ಎಡ ಪ್ರಜಾಸತ್ತಾತ್ಮಕ ರಂಗಕ್ಕೆ ಎರಡನೆ ವಾರ್ಷಿಕೋತ್ಸವ: 'ರಿಯಲ್ ಕೇರಳ ಸ್ಟೋರಿ' ಜಾಹೀರಾತು ಬಿಡುಗಡೆ

Update: 2023-05-20 09:49 GMT

ತಿರುವನಂತಪುರಂ: ಇಂದು ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಎಡ ಪ್ರಜಾಸತ್ತಾತ್ಮಕ ರಂಗವು, ವಿವಾದಾತ್ಮಕ 'ದಿ ಕೇರಳ ಸ್ಟೋರಿ'ಯ ಶೀರ್ಷಿಕೆಯನ್ನು ನಕಲು ಮಾಡಿ, ತನ್ನ ಆಡಳಿತದಲ್ಲಿ ರಾಜ್ಯವು ಸಾಮಾಜಿಕ ಸೌಹಾರ್ದತೆ ಹಾಗೂ ಪ್ರಗತಿಪರ ಮೌಲ್ಯಗಳಿಂದ 'ರಿಯಲ್ ಕೇರಳ ಸ್ಟೋರಿ'ಯ ಸಂಭ್ರಮಾಚರಣೆ ಮಾಡುತ್ತಿದೆ ಎಂದು ಜಾಹೀರಾತು ಪ್ರಕಟಿಸಿದೆ. ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಈ ಕುರಿತ ಜಾಹೀರಾತುಗಳನ್ನು ಲಗತ್ತಿಸಿ ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ತಮ್ಮ ಸರ್ಕಾರದ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ, ಎಲ್ಲರನ್ನೂ ಸಬಲೀಕರಣಗೊಳಿಸುವ ಸರ್ವಾಂಗೀಣ ಪ್ರಗತಿಯತ್ತ ದಾಪುಗಾಲು ಹಾಕಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

"ಕೇರಳ ಸರ್ಕಾರದ ಎರಡನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾವು #RealKeralaStory ಸಂಭ್ರಮಾಚರಣೆ ನಡೆಸುತ್ತಿದ್ದು, ಇಲ್ಲಿ ಕನಸುಗಳು ಪ್ರವರ್ಧಮಾನಕ್ಕೆ ಬರುತ್ತಿವೆ, ಮಾನವೀಯತೆ ವೃದ್ಧಿಸುತ್ತಿದೆ" ಎಂದು ಪಿಣರಾಯ್ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ದೇಶಾದ್ಯಂತ ಬಿಡುಗಡೆಯಾಗಿದ್ದ 'ದಿ ಕೇರಳ ಸ್ಟೋರಿ' ಹಿಂದಿ ಸಿನಿಮಾವು ಕೇರಳವನ್ನು ಕೆಟ್ಟದಾಗಿ ಚಿತ್ರಿಸಿದೆ ಎಂಬ ಆರೋಪಕ್ಕೆ ಗುರಿಯಾಗಿತ್ತು.

"ದಿ ರಿಯಲ್ ಸ್ಟೋರಿ" ಜಾಹೀರಾತಿನಲ್ಲಿ, "ಕೇರಳವು ಭಾರತದ ಮುಕುಟ ಮಣಿ ಹಾಗೂ ಪ್ರಗತಿಪರ ಮಾದರಿಯ ಎಚ್ಚರಿಕೆಯ ಬೆಳಕು" ಎಂದು ಕೇರಳ ಸರ್ಕಾರ ಬಣ್ಣಿಸಿದೆ.

ಈ ಜಾಹೀರಾತಿನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್‌ರೊಂದಿಗೆ ರೈತರು, ಆರೋಗ್ಯಸೇವಾ ಕಾರ್ಯಕರ್ತರು ಹಾಗೂ ಲೈಂಗಿಕ ಅಲ್ಪಸಂಖ್ಯಾತರನ್ನೊಳಗೊಂಡಂತೆ ಸಮಾಜದ ವಿವಿಧ ವರ್ಗದ ಜನರನ್ನು ಪ್ರತಿನಿಧಿಸುವವರ ಭಾವಚಿತ್ರಗಳನ್ನು ಮುದ್ರಿಸಲಾಗಿದೆ.

Similar News