ವಾಘಶೀರ್ ಜಲಾಂತರ್ಗಾಮಿಯ ಪ್ರಾಯೋಗಿಕ ಕಡಲಯಾನ ಆರಂಭಿಸಿದ ಭಾರತೀಯ ನೌಕಾಪಡೆ

ಕಲ್ವರಿ ವರ್ಗದ ಆರನೇ ಮತ್ತು ಅಂತಿಮ ಆವೃತ್ತಿ

Update: 2023-05-19 16:44 GMT

ಹೊಸದಿಲ್ಲಿ,ಮೇ 19: ಭಾರತೀಯ ನೌಕಾಪಡೆಯು ಕಲ್ವರಿ ವರ್ಗದ ಆರನೇ ಮತ್ತು ಅಂತಿಮ ಆವೃತ್ತಿಯಾಗಿರುವ ವಾಘಶೀರ್ ಜಲಾಂತರ್ಗಾಮಿ ನೌಕೆಯ ಪ್ರಾಯೋಗಿಕ ಕಡಲಯಾನವನ್ನು ಮೇ 18ರಂದು ಆರಂಭಿಸಿದೆ. ಈ ಜಲಾಂತರ್ಗಾಮಿಯು ಮುಂದಿನ ವರ್ಷದ ಆರಂಭದಲ್ಲಿ ನೌಕಾಪಡೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.

ಪ್ರಾಜೆಕ್ಟ್-75ರಡಿ ನಿರ್ಮಾಣಗೊಂಡಿರುವ ವಾಘಶೀರ್ ಜಲಾಂತರ್ಗಾಮಿ ನೌಕೆಯು ಚೀನಾ ಹಿಂದು ಮಹಾಸಾಗರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಸಜ್ಜಾಗಿದೆ.

ಜಲಾಂತರ್ಗಾಮಿ ನೌಕೆಯನ್ನು ಕಳೆದ ವರ್ಷದ ಎಪ್ರಿಲ್ನಲ್ಲಿ ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್)ನ ಕನ್ಹೋಜಿ ಆಂಗ್ರೆ ವೆಟ್ ಬೇಸಿನ್ನಿಂದ ಸಮುದ್ರಕ್ಕೆ ಇಳಿಸಲಾಗಿತ್ತು. ಭಾರತೀಯ ನೌಕಾಪಡೆಯ ಹಿತ್ತಿಲು ಎಂದು ಪರಿಗಣಿಸಲಾಗಿರುವ ಹಿಂದು ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಚಟುವಟಿಕೆಗಳಿಂದಾಗಿ ಕಳವಳಗಳ ಹಿನ್ನೆಲೆಯಲ್ಲಿ ಭಾರತವು ಈ ಪ್ರದೇಶವನ್ನು ಕೇಂದ್ರೀಕರಿಸುವುದರೊಂದಿಗೆ ತನ್ನ ಕಡಲ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅಧಿಕ ಗಮನವನ್ನು ಹರಿಸಿದೆ.

ಪ್ರಾಜೆಕ್ಟ್-75 ಆರು ಜಲಾಂತರ್ಗಾಮಿ ನೌಕೆಗಳ ಸ್ವದೇಶಿ ನಿರ್ಮಾಣವನ್ನು ಒಳಗೊಂಡಿದೆ.
 ಜಲಾಂತರ್ಗಮಿ ನೌಕೆಗಳನ್ನು ಫ್ರಾನ್ಸ್ ನ  ನೇವಲ್ ಗ್ರೂಪ್ ನ ಸಹಭಾಗಿತ್ವದೊಂದಿಗೆ ಮುಂಬೈನ ಮಜಗಾಂವ್ ಡಾಕ್ನಲ್ಲಿ ನಿರ್ಮಿಸಲಾಗುತ್ತಿದ್ದು,ಕಲ್ವರಿ ವರ್ಗದ ಐದು ಜಲಾಂತರ್ಗಾಮಿಗಳು ಈಗಾಗಲೇ ಭಾರತೀಯ ನೌಕಾಪಡೆಗೆ ನಿಯೋಜನೆಗೊಂಡಿವೆ.

ಪ್ರಾಜೆಕ್ಟ್-75ರಡಿ 24 ತಿಂಗಳುಗಳಲ್ಲಿ ಮೂರು ಜಲಾಂತರ್ಗಾಮಿ ನೌಕೆಗಳನ್ನು ಎಂಡಿಎಲ್ ವಿತರಿಸಿದೆ ಮತ್ತು ಆರನೇ ಜಲಾಂತರ್ಗಾಮಿ ನೌಕೆಯ ಪ್ರಾಯೋಗಿಕ ಕಡಲ ಯಾನ ಆರಂಭಗೊಂಡಿರುವುದು ಮಹತ್ವದ ಮೈಲಿಗಲ್ಲಾಗಿದೆ. ಇದು ‘ಆತ್ಮ ನಿರ್ಭರ ಭಾರತ ’ಕ್ಕೆ ಹೆಚ್ಚಿನ ಉತ್ತೇಜನವನ್ನು ಸೂಚಿಸುತ್ತಿದೆ ಎಂದು ಭಾರತೀಯ ನೌಕಾಪಡೆಯು ಹೇಳಿಕೆಯಲ್ಲಿ ತಿಳಿಸಿದೆ.

ಜಲಾಂತರ್ಗಾಮಿ ನೌಕೆಯು ಈಗ ಸಮುದ್ರದಲ್ಲಿ ತನ್ನ ಎಲ್ಲ ವ್ಯವಸ್ಥೆಗಳ ತೀವ್ರ ಪ್ರಯೋಗಗಳಿಗೆ ಒಳಪಡಲಿದೆ,ಇವುಗಳಲ್ಲಿ ಪ್ರೊಪಲ್ಶನ್ ಸಿಸ್ಟಮ್ ಗಳು,ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು ಒಳಗೊಂಡಿವೆ ಎಂದು ಅದು ಹೇಳಿದೆ.

Similar News