ಒಡಿಶಾ ಮತ್ತು ಉತ್ತರಪ್ರದೇಶ ಉಪಚುನಾವಣೆ ಫಲಿತಾಂಶ: ಬಿಜೆಡಿ, ಅಪ್ನಾದಲ್‌ ಅಭ್ಯರ್ಥಿಗಳ ಗೆಲುವು

Update: 2023-05-13 17:57 GMT

ಹೊಸದಿಲ್ಲಿ, ಮೇ 13: ಒಡಿಶಾದ ಝಾರಸುಗುಡಾ ಮತ್ತು ಉತ್ತರ ಪ್ರದೇಶದ ಸುವಾರ್ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಅನುಕ್ರಮವಾಗಿ ಬಿಜೆಡಿ ಮತ್ತು ಅಪ್ನಾ ದಲ್ (ಸೋನೆಲಾಲ್) ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ನಿರೀಕ್ಷೆಯಂತೆಯೇ ಒಡಿಶಾದ ಆಡಳಿತಾರೂಢ ಬಿಜೆಡಿಯು ಝಾರಸುಗುಡಾ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದೆ. ಪಕ್ಷದ ಅಭ್ಯರ್ಥಿ, ಹತ ಮಾಜಿ ಸಚಿವ ನಬಕಿಶೋರ ದಾಸ್ ಅವರ ಪುತ್ರಿ ದೀಪಾಲಿ ದಾಸ್ ಅವರು 1,07,198 ಮತಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಅವರು 58,477 ಮತಗಳನ್ನು ಗಳಿಸಿರುವ ಬಿಜೆಪಿ ಅಭ್ಯರ್ಥಿ ತಂಕಧರ ತ್ರಿಪಾಠಿಯವರನ್ನು 48,721 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕೇವಲ 4,496 ಮತಗಳನ್ನು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ತರುಣ ಪಾಂಡೆ ಠೇವಣಿಯನ್ನು ಕಳೆದುಕೊಂಡಿದ್ದಾರೆ.

ಅತ್ತ ಉ.ಪ್ರದೇಶದ ರಾಮಪುರ ಜಿಲ್ಲೆಯ ಸುವಾರ್ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷ ಅಪ್ನಾ ದಲ್(ಸೋನೆಲಾಲ್)ನ ಶಫೀಕ್ ಅಹ್ಮದ್ ಅನ್ಸಾರಿಯವರು ಎಸ್ಪಿ ಅಭ್ಯರ್ಥಿ ಅನುರಾಧಾ ಚೌಹಾಣರನ್ನು 8,724 ಮತಗಳ ಅಂತರದಿಂದ ಪ
ರಾಭವಗೊಳಿಸಿದ್ದಾರೆ. ಅನ್ಸಾರಿಯವರಿಗೆ 68,630 ಮತಗಳು ಬಿದ್ದರೆ ಸಮೀಪದ ಪ್ರತಿಸ್ಪರ್ಧಿ ಚೌಹಾಣ 59,906 ಮತಗಳಿಗೆ ತೃಪ್ತರಾಗಿದ್ದಾರೆ. ಬಿಎಸ್ಪಿ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.

15 ವರ್ಷಗಳಷ್ಟು ಹಳೆಯ ಪ್ರಕರಣವೊಂದರಲ್ಲಿ ಎರಡು ವರ್ಷಗಳ ಜೈಲುಶಿಕ್ಷೆಗೊಳಗಾದ ಬಳಿಕ ಎಸ್ಪಿ ನಾಯಕ ಅಝಂ ಖಾನ್ ಅವರ ಪುತ್ರ ಅಬ್ದುಲ್ಲಾ ಅಝಂ ಖಾನ್ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರಿಂದ ಸುವಾರ್ ಕ್ಷೇತ್ರವು ತೆರವುಗೊಂಡಿತ್ತು.

Similar News