ಐಪಿಎಲ್: ಚೆನ್ನೈ ಕಿಂಗ್ಸ್ ವಿರುದ್ಧ ಸೋಲುಂಡ ಆರ್‌ಸಿಬಿ

ಡೆವೊನ್ ಕಾನ್ವೆ, ಶಿವಂ ದುಬೆ ಅರ್ಧಶತಕ, ಪ್ಲೆಸಿಸ್, ಮ್ಯಾಕ್ಸ್‌ವೆಲ್ ಹೋರಾಟ ವ್ಯರ್ಥ

Update: 2023-04-17 17:53 GMT

 ಬೆಂಗಳೂರು, ಎ.17: ನಾಯಕ ಎಫ್ ಡು ಪ್ಲೆಸಿಸ್(62 ರನ್, 33 ಎಸೆತ) ಹಾಗೂ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(76 ರನ್, 36 ಎಸೆತ) ಅರ್ಧಶತಕದ ಕೊಡುಗೆಯ ಹೊರತಾಗಿಯೂ ತುಷಾರ್ ದೇಶಪಾಂಡೆ(3-45) ನೇತೃತ್ವದ ಬೌಲರ್‌ಗಳ ದಾಳಿಗೆ ತತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನ 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ರನ್ ಅಂತರದಿಂದ ಸೋಲುಂಡಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 227 ರನ್ ಗುರಿ ಪಡೆದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 218 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಆರ್‌ಸಿಬಿ ಪರ ದಿನೇಶ್ ಕಾರ್ತಿಕ್(28 ರನ್, 14 ಎಸೆತ), ಸುಯಶ್ (19 ರನ್, 11 ಎಸೆತ)ಎರಡಂಕೆೆಯ ಸ್ಕೋರ್ ಗಳಿಸಿದರು. ವಿರಾಟ್ ಕೊಹ್ಲಿ (6 ರನ್), ಮಹಿಪಾಲ್(0)ವಿಫಲರಾದರು. ತುಷಾರ್ ಯಶಸ್ವಿ ಬೌಲರ್ ಎನಿಸಿಕೊಂಡರೆ ಲಂಕೆಯ ಬೌಲರ್ ಮಥೀಶಾ ಪಥಿರಣ (2-42) ಎರಡು ವಿಕೆಟ್ ಪಡೆದರು.

 ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ(83 ರನ್, 45 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಆಲ್‌ರೌಂಡರ್ ಶಿವಂ ದುಬೆ(52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಅರ್ಧಶತಕಗಳ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 226 ರನ್ ಗಳಿಸಿತು.

Similar News