ಜಾರ್ಖಂಡ್‌ನ ಶೇ.51ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ‘ಏಕೋಪಾಧ್ಯಾಯ’!
ರಾಂಚಿ,ಮೇ 26: ಜಾರ್ಖಂಡ್‌ನ ಗಿರಿಧ್ ಜಿಲ್ಲೆಯ ಕೊಡೆಯ್ ದಿಹ್‌ನಲ್ಲಿರುವ ಪ್ರಾಥಮಿಕ ಶಾಲೆಯ್ಲ 78 ವಿದ್ಯಾರ್ಥಿಗಳಿಗೆ ಕೇವಲ ಒಬ್ಬನೇ ಒಬ್ಬ ಶಿಕ್ಷಕನಿದ್ದಾನೆ. ಆತ ಈ ಶಾಲಾಮಕ್ಕಳನ್ನು ಎರಡು ಶಾಲಾಕೊಠಡಿಗಳಲ್ಲಿ ವಿಭಜಿಸುವ ಮೂಲಕ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಾನೆ. ಆತ ಶಾಲೆಯ ಆಡಳಿತಾತ್ಮಕ ಕರ್ತವ್ಯಗಳಲ್ಲಿ ವ್ಯತ್ಯಸ್ತನಾಗಿರುವಾಗ ಪಾಠ ಮಾಡಲು ಸಾಧ್ಯವಿಲ್ಲದಿರುವುದರಿಂದ ಶಾಲಾ ಮಕ್ಕಳು ಸುಮ್ಮನೆ ಶಾಲಾ ಆವರಣದಲ್ಲಿ ಅಡ್ಡಾಡುತ್ತಿರುತ್ತಾರೆ. ಆತ ಗೈರುಹಾಜರಿದ್ದಲ್ಲಿ ಇಡೀ ಶಾಲೆಯೇ ಕ್ಯಾಪ್ಟನ್ ಇಲ್ಲದ ಹಡಗಿನಂತಾಗುತ್ತದೆ. ಕೊಡೆಯ್ ದಿಹ್ ಶಾಲೆಯ ಈ ಪರಿಸ್ಥಿತಿಯು ಜಾರ್ಖಂಡ್‌ನ ಇಡೀ ಪ್ರಾಥಮಿಕ ಶಾಲಾ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ದಿ ಹಿಂದೂ ಆನ್‌ಲೈನ್ ವರದಿ ಮಾಡಿದೆ.
ಜಾರ್ಖಂಡ್‌ನಲ್ಲಿ ಕೊಡೆಯ್ ದಿಹ್‌ನಲ್ಲಿರುವಂತೆ ಏಕೋಪಾಧ್ಯಾಯ ಶಾಲೆಗಳು ಹಲವಾರಿವೆ. ಇಡೀ ಜಾರ್ಖಂಡ್ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಮೂರನೇ ಒಂದರಷ್ಟು ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ ಎಂದು ಏಕೀಕೃತ ಜಿಲ್ಲಾ ಶಿಕ್ಷಣ ಮಾಹಿತಿ ವ್ಯವಸ್ಥೆ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ದೃಢಪಡಿಸಿರುವುದಾಗಿ ದಿ ಹಿಂದೂ ’ ವರದಿ ಮಾಡಿದೆ.
ಜಾರ್ಖಂಡ್‌ನ 16 ಜಿಲ್ಲೆಗಳಿಂದ ಯಾದೃಚ್ಛಿಕವಾಗಿ ಆಯ್ಕೆ ಮಾಡಿದ 138 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಮೇಲೆ ನಡೆಸಿದ ಸಮೀಕ್ಷಾ ವರದಿಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಜಾರ್ಖಂಡ್‌ನಲ್ಲಿ ಸರಾಸರಿ 51 ಏಕಶಿಕ್ಷಕ ಪ್ರಾಥಮಿಕ ಶಾಲೆಗಳಿವೆ. ಅವರಲ್ಲಿ ಬಹುತೇಕ ವಿದ್ಯಾರ್ಥಿಗಳು ದಲಿತ ಹಾಗೂ ಆದಿವಾಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಜಾರ್ಖಂಡ್ ಸೇರಿದಂತೆ ಭಾರತಾದ್ಯಂತ ಶೇ.15ರಷ್ಟು ಪ್ರಾಥಮಿಕ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ ಎಂದು ವರದಿ ಹೇಳಿದೆ.
ಅಂತರ್ಜಾಲತಾಣದಲ್ಲಿ ಯುಡಿಐಎಸ್‌ಇ ದತ್ತಾಂಶವು ಸುಲಭವಾಗಿ ಲಭ್ಯವಿರುವ ಹೊರತಾಗಿಯೂ ಜಾರ್ಖಂಡ್ ರಾಜ್ಯದಲ್ಲಿನ ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಶೋಚನೀಯ ಪರಿಸ್ಥಿತಿ ಈವರೆಗೆ ರಾಷ್ಟ್ರಮಟ್ಟದಲ್ಲಿ ಗಮನಕ್ಕೆ ಬಂದಿಲ್ಲವೆಂದು ವರದಿ ತಿಳಿಸಿದೆ.
ಯಾವುದೇ ಪ್ರಾಥಮಿಕ ಶಾಲೆಯಲ್ಲಿ ಕನಿಷ್ಠ ಇಬ್ಬರು ಶಿಕ್ಷಕರಿರಬೇಕೆಂದು ಶಿಕ್ಷಣದ ಹಕ್ಕು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದಾಗ್ಯೂ ಶಿಕ್ಷಣದ ಹಕ್ಕು ಕಾಯ್ದೆ ಜಾರಿಗೆ ಬಂದು 14 ವರ್ಷಗಳಾದ ಬಳಿಕವೂ ದೇಶದ ಶೇ.15ರಷ್ಟು ಪ್ರಾಥಮಿಕ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿಯೇ ಮುಂದುವರಿದಿವೆ ಎಂದು ವರದಿ ಹೇಳಿದೆ.