ದೇಶಭಕ್ತನಾಗಿರುವುದಕ್ಕೆ ನೀಡಿದ ಉಡುಗೊರೆ: ಸಿಬಿಐ ದಾಳಿ ಕುರಿತು ಎನ್‌ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ

Update: 2023-05-14 16:03 GMT

ಹೊಸದಿಲ್ಲಿ, ಮೇ 14: ತನ್ನ ಮನೆಗೆ ಸಿಬಿಐ ನಡೆಸಿದ ದಾಳಿ ದೇಶಭಕ್ತನಾಗಿರುವುದಕ್ಕೆ ನೀಡಿದ ಉಡುಗೊರೆ ಎಂದು ಮಾದಕ ದ್ರವ್ಯ ನಿಯಂತ್ರಣ ಬ್ಯುರೊ (NCB)ದ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಪ್ರತಿಪಾದಿಸಿದ್ದಾರೆ. ಸಮೀರ್ ವಾಂಖೆಡೆ ಅವರ ಮನೆ ಮೇಲೆ ರವಿವಾರ ಬೆಳಗ್ಗೆ ಸಿಬಿಐ ದಾಳಿ ನಡೆಸಿತ್ತು. 

ಮುಂಬೈ ಕಡಲ ತೀರದಲ್ಲಿ ನಿಂತಿದ್ದ ಕಾರ್ಡೆಲಿಯಾ ಪ್ರಯಾಣಿಕರ ಹಡಗಿನಲ್ಲಿ ಮಾದಕ ದ್ರವ್ಯ ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 25 ಕೋ.ರೂ. ಲಂಚಕ್ಕೆ ಬೇಡಿಕೆ ಇರಿಸಿದ ಆರೋಪಕ್ಕೆ ಮಾದಕ ದ್ರವ್ಯ ನಿಯಂತ್ರಣ ಬ್ಯುರೊದ ಮಾಜಿ ವಲಯ ನಿರ್ದೇಶಕ ವಾಂಖೆಡೆ ಒಳಗಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಾರುಕ್‌ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. 

ಆರ್ಯನ್ ಖಾನ್ ವಿರುದ್ಧ ಆರೋಪ ರೂಪಿಸದೇ ಇರಲು ವಾಂಖೆಡೆ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ಕೆಲವು ಮಾಧ್ಯಮಗಳು ಪ್ರತಿಪಾದಿಸಿದ್ದವು. ಇನ್ನು ಕೆಲವು ಮಾಧ್ಯಮಗಳು ವಾಂಖೆಡೆ ಕಾರ್ಡೆಲಿಯಾ ಹಡಗಿನ ಮಾಲಕರಲ್ಲಿ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ವರದಿ ಮಾಡಿವೆ. 
‘‘ನಿನ್ನೆ ನನ್ನ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿರುವುದು ಹಾಗೂ ನನ್ನ ಪತ್ನಿ ಮಕ್ಕಳ ಎದುರೇ 12 ಗಂಟೆಗಳಿಗೂ ಅಧಿಕ ಕಾಲ ಶೋಧ ನಡೆಸಿರುವುದು ದೇಶಭಕ್ತನಾಗಿರುವುದಕ್ಕೆ ನನಗೆ ದೊರಕಿದ ಉಡುಗೊರೆ. ಅಧಿಕಾರಿಗಳಿಗೆ 23 ಸಾವಿರ ರೂ. ನಗದು ಹಾಗೂ ನಾಲ್ಕು ಆಸ್ತಿ ಪತ್ರ ದೊರೆಯಿತು. ಈ ಸೊತ್ತುಗಳು ನಾನು ಸೇವೆಗೆ ಸೇರುವ ಮೊದಲೇ ಇದ್ದುದು’’ ಎಂದು ವಾಂಖೆಡೆ ಹೇಳಿದ್ದಾರೆ.

Similar News