ಹೊಸ ಸಂಸತ್‌ ಭವನ ಉದ್ಘಾಟನೆಗೆ ರಾಷ್ಟ್ರಪತಿ ಮುರ್ಮು ಏಕೆ ಬರಬಾರದು? ಪ್ರಧಾನಿಗೆ ಕಮಲ್‌ ಹಾಸನ್‌ ಪ್ರಶ್ನೆ

Update: 2023-05-27 16:38 GMT

ಚೆನ್ನೈ: ನೂತನ ಸಂಸತ್‌ ಭವನ ನಿರ್ಮಾಣದ ಕುರಿತು ಹಲವಾರು ಪರ ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ, "ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಏಕೆ ಆಗಮಿಸಬಾರದು?" ಎಂದು ನಟ ಹಾಗೂ ರಾಜಕಾರಣಿ ಕಮಲ್‌ ಹಾಸನ್‌ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ. 

ನೂತನ ಸಂಸತ್‌ ಭವನವು ರವಿವಾರದಂದು ಉದ್ಘಾಟನೆಗೊಳ್ಳಲಿದ್ದು, ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಆಹ್ವಾನಿಸದಿರುವುದಕ್ಕೆ ವಿರೋಧ ಪಕ್ಷದ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಮಾಡುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿವೆ. 

ಈ ಕಾರ್ಯಕ್ರಮವನ್ನು ವಿರೋಧ ಪಕ್ಷಗಳಾದ ಆಮ್‌ ಆದ್ಮಿ, ಕಾಂಗ್ರೆಸ್‌, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ 19 ಪಕ್ಷಗಳು ಬಹಿಷ್ಕರಿಸುವುದಾಗಿ ಹೇಳಿದೆ. ಈ ಕುರಿತು ಚೆನ್ನೈನಲ್ಲಿ ಮಾತನಾಡಿದ ನಟ ಕಮಲ್‌ ಹಾಸನ್‌, "ನಾವು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಉದ್ಘಾಟನ ಸಮಾರಂಭವನ್ನು ವಿಶೇಷ ಸಂದರ್ಭವಾಗಿಸಬೇಕು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ದೂರವಿಡಬೇಕು" ಎಂದರು. ಇದೇವೇಳೆ, "ಈ ಸಾಧನೆಗಾಗಿ ನಾನು ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ ಆದರೆ, ಗೌರವಾನ್ವಿತ ರಾಷ್ಟ್ರಪತಿಗೆ ಆಹ್ವಾನ ನೀಡದಿರುವ ಬಗ್ಗೆ ಅಸಮಾಧಾನವಿದೆ. ಅವರೇಕೆ ಕಾರ್ಯಕ್ರಮಕ್ಕೆ ಹಾಜರಾಗಬಾರದು? ಎಂದು ನಾನು ಪ್ರಧಾನಿಯನ್ನು ಪ್ರಶ್ನಿಸುತ್ತೇನೆ" ಎಂದು ಹೇಳಿದರು.

Similar News