ಬೆಳಕೆಂಬ ಬೆರಗಿನ ಮುದ್ದಣ್ಣ

Update: 2023-04-14 18:42 GMT

ಮುದ್ದಪ್ಪವೀರಪ್ಪಶಿರಹಟ್ಟಿ (ರಟ್ಟೀಹಳ್ಳಿ) ಎಂದರೆ ಯಾರೆಂದು ಕೇಳಬಹುದು ನೀವು. ಆದರೆ ಮುದ್ದಣ್ಣ ರಟ್ಟೀಹಳ್ಳಿ ಇಲ್ಲವೆ ರಟ್ಟೀಹಳ್ಳಿ ಮುದ್ದಣ್ಣ ಎಂದರೆ ರಂಗಕರ್ಮಿ, ಬೆಳಕಿನ ತಜ್ಞ ಎಂದು ಥಟ್ಟನೆ ಹೇಳುತ್ತಾರೆ ರಂಗಕರ್ಮಿಗಳು, ರಂಗಾಸಕ್ತರು. ಬೆಂಗಳೂರಿನ ರಂಗ ಶಂಕರದಲ್ಲಿ ನಿತ್ಯ ಸಿಗುವ, ಅಲ್ಲಿ ನಾಟಕವಾಡುವ ತಂಡಗಳಿಗೆ ನೆರವಾಗುವ ಅವರು ಪ್ರಚಾರ ಬಯಸದ, ತಮ್ಮ ಪಾಡಿಗೆ ತಾವು ಕೆಲಸ ನಿರ್ವಹಿಸಿಕೊಂಡು ಹೋಗುವವರು. 64 ವರ್ಷವಾದರೂ ಹಾಗೆ ಕಾಣದ, ವಯಸ್ಸೇ ಆಗದ ಮುದ್ದಣ್ಣ ಸೌಮ್ಯ ಸ್ವಭಾವದವರು. ರಂಗ ಶಂಕರದ ಆರಂಭದಿಂದಲೂ ಅದರ ಉಸ್ತುವಾರಿ ನೋಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿಯ ಅವರು ಓದಿದ್ದು ಎಸೆಸೆಲ್ಸಿ ಮಾತ್ರ. ''ನಮ್ಮ ಮನೆಯಲ್ಲಿ ಕಡುಬಡತನ, ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ದಾವಣಗೆರೆಯಲ್ಲಿ ಎಸೆಸೆಲ್ಸಿ ಮುಗಿಸಿದ ಕೂಡಲೇ ಬೆಂಗಳೂರಿಗೆ 1975ರಲ್ಲಿ ಕೆಲಸಕ್ಕೆಂದು ಬಂದೆ. ಆಗ ಪರಿಚಯವಾಗಿದ್ದ ಪ್ರಭಾತ್ ಕಲಾವಿದರ ತಂಡಕ್ಕೆ ಸೇರಿದೆ. ಪರದೆ ಕಟ್ಟಲು ನೆರವಾದೆ, ಧ್ವನಿ ಹಾಗೂ ಬೆಳಕನ್ನು ನೋಡಿಕೊಳ್ಳುತ್ತಿದ್ದೆ. ಆಗ ನಲವತ್ತು ರೂಪಾಯಿ ಸಂಬಳವಿತ್ತು'' ಎಂದು ನೆನಪಿಸಿಕೊಳ್ಳುತ್ತಾರೆ ಮುದ್ದಣ್ಣ.

ನಂತರ ಅವರಿಗೆ ಬೇರೆ ಬೇರೆ ತಂಡಗಳ ಪರಿಚಯ ವಾಯಿತು. ಟಿ.ಎಸ್.ರಂಗಾ ಅವರ 'ಸಾವಿತ್ರಿ' ಸಿನೆಮಾಕ್ಕೆ ಪ್ರೊಡಕ್ಷನ್ ಅಸಿಸ್ಟಂಟ್ ಆಗಿ ದುಡಿದರು. ಚಿತ್ರೀಕರಣದ ನಂತರ ಪ್ರಭಾತ್ ತಂಡ ಸೇರದೆ ಬೇರೆ ಬೇರೆ ತಂಡಗಳೊಂದಿಗೆ ಗುರುತಿಸಿಕೊಂಡರು. ಆಗ ಬೆಳಕಿನ ತಜ್ಞರಾಗಿದ್ದ ವಿ.ರಾಮಮೂರ್ತಿ ಅವರಲ್ಲದೆ ಕಪ್ಪಣ್ಣ, ಪರೇಶ್ ಅವರೊಂದಿಗೆ ಕಾರ್ಯ ನಿರ್ವಹಿಸಿದರು. ಜೊತೆಗೆ ಸಮುದಾಯ ತಂಡ ಸೇರಿ, ಎಂ.ಎಸ್.ಸತ್ಯು ನಿರ್ದೇಶಿಸಿದ 'ಕುರಿ' ನಾಟಕಕ್ಕೆ ಸಿಜಿಕೆ ಬೆಳಕಿನ ವಿನ್ಯಾಸ ನೀಡಿದಾಗ ಸಹಾಯಕರಾದರು. ಆಮೇಲೆ ಪ್ರಸನ್ನ ಅವರು 'ಮಾರೀಚನ ಬಂಧುಗಳು' ನಾಟಕವನ್ನು 'ವಾಲ್ಮೀಕಿ ಮತ್ತು ವರ್ಗ ಸಂಘರ್ಷ' ಎಂದು ಬದಲಾಯಿಸಿ ವಾರಾಂತ್ಯಕ್ಕೆ ಈ ನಾಟಕವನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದರು. ಇದಕ್ಕೆ ಬೆಳಕಿನ ವಿನ್ಯಾಸ ಮುದ್ದಣ್ಣ ಅವರದು. ''ಜಾಸ್ತಿ ಖರ್ಚು ಆಗಬಾರದು, ಹೇಗೆ ಮಾಡುತ್ತೀಯಾ?'' ಎಂದು ಪ್ರಸನ್ನ ಅವರು ಮುದ್ದಣ್ಣ ಅವರನ್ನು ಕೇಳಿದಾಗ ಬಿಸ್ಕತ್ತಿನ ಟಿನ್ ಡಬ್ಬದೊಳಗೆ ಸಾದಾ ಬಲ್ಬ್ ಹಾಕಿ, ಫ್ಯಾನ್ ರೆಗ್ಯುಲೇಟರ್ ಬಳಸಿ ಡಿಮ್ಮರ್ ಆಗಿ ಪರಿವರ್ತಿಸಿದರು. ನಂತರ ಅಶೋಕ ಬಾದರದಿನ್ನಿ ಅವರ 'ದಾಸಿ ಬಾರಮಲ್ಲಿ' ನಾಟಕ ನಿರ್ದೇಶಿಸಿದಾಗ ಪೂರ್ಣ ಪ್ರಮಾಣದ ಬೆಳಕಿನ ವಿನ್ಯಾಸಗೊಳಿಸಿದರು. ಗಿರೀಶ್ ಕಾರ್ನಾಡರ 'ಹಿಟ್ಟಿನ ಹುಂಜ' ನಾಟಕಕ್ಕೆ ಬೆಳಕಿನ ವಿನ್ಯಾಸಗೊಳಿಸಿದರು. ಈ ನಾಟಕವು ಉಳ್ಳಾಲ್ ಶೀಲ್ಡ್ ಪ್ರಶಸ್ತಿಗಾಗಿ ನಡೆದ ನಾಟಕ ಸ್ಪರ್ಧೆಯಲ್ಲಿ ಬೆಳಕಿನ ವಿನ್ಯಾಸಕ್ಕಾಗಿ ಮುದ್ದಣ್ಣ ಅವರು 'ಬೆಸ್ಟ್ ಲೈಟಿಂಗ್' ಎಂದು ಬಹುಮಾನ ಪಡೆದರು. ಹೀಗೆಯೇ ಅವರ ಪಯಣ ಸಾಗುವಾಗ ಪ್ರಸನ್ನ ಅವರ ನಿರ್ದೇಶನದ 'ಮ್ಯಾಕ್‌ಬೆತ್' ನಾಟಕಕ್ಕೆ ಸಿಜಿಕೆ, ಆರ್.ನಾಗೇಶ್ ಅವರೊಂದಿಗೆ ಮುದ್ದಣ್ಣ ಕೂಡಾ ಬೆಳಕಿನ ವಿನ್ಯಾಸಗೊಳಿಸಿದರು. ಇಷ್ಟೊತ್ತಿಗೆ ಸಿನೆಮಾದ ಕ್ಯಾಮರಾಮನ್ ಬಿ.ಸಿ.ಗೌರಿಶಂಕರ್ ಪರಿಚಯವಾಗಿತ್ತು. ಅವರು ಕಾರ್ಯನಿರ್ವಹಿಸುತ್ತಿದ್ದ 'ಜನ್ಮ ಜನ್ಮದ ಅನುಬಂಧ' ಸಿನೆಮಾಕ್ಕೆ ಕ್ಯಾಮರಾಮನ್ ಸಹಾಯಕವೆಂದು ಕರೆದರು. ಆದರೆ ಮುದ್ದಣ್ಣ ಅವರು ರಂಗಭೂಮಿಯನ್ನೇ ಆಯ್ದುಕೊಂಡರು. ಸಿನೆಮಾದಲ್ಲಿ ದುಡ್ಡು ಗಳಿಸಬಹುದು. ಆದರೆ ರಂಗಭೂಮಿಯಲ್ಲಿ ಸದಾ ಕ್ರಿಯಾಶೀಲರಾಗಿರಬಹುದು ಎಂದು ಸಿನೆಮಾಕ್ಕೆ ಹೋಗಲಿಲ್ಲ. ಆದರೆ ಆದಾಯಕ್ಕಾಗಿ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡರು. ಇದಕ್ಕೆ ರಂಗಕರ್ಮಿ ಶ್ರೀನಿವಾಸ ತಾವರಗೇರಾ ಅವರು ತಮ್ಮ ವಿಜಾಪುರದಲ್ಲಿ ಬ್ಯಾಂಕೊಂದರಿಂದ ಸಾಲ ಕೊಡಿಸಿದರು. ಬಳಿಕ ಸಮುದಾಯದ ಎಲ್ಲ ನಾಟಕಗಳಿಗೆ ಬೆಳಕಿನ ವಿನ್ಯಾಸಗೊಳಿಸಿದರು.

ಹೀಗೆ 1975ರಿಂದ ಪೂರ್ಣಾವಧಿ ಸಂಘಟನೆ ಮತ್ತು ಬೆಳಕು ತಜ್ಞರಾಗಿ ರಾಜ್ಯದಲ್ಲಿ ಅಲ್ಲದೆ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದುವರೆಗೆ ಸುಮಾರು 300ಕ್ಕೂ ಅಧಿಕ ನಾಟಕಗಳಿಗೆ ಬೆಳಕಿನ ವಿನ್ಯಾಸ ಹಾಗೂ ಅವುಗಳ 2 ಸಾವಿರಕ್ಕೂ ಅಧಿಕ ಪ್ರದರ್ಶನಗಳಿಗೆ ಬೆಳಕು ನಿರ್ವಹಿಸಿದ್ದಾರೆ. ಇದರೊಂದಿಗೆ ತಮ್ಮೂರಾದ ರಟ್ಟೀಹಳ್ಳಿಯಲ್ಲಿ 'ನೆಮ್ಮದಿಯ ನಾಳೆಗಳಿಗಾಗಿ' ಸೌಹಾರ್ದತಾ ಉತ್ಸವ ಸಂಯೋಜಿಸಿದ್ದರು. ಮೂಢನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ತಿಂಗಳ ಜಾಥಾದಲ್ಲಿ ಭಾಗವಹಿಸಿದ್ದರು. ನರಗುಂದ ಬಂಡಾಯದ ಅಂಗವಾಗಿ ರೈತರ ಜಾಥಾದಲ್ಲಿ ಪಾಲ್ಗೊಂಡಿದ್ದರು. ಬರಗಾಲ ಬಂದಾಗ ಭೀಕರ ಬರಗಾಲದೆದುರು ಜಾಥಾದಲ್ಲಿ, ವಿಶ್ವಶಾಂತಿಗಾಗಿ ಅಣು ಸಮರದ ವಿರುದ್ಧ ನಡೆದ ಎರಡು ತಿಂಗಳ 'ನೂರು ಅಡಿ ಬಣ್ಣದ ನಡೆ' ಜಾಥಾದ ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದರು. ಇದರೊಂದಿಗೆ ಸಮುದಾಯದ ಸಾಂಸ್ಕೃತಿಕ ತಂಡದ ಸದಸ್ಯರಾಗಿ 'ಹೆಸರಿಲ್ಲದವರು' ನಾಟಕ ತಂಡದ ಸಂಸ್ಥಾಪಕ ಸದಸ್ಯರಾಗಿ, ರಟ್ಟೀಹಳ್ಳಿಯ ಕರ್ನಾಟಕ ಸಂಘದ ಸಂಸ್ಥಾಪಕ ಸದಸ್ಯರಾಗಿ, ಗ್ರಾಮರಂಗ ರಟ್ಟೀಹಳ್ಳಿ/ಹಿರೇಕೆರೂರು ಗ್ರಾಮೀಣ ರಂಗ ತಂಡದ ಸಂಸ್ಥಾಪಕ ಅಧ್ಯಕ್ಷರಾಗಿ, ಜನಪದ ರೆಪರ್ಟರಿಯ ಸಂಸ್ಥಾಪಕ ಸದಸ್ಯರಾಗಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ದುರಸ್ತಿಯ ತಾಂತ್ರಿಕ ಸಮಿತಿ ಸದಸ್ಯರಾಗಿ ಹಾಗೂ ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾಗಿ ದುಡಿದಿದ್ದಾರೆ.

ಅಮೆರಿಕದ ಲಾಸ್ ಎಂಜಲಿಸ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಏಕವ್ಯಕ್ತಿ ಮಹಿಳಾ ನಾಟಕೋತ್ಸವದಲ್ಲಿ ಕ್ರಿಯೇಟಿವ್ ಥಿಯೇಟರ್ ತಂಡದ 'ಸಿಂಗಾರವ್ವಾ ಆ್ಯಂಡ್ ದಿ ಪ್ಯಾಲೇಸ್' ನಾಟಕಕ್ಕೆ, ಮಸ್ಕತ್ ಕನ್ನಡ ಸಂಘದ ಆಶ್ರಯದಲ್ಲಿ ಕ್ರಿಯೇಟಿವ್ ತಂಡದ 'ಹೀಗಾದ್ರೆ ಹೇಗೆ' ನಾಟಕಕ್ಕೆ, ಬೆಂಗಳೂರಿನ ಕೇಂದ್ರ ಕಾರಾಗೃಹ ಕೈದಿಗಳಿಗೆ ಹುಲಗಪ್ಪಕಟ್ಟಿಮನಿ ನಿರ್ದೇಶಿಸಿದ 'ಜುಂಡಿ ಶೇಷನಾಯಕ' ನಾಟಕಕ್ಕೆ ಬೆಳಕಿನ ವಿನ್ಯಾಸಗೊಳಿಸಿದ್ದಾರೆ. ತಮ್ಮ ಊರಾದ ರಟ್ಟೀಹಳ್ಳಿಯಲ್ಲಿ ಐದು ದಿನಗಳ ಗ್ರಾಮೀಣ ನಾಟಕೋತ್ಸವ ಸಂಯೋಜಿಸಿದ್ದ ಅವರು, ಜವಾಹರಲಾಲ್ ನೆಹರೂ ಜನ್ಮಶತಾಬ್ದಿ ಅಂಗವಾಗಿ ದಿಲ್ಲಿಯಲ್ಲಿ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಬಿ.ವಿ.ಕಾರಂತರ ನಿರ್ದೇಶನದ 'ಹಯವದನ' ನಾಟಕಕ್ಕೂ ಬೆಳಕಿನ ವಿನ್ಯಾಸಗಾರಾಗಿದ್ದರು. ಇದಕ್ಕೂ ಮೊದಲು ಶಂಕರನಾಗ್ ನಿರ್ದೇಶನದ 'ಅಂಜುಮಲ್ಲಿಗೆ' ನಾಟಕಕ್ಕೆ ನೇಪಥ್ಯ ಸಹಾಯಕ ನಿವಾರ್ಹಕರಾಗಿ ದುಡಿದ ಅವರು, ಕರ್ನಾಟಕ ನಾಟಕ ಅಕಾಡಮಿಯ ಶ್ರಮ ಪ್ರಶಸ್ತಿ, ಸಾಣೇಹಳ್ಳಿ ಶ್ರೀಮಠ ಹಾಗೂ ರಂಗಪಂಚಮಿ ನೀಡುವ ಸಿಜಿಕೆ ಪ್ರಶಸ್ತಿ, ವಿ.ರಾಮಮೂರ್ತಿ ರಂಗ ಬಳಗ ನೀಡುವ ರಂಗ ಬೆಳಕು ಪ್ರಶಸ್ತಿಗೆ ಭಾಜನರಾಗಿದ್ದಾರೆ. ''ಆಗ ಬೆಳಕಿನ ಸಲಕರಣೆಗಳು ಭಾರವಾಗಿದ್ದವು. ಬಸ್‌ಗಳಲ್ಲಿ ತೆಗೆದುಕೊಂಡು ಹೋಗಿ, ನೆಲ ಅಗೆದು, ಕಂಬಗಳನ್ನು ಹೂಳಿ, ಲೈಟ್ ಕಟ್ಟಬೇಕಿತ್ತು. ಆಗ ಶ್ರಮವಿದ್ದರೂ ಖುಷಿಯಿರುತ್ತಿತ್ತು. ಈಗ ಬಟನ್ ಒತ್ತಿದರೆ ಲೈಟ್‌ಗಳು ಮೇಲೆ, ಕೆಳಗೆ ಹೋಗುತ್ತವೆ. ಶ್ರಮವೂ ಇಲ್ಲ, ಖುಷಿಯೂ ಇಲ್ಲ. ಆಗ ಲೈಟಿಂಗ್ ಮಾಡಬೇಕೆಂದರೆ ನಾಟಕ ಓದುತ್ತಿದ್ದೆವು, ನಾಟಕದ ಎಂಟತ್ತು ತಾಲೀಮು ನೋಡಿ, ನಿರ್ದೇಶಕರೊಂದಿಗೆ ಚರ್ಚಿಸುತ್ತಿದ್ದೆವು. ಆಗ ಆರರಿಂದ ಎಂಟು ಬಣ್ಣಗಳನ್ನು ಮಿಶ್ರಣ ಮಾಡಿ ಬಳಸುತ್ತಿದ್ದೆವು. ಪಾತ್ರಧಾರಿಗಳ ಸಿಟ್ಟಿನ ಪ್ರದರ್ಶನಕ್ಕೆ ಕೆಂಪು ಬಣ್ಣದ ಬೆಳಕು ಬಳಸಿದರೆ, ಅವರ ಅಭಿನಯ ಕಾಣಿಸುತ್ತಿರಲಿಲ್ಲ. ಇದಕ್ಕಾಗಿ ಕಲಾವಿದರ ಅಭಿನಯಕ್ಕೆ ಒತ್ತುಕೊಡುವ ಹಾಗೆ ಬೆಳಕನ್ನು ಸಂಯೋಜಿಸುತ್ತಿದ್ದೆವು. ಆದರೆ ಈಗಿನ ಯುವ ತಲೆಮಾರಿನವರಿಗೆ ಬದ್ಧತೆ ಕಡಿಮೆಯಿದೆ. ಪ್ರದರ್ಶನ ದಿನವೇ ನಾಟಕ ಓದಿಕೊಂಡು ಲೈಟಿಂಗ್ ಮಾಡುವವರಿದ್ದಾರೆ! ಕಲರ್‌ಫುಲ್ ಲೈಟ್ ಬಳಸಲು ಉತ್ಸುಕರಾಗಿರುತ್ತಾರೆಯೇ ಹೊರತು, ನಾಟಕಕ್ಕೆ ಪೂರಕವಿದೆಯೋ ಇಲ್ಲವೋ ಎಂಬುದನ್ನು ಯೋಚಿಸುವುದಿಲ್ಲ. ತಾಲೀಮು ನೋಡದೆ ಲೈಟಿಂಗ್ ಮಾಡಬಾರದು. ನಾಟಕದ ಪ್ರತೀ ದೃಶ್ಯಗಳ ಅರಿವಿರಬೇಕು. ಕಲಾವಿದರ ಅಭಿನಯ ಮುಖ್ಯವೋ, ನಿರ್ದೇಶನ ಮುಖ್ಯವೋ ಇಲ್ಲವೆ ಲೈಟಿಂಗ್ ಮುಖ್ಯವೋ ಎಂಬುದರ ಗಮನವಿರಬೇಕು.''

''1983ರಲ್ಲಿ ಬೆಂಗಳೂರಲ್ಲಿ ಆರಂಭವಾದ ಜನಪದ ರೆಪರ್ಟರಿಯಲ್ಲಿ ಕಲಾವಿದರು ನೇಪಥ್ಯದಲ್ಲಿ ದುಡಿಯಬೇಕಿತ್ತು. ನೇಪಥ್ಯದಲ್ಲಿ ದುಡಿಯುವವರು ರಂಗದ ಮೇಲೆ ಬರಬೇಕು ಎನ್ನುವುದಿತ್ತು. ಆದರೆ ರೆಪರ್ಟರಿ ಎರಡೇ ವರ್ಷಕ್ಕೆ ನಿಂತುಹೋಯಿತು. ಇದು ಮುಂದುವರಿಯಬೇಕು. ನೇಪಥ್ಯದಲ್ಲಿ ದುಡಿಯುವವರು ರಂಗದ ಮೇಲೆ ಬರಬೇಕು. ಕಲಾವಿದರು ನೇಪಥ್ಯದಲ್ಲಿ ದುಡಿಯಬೇಕು. ಇದರಿಂದ ರಂಗಭೂಮಿಯ ಎಲ್ಲ ಅನುಭವಗಳು ದಕ್ಕುತ್ತವೆ. ಮುಖ್ಯವಾಗಿ ಬದ್ಧತೆ ಬೇಕು'' ಎನ್ನುವ ಸಲಹೆ ಮುದ್ದಣ್ಣ ಅವರದು. ಕಲಾವಿದರಾಗಬೇಕು, ನಿರ್ದೇಶಕರಾಗಬೇಕು ಎನ್ನುವ ತುಡಿತ ಹೆಚ್ಚಿನವರಿಗೆ ಇರುತ್ತದೆ. ನೇಪಥ್ಯದಲ್ಲಿ ದುಡಿದರೆ ಸಾರ್ವಜನಿಕರು ಗಮನಿಸುವುದಿಲ್ಲ ಎನ್ನುವ ಕಾರಣಕ್ಕೆ ನಟರಾಗಬೇಕು ಇಲ್ಲವೇ ನಿರ್ದೇಶಕರಾಗಬೇಕೆನ್ನುವವರೇ ಹೆಚ್ಚು. ಇಂಥದರಲ್ಲಿ ತಾವು ಕತ್ತಲೆಯಲ್ಲಿದ್ದು, ನಾಟಕಗಳಿಗೆ ಬೆಳಕು ನೀಡುವ ಮುದ್ದಣ್ಣ ಅವರ ಕಾಯಕಕ್ಕೆ ನಲವತ್ತು ವರ್ಷಗಳಿಗೂ ಅಧಿಕ.

Similar News