ಆಧಾರ್ - ಜಿಎಸ್ಟಿ ಹಗರಣ: ಗುಜರಾತಿನಲ್ಲಿಯೇ ಶೇ. 25ರಷ್ಟು ನಕಲಿ ಬಿಲ್ಲಿಂಗ್ ಪತ್ತೆ

Update: 2023-05-12 14:06 GMT

ಅಹ್ಮದಾಬಾದ್: ಭಾವನಗರ ನಕಲಿ ಬಿಲ್ಲಿಂಗ್ ಹಗರಣದ ತನಿಖೆಯು ಅಂದಾಜು 20,000 ಕೋ.ರೂ.ಗಳ ನಕಲಿ ಬಿಲ್ಲಿಂಗ್ ಪೈಕಿ ಕನಿಷ್ಠ ಶೇ.25ರಷ್ಟು ಗುಜರಾತಿನಲ್ಲಿಯೇ ನಡೆದಿರುವುದನ್ನು ಬಹಿರಂಗಗೊಳಿಸಿದೆ. ವಂಚಕರು ತಮ್ಮ ಹೆಸರಿನಲ್ಲಿ ಪಾನ್ ಕಾರ್ಡ್ ಮತ್ತು ಜಿಎಸ್ಟಿ ನೋಂದಣಿಯನ್ನು ಪಡೆಯಲು ಅಮಾಯಕ ವ್ಯಕ್ತಿಗಳ ಆಧಾರ್ ಮಾಹಿತಿಗಳನ್ನು ತಿರುಚಿದ್ದಕ್ಕೆ ಈ ಹಗರಣವು ಸಂಬಂಧಿಸಿದೆ ಎಂದು timesofindia ವರದಿ ಮಾಡಿದೆ.

ಗುಜರಾತವೊಂದರಲ್ಲಿಯೇ ಕನಿಷ್ಠ 5,000 ಕೋ.ರೂ.ಗಳ ನಕಲಿ ಬಿಲ್ಲಿಂಗ್ ನಡೆದಿದೆ ಎಂದು ಅಂದಾಜಿಸಲಾಗಿದ್ದು, ಇವುಗಳನ್ನು ಬಳಸಿ ನೂರಾರು ಕೋಟಿ ರೂ.ಗಳ ತೆರಿಗೆಯನ್ನು ವಂಚಿಸಲಾಗಿದೆ ಎಂದು ಬೆಳವಣಿಗೆಗಳನ್ನು ಬಲ್ಲ ಮೂಲಗಳು ತಿಳಿಸಿವೆ.

ಕಳೆದ ಫೆಬ್ರವರಿಯಲ್ಲಿ ರಾಜ್ಯ ಜಿಎಸ್ಟಿ ಅಧಿಕಾರಿಗಳು ಸೂರತ್ನಲ್ಲಿ ನಡೆಸಿದ್ದ ಪರಿಶೀಲನೆ ಸಂದರ್ಭದಲ್ಲಿ ಹಗರಣವು ಬೆಳಕಿಗೆ ಬಂದಿತ್ತು. ನಕಲಿ ಬಿಲ್ಲಿಂಗ್ನ ನಿಖರವಾದ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಗುಜರಾತ್ ಮತ್ತು ಇತರ ರಾಜ್ಯಗಳಲ್ಲಿ ಹೆಚ್ಚಿನ ಫಲಾನುಭವಿಗಳು ಪತ್ತೆಯಾಗಿರುವುದರಿಂದ ಅದು ಇನ್ನಷ್ಟು ಹೆಚ್ಚಲಿದೆ ಎಂದು ಮೂಲವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮಾಧವ ಕಾಪರ್ ಲಿಮಿಟೆಡ್ ಅನ್ನು ಒಳಗೊಂಡಿರುವ 739 ಕೋಟಿ ರೂ.ಗಳ ಇನ್ನೊಂದು ನಕಲಿ ಬಿಲ್ಲಿಂಗ್ ಹಗರಣದ ಕಿಂಗ್ ಪಿನ್ ಎನ್ನಲಾಗಿರುವ ಮುಹಮ್ಮದ್ ಟಾಟಾರನ್ನು ಅಹ್ಮದಾಬಾದ್ ನ ಸಾಬರಮತಿ ಸೆಂಟ್ರಲ್ ಜೈಲಿನಿಂದ ಭಾವನಗರಕ್ಕೆ ಸ್ಥಳಾಂತರಿಸಲಾಗಿದ್ದು,ಆಧಾರ್-ಜಿಎಸ್ಟಿ ನಕಲಿ ಬಿಲ್ಲಿಂಗ್ ಹಗರಣದಲ್ಲಿ ಅವರ ಪಾತ್ರದ ಕುರಿತು ತನಿಖೆ ನಡೆಯಲಿದೆ. ಇದು,ರಾಜ್ಯ ಮತ್ತು ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರಮುಖ ನಕಲಿ ಬಿಲ್ಲಿಂಗ್ ಹಗರಣಗಳ ಕೇಂದ್ರಬಿಂದು ಭಾವನಗರವಾಗಿದೆ ಎಂಬ ಹಿರಿಯ ರಾಜ್ಯ ಜಿಎಸ್ಟಿ ಅಧಿಕಾರಿಗಳ ಪ್ರತಿಪಾದನೆಗೆ ಪುಷ್ಟಿ ನೀಡಿದೆ.

ಹಗರಣದ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡವು ಇತ್ತೀಚಿಗೆ ಸಲ್ಲಿಸಿರುವ ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ 461 ಬೋಗಸ್ ಕಂಪನಿಗಳನ್ನು ಹೆಸರಿಸಲಾಗಿದೆ. ಈ ಪೈಕಿ 236 ಕಂಪನಿಗಳ ತನಿಖೆಯನ್ನು ನಡೆಸಲಾಗಿದೆ. ಆದಾಗ್ಯೂ ವಾಸ್ತವದಲ್ಲಿ ಇಂತಹ ಬೋಗಸ್ ಕಂಪನಿಗಳು ಸಾವಿರಾರು ಸಂಖ್ಯೆಯಲ್ಲಿವೆ ಎಂದು ಮೂಲಗಳು ಹೇಳಿವೆ.

ರಾಜ್ಯ ಜಿಎಸ್ಟಿ ಅಧಿಕಾರಿಗಳು ಆಧಾರ್ ಕೇಂದ್ರಗಳ ಮೇಲೆ ದಾಳಿಗಳನ್ನು ನಡೆಸಿದ ಸಂದರ್ಭದಲ್ಲಿ ಸುಮಾರು 2,800 ಆಧಾರ್ ಕಾರ್ಡ್ಗಳೊಂದಿಗೆ ಜೋಡಣೆಗೊಂಡಿದ್ದ ಮೊಬೈಲ್ ಸಂಖ್ಯೆಗಳನ್ನು ಬದಲಿಸಿದ್ದು ಬೆಳಕಿಗೆ ಬಂದಿತ್ತು.

ತನಿಖಾ ಏಜೆನ್ಸಿಗಳಲ್ಲಿಯ ಮೂಲಗಳ ಪ್ರಕಾರ,ಇದು ದೇಶದಲ್ಲಿ ಅತ್ಯಂತ ಬೃಹತ್ ನಕಲಿ ಬಿಲ್ಲಿಂಗ್ ಹಗರಣಗಳಲ್ಲಿ ಒಂದಾಗಿದೆ ಮತ್ತು ಮಹಾರಾಷ್ಟ್ರ,ಮಧ್ಯಪ್ರದೇಶ, ದಿಲ್ಲಿ,ಉತ್ತರ ಪ್ರದೇಶದಂತಹ ಹಲವಾರು ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ನಡೆದಿರುವ ತೆರಿಗೆ ವಂಚನೆಗಳೊಂದಿಗೆ ತಳುಕು ಹಾಕಿಕೊಂಡಿದೆ.

ವಂಚನೆಯ ಮೂಲಕ ಪಡೆದಿರುವ ಜಿಎಸ್ಟಿ ನೋಂದಣಿಗಳ ಕುರಿತು ತನಿಖೆಯನ್ನು ನಡೆಸುವಂತೆ ಹಾಗೂ ನಕಲಿ ಬಿಲ್ಲಿಂಗ್ ಮತ್ತು ತೆರಿಗೆ ವಂಚನೆಯನ್ನು ಪತ್ತೆ ಹಚ್ಚುವಂತೆ ರಾಜ್ಯ ಜಿಎಸ್ಟಿ ಇಲಾಖೆಯು ಈಗಾಗಲೇ ಇತರ ರಾಜ್ಯಗಳ ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಕನಿಷ್ಠ 24 ಜನರನ್ನು ಬಂಧಿಸಲಾಗಿದೆ.

Similar News