ಎನ್‍ಸಿಪಿ ತಕ್ಷಣವೇ ಸಿಎಂ ಹುದ್ದೆಗೆ ಹಕ್ಕು ಮಂಡಿಸಬಹುದು: ಅಜಿತ್ ಪವಾರ್

Update: 2023-04-22 02:40 GMT

ಪಿಂಪ್ರಿ ಚಿಂಚವಾಡ: ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ) ಈಗ ಕೂಡಾ ಹಕ್ಕು ಮಂಡಿಸಬಹುದು. 2024ರ ರಾಜ್ಯ ವಿಧಾನಸಭಾ ಚುನಾವಣೆವರೆಗೆ ಕಾಯುವ ಅಗತ್ಯವಿಲ್ಲ ಎಂದು ಎನ್‍ಸಿಪಿ ನಾಯಕ ಅಜಿತ್ ಪವಾರ್ ಹೇಳಿದ್ದಾರೆ.

2024ರ ವಿಧಾನಸಭಾ ಚುನಾವಣೆಯಲ್ಲಿ ಎನ್‍ಸಿಪಿ ಸಿಎಂ ಹುದ್ದೆಗೆ ಹಕ್ಕು ಪ್ರತಿಪಾದಿಸುತ್ತದೆಯೇ ಎಂದು ಖಾಸಗಿ ಮಾಧ್ಯಮ ಸಮಾರಂಭವೊಂದರಲ್ಲಿ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಎನ್‍ಸಿಪಿಯಲ್ಲಿ ಯಾವುದೇ ಬಣ ಬಿಜೆಪಿ ಜತೆ ಮೈತ್ರಿ ಬಯಸುತ್ತಿದೆಯೇ ಎಂದು ಕೇಳಿದಾಗ "ಖಂಡಿತಾ ಇಲ್ಲ" ಎಂದು ಸ್ಪಷ್ಟವಾಗಿ ನಿರಾಕರಿಸಿದರು.

 2024ರ ಚುನಾವಣೆ ಬಗ್ಗೆ ಅಭಿಪ್ರಾಯ ಕೇಳಿದಾಗ, ಆಡಳಿತ ಪಕ್ಷವನ್ನು ಸೋಲಿಸಲು ಎಲ್ಲ ವಿರೋಧ ಪಕ್ಷಗಳು ಒಗ್ಗೂಡಬೇಕು ಎಂದು ಸಲಹೆ ನೀಡಿದರು.

ಎನ್‍ಸಿಪಿಯ ಮುಖ್ಯಮಂತ್ರಿ ಗಾದಿ ಆಕಾಂಕ್ಷೆ ಬಗ್ಗೆ ಕೇಳಿದಾಗ, "ಎನ್‍ಸಿಪಿ 2004ರಲ್ಲೇ 71 ಸ್ಥಾನಗಳನ್ನು ಗಳಿಸಿದ್ದಾಗಲೇ ಸಿಎಂ ಹುದ್ದೆ ಪಡೆಯಬೇಕಿತ್ತು. ಆದರೆ ಹಿರಿಯರ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರದ ಅನ್ವಯ ಹಾಗೂ ಪಕ್ಷದ ಶಿಸ್ತನ್ನು ಉಳಿಸಿಕೊಂಡು ಬರುವ ಸಲುವಾಗಿ ನಾವು ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟೆವು. ಇಲ್ಲದಿದ್ದರೆ ಕಾಂಗ್ರೆಸ್ ಮುಖಂಡರು ಎನ್‍ಸಿಪಿ ಮುಖಂಡರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳಲು ಸಿದ್ಧರಿದ್ದರು. ಅದಕ್ಕೆ ಅವಕಾಶ ನೀಡಿದ್ದರೆ ಆರ್.ಆರ್..ಪಾಟೀಲ್ ಸಿಎಂ ಆಗುತ್ತಿದ್ದರು" ಎಂದು ಬಹಿರಂಗಪಡಿಸಿದರು.

Similar News