ಐಪಿಎಲ್: ಶುಭಮನ್ ಗಿಲ್ ಭರ್ಜರಿ ಶತಕ; ಮುಂಬೈಗೆ 234 ರನ್ ಗುರಿ ನೀಡಿದ ಗುಜರಾತ್ ಟೈಟಾನ್ಸ್
ಅಹಮದಾಬಾದ್, ಮೇ 26: ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಸೊಗಸಾದ ಶತಕ(129 ರನ್, 60 ಎಸೆತ, 7 ಬೌಂಡರಿ,10 ಸಿಕ್ಸರ್)ಹಾಗೂ ಸಾಯಿ ಸುದರ್ಶನ್(43 ರನ್, 31 ಎಸೆತ, 5 ಬೌಂಡರಿ, 1 ಸಿಕ್ಸರ್) ಸಾಹಸದ ನೆರವಿನಿಂದ ಆತಿಥೇಯ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದ ಗೆಲುವಿಗೆ ಮುಂಬೈ ಇಂಡಿಯನ್ಸ್‌ಗೆ 234 ಗುರಿ ನೀಡಿತು.
ಶನಿವಾರ ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಜಯಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಬ್ಯಾಟಿಂಗ್‌ಗೆ ಅಹ್ವಾನಿಸಿದರು. ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 233 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಗಿಲ್ ಕೇವಲ 49 ಎಸೆತಗಳಲ್ಲಿ ಈ ಋತುವಿನ 4ನೇ ಇನಿಂಗ್ಸ್‌ನಲ್ಲಿ 3ನೇ ಶತಕ ಸಿಡಿಸಿದರು. ಈ ವರ್ಷದ ಐಪಿಎಲ್‌ನಲ್ಲಿ ಒಟ್ಟು 800ಕ್ಕೂ ಅಧಿಕ ರನ್ ಕಲೆ ಹಾಕಿದರು.
ವೃದ್ದಿಮಾನ್ ಸಹಾ(18 ರನ್, 16 ಎಸೆತ)ಜೊತೆ ಇನಿಂಗ್ಸ್ ಆರಂಭಿಸಿದ ಗಿಲ್ ಮೊದಲ ವಿಕೆಟ್‌ಗೆ 54 ರನ್ ಸೇರಿಸಿದರು. ಸಹಾ ಔಟಾದ ನಂತರ ಸುದರ್ಶನ್ ಜೊತೆ ಕೈಜೋಡಿಸಿದ ಗಿಲ್ 2ನೇ ವಿಕೆಟ್‌ಗೆ 138 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು.
ನಾಯಕ ಹಾರ್ದಿಕ್ ಪಾಂಡ್ಯ ಔಟಾಗದೆ 28 ರನ್(13 ಎಸೆತ)ಗಳಿಸಿದರು.
ಆರು ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಗುಜರಾತ್‌ಗೆ ಕಡಿವಾಣ ಹಾಕಲು ವಿಫಲವಾದ ಮುಂಬೈ ತಂಡದ ಪರ ಪಿಯೂಷ್ ಚಾವ್ಲಾ(1-45) ಹಾಗೂ ಆಕಾಶ್ ಮಧ್ವಾಲ್(1-52) ತಲಾ ಒಂದು ವಿಕೆಟ್ ಪಡೆದರು.