ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದ ವರ್ಗಗಳಿಗೆ ದಕ್ಕಿರುವುದೆಷ್ಟು?

Update: 2023-04-24 18:50 GMT

ಸ್ವತಂತ್ರ ಭಾರತದ ಮೊದಲ ಚುನಾವಣೆಯಿಂದಲೂ ಬಹುತೇಕ ಆಡಳಿತವು ಬಹುಸಂಖ್ಯಾತ ಮೇಲ್ಜಾತಿ ಹಿಂದೂಗಳ ಕೈಯಲ್ಲಿಯೇ ಇದೆ.ಅದಕ್ಕೆ ಕಾರಣ ಆಯ್ಕೆ ಆಗುತ್ತಿರುವ ಸದಸ್ಯರಲ್ಲಿ ಹೆಚ್ಚಿನವರು ಬಹುಸಂಖ್ಯಾತ ಮೇಲ್ಜಾತಿ ಹಿಂದೂಗಳೇ ಆಗಿರುತ್ತಾರೆ. ಅವರುಗಳೇ ಚುನಾವಣೆಯಲ್ಲಿ ಆಯ್ಕೆಯಾಗಲೂ ಇರುವ ಮತ್ತೊಂದು ಕಾರಣವೆಂದರೆ ಸ್ಥಾನಗಳ ಹಂಚಿಕೆಯಲ್ಲಿ ಬಹುಪಾಲು ಸ್ಥಾನಗಳನ್ನು ಅವರುಗಳಲ್ಲಿಯೆ ಪರಸ್ಪರ ಹಂಚಿಕೊಳ್ಳುವರು.

----------------------------------
ಕರ್ನಾಟಕದ ಮಹಾ ಜನತೆಯ ಹಣೆಬರಹ ಬರೆಯುವ 16ನೇ ಸಾರ್ವತ್ರಿಕ ಚುನಾವಣೆ ಇನ್ನು ಕೆಲವೇ ದಿನಗಳಲ್ಲಿ ಎದುರಾಗಲಿದೆ. ಕಳೆದ ಹಲವಾರು ದಿನಗಳಿಂದ ರಾಜಕೀಯ ಪಕ್ಷಗಳು ಸಮರೋಪಾದಿಯಲ್ಲಿ ಪ್ರಚಾರದಲ್ಲಿ ತೊಡಗಿವೆ. ಪ್ರಕೃತಿ ವಿಕೋಪದಿಂದ ಆದ ಅನಾಹುತ ಅರಿಯಲು ಒಮ್ಮೆಯೂ ಬಾರದ ಪ್ರಧಾನಮಂತ್ರಿ ಐದಾರು ಬಾರಿ ರಾಜ್ಯದ ವಿವಿಧ ಕಡೆ ಸಂಚರಿಸಿ, ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿ ಹೋಗಿದ್ದಾರೆ. ಇತ್ತ ನಾವೇನು ಕಮ್ಮಿ ಇಲ್ಲ ಎಂದು ಕಾಂಗ್ರೆಸ್ ಮತ್ತು ಜನತಾದಳ ಕೂಡ ಶಕ್ತಿಮೀರಿ ಮತದಾರರ ಗಮನ ಸೆಳೆಯಲು ವಿವಿಧ ಬಗೆಯ ಪ್ರಚಾರಗಳಿಗೆ ಮೊರೆ ಹೋಗಿವೆ.
ಭಾಜಪಕ್ಕೆ ಸ್ವಸಾಮರ್ಥ್ಯದಿಂದ ಎಂದೂ ರಾಜ್ಯದಲ್ಲಿ ಅಧಿಕಾರ ನಡೆಸಲಾಗಿಲ್ಲ. ಹಾಗೆಯೇ ಕರ್ನಾಟಕದಾದ್ಯಂತ ವ್ಯಾಪಕವಾಗಿ ತನ್ನ ಅಸ್ತಿತ್ವವನ್ನೂ ತೋರಿಸಲು ಇಂದಿಗೂ ಸಾಧ್ಯವಾಗಿಲ್ಲ! ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆ ಪಕ್ಷ ಇನ್ನೂ ಪ್ರಬಲವಾಗಿ ಬೇರೂರಿಲ್ಲ. ಅಂತೆಯೇ ಜನತಾದಳವು ತನ್ನ ಸೀಮಿತ ವಲಯದಲ್ಲೇ ಕುಟುಂಬ- ಜಾತಿ ಪಕ್ಷವಾಗಿ ಪರಿವರ್ತಿತವಾಗಿದೆ. ಇದನ್ನು ಯಾರಾದರೂ ಶಂಕಿಸಲು ಸಾಧ್ಯವಿದೆಯೇ? ಮತ್ತೆ ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವು 1983ರಲ್ಲಿ ಮುಖ್ಯಮಂತ್ರಿ ಆಗಿದ್ದ ಆರ್.ಗುಂಡೂರಾವ್ ಅವರ ಅಧಿಕಾರದ ಅಮಲಿನ ಅಲೆಯಲ್ಲಿ ಕೊಚ್ಚಿಹೋಯಿತು. ಆನಂತರವೂ ಕಾಂಗ್ರೆಸ್ ಅಧಿಕಾರ ನಡೆಸಿತಾದರೂ ಆ ಮುನ್ನ ಇದ್ದಂತಹ ಜನಪ್ರಿಯತೆಯನ್ನು ಅದು ಉಳಿಸಿಕೊಂಡು ಬರಲು ಸಾಧ್ಯವಾಗಿಲ್ಲ. ಭಾಜಪವು ಸಂಘ ಪರಿವಾರದ ಬಿಗಿಮುಷ್ಟಿಯಿಂದ ಹೊರಬರಲಾಗದೆ, ಅದು ತಾನು ಅಪ್ಪಿಕೊಂಡಿರುವ ಹಿಂದುತ್ವ ಮತ್ತು ಬಂಡವಾಳಶಾಹಿ ಸಿದ್ಧಾಂತವನ್ನು ಅನುಸರಿಸಿ ಮೇಲ್ಜಾತಿ ಹಿಂದೂಗಳ ಹಿತವೇ ಮುಖ್ಯವೆಂದು ಭಾವಿಸಿ ಸಮಾನತೆಯ ಸಾಕಾರ ಸಿದ್ಧಾಂತದ ಕಡೆ ಅದು ತಲೆ ಹಾಕಲೊಲ್ಲದು. ಚುನಾವಣಾ ಗೆಲುವಿನ ಮಾನದಂಡಗಳಿಗೆ ಮಾತ್ರ ಅದು ಮಾನ್ಯತೆ ಕೊಡುತ್ತಾ ಬಂದಿದೆ.ಮಾತ್ರವಲ್ಲ ಅದು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಿಚ್ಛಿಸುವುದಿಲ್ಲ. ಹೀಗಾಗಿ ಚುನಾವಣಾ ಸ್ಥಾನಗಳ ಹಂಚಿಕೆಯಲ್ಲಿ ಆ ಪಕ್ಷಕ್ಕೆ ‘ಸರ್ವರಿಗೂ ಸಮಪಾಲು-ಸಮಬಾಳು’ ಎಂಬ ತತ್ವ ಗಾವುದ ಗಾವುದ ದೂರ.
ಇನ್ನು ಜನತಾದಳ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿದಂತೆ, ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅಲ್ಲೊಂದು- ಇಲ್ಲೊಂದು ಸ್ಥಾನ ಹಂಚಿಕೆ ಮಾಡಿ ಉಳಿದೆಲ್ಲಾ ಸ್ಥಾನಗಳನ್ನು ಬಹುಸಂಖ್ಯಾತ ಮೇಲ್ಜಾತಿಗಳಿಗೆ ಹಂಚಿಕೆ ಮಾಡಿ ಕೈ ತೊಳೆದುಕೊಳ್ಳುವುದು. ಇತ್ತ ಡಿ. ದೇವರಾಜ ಅರಸು ಅವರ ಹಿಡಿತದಲ್ಲಿ ಕಾಂಗ್ರೆಸ್ ಪಕ್ಷ ಇದ್ದ ಸಂದರ್ಭದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಪರ್ವಕಾಲ! ಕಿಂಚಿತ್ತಾದರೂ ಆ ವರ್ಗಗಳ ಬಗ್ಗೆ ಕಾಂಗ್ರೆಸ್ ಕಾಳಜಿ ತೋರುತ್ತಾ ಬಂದಿರುವುದನ್ನು ನಾವು ಕಾಣಬಹುದು. ಹೀಗಾಗಿ ಕಾಂಗ್ರೆಸ್ ಯಾವ ರೀತಿ ಸ್ಥಾನಗಳ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪರಿಪಾಲಿಸಿಕೊಂಡು ಬರುತ್ತಿದೆ ಎಂಬ ಸಂಕ್ಷಿಪ್ತ ರೂಪದ ಅವಲೋಕನವೇ ಈ ಬರಹದ ಉದ್ದೇಶ.
ಸ್ವತಂತ್ರ ಭಾರತದ ಮೊದಲ ಚುನಾವಣೆಯಿಂದಲೂ ಬಹುತೇಕ ಆಡಳಿತವು ಬಹುಸಂಖ್ಯಾತ ಮೇಲ್ಜಾತಿ ಹಿಂದೂಗಳ ಕೈಯಲ್ಲಿಯೇ ಇದೆ.ಅದಕ್ಕೆ ಕಾರಣ ಆಯ್ಕೆ ಆಗುತ್ತಿರುವ ಸದಸ್ಯರಲ್ಲಿ ಹೆಚ್ಚಿನವರು ಬಹುಸಂಖ್ಯಾತ ಮೇಲ್ಜಾತಿ ಹಿಂದೂಗಳೇ ಆಗಿರುತ್ತಾರೆ. ಅವರುಗಳೇ ಚುನಾವಣೆಯಲ್ಲಿ ಆಯ್ಕೆಯಾಗಲೂ ಇರುವ ಮತ್ತೊಂದು ಕಾರಣವೆಂದರೆ ಸ್ಥಾನಗಳ ಹಂಚಿಕೆಯಲ್ಲಿ ಬಹುಪಾಲು ಸ್ಥಾನಗಳನ್ನು ಅವರುಗಳಲ್ಲಿಯೆ ಪರಸ್ಪರ ಹಂಚಿಕೊಳ್ಳುವರು. ಕಾಲಕಾಲಕ್ಕೆ ಪರಿಶಿಷ್ಟ ವರ್ಗಗಳ ಸ್ಥಾನಗಳು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಾ ಹೋಗುತ್ತವೆ. ಆ ಸಂಖ್ಯಾನುಸಾರ ಆ ವರ್ಗಗಳಿಗೆ ಅಷ್ಟೂ ಸ್ಥಾನಗಳನ್ನು ಮೀಸಲಿಡಬೇಕಾಗುತ್ತದೆ.

ಭಾರತೀಯ ಧರ್ಮ ಮತ್ತು ಜಾತಿ ವ್ಯವಸ್ಥೆಯನ್ನು ಬರಹದ ಉದ್ದೇಶಕ್ಕಾಗಿ 4 ಭಾಗಗಳನ್ನಾಗಿ ಹೀಗೆ ವಿಂಗಡಿಸಲಾಗಿದೆ. 1. ಮೇಲ್ಜಾತಿ ಹಿಂದೂಗಳು, 2. ಪರಿಶಿಷ್ಟ ವರ್ಗಗಳು, 3. ಹಿಂದುಳಿದ-ಅತಿ ಹಿಂದುಳಿದ ವರ್ಗಗಳು ಮತ್ತು 4. ಧಾರ್ಮಿಕ ಅಲ್ಪಸಂಖ್ಯಾತರು. ಬ್ರಿಟಿಷ್ ಭಾರತದಲ್ಲಿ ದಶವಾರ್ಷಿಕ ಜಾತಿ- ಜನಗಣತಿಯನ್ನು ಪ್ರತೀ 10 ವರ್ಷಕ್ಕೊಮ್ಮೆ ಮಾಡಿಕೊಂಡು ಬರಲಾಗುತ್ತಿತ್ತು. ಅದು 1931ರಲ್ಲಿ ಸ್ಥಗಿತವಾಯಿತು. ಭಾರತ ಸ್ವಾತಂತ್ರ ಗಳಿಸಿದ ತರುವಾಯ ಜಾತಿ- ಜನಗಣತಿ ಪದ್ಧತಿ ಯಾರ ಊಹೆಗೂ ನಿಲುಕದ ರೀತಿಯಲ್ಲಿ ನಿಂತು ಹೋಯಿತು. ಪ್ರಸ್ತುತ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ವರ್ಗಗಳನ್ನಷ್ಟೆ ಗಣತಿ ಮಾಡಲಾಗುತ್ತಿದೆ. ಹೀಗಾಗಿ ಬೇರೆ ಎರಡು ವರ್ಗಗಳಲ್ಲಿ ಬರುವ ಜಾತಿಗಳ ನಿಖರ ಸಂಖ್ಯೆ ತಿಳಿಯುವುದೇ ಇಲ್ಲ. ಸಹಜವಾಗಿ ಬಲಾಢ್ಯ ಮೇಲ್ಜಾತಿ ಹಿಂದೂಗಳ ಹಿಡಿತದಲ್ಲಿಯೇ ಪಕ್ಷಗಳು ಸಿಕ್ಕಿಕೊಂಡಿರುವುದರಿಂದ, ಪ್ರತಿ ಸಾರ್ವತ್ರಿಕ ಚುನಾವಣೆಯಲ್ಲಿ ಬಲಿಷ್ಠ ಮೇಲ್ಜಾತಿ ಹಿಂದೂಗಳೇ ಮೇಲುಗೈ ಪಡೆದು ಸ್ಥಾನಗಳ ಹಂಚಿಕೆಯಲ್ಲಿ ಸಿಂಹ ಪಾಲನ್ನು ಪಡೆದುಕೊಳ್ಳುತ್ತಿರುವರು. ಇಂಥ ದಾರುಣ ಪ್ರಕ್ರಿಯೆಯಿಂದ ತೀರಾ ದುಸ್ಥಿತಿಗೆ ಒಳಗಾಗುವವರು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅಸಹಾಯಕ ಹಿಂದುಳಿದ -ಅತಿ ಹಿಂದುಳಿದ ವರ್ಗಗಳು ಮಾತ್ರ. ಚುನಾವಣೆಯಿಂದ ಚುನಾವಣೆಗೆ ಸಾಮಾಜಿಕ ಸುಧಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಕಾಣಬೇಕಾಗಿತ್ತು.ಆದರೆ ಅದು ಬಿಸಿಲ್ಗುದುರೆಯಾಗಿದೆ.
ಸ್ವಾತಂತ್ರಾ ನಂತರ ಸಂಸತ್ ಮತ್ತು ವಿಧಾನಸಭಾ ಕ್ಷೇತ್ರಗಳು ಕಾಲಕಾಲಕ್ಕೆ ಪುನರ್ ವಿಂಗಡಣೆಯಾಗಿವೆ. ಕಡೆಯದಾಗಿ ನಡೆದದ್ದು 2007-08ರಲ್ಲಿ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಕುಲದೀಪ್ ಸಿಂಗ್ ಅವರು ಆಯೋಗದ ಅಧ್ಯಕ್ಷರಾಗಿದ್ದರು. ಪುನರ್ ವಿಂಗಡಣೆಗೆ 2001ರ ಜನಗಣತಿಯನ್ನು ಆಧಾರವಾಗಿಟ್ಟು ಕೊಳ್ಳಲಾಗಿತ್ತು. ಅಂದಿನ 5 ಕೋಟಿ 29 ಲಕ್ಷ ಜನಸಂಖ್ಯೆಯೆ ಆಧಾರ. ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. ಅಜಮಾಷಿ 2 ಲಕ್ಷ 50 ಸಾವಿರ ಜನಸಂಖ್ಯೆಗೆ ಒಂದು ಕ್ಷೇತ್ರವೆಂದು ಪರಿಗಣಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ. ಈ ಮಾನದಂಡದಿಂದ ನಮಗೆ ಖಾತ್ರಿಯಾಗುವ ಅಂಶವೆಂದರೆ ಯಾವುದೇ ಜಾತಿ ತಾನು ಹೊಂದಿರುವ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪಕ್ಷಗಳಿಂದ ಸ್ಥಾನಗಳನ್ನು ಕೇಳುವ ನೈತಿಕ ಹಕ್ಕು ಹೊಂದಿರುತ್ತದೆ. ಉದಾ- ಬ್ರಾಹ್ಮಣರು 14 ಲಕ್ಷ (2001) ಜನಸಂಖ್ಯೆ ಹೊಂದಿರುವರಾದರೆ, ಅವರು ಪಡೆಯಲಿರುವ ಸ್ಥಾನ 5 ಅಥವಾ 6 ಆಗಿರುತ್ತದೆ. ಹಾಗೆಯೇ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸಂಖ್ಯೆ 2001ರಲ್ಲಿ 64 ಲಕ್ಷದ 63 ಸಾವಿರ. ಆ ಸಂಖ್ಯೆಗೆ ಅನುಗುಣವಾಗಿ ಅವರು ಪಡೆಯಬೇಕಾದ ಸ್ಥಾನಗಳ ಸಂಖ್ಯೆ 26. ಇದೇ ಅಳತೆಗೋಲನ್ನು ಕರ್ನಾಟಕದ ಎಲ್ಲ ಜಾತಿಗಳಿಗೂ ನಿರ್ದಾಕ್ಷಿಣ್ಯವಾಗಿ ಅನ್ವಯಿಸುವ ಅಗತ್ಯ ಇದೆ.
ಕ್ಷೇತ್ರ ವಿಂಗಡಣೆಯಾದ 2007ರಲ್ಲಿ ಇದ್ದ ವಿಧಾನಸಭಾ ಸ್ಥಾನಗಳ ಸಂಖ್ಯೆ 224. ಆ ಸಂಖ್ಯೆ ಇಂದಿಗೂ ಬದಲಾಗಿಲ್ಲ. ಆದರೆ ಜಾತಿ ಆಧಾರಿತ ಸ್ಥಾನಗಳ ಹಂಚಿಕೆಯ ಸಮಾನತೆಯ ತತ್ವ ಮಾತ್ರ ಅನುಷ್ಠಾನಕ್ಕೆ ಬಂದಿಲ್ಲ. ಕಡೆಯ ಪಕ್ಷ 2 ಲಕ್ಷ 50 ಸಾವಿರ (ಆಜುಬಾಜು) ಜನಸಂಖ್ಯೆಯನ್ನು ಹೊಂದಿರುವ ಯಾವುದೇ ಅತಿ ಹಿಂದುಳಿದ ಜಾತಿಗೆ ಒಂದು ಸ್ಥಾನವನ್ನಾದರೂ ಹಂಚಿಕೆ ಮಾಡಬೇಕಾಗುತ್ತದೆ. ಆದರೆ ಅದು ಸುತಾರಾಮ್ ಆಗುತ್ತಿಲ್ಲ. ಆದಕ್ಕೆ ಕಾರಣ ಹಕ್ಕು ಮಂಡಿಸಲು ಅಷ್ಟೊಂದು ರಾಜಕೀಯ ಪರಿವೆ ಮತ್ತು ಬೇಕಾದ ಸಕಲ ಸಂಪನ್ಮೂಲ ಅವಕ್ಕೆ ಇಲ್ಲವೇ ಇಲ್ಲ. ಹಾಗೆಯೇ ಅಂತಹವುಗಳನ್ನು ಪರಿಗಣಿಸಲು ಕಾಂಗ್ರೆಸ್ ಪಕ್ಷದ ಔದಾಸೀನ್ಯವು ಇದೆ.
ಕಾಂಗ್ರೆಸ್ ಪಕ್ಷವು ವಿವಿಧ ಪಟ್ಟುಗಳನ್ನು ಪ್ರಯೋಗಿಸಿ 6 ಮಜಲುಗಳಲ್ಲಿ ಮುಂಬರುವ ಚುನಾವಣೆಗಾಗಿ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಸಾಮಾಜಿಕ ಸಮಾನತೆಯನ್ನು ಕಾಯ್ದುಕೊಂಡಿದೆಯೇ ಎಂದು ಪರಾಮರ್ಶನ ಮಾಡುವುದು ವಿನಾಶವನ್ನೇ ಕಾಣದ ಕ್ರೂರ ಜಾತಿ ವ್ಯವಸ್ಥೆಯಲ್ಲಿ ಬಹುಮುಖ್ಯ. ಅಂತೂ ಕಾಂಗ್ರೆಸ್ ಪಕ್ಷ ಎಲ್ಲಾ 223+1 (ಮೇಲುಕೋಟೆ ಕ್ಷೇತ್ರವನ್ನು ಬೇರೊಬ್ಬರಿಗೆ ಬಿಟ್ಟು ಕೊಟ್ಟಿದೆ) ಸ್ಥಾನಗಳಿಗೂ ಟಿಕೆಟ್ ಹಂಚಿಕೆ ಮಾಡಿದೆ. ಹಂಚಿಕೆಯ ವಿವರ ಹೀಗಿದೆ: 1. ಲಿಂಗಾಯತ-48 (ಕುರುಹಿನ ಶೆಟ್ಟಿ ಲಿಂಗಾಯತದ ಒಂದು ಸ್ಥಾನ ಸೇರಿದೆ), 2. ಒಕ್ಕಲಿಗ-41, 3. ಕುರುಬ-15, 4. ಮುಸ್ಲಿಮ್-16, 5. ಬ್ರಾಹ್ಮಣ-7, 6. ಈಡಿಗ-7, 7. ಬಂಟ್ಸ್-5, 8. ಬೆಸ್ತ- 5, 9. ರೆಡ್ದಿ -5, 10. ಮರಾಠಾ-4 , 11. ಕ್ರೈಸ್ತ-3, 12. ಬಲಿಜ-2, 13.ರಜಪೂತ್ -2, 14. ಗೊಲ್ಲ-2, 15. ಜೈನ್-1, 16. ನಾಯ್ಡು-1, 17. ಕೊಡವ-1, 18. ವೈಶ್ಯ-1, 19. ಉಪ್ಪಾರ-1, 20. ಬೈರಾಗಿ-1, 21. ದೇವಾಂಗ- 1, 22. ಪ.ಜಾ.-36, 22. ಪ.ಪಂ.-(15+3)
ಶೇ.40ರಷ್ಟು ಸ್ಥಾನಗಳು ಬಹುಸಂಖ್ಯಾತ ಬಲಿಷ್ಠ ಜಾತಿಗಳೆರಡರಲ್ಲಿಯೆ ಹಂಚಿಕೆಯಾಗಿವೆ. ಸ್ಥಾನಗಳ ಹಂಚಿಕೆಯ ಪ್ರಕಾರ ಆ ಎರಡು ಜಾತಿಗಳ ಜನಸಂಖ್ಯೆ 2 ಕೋಟಿ 22 ಲಕ್ಷದ 50 ಸಾವಿರ (2001). ಮೇಲೆ ಹೇಳಿರುವ ಮಾನದಂಡದ ಸೂತ್ರಕ್ಕೆ ಅನುಗುಣವಾಗಿ ಜನಸಂಖ್ಯೆಯನ್ನು ವಾಚಕರೇ ಊಹಿಸಬಹುದು. ಹಾಗೆಯೇ, ಬಂಟರು, ರಜಪೂತ್, ರೆಡ್ಡಿ, ಬ್ರಾಹ್ಮಣರು, ಪರಿಶಿಷ್ಟ ಪಂಗಡದವರಿಗೆ ಕೊಂಚ ಹೆಚ್ಚು ಸ್ಥಾನಗಳು ಹಂಚಿಕೆಯಾಗಿವೆ. ಕುರುಬ, ಉಪ್ಪಾರ, ಬಲಿಜ ಮತ್ತು ದೇವಾಂಗರಿಗೆ ಮತ್ತೆರಡು ಸ್ಥಾನಗಳನ್ನು ಕೊಡುವ ಅವಶ್ಯಕತೆ ಇತ್ತು. ಮುಸ್ಲಿಮರಿಗಂತೂ ತೀವ್ರ ರೀತಿಯಲ್ಲಿ ಅನ್ಯಾಯವೆಸಗಲಾಗಿದೆ. ಜೈನ್, ನಾಯ್ಡು, ಕೊಡವ, ಮರಾಠಾ, ಕ್ರೈಸ್ತ ಮತ್ತು ವೈಶ್ಯರಿಗೆ ಸಮರ್ಪಕ ಸ್ಥಾನಗಳು ಹಂಚಿಕೆಯಾಗಿರುವುದು ಮೆಚ್ಚಬೇಕಾದ ಅಂಶವೇ. ಈಡಿಗರು ಮತ್ತು ಬೆಸ್ತರಿಗೆ ಸೂಕ್ತ ನ್ಯಾಯ ಒದಗಿಸಲಾಗಿದೆ. ಭೈರಾಗಿಯಂತಹ ಅತ್ಯಂತ ಹಿಂದುಳಿದ ಹಾಗೂ ಯಾರು ಊಹಿಸದಂತಹ ಜಾತಿಗೆ ಅವಕಾಶ ಕಲ್ಪಿಸಿರುವ ಅತಿ ಶ್ಲಾಘನೀಯ ಕೆಲಸವನ್ನು ಪಕ್ಷ ಮಾಡಿದೆ. ಇಂತಹದೇ ಸಮುದಾಯಗಳಾದ ಹೆಳವ, 24ಮನೆ ತೆಲುಗು ಶೆಟ್ಟಿ, ಹಾಲಕ್ಕಿ ಒಕ್ಕಲ್, ಗೊಂಧಲಿ, ಪಿಂಜಾರ ಇತ್ಯಾದಿ ಜಾತಿಗಳನ್ನು ಹುಡುಕಿ ರಾಜಕೀಯ ಸ್ಥಾನಮಾನಗಳನ್ನು ಕೊಡುವುದೇ ಸಾಮಾಜಿಕ ನ್ಯಾಯದ ತತ್ವದ ಒಂದು ಭಾಗ.
ರಜಪೂತ್, ಬಂಟ್ಸ್, ವೈಶ್ಯ, ಕೊಡವ, ರೆಡ್ಡಿ ನಾಯ್ಡು, ಕ್ಷತ್ರಿಯ ಇಂಥ ಕೆಲವು ಜಾತಿಗಳು ಅಲ್ಪಸಂಖ್ಯಾತ ಮೇಲ್ಜಾತಿಗಳೇ ವಿನಾ ಅವು ಹಿಂದುಳಿದ ವರ್ಗಗಳಲ್ಲ ಎಂಬ ಅಂಶವನ್ನು ಮನಗಾಣ ಬೇಕಾಗಿದೆ.
ವಾಸ್ತವವಾಗಿ ನೈಜ ಅರ್ಥದಲ್ಲಿ ಹಿಂದುಳಿದ- ಅತಿ ಹಿಂದುಳಿದವರಿಗೆ ಹಂಚಿಕೆಯಾಗಿರುವ ಸ್ಥಾನ ಕೇವಲ 35. ಆ ಜಾತಿಗಳ ಜನಸಂಖ್ಯಾ ಅನುಸಾರ 50 ಸ್ಥಾನಗಳನ್ನಾದರೂ ಹಂಚಿಕೆ ಮಾಡಬೇಕಾದ ಅಗತ್ಯತೆ ಇತ್ತು. ಮಡಿವಾಳ, ದೇವಾಡಿಗ, ಕುಂಬಾರ, ಸವಿತ, ತಿಗಳ, ವಿಶ್ವಕರ್ಮ, ಹೂಗಾರ, ನಾಡವರು, ಭಾವಸಾರ ಕ್ಷತ್ರಿಯ, ಕುರುಹಿನ ಶೆಟ್ಟಿ, ಗಾಣಿಗ, ಸತಾನಿ ಇನ್ನೂ ಮುಂತಾದ ಹಾಗೂ ಸಾಕಷ್ಟು ಜನಸಂಖ್ಯಾ ಬಾಹುಳ್ಯ ಹೊಂದಿರುವ ಜಾತಿಗಳನ್ನು ಗುರುತಿಸುವ ಕೆಲಸ ಆಗಬೇಕಿತ್ತು.
ನಾನೊಮ್ಮೆ ರಾಜ್ಯದ ಅತಿ ಮುಖ್ಯ ಹಿಂದುಳಿದ ಮುಖಂಡರೊಬ್ಬರನ್ನು ಭೇಟಿ ಮಾಡಿ ಹಿಂದುಳಿದ- ಅತಿ ಹಿಂದುಳಿದ ಜಾತಿಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ಸ್ಥಾನಗಳನ್ನು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡೆನು. ಅದಕ್ಕವರು, ಧನಸಂಪನ್ಮೂಲದ ಬಗ್ಗೆ ಮಾತನಾಡಿದರು. (ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರು ನೆನಪಿಗೆ ಬರುತ್ತಾರೆ) ಬಹುಸಂಖ್ಯಾತ ಬಲಿಷ್ಠ ಮೇಲ್ಜಾತಿಗಳಿಗೆ ಸೇರಿದವರಿಗೆ ಧನಸಂಪನ್ಮೂಲವನ್ನು ಒದಗಿಸುವವರು ಯಾರು ಅಥವಾ ಅದನ್ನು ಹೇಗೆ ಅವರು ಗಳಿಸಿರುವರು? ಎಂಬ ಪ್ರಶ್ನೆ ನನ್ನನ್ನು ಇನ್ನೂ ಕಾಡುತ್ತಿದೆ. ರಾಜಕೀಯ ಅವಕಾಶ ವಂಚಿತ ಜಾತಿಗಳಿಗೆ ಅದು ಹೇಗೆ ಸಾಧ್ಯ? ಈ ಪ್ರಶ್ನೆಗೆ ರಾಜಕೀಯ ಪಕ್ಷಗಳೇ ಉತ್ತರಿಸಬೇಕಾಗಿದೆ.
ಸ್ವಾತಂತ್ರ ಬಂದು 75 ವರ್ಷಗಳೇ ತುಂಬಿವೆ. 197 ಹಿಂದುಳಿದ- ಅತಿ ಹಿಂದುಳಿದ ಜಾತಿಗಳಲ್ಲಿ 22 ಜಾತಿಗಳಷ್ಟೇ ಶಾಸನ ಸಭೆಗಳಿಗೆ ಪ್ರವೇಶವನ್ನು ದಕ್ಕಿಸಿಕೊಂಡಿವೆ. ಇನ್ನೂ 175 ಜಾತಿಗಳಿಗೆ ಆ ‘ಭಾಗ್ಯ’ ದೊರಕಿಸಿಕೊಳ್ಳಲು ಇಂದಿಗೂ ಸಾಧ್ಯ ಆಗಿಲ್ಲ. ಈ ಅಲಕ್ಷಿತ ಜಾತಿಗಳು ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗದಿರುವುದಕ್ಕೆ ಯಾರನ್ನು ದೂಷಿಸೋಣ?
ಇಂದಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಹೇವರಿಕೆ ಉಂಟಾಗುತ್ತದೆ. ಹಣವಂತರಲ್ಲದವರಿಗೆ ರಾಜಕೀಯ ಪ್ರವೇಶ ಅಸಾಧ್ಯವೆನಿಸಿದರೆ, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಹೇಳಲು ಸಾಧ್ಯವೇ?
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ- ಗತಿಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದರಿಂದಲೇ ಸಾರ್ವಕಾಲಿಕ ಸತ್ಯವಾದ ಈ ನುಡಿಮುತ್ತುಗಳನ್ನು ಹೇಳಿ ಹೋಗಿದ್ದಾರೆ. ಸರ್ವ ಪ್ರಗತಿ ಕ್ಷೇತ್ರಗಳ ಬಾಗಿಲ ಬೀಗ ತೆರೆಯಲು ರಾಜಕೀಯ ಅಧಿಕಾರವು ಬೀಗದ ಎಸಳಾಗಿದೆ.

Similar News