ವಧುಗಳ ಕೊರತೆಗೆ ಕಾರಣವೇನೆಂದರೆ...

Update: 2023-04-18 08:50 GMT

ಸ್ವಲ್ಪದಿನಗಳ ಹಿಂದೆ ಮಂಡ್ಯದ ಆದಿಚುಂಚನಗಿರಿಯಲ್ಲಿ ಸಾಮೂಹಿಕ ವಧು-ವರರ ಭೇಟಿ ಕಾರ್ಯಕ್ರಮದಲ್ಲಿ ದೇಶವೇ ಅಚ್ಚರಿಗೆ ಒಳಗಾಗುವಂತಹ ಮತ್ತು ತುರ್ತಾಗಿ ಚಿಂತಿಸುವಂತಹ ಘಟನೆ ನಡೆದಿತ್ತು. ಇಲ್ಲಿ 200 ಯುವತಿಯರನ್ನು ವರಿಸಲು ಸುಮಾರು 11,750 ಯುವಕರು ಅರ್ಜಿ ಸಲ್ಲಿಸಿದ್ದರು. ಈ ವಧು-ವರರ ಸಮಾವೇಶ ಎಂತಹ ಜಾತ್ರೆ ಆಗಿತ್ತು ಎಂದರೆ ಸರಿಸುಮಾರು 25 ಸಾವಿರ ಜನ ಅಲ್ಲಿ ಸೇರಿದ್ದರು. ವೇದಿಕೆ ಹತ್ತಲು ಪೈಪೋಟಿ ನಡೆಸಿ ಕೆಲವು ವಧು-ವರರು ಮತ್ತು ಅವರ ತಂದೆ ತಾಯಿಗಳು ಕೆಳಗೆ ಬಿದ್ದು ಗಾಯ ಮಾಡಿಕೊಂಡ ಘಟನೆ ಸಹ ನಡೆದವು. ಸಾವಿರಾರು ಸಂಖ್ಯೆಯಲ್ಲಿ ವಧು-ವರರ ಕಡೆಯವರು ಈ ನೂಕು ನುಗ್ಗಾಟ ನೋಡಲಾಗದೆ ತಮ್ಮ ಊರಿಗೆ ವಾಪಸ್ ಮರಳಿದರು. ಇಲ್ಲಿ ಗಮನಿಸಬೇಕಾದ ಒಂದು ಬಹು ಮುಖ್ಯ ಸಂಗತಿ ಎಂದರೆ ಹೆಚ್ಚಿನ ವರರು ರೈತಾಪಿ ಕುಟುಂಬದಿಂದ ಬಂದಿದ್ದರು ಮತ್ತು ರೈತರಾಗಿದ್ದರು. ಈ ಘಟನೆ ಕರ್ನಾಟಕದಂತಹ ಸುಶಿಕ್ಷಿತರ ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಆಗಿರುವಂತಹ ಅತೀ ಗಂಭೀರವಾದ ಸಮಸ್ಯೆ ಮತ್ತು ಮುಂದೆ ಸಮಾಜದಲ್ಲಿ ಅದು ಉಂಟು ಮಾಡಬಹುದಾದ ಅತ್ಯಂತ ಭೀಕರ ಸಮಸ್ಯೆಗಳಿಗೆ ಮುನ್ನುಡಿ ಬರೆದಂತಿತ್ತು. ಸಮಾಜದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತೀವ್ರವಾಗಿ ಕುಸಿತವಾಗುತ್ತಿರುವ ಸಂಕೇತ ಇದು. ರಾಷ್ಟ್ರೀಯ ವರದಿಗಳು ದೇಶದಲ್ಲಿ ಲಿಂಗಾನುಪಾತದಲ್ಲಿ ಸಮಸ್ಯೆ ಇಲ್ಲ ಎಂದು ಬೊಬ್ಬೆ ಹಾಕುತ್ತಿದ್ದರೂ ತಳಮಟ್ಟದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬೇರೆ ಇದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ವರದಿಗಳ ಕೆಲವು ದತ್ತಾಂಶಗಳನ್ನು ಬದಲಿಸಿರುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು ಸಂಶೋಧಕರು. ಇದರ ಮಧ್ಯೆ ಕಳೆದ ಆರು ವರ್ಷಗಳಲ್ಲಿ ರಾಜ್ಯದ ಚಿಕ್ಕಮಗಳೂರು, ಹಾಸನ, ಕೊಡಗು ಮುಂತಾದ ಜಿಲ್ಲೆಗಳಲ್ಲಿ ಸ್ವಲ್ಪಮಟ್ಟಿಗೆ ಲಿಂಗಾನುಪಾತದಲ್ಲಿ ಧನಾತ್ಮಕ  ಬದಲಾವಣೆ ಸಹ ಹೊಂದುತ್ತಿದೆ ಎನ್ನಲಾಗಿದೆ. ಕೆಲವು ವರದಿಗಳ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ಕಂಡು ಬಂದಿದೆ.

ಪಿತೃ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಸ್ಥಾನಮಾನದಲ್ಲಿ ಅತ್ಯಂತ ಗಂಭೀರವಾದ ತಾರತಮ್ಯ ಉಂಟಾಗುತ್ತಿದೆ. ದೇಶದಲ್ಲಿ ಎಲ್ಲಾ ನದಿಗಳಿಗೂ ಸ್ತ್ರೀಯ ಹೆಸರು ನೀಡಲಾಗಿದೆ. ಧಾರ್ಮಿಕ ಆಚರಣೆಯಲ್ಲಿ ಹೆಣ್ಣು ದೇವತೆಗಳಿಗೆ ಪ್ರಮುಖ ಸ್ಥಾನವನ್ನು ಕೊಡಲಾಗಿದೆ. ಆದರೂ  ಪ್ರಪಂಚದ ಯಾವುದೇ ಸಮಾಜವನ್ನು ತೆಗೆದುಕೊಂಡರೂ ಅಲ್ಲಿ ಒಂದು ಹೆಣ್ಣಿಗೆ ಸಿಗಬೇಕಾದ ಸಮಾನ ಸ್ಥಾನಮಾನಗಳು ಇಂದಿಗೂ ಸಿಗುತ್ತಿಲ್ಲ. ಇನ್ನೊಂದೆಡೆ ಸರಕಾರವು ಯುವಕ-ಯುವತಿಯರ ಮದುವೆ ವಯಸ್ಸನ್ನು ಹೆಚ್ಚು ಮಾಡಿರುವುದು ಧನಾತ್ಮಕ ಮತ್ತು ಋಣಾತ್ಮಕ ಎರಡು ಅಂಶಗಳನ್ನು ಬೀರುವ ಸಾಧ್ಯತೆ ಇದೆ. 

ಇಂದಿನ ಜಮಾನದಲ್ಲಿ ಯಾರನ್ನಾದ್ರೂ ಮಾತನಾಡಿಸಿ ‘‘ಹೇಗಿದ್ದೀರಾ..’’ ಎಂದು ಕೇಳಿದ ನಂತರ ಮುಂದಿನ ಮಾತೇ.. ‘‘ನನ್ನ ಮಗನಿಗೆ ಕನ್ಯೆ ಸಿಗ್ತಿಲ್ಲ ನಿಮಲ್ಲಿ ಯಾವುದಾದ್ರೂ ಹುಡುಗಿ ಇದ್ರೆ ಹೇಳಿ’’ ಎನ್ನುತ್ತಾರೆ. ಹೌದು ಮಗನಿಗೆ ಮದುವೆ ಮಾಡಲು ಪೋಷಕರು ಸಪ್ತಸಾಗರ ದಾಟಿ ಹುಡುಗಿ ಹುಡುಕಬೇಕಾದ ಪರಿಸ್ಥಿತಿ ಇಂದು ಬಂದೊದಗಿದೆ. ಕೆಲವು ವರದಿಗಳ ಪ್ರಕಾರ ಮುಂದಿನ 15 ವರ್ಷಗಳಲ್ಲಿ ಈ ಲಿಂಗಾನುಪಾತ ಸಮಸ್ಯೆ ಅತ್ಯಂತ ಗಂಭೀರ ಹಂತದಲ್ಲಿರಲಿದೆ. ಸಮಾಜದಲ್ಲಿ ಹೀಗೆ ದಿಢೀರ್ ಆಗಿ ಹೆಣ್ಣುಮಕ್ಕಳ ಸಂಖ್ಯೆ ಅಥವಾ ಲಿಂಗಾನುಪಾತದಲ್ಲಿ ಕಡಿಮೆಯಾಗಲು ಮುಖ್ಯ ಕಾರಣ ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿ ಮೊದಲಿನಿಂದಲೂ ಮನೆ ಮಾಡಿರುವ ಅಸಹನೆ, ಅಸಡ್ಡೆ ಹಾಗೂ ಇಂದಿಗೂ ಕದ್ದು ಮುಚ್ಚಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ. ಯಾವುದೇ ಕಾನೂನು ಕಟ್ಟಳೆಗಳು ಬಂದರೂ ಈ ಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಇಂದಿಗೂ ಕಡಿಮೆ ಆಗುತ್ತಿಲ್ಲ. ಉತ್ತರ ಪ್ರದೇಶ, ಬಿಹಾರ ಮಧ್ಯಪ್ರದೇಶ ಇಂತಹ ರಾಜ್ಯಗಳಲ್ಲಿ ಆ್ಯಂಬುಲೆನ್ಸ್ ಮತ್ತು ಇತರ ವಾಹನಗಳನ್ನು ಬಳಸಿ ಅದರಲ್ಲಿ ಲಿಂಗಪತ್ತೆ ಯಂತ್ರವನ್ನು ಅಳವಡಿಸಿ ಭ್ರೂಣ ಪರೀಕ್ಷೆ ಅವ್ಯಾಹತವಾಗಿ ನಡೆಯುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಬಹಳ ಗಾಬರಿಪಡಿಸುವ ವಿಚಾರವೆಂದರೆ ಇಂದು ಹೆಣ್ಣು ಭ್ರೂಣ ಹತ್ಯೆ ಆದಿವಾಸಿ ಜನಾಂಗದಲ್ಲೂ ನಡೆಯುತ್ತಿದೆ. ಕೆಲವರ ಪ್ರಕಾರ ಲಿಂಗಾನುಪಾತದಲ್ಲಿ ಹೀಗೆ ಅಂತರ ಮುಂದುವರಿದರೆ ಪುರಾಣದಲ್ಲಿ ಕೇಳಿದಂತೆ ಒಬ್ಬ ವಧು ಹಲವರನ್ನು ಮದುವೆಯಾಗುವ ವ್ಯವಸ್ಥೆ ಮುಂದಿನ ಶತಮಾನದಲ್ಲಿ ಬಂದರೂ ಆಶ್ಚರ್ಯವಿಲ್ಲ. ಇತ್ತೀಚಿನ ಒಂದು ವರದಿಯ ಪ್ರಕಾರ ತಮಿಳುನಾಡಿನಲ್ಲಿ 40,000 ಗ್ರಾಮೀಣ ಯುವಕರು ಮದುವೆಯಾಗಲು ವಧುಗಳು ಸಿಗದೇ ಮಧ್ಯಪ್ರದೇಶ, ಕಾಶ್ಮೀರ ಮತ್ತು ಉತ್ತರ ಪ್ರದೇಶಗಳಿಂದ ಹುಡುಗಿಯರನ್ನು ಹುಡುಕಿ ತರುವ ಕೆಲಸ ಮಾಡುತ್ತಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಹೊರದೇಶಗಳಿಂದ ಯುವತಿಯರನ್ನು ಮದುವೆಗೆ ಕರೆತರುತ್ತಿರುವ  ಸಾಹಸ ನಡೆಯುತ್ತಿದೆ. ಅವರ ಅಭಿಪ್ರಾಯದಲ್ಲಿ ಮನೆಯಲ್ಲಿ ಚಪಾತಿ/ರೊಟ್ಟಿ ಮಾಡಲು ಒಬ್ಬ ವಧು ತುರ್ತಾಗಿ ಬೇಕಾಗಿದ್ದಾಳೆ! ಪರಿಸ್ಥಿತಿ ಇಂತಹ ಹಂತವನ್ನು ತಲುಪುವ ಮುಂಚೆ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.

ವಾಸ್ತವವಾಗಿ, ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಇಂದು ಮಹಿಳೆಯರ ಮತ್ತು ಪುರುಷರ ಅನುಪಾತವು ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಆಯ್ದ ಲಿಂಗ ಗರ್ಭಪಾತ, ಮಾನವ ಕಳ್ಳಸಾಗಣೆ ಮತ್ತು ವರದಕ್ಷಿಣೆ ಸಮಸ್ಯೆ. ತಜ್ಞರ ಪ್ರಕಾರ ಈ ಲಿಂಗಾನುಪಾತ ಸಮಸ್ಯೆ ಕೆಲವು ವಧು-ವರರಿಗೆ, ವಿಶೇಷವಾಗಿ ಮಧ್ಯಮ ವರ್ಗದ ಅಥವಾ ಮೇಲ್ಮಧ್ಯಮ ವರ್ಗದ ಕುಟುಂಬದವರಿಗೆ, ಹೆಚ್ಚಿನ ಆಯ್ಕೆಯನ್ನು ತಂದಿದೆ!  ಭಾರತದಲ್ಲಿ ಜನಪ್ರಿಯವಾಗಿರುವ ಅರೇಂಜ್ಡ್ ಮ್ಯಾರೇಜ್ಗಳಲ್ಲಿ, ಮೊದಲು  ಯುವತಿಯರಿಗೆ ಆಯ್ಕೆ ವಿರಳವಾಗಿತ್ತು. ಹೆಚ್ಚಿನ ಹೆಣ್ಣುಮಕ್ಕಳು ಟಿವಿ ಸೆಟ್ಗಳು, ಹಣ ಮತ್ತು ಚಿನ್ನವನ್ನು ಒಳಗೊಂಡ ವರದಕ್ಷಿಣೆಯೊಂದಿಗೆ ಅವರು ವಿವಾಹವಾಗಿದ್ದರು. ಆದರೆ  ಇಂದು, ವಧುಗಳು ಹೆಚ್ಚು ಬೇಡಿಕೆಯಲ್ಲಿದ್ದಾರೆ. ಇದರಿಂದ  ಅನೇಕ ಸಂದರ್ಭಗಳಲ್ಲಿ, ವರದಕ್ಷಿಣೆಯ ಸಮಸ್ಯೆಯೇ ಬರುತ್ತಿಲ್ಲ. ಇದು ಅರ್ಥಶಾಸ್ತ್ರದಂತೆ  ಪೂರೈಕೆ ಮತ್ತು ಬೇಡಿಕೆಯ ಸರಳ ಪ್ರಕರಣವಾಗಿದೆ. ಇಂದು ಯುವತಿಯರಿಗೆ ಆಯ್ಕೆ ಮಾಡಲು ಸಾಕಷ್ಟು ದೊಡ್ಡ ಸಂಖ್ಯೆಯ ಪುರುಷರಿದ್ದಾರೆ. ಕೈಗಾರಿಕೀಕರಣ ಮತ್ತು ಜಾಗತೀಕರಣದ ಅವಕಾಶದಿಂದ ಇಂದು ಹೆಚ್ಚಿನ ಹೆಣ್ಣು ಮಕ್ಕಳು ಸಮಾಜದಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿದ್ದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಹಾಗಾಗಿ ಪುರುಷರೆಡೆಗೆ ಅವರ ಅಭಿಪ್ರಾಯಗಳು ಮತ್ತು ಆಯ್ಕೆಗಳು ತ್ವರಿತವಾಗಿ ಬದಲಾಗುತ್ತಿವೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅತಿ ಸೂಕ್ಷ್ಮವಿಚಾರವೆಂದರೆ ಭಾರತದಲ್ಲಿ ಮದುವೆಯಾಗುವ ಗಂಡಿನ ವಯಸ್ಸು ಹೆಣ್ಣಿನ ವಯಸ್ಸಿಗಿಂತ ಹೆಚ್ಚಿರುತ್ತದೆ. ಇದು ದೀರ್ಘ ಕಾಲದಲ್ಲಿ ಫಲವತ್ತತೆಯ ಪ್ರಮಾಣ(ಫರ್ಟಿಲಿಟಿ ರೇಟ್) ವಿಚಾರದಲ್ಲಿ ಸಹ ಗಂಭೀರ ಪರಿಣಾಮ ಬೀರುತ್ತದೆ. ಅಲ್ಲದೆ ಇಂದು ಹೆಚ್ಚಿನ ಆರ್ಥಿಕ ಸಬಲವಾದ ಯುವತಿಯರು ಮಕ್ಕಳನ್ನೇ ಹೊಂದಲು ಇಚ್ಛಿಸುತ್ತಿಲ್ಲ. ಹೆಚ್ಚಿನ ಹೆಣ್ಣುಮಕ್ಕಳು ಕೇವಲ ಒಂದು ಮಗುವನ್ನು ಹೊಂದಲು ಮಾತ್ರ ಇಚ್ಛಿಸುತ್ತಿದ್ದಾರೆ. ವಿದ್ಯಾವಂತ ಹೆಣ್ಣುಮಕ್ಕಳು ಮದುವೆಯನ್ನೇ ಮುಂದೂಡುತ್ತಿದ್ದಾರೆ. 

ಇದರೊಂದಿಗೆ ದೇಶದಲ್ಲಿ ಶತಮಾನಗಳಿಂದ ಮನೆ ಮಾಡಿರುವ ಜಾತಿ ಪದ್ಧತಿ ಸಹ ವಧುಗಳ ಕೊರತೆಗೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಆದರೆ ಇದರ ಬಗ್ಗೆ ಯಾರಿಗೂ ಸರಿಯಾದ ಗಮನವಿಲ್ಲ. ಇಲ್ಲಿ ಇನ್ನೊಂದು ಅಂಶವೆಂದರೆ ದೇಶದಲ್ಲಿ ಮೇಲ್ವರ್ಗದ ಯುವಕರಿಗೆ ಅಷ್ಟೇನು ಸಮಸ್ಯೆ ಆಗುತ್ತಿಲ್ಲ ಎಂದು ಕೆಲವು ಸ್ವಯಂ ಸೇವಾ ಸಂಸ್ಥೆಗಳ ಸಂಶೋಧನಾ ವರದಿಗಳು ಹೇಳುತ್ತವೆ. ಆದರೆ ಕೆಳ ವರ್ಗದ ಸಮುದಾಯದಲ್ಲಿ ವಧುಗಳ ಕೊರತೆ ಅತ್ಯಂತ ತೀವ್ರವಾಗಿದೆ. ಅದರಲ್ಲೂ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಮತ್ತು ಬಿಹಾರಗಳಲ್ಲಿ ಈ ಸಮಸ್ಯೆ ಅತ್ಯಂತ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಇಲ್ಲಿನ ಕೆಲ ರಾಜ್ಯಗಳ ಹಳ್ಳಿಗಳಲ್ಲಿ ಮದುವೆಯಾಗದ ಯುವಕರ ಸಂಘವನ್ನು ಸಹ ಕಟ್ಟಿಕೊಳ್ಳುತ್ತಿದ್ದಾರೆ ಎಂದು ಇತ್ತೀಚೆಗೆ ಕೆಲವು ಪತ್ರಿಕಾ ವರದಿಗಳು ಹೇಳುತ್ತವೆ. ಕೆಲವು ಪುರುಷರ ಹವ್ಯಾಸಗಳಾದ ಮದ್ಯ ಸೇವನೆ, ಸಿಗರೇಟ್ ಸೇವನೆ, ಅಪರಾಧಗಳಲ್ಲಿ ಭಾಗವಹಿಸಿರುವುದು, ಕೆಟ್ಟ ಕುಟುಂಬದ ಹಿನ್ನೆಲೆ ಈ ಎಲ್ಲಾ ಕಾರಣಗಳಿಂದ ಕೆಲವು ಸಮುದಾಯಗಳಲ್ಲಿ ಯುವಕರಿಗೆ ಮದುವೆಯಾಗಲು  ಯುವತಿಯರು ಸಿಗುತ್ತಿಲ್ಲ ಎನ್ನುವುದನ್ನು ಗಮನಿಸಲಾಗಿದೆ. ಅಂಗವಿಕಲ ಪುರುಷರ ಸ್ಥಿತಿ ಇನ್ನೂ ಚಿಂತಾಜನಕ. ಈ ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳಲ್ಲಿ  ವಿಚ್ಛೇದನ ಪಡೆದವರು ಮತ್ತು ವಿಧವೆಯರನ್ನು ಮದುವೆಯಾಗುವ ಸಮಾಜಮುಖಿ ಬೆಳವಣಿಗೆ ಸಹ ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು.

ಬಡತನ ಮತ್ತು ಇತರ ಸಮಸ್ಯೆಗಳ ಜೊತೆಯಲ್ಲಿ ಮುಂದಿನ ಶತಮಾನದಲ್ಲಿ ವಧುಗಳ ಕೊರತೆ ಒಂದು ಬಹುದೊಡ್ಡ ಸಾಮಾಜಿಕ ಸಮಸ್ಯೆಯಾಗಿ ದೇಶ ಮತ್ತು ಪ್ರಪಂಚವನ್ನು ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆಲ್ಲ ಒಂದೇ ಪರಿಹಾರವೆಂದರೆ ಹೆಣ್ಣು ಮಕ್ಕಳ ಬಗ್ಗೆ ಪೋಷಕರ ಮತ್ತೆ ಸಮಾಜದ ಅಭಿಪ್ರಾಯ ಮತ್ತು ಮನೋಭಾವನೆ ಸಂಪೂರ್ಣವಾಗಿ ಮತ್ತು ತ್ವರಿತವಾಗಿ  ಬದಲಾಗಬೇಕಿದೆ. ಗುಣಾತ್ಮಕ ಶಿಕ್ಷಣದ ಮೂಲಕ ಹೆಣ್ಣು ಮಕ್ಕಳ ಸಬಲೀಕರಣಕ್ಕೆ, ಮುಖ್ಯವಾಗಿ ಆರ್ಥಿಕ ಸಬಲೀಕರಣಕ್ಕೆ ಅತ್ಯಂತ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಹೆಣ್ಣು ಮಕ್ಕಳ ವಿರುದ್ಧ ದೌರ್ಜನ್ಯ ಸಹ ಶೂನ್ಯ ಮಟ್ಟಕ್ಕೆ ಇಳಿಯಬೇಕಾಗಿದೆ.

Similar News