ಕುಟುಂಬ ರಾಜಕಾರಣ: ದ್ವಂದ್ವ ನಿಲುವು

Update: 2023-04-15 19:30 GMT

ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತದೆ, ಅದು ಕೇವಲ ಒಂದು ಕುಟುಂಬದ ಹಿತಾಸಕ್ತಿ ಕಾಯುವ ಪಕ್ಷ, ಕುಟುಂಬದವರೇ ಒಬ್ಬರಾದ ಮೇಲೊಬ್ಬರು ಅಧಿಕಾರ ಅನುಭವಿಸುತ್ತಾರೆ, ಹೊಸಬರಿಗೆ, ಕಾರ್ಯಕರ್ತರಿಗೆ ಅವಕಾಶ ಇಲ್ಲ ಹೀಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ಮಾಡಿಕೊಂಡೇ ಬಂದಿದೆ.

ಅದೇ ಬಿಜೆಪಿ ಕಾಂಗ್ರೆಸ್‌ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ಪುತ್ರಿ ಡಾ.ರಾಜನಂದಿನಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿತು. ಡಾ.ರಾಜನಂದಿನಿ ಈ ಸಲ ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಪಕ್ಷ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಬೇಸರಗೊಂಡ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಡಾ.ರಾಜನಂದಿನಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದೇ ಆಗಿದ್ದಲ್ಲಿ ಅದನ್ನು ಕುಟುಂಬ ರಾಜಕಾರಣ ಎನ್ನುತ್ತಿದ್ದ ಬಿಜೆಪಿ, ಈಗ ಅವರನ್ನು ತನ್ನತ್ತ ಸೆಳೆದದ್ದನ್ನು ಏನೆಂದು ಹೇಳುತ್ತದೆ? ಕಾಂಗ್ರೆಸ್‌ನಿಂದ ಅವರು ಬಿಜೆಪಿಗೆ ಬಂದರೆ ಅದು ಕುಟುಂಬ ರಾಜಕಾರಣ ಅಲ್ಲವೆ?

ಕಾಂಗ್ರೆಸ್‌ನಲ್ಲಿ ದಶಕಗಳ ಕಾಲ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಧಾನಿ ಪಟ್ಟವೊಂದನ್ನು ಬಿಟ್ಟು ಬೇರೆಲ್ಲ ಅಧಿಕಾರ ಅನುಭವಿಸಿದ್ದ ಎ.ಕೆ. ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಮೊನ್ನೆ ಬಿಜೆಪಿ ಸೇರಿದರು. ಅನಿಲ್ ಆ್ಯಂಟನಿಗೆ ಕಾಂಗ್ರೆಸ್‌ನಲ್ಲಿ ದೊಡ್ಡ ಹುದ್ದೆ, ಕೇರಳದಲ್ಲಿ ಮುಂದೆ ಮಂತ್ರಿಯಾಗುವ ಅವಕಾಶ ಕೊಟ್ಟಿದ್ದರೆ ಬಿಜೆಪಿ ಪ್ರಕಾರ ಅದು ಕುಟುಂಬ ರಾಜಕಾರಣವಾಗುತ್ತಿತ್ತು. ಆದರೆ ಅಲ್ಲಿ ಅವರಿಗೆ ಬೇಕಾದ ಹುದ್ದೆ, ಸ್ಥಾನಮಾನ ಸಿಗದೆ ಇದ್ದರೆ ಅವರು ಬಿಜೆಪಿ ಸೇರಬಹುದು. ಅದೇ ಅನಿಲ್ ಆ್ಯಂಟನಿ ಎ.ಕೆ. ಆ್ಯಂಟನಿಯವರ ಪುತ್ರ ಅಲ್ಲದಿದ್ದರೂ ಬಿಜೆಪಿ ಹೀಗೆ ಸ್ವಾಗತಿಸಿ ಸೇರಿಸಿಕೊಳ್ಳುತ್ತಿತ್ತೇ? ಇದು ಕುಟುಂಬ ರಾಜಕಾರಣ ಆಗುವುದಿಲ್ಲವೆ?
ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಮಾಧವ ರಾವ್ ಸಿಂಧಿಯಾ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾಗೆ ಆ ಪಕ್ಷ ಮಧ್ಯ ಪ್ರದೇಶ ಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದರೆ ಅದು ಬಿಜೆಪಿ ಪ್ರಕಾರ ಕುಟುಂಬ ರಾಜಕಾರಣ. ಅವರು ಬಿಜೆಪಿಗೆ ಪಕ್ಷಾಂತರವಾಗಿ ಬಿಜೆಪಿಯ ಹಿರಿಯ ನಾಯಕರನ್ನೆಲ್ಲ ಬದಿಗೆ ಸರಿಸಿ ಕೂಡಲೇ ರಾಜ್ಯಸಭಾ ಸ್ಥಾನ ಹಾಗೂ ಕೇಂದ್ರ ಸಚಿವ ಹುದ್ದೆ ಪಡೆದರೆ ಅದು ಬಿಜೆಪಿ ಪ್ರಕಾರ ಕುಟುಂಬ ರಾಜಕಾರಣವಲ್ಲ.

ಕಾಂಗ್ರೆಸ್‌ನ ಇನ್ನೊಬ್ಬ ಹಿರಿಯ ನಾಯಕ ಜಿತೇಂದ್ರ ಪ್ರಸಾದ್ ಪುತ್ರ ಜಿತಿನ್ ಪ್ರಸಾದ್‌ಗೆ ಕಾಂಗ್ರೆಸ್ ಕೇಂದ್ರದಲ್ಲಿ ಸಚಿವ ಸ್ಥಾನ ಕೊಟ್ಟರೆ ಅದು ಕುಟುಂಬ ರಾಜಕಾರಣ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಅವರು ಬಿಜೆಪಿ ಸೇರಿ ಉತ್ತರ ಪ್ರದೇಶದ ಹಿರಿಯ ಬಿಜೆಪಿ ನಾಯಕರನ್ನು ಹಿಂದಿಕ್ಕಿ ಎಂಎಲ್‌ಸಿಯೂ ಆಗಿ, ಸಚಿವರೂ ಆದರೆ ಅದು ಬಿಜೆಪಿ ಪ್ರಕಾರ ಕುಟುಂಬ ರಾಜಕಾರಣ ಆಗುವುದಿಲ್ಲ. ಕಾಂಗ್ರೆಸ್‌ನಲ್ಲಿ ಆಂಧ್ರ ಮುಖ್ಯಮಂತ್ರಿ ಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ನಿಧನರಾದಾಗಲೇ ಆ ಪಕ್ಷ ಪುತ್ರ ಜಗನ್ ಮೋಹನ್ ರೆಡ್ಡಿಗೆ ಸಿಎಂ ಹುದ್ದೆ ಕೊಟ್ಟಿದ್ದರೆ, ಬಿಜೆಪಿ ಪ್ರಕಾರ ಅದು ಕುಟುಂಬ ರಾಜಕಾರಣವಾಗುತ್ತಿತ್ತು. ಆದರೆ ಜಗನ್‌ಗೆ ಕಾಂಗ್ರೆಸ್ ಸಿಎಂ ಹುದ್ದೆ ಕೊಡಲಿಲ್ಲ. ಅವರು ಬಂಡಾಯವೆದ್ದು ಬೇರೆ ಪಕ್ಷ ಕಟ್ಟಿ ಸಿಎಂ ಆದರು. ಅವರಿಗೆ ಬಿಜೆಪಿ ಈಗ ಬಲು ಹತ್ತಿರ.
ಕಾಂಗ್ರೆಸ್‌ನ ಇನ್ನೂ ಒಬ್ಬ ಹಿರಿಯ ನಾಯಕ ರಾಜೇಶ್ ಪೈಲಟ್ ಪುತ್ರ ಸಚಿನ್ ಪೈಲಟ್‌ಗೆ ಆ ಪಕ್ಷ ಸಣ್ಣ ವಯಸ್ಸಿನಲ್ಲಿಯೇ ಕೇಂದ್ರದಲ್ಲಿ ಮಂತ್ರಿ ಪದವಿ ಕೊಟ್ಟರೆ ಅದು ಕುಟುಂಬ ರಾಜಕಾರಣ. ಆದರೆ ಅವರು ಕೇಳಿದ ಕೂಡಲೇ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆ ಕೊಡಲಿಲ್ಲವೆಂದು ಪಕ್ಷದ ವಿರುದ್ಧವೇ ಅವರು ಬಂಡೇಳುತ್ತಾರೆ. ಈ ಹಿಂದಿನ ಹಲವು ನಿದರ್ಶನಗಳನ್ನು ಗಮನಿಸಿದರೆ ಸಚಿನ್ ಪೈಲಟ್ ನಾಳೆ ಬಿಜೆಪಿಗೆ ಹೋಗಲೂಬಹುದು. ಅಲ್ಲಿ ಸಿಎಂ ಆಗಲೂಬಹುದು. ಅದಕ್ಕಾಗಿ ರಾಜಸ್ಥಾನದಲ್ಲಿ ಪಕ್ಷಕ್ಕೆ ದಶಕಗಳಿಂದ ದುಡಿದವರು ಬದಿಗೆ ಸರಿಯಬಹುದು. ಆದರೆ ಅದು ಬಿಜೆಪಿ ಪ್ರಕಾರ ಕುಟುಂಬ ರಾಜಕಾರಣವಾಗದು. ಆಗುವುದಿಲ್ಲ.

ಒಂದೇ ಕುಟುಂಬದಲ್ಲಿ ಅಪ್ಪಈಗಲೂ ಕಾಂಗ್ರೆಸ್ ನಾಯಕ, ಶಾಸಕ, ಸಂಸದ, ಸಚಿವ, ಮಾಜಿ ಸಚಿವ. ಮಕ್ಕಳು ಬಿಜೆಪಿಯಲ್ಲಿ. ಮಾವ ಕಾಂಗ್ರೆಸ್‌ನಲ್ಲಿದ್ದರೆ ಅಳಿಯ ಅಥವಾ ಸೊಸೆ ಬಿಜೆಪಿಯಲ್ಲಿ. ಅಣ್ಣ ಕಾಂಗ್ರೆಸ್‌ನಲ್ಲಿದ್ದರೆ ತಮ್ಮ ಬಿಜೆಪಿಯಲ್ಲಿ. ಇಡೀ ದೇಶದಲ್ಲಿ ಎಲ್ಲೆಡೆ ಹೀಗೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಫಲಾನುಭವಿ ಕುಡಿಗಳನ್ನು ಬಿಜೆಪಿ ಕೆಂಪು ಹಾಸು ಹಾಕಿ ಸ್ವಾಗತಿಸಿ, ಕೂಡಲೇ ಅವರಿಗೆ ಸ್ಥಾನ, ಮಾನ ಎಲ್ಲವನ್ನೂ ಕೊಡುತ್ತದೆ. ಆದರೆ ಅಂಥ ಸ್ವಾಗತ ಅವರಿಗೆ ಸಿಕ್ಕಿದ್ದು ಅವರು ಅಲ್ಲಿ ಕುಟುಂಬ ರಾಜಕಾರಣದ ಫಲಾನುಭವಿಗಳು ಎಂಬ ಕಾರಣಕ್ಕೆ ಎಂಬುದು ಮುಖ್ಯವಾಗುವುದೇ ಇಲ್ಲ. ಈ ದೇಶದ, ನಮ್ಮ ರಾಜ್ಯದ ಯುವಜನರು ಬಹುದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಅವರೆಲ್ಲ ಪ್ರಧಾನಿ ಮೋದಿಯ ಕಟ್ಟಾ ಅಭಿಮಾನಿಗಳು. ಅವರ ಬಗ್ಗೆ ಅವರಿಗೆಲ್ಲ ಅಪಾರ ನಂಬಿಕೆ, ಭರವಸೆ. ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿಗೆ ಹಾರಲು ಮೇಲ್ನೋಟಕ್ಕೆ ಕಾಣುವುದು ಎರಡೇ ಪ್ರಮುಖ ಕಾರಣಗಳು. ಒಂದು, ಬಿಜೆಪಿ ಈಗ ಅಧಿಕಾರದಲ್ಲಿದೆ. ಕಾಂಗ್ರೆಸ್ ಯಾವಾಗ ಅಧಿಕಾರಕ್ಕೆ ಬರುತ್ತದೆಂಬ ಖಚಿತತೆಯಿಲ್ಲ. ಹಾಗಾಗಿ ಬಿಜೆಪಿ ಸೇರಿದರೆ ಅಧಿಕಾರ ಅನುಭವಿಸಬಹುದು ಎಂಬುದು. ಇನ್ನೊಂದು, ತಮ್ಮ ತಂದೆ ಮಾಡಿರುವ ಭ್ರಷ್ಟಾಚಾರದ ತನಿಖೆ ಆಗದ ಹಾಗೆ ನೋಡಿಕೊಳ್ಳುವುದು.

ಹಾಗಾದರೆ ಇದು ಬಿಜೆಪಿಯನ್ನು ಬೆಂಬಲಿಸುವ, ಅದಕ್ಕಾಗಿ ಹಗಲಿರುಳು ದುಡಿಯುವ ಅದರ ಕಾರ್ಯಕರ್ತರಿಗೆ, ಯುವಜನತೆಗೆ ಬಿಜೆಪಿ ಮಾಡುವ ದ್ರೋಹ ಅಲ್ಲವೇ? ಈ ಪ್ರಶ್ನೆಯನ್ನು ಬಿಜೆಪಿಯ ಯುವ ಕಾರ್ಯಕರ್ತರು, ಬೆಂಬಲಿಗರು ತಮ್ಮ ನಾಯಕರಿಗೆ ಕೇಳಬೇಕಾಗಿದೆ

Similar News