ಮೋದಿ ಸರಕಾರವು ಪಾರದರ್ಶಕತೆ, ಪ್ರಾಮಾಣಿಕತೆ, ನ್ಯಾಯಪರತೆಗೆ ಬದ್ಧತೆ ತೋರಿಸಿಲ್ಲ: ‘ದ ಲ್ಯಾನ್ಸೆಟ್’ ಸಂಪಾದಕೀಯ

Update: 2023-05-06 15:35 GMT

ಹೊಸದಿಲ್ಲಿ, ಮೇ 6: ಪ್ರಧಾನಿ ನರೇಂದ್ರ ಮೋದಿಯ ಸರಕಾರವು ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ನ್ಯಾಯಪರತೆಗೆ ಬದ್ಧತೆ ತೋರಿಸುವಲ್ಲಿ ವಿಫಲವಾಗಿದೆ ಹಾಗೂ ಮಹತ್ವದ ಅವಕಾಶಗಳನ್ನು ಕೈಚೆಲ್ಲುವ ಅಪಾಯಕ್ಕೆ ಭಾರತವನ್ನು ಗುರಿ ಮಾಡಿದೆ ಎಂದು ವೈದ್ಯಕೀಯ ಪತ್ರಿಕೆ ‘ದ ಲ್ಯಾನ್ಸೆಟ್’ ಶನಿವಾರ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮೋದಿ ಸರಕಾರದ ಅಧಿಕೃತ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ ಎಂದು ಅದು ಹೇಳಿದೆ. ‘‘ಅಧಿಕೃತ ಸರಕಾರಿ ಅಂಕಿಸಂಖ್ಯೆಗಳ ಪ್ರಕಾರ, ಕೋವಿಡ್ನಿಂದಾಗಿ ಭಾರತದಲ್ಲಿ ಮೃತಪಟ್ಟವರ ಸಂಖ್ಯೆ 5,30,000. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2020 ಮತ್ತು 2021ರಲ್ಲಿ ಭಾರತದಲ್ಲಿ ಕೋವಿಡ್ಗೆ ಬಲಿಯಾದವರ ಸಂಖ್ಯೆ ಸುಮಾರು 47 ಲಕ್ಷ’’ ಎಂದು ಲ್ಯಾನ್ಸೆಟ್ ಹೇಳಿದೆ.

ಕಳೆದ ವರ್ಷ ಲ್ಯಾನ್ಸೆಟ್ನಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯೊಂದು, 2020 ಜನವರಿ 1 ಮತ್ತು 2021 ಡಿಸೆಂಬರ್ 31ರ ನಡುವಿನ ಅವಧಿಯಲ್ಲಿ ಕೋವಿಡ್ನಿಂದಾಗಿ 40.7 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು.

ಕೋವಿಡ್-19ಕ್ಕೆ ಸಂಬಂಧಿಸಿದ ಸಾವುಗಳನ್ನು ಕಡಿಮೆ ವರದಿ ಮಾಡಲಾಗಿದೆ ಎನ್ನುವುದನ್ನು ಕೇಂದ್ರ ಸರಕಾರ ನಿರಾಕರಿಸಿದೆ. 2021 ಜೂನ್ನಲ್ಲಿ ಆರೋಗ್ಯ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ಭಾರತದಲ್ಲಿ ಕೋವಿಡ್-19ರಿಂದ ಸಂಭವಿಸಿದ ಸಾವುಗಳ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತ ‘‘ಐದರಿಂದ ಏಳು ಪಟ್ಟು ಅಧಿಕವಾಗಿದೆ’’ ಎಂಬ ‘ದ ಎಕನಾಮಿಸ್ಟ್’ ವರದಿಯನ್ನು ತಿರಸ್ಕರಿಸಿತ್ತು.

ಶನಿವಾರದ ಲ್ಯಾನ್ಸೆಟ್ ಸಂಪಾದಕೀಯವು, ಕೋವಿಡ್ ಸಾವುಗಳಿಗೆ ಸಂಬಂಧಿಸಿದ ಅಂಕಿಸಂಖ್ಯೆಗಳ ಪ್ರಕಟನೆಯಲ್ಲಿ ಸರಕಾರ ಮಾಡಿರುವ ವಿಳಂಬ ಮತ್ತು ಸಾಂಕ್ರಾಮಿಕದ ಅವಧಿಯಲ್ಲಿನ ಟೀಕೆಗಳನ್ನು ಅದು ಸೆನ್ಸಾರ್ ಮಾಡಿರುವ ರೀತಿಯು ಅದರ ಪ್ರಾಮಾಣಿಕತೆಯನ್ನು ಶಿಥಿಲಗೊಳಿಸಿದೆ ಎಂದು ಹೇಳಿದೆ.

ಮೋದಿ ನಾಯಕತ್ವದಲ್ಲಿ, ಭಾರತದ ನಾಗರಿಕ ಸಮಾಜವು ಒತ್ತಡಕ್ಕೆ ಸಿಲುಕಿದೆ ಹಾಗೂ ‘‘ಹಿಂಸಾತ್ಮಕ ಹಿಂದೂ ರಾಷ್ಟ್ರೀಯತೆಯು ಹಿಂದೂಯೇತರ ಧ್ವನಿಗಳನ್ನು ಹತ್ತಿಕ್ಕುತ್ತಿದೆ’’ ಎಂಬುದಾಗಿಯೂ ಅದು ಅಭಿಪ್ರಾಯಪಟ್ಟಿದೆ.

Similar News