ಸರಕಾರಕ್ಕೆ ಅದರಲ್ಲಿ ಭಾಗಿಯಾಗದಂತೆ ಸಲಹೆ ನೀಡಿರಲೂ ಸಾಕು. ಅದನ್ನು ಮೋದಿಯವರು ಸಹಿ ಹಾಕುವ ಹಿಂದಿನ ಸಂಜೆ ಒಪ್ಪಿಕೊಂಡಿರಲೂ ಸಾಕು. ರೈತರ ಪ್ರತಿರೋಧದ ನಡುವೆಯೂ ಆರ್‌ಸಿಇಪಿಗೆ ಸಹಿ ಹಾಕಿ, ಆನಂತರದಲ್ಲಿ ಅದನ್ನು ನಿಭಾಯಿಸುವುದು ಈ ಸರಕಾರದ ಕಾರ್ಯನೀತಿಗೆ ಕಷ್ಟವೇನೂ ಆಗುತ್ತಿರಲಿಲ್ಲ. ನೋಟು ನಿಷೇಧ, ಸಿಎಎ ಮತ್ತು ಎನ್‌ಆರ್‌ಸಿ, ಕೋವಿಡ್ ಸಮಯದ ಲಾಕ್‌ಡೌನ್ ಮುಂತಾದವನ್ನು ಈ ಸರಕಾರ ಏಕಪಕ್ಷೀಯವಾಗಿ ನಿಭಾಯಿಸಿದ ಮನೋಭೂಮಿಕೆ ಎಂಥದು ಎಂದು ನಮಗೆ ತಿಳಿದೇ ಇದೆ. ಮೇಲಾಗಿ, ದಿಲ್ಲಿಯ ಗಡಿಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಹೋರಾಟವನ್ನು ಮೊಟಕು ಮಾಡಲು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಂಡ ನಂತರವೂ, ಅವನ್ನು ಹಿಂಬಾಗಿಲಿನಿಂದ, ರಾಜ್ಯ ಸರಕಾರಗಳ ಮೂಲಕ ಅನುಷ್ಠಾನ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.

ಭಾರತ ಆರ್‌ಸಿಇಪಿಯಲ್ಲಿ ಭಾಗಿಯಾಗುವುದಿಲ್ಲವೆಂದು ತೆಗೆದುಕೊಂಡ ತೀರ್ಮಾನ ಆತ್ಮನಿರ್ಭರ ಭಾರತ ನಿರ್ಮಾಣದ ಭಾಗವಾಗಿತ್ತು ಮತ್ತು, ಮೋದಿ ಸರಕಾರದ ಆತ್ಮನಿರ್ಭರತೆಯೆಂದರೆ ನಮ್ಮದೇ ದೇಶದ ಬಂಡವಾಳಶಾಹಿಗಳ ಕೈಗಳಿಗೆ ರಾಷ್ಟ್ರೀಯ ಸಂಪನ್ಮೂಲ, ಸಂಪತ್ತು, ಉದ್ದಿಮೆಗಳು ಮತ್ತು ಆರ್ಥಿಕತೆಯನ್ನು ಕೊಟ್ಟು ಆಂತರಿಕ self-reliance ಸಾಧಿಸುವುದು; ಈ self-reliance ಬಲದಿಂದ ಜಾಗತಿಕ ರಫ್ತು ಮಾರುಕಟ್ಟೆಯನ್ನು ಪ್ರವೇಶಿಸುವುದು. ಇದನ್ನು ಮೌಖಿಕವಾಗಿ, ಆದರೆ ಸೂಚ್ಯವಾಗಿ ಹೇಳಿದ್ದು ಕೊರೋನ ಸಂಕಷ್ಟ ಕಾಲದಲ್ಲಿ ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜ್  ಘೋಷಿಸಿದ ಸಂದರ್ಭದಲ್ಲೇ ಆದರೂ, ಆ ಆರ್ಥಿಕ ಪರಿಕಲ್ಪನೆ ಮೋದಿಯವರು ಪ್ರಧಾನಿಯಾದಂದಿನಿಂದಲೂ ಜಾರಿಯಲ್ಲಿದೆ. ದೇಶವನ್ನು ಸಮಾಜವಾದಿ-ಬಂಡವಾಳಶಾಹಿ ಆರ್ಥಿಕತೆಯಿಂದ ಪೂರ್ಣ ಬಂಡವಾಳಶಾಹಿ ಆರ್ಥಿಕತೆಗೆ ತಿರುಗಿಸುವ ಈ ಪ್ರಕ್ರಿಯೆಗೆ ಹಿಂದಿನ ಸರಕಾರಗಳು ಚಾಲನೆ ಕೊಟ್ಟಿದ್ದವು. ಮೋದಿ ಸರಕಾರದಲ್ಲಿ ಅದು ಇನ್ನಿಲ್ಲದ ವೇಗೋತ್ಕರ್ಷ ಪಡೆದುಕೊಂಡಿದೆ.   

ದೇಶದ ಜನಸಾಮಾನ್ಯರು ಸಹಕಾರಿ ತತ್ವದ ಪರಿಕಲ್ಪನೆಯೊಂದಿಗೆ ಒಂದುಗೂಡಿ ಕಟ್ಟಿಕೊಂಡು, ದೊಡ್ಡಮಟ್ಟದ ಯಶಸ್ಸನ್ನು ಸಾಧಿಸಿರುವ ಸಂಸ್ಥೆಗಳನ್ನು ತೊಡೆದುಹಾಕಿ, ಸಾಧ್ಯವಾಗದಿದ್ದರೆ ಬಂಡವಾಳಶಾಹಿ ಆರ್ಥಿಕತೆಯ ಅಡಿಯಲ್ಲಿ ಬರುವಂತೆ ಮಣಿಸುವುದೇ ಈ ಆತ್ಮನಿರ್ಭರ ಭಾರತ ಪರಿಕಲ್ಪನೆಯ ಅನುಷ್ಠಾನದ ಕೆಲಸ. ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನಗೊಳಿಸುವುದು, ಅದಾಗದಿದ್ದರೆ ಅದನ್ನು ಮಂಕಾಗಿಸುವುದು ಅದರ ಒಂದು ಕಾರ್ಯಭಾಗ. ಈ ರೀತಿಯ ಹಲವು ನಿದರ್ಶನಗಳು ನಮಗೆ ಕಂಡಿವೆ, ವಿರೋಧಿಸದಿದ್ದರೆ ಮುಂದೆಯೂ ಕಾಣುತ್ತಾ ಹೋಗುತ್ತೇವೆ.

ಆದರೆ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ಸಂಸ್ಥೆ ಹುಟ್ಟಲು, ಅಷ್ಟು ದೊಡ್ಡ ಯಶಸ್ಸು ಕಾಣಲು ಸಹಕಾರಿ ತತ್ವ ಮತ್ತು ಅದರ ಸಹಭಾಗಿಗಳ ಪ್ರಾಮಾಣಿಕ ಪರಿಶ್ರಮವೇ ಕಾರಣ ಎನ್ನುವುದನ್ನು ಚರಿತ್ರೆ ಮರೆಯುವುದಿಲ್ಲ. ಅದಕ್ಕೆ ಸ್ಫೂರ್ತಿ ನೀಡಿದ ಸರ್ದಾರ್ ಪಟೇಲರ ರಾಷ್ಟ್ರಪ್ರಜ್ಞೆಯನ್ನಾಗಲೀ, ಅಮುಲ್ ನ ಸಂಸ್ಥಾಪಕ ಅಧ್ಯಕ್ಷರಾದ ತ್ರಿಭುವನ್ ದಾಸ್ ಪಟೇಲ್ ಮತ್ತು ಭಾರತದ ‘ಮಿಲ್ಕ್ ಮ್ಯಾನ್’ ಎಂದು ದೇಶವು ಪ್ರೀತಿಯಿಂದ ಕರೆದ ಡಾ. ವರ್ಗೀಸ್ ಕುರಿಯನ್ ಅವರ ಶ್ರಮವನ್ನಾಗಲೀ, ಅಮುಲ್ ಯಶಸ್ಸಿನಿಂದ ಸ್ಫೂರ್ತಿ ಪಡೆದು ದೇಶದ ಉದ್ದಗಲಕ್ಕೂ ಸಹಕಾರಿ ಹಾಲು ಉತ್ಪಾದಕ ಸಂಘಗಳ ಸ್ಥಾಪನೆಗೆ ಚಾಲನೆ ಕೊಟ್ಟ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನಹಿತ ಉದ್ದೇಶವನ್ನಾಗಲೀ ಮರೆಯಲಾದೀತೇ? ಕೆಎಂಎಫ್ ಕೂಡ ಸೇರಿದಂತೆ ಹಲವಾರು ರಾಜ್ಯಗಳ ಸಹಕಾರಿ ಹಾಲು ಒಕ್ಕೂಟಗಳ ಸ್ಥಾಪನೆಗೆ ಸ್ಫೂರ್ತಿಯಾದ ಅಮುಲ್ ಇಂದು ಸಣ್ಣಮೀನುಗಳನ್ನು ನುಂಗುವ ದೊಡ್ಡಮೀನಿನಂತೆ ವರ್ತಿಸುತ್ತಿರುವುದರ ಹಿಂದಿನ ಮರ್ಮವೇನು? ಅಮುಲ್ ಹಾಲು ಕರ್ನಾಟಕದಲ್ಲಿ ನಂದಿನಿ ಹಾಲಿಗಿಂತ ಹೆಚ್ಚು ಮಾರಾಟವಾಗಿ, ಕೆಎಂಫ್ ಕ್ರಮೇಣ ಬದಿಗೆ ಸರಿದರೆ ಅದರಿಂದ ಕರ್ನಾಟಕದ ಅಸ್ಮಿತೆಗೆ, ರೈತರಿಗೆ, ಗ್ರಾಹಕರಿಗೆ ಆಗುವ ನಷ್ಟವೇನು? ಬಂಡವಾಳಶಾಹಿ ಮೇಲಾಟದಿಂದ ಸಹಕಾರಿ ಕ್ಷೇತ್ರವನ್ನು ನಮ್ಮಲ್ಲಿ ಉಳಿಸಿಕೊಂಡಾಗ ಮಾತ್ರವೇ, ಜನಸಾಮಾನ್ಯನ ಬದುಕು ತುಸುವಾದರೂ ನೆಮ್ಮದಿಯಿಂದಿದ್ದೀತು ಎನ್ನುವುದು ಆಶಯ.

(ನಾಳೆ: ಲಾಲ್ ಬಹದ್ದೂರರ ಗ್ರಾಮ ವಾಸ್ತವ್ಯ...)

Similar News