ಬರಲಿವೆ ಸ್ವಯಂ ದುರಸ್ತಿಯಾಗಲಿರುವ ಬಟ್ಟೆಗಳು

Update: 2023-05-27 18:36 GMT

ಸ್ವಯಂ ದುರಸ್ತಿ ಹೊಂದುವ ಬಟ್ಟೆಯು ವೈಜ್ಞಾನಿಕ ಕಾದಂಬರಿಯಂತೆ ದೂರದ ಕಲ್ಪನೆ ಎನಿಸಬಹುದು. ಯು.ಕೆ.ನ ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ ಮತ್ತು ನಾರ್ತಂಬ್ರಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡ ಸ್ವಯಂ ದುರಸ್ತಿಯಾಗುವ ಬಟ್ಟೆಯ ಕನಸನ್ನು ನನಸು ಮಾಡಿದ್ದಾರೆ. ಅನೇಕ ಶಿಲೀಂಧ್ರಗಳಿಂದ ಉತ್ಪತ್ತಿಯಾಗುವ ಬೇರು ತರಹದ ಜೈವಿಕ ವಿಘಟನೀಯ ಎಳೆಗಳನ್ನು ಬಳಸಿ, ಧರಿಸಬಹುದಾದ ವಸ್ತುವನ್ನು ತಯಾರಿಸಿದ್ದಾರೆ. ಈ ಜೈವಿಕ ವಿಘಟೀಯ ಎಳೆಗಳು ಸ್ವತಃ ದುರಸ್ತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದಿದ್ದಾರೆ.


ಅರೆರೆ ಇದೇನಿದು? ಬಟ್ಟೆಗಳು ಸ್ವಯಂ ದುರಸ್ತಿಯಾಗಲು ಸಾಧ್ಯವಾ! ಎಂದು ಅಚ್ಚರಿಯಾಗುತ್ತಿದೆಯಾ? ಹೌದು, ಅಚ್ಚರಿಯಾದರೂ ಇದು ಸತ್ಯ. ಫ್ಯಾಷನ್ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಫ್ಯಾಷನ್‌ನ ಭಾಗವಾದ ಬಟ್ಟೆಗಳು ಸಹ ನಿರಂತರವಾಗಿ ವಿಕಸನಗೊಳ್ಳುತ್ತಲೇ ಬಂದಿವೆ. ಆದರೆ ಬಟ್ಟೆಗಳಿಗೆ ನಿರ್ದಿಷ್ಟವಾದ ಗಡುವು ಅಥವಾ ಮಿತಿ ಇದೆ. ಕೆಲ ಕಾಲದ ನಂತರ ಬಟ್ಟೆಗಳು ಹಾಳಾಗಬಹುದು ಅಥವಾ ಹರಿದುಹೋಗಬಹುದು. ಸಾಮಾನ್ಯವಾಗಿ ಬಟ್ಟೆಗಳು ಹಾಳಾದಾಗ ಅಥವಾ ಹರಿದಾಗ ಅವುಗಳನ್ನು ಬಿಸಾಕಿ ಪುನಃ ಹೊಸ ಬಟ್ಟೆಗಳನ್ನು ಖರೀದಿಸಿ ಧರಿಸುತ್ತೇವೆ. ಆದರೆ ಕೆಲ ದಶಕಗಳ ಹಿಂದೆ ಬಹುತೇಕರು ಬಟ್ಟೆಗಳು ಹಾಳಾದಾಗ ಅಥವಾ ಹರಿದಾಗ ಅವುಗಳನ್ನು ರಿಪೇರಿ ಮಾಡಿಕೊಂಡು ಧರಿಸುತ್ತಿದ್ದರು. ಏಕೆಂದರೆ ಹೊಸ ಬಟ್ಟೆಗಳನ್ನು ಖರೀದಿಸಲು ಹಣದ ಕೊರತೆ ಇತ್ತು. ಹಾಗಾಗಿ ಹಳೆ ಬಟ್ಟೆಗಳ ರಿಪೇರಿ ಅನಿವಾರ್ಯವಾಗಿತ್ತು.

ಇಂದು ನಾವು ಧರಿಸುವ ಬಟ್ಟೆಗಳು ಹಾಳಾದಾಗ ಬಿಸಾಕಿ ಪರಿಸರ ಮಾಲಿನ್ಯಕ್ಕೆ ನಮ್ಮದೇ ಕೊಡುಗೆ ನೀಡುತ್ತಿದ್ದೇವೆ. ಎಲ್ಲಿ ನೋಡಿದರಲ್ಲಿ ಹಳೆ ಬಟ್ಟೆಗಳೇ ರಾರಾಜಿಸುತ್ತಿವೆ. ಘನ ತ್ಯಾಜ್ಯದಲ್ಲಂತೂ ಬಟ್ಟೆಗಳದ್ದೇ ಪಾರಮ್ಯ. ಹರಿದ ಬಟ್ಟೆಗಳನ್ನು ಬಿಸಾಕುವ ಬದಲು ರಿಪೇರಿ ಮಾಡಿಕೊಂಡು ಧರಿಸಿದರೆ ಉತ್ತಮ. ಒಂದು ವೇಳೆ ಸ್ವಯಂ ದುರಸ್ತಿ ಮಾಡಿಕೊಳ್ಳಬಹುದಾದ ಬಟ್ಟೆಗಳನ್ನು ತಯಾರಿಸಿದರೆ ಹೇಗೆ? ಇದು ಇನ್ನೂ ಉತ್ತಮವಲ್ಲವೇ? ಈ ಯೋಚನೆ ಬಂದ ಕ್ಷಣವೇ ವಿಜ್ಞಾನಿಗಳ ಗುಂಪೊಂದು ಇಂತಹ ಬಟ್ಟೆ ತಯಾರಿಸಲು ಮುಂದಾಗಿಬಿಟ್ಟಿತು. ಅವರ ಸಂಘಟಿತ ಶ್ರಮದ ಫಲವಾಗಿ ಸ್ವಯಂ ದುರಸ್ತಿಯಾಗುವ ಬಟ್ಟೆಯನ್ನು ತಯಾರಿಸುವಲ್ಲಿ ತಂಡ ಯಶಸ್ವಿಯಾಯಿತು. ಸ್ವಯಂ ದುರಸ್ತಿ ಹೊಂದುವ ಬಟ್ಟೆಯು ವೈಜ್ಞಾನಿಕ ಕಾದಂಬರಿಯಂತೆ ದೂರದ ಕಲ್ಪನೆ ಎನಿಸಬಹುದು. ಯು.ಕೆ.ನ ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯ ಮತ್ತು ನಾರ್ತಂಬ್ರಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡ ಸ್ವಯಂ ದುರಸ್ತಿಯಾಗುವ ಬಟ್ಟೆಯ ಕನಸನ್ನು ನನಸು ಮಾಡಿದ್ದಾರೆ. ಅನೇಕ ಶಿಲೀಂಧ್ರಗಳಿಂದ ಉತ್ಪತ್ತಿಯಾಗುವ ಬೇರು ತರಹದ ಜೈವಿಕ ವಿಘಟನೀಯ ಎಳೆಗಳನ್ನು ಬಳಸಿ, ಧರಿಸಬಹುದಾದ ವಸ್ತುವನ್ನು ತಯಾರಿಸಿದ್ದಾರೆ. ಈ ಜೈವಿಕ ವಿಘಟನೀಯ ಎಳೆಗಳು ಸ್ವತಃ ದುರಸ್ತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದಿದ್ದಾರೆ.

ಸಂಶೋಧಕರು ತಮ್ಮ ಪರೀಕ್ಷೆಗಳಲ್ಲಿ ಗ್ಯಾನೋಡರ್ಮಾ ಲೂಸಿಡಮ್ ಶಿಲೀಂಧ್ರದ ಮೇಲೆ ಕೇಂದ್ರೀಕರಿಸಿದರು. ಅವರು ಹೈಫೆ ಎಂದು ಕರೆಯಲ್ಪಡುವ ಕವಲೊಡೆಯುವ ತಂತುಗಳಿಂದ ಚರ್ಮವನ್ನು ಉತ್ಪಾದಿಸಿದರು. ಇದು ಒಟ್ಟಾಗಿ ಮೈಸಿಲಿಯಮ್ ಎಂಬ ರಚನೆಯಲ್ಲಿ ನೇಯ್ಗೆ ಮಾಡುತ್ತದೆ. ಮೈಸಿಲಿಯಮ್ ಆಧಾರಿತ ವಸ್ತುಗಳನ್ನು ಈಗಾಗಲೇ ಜವಳಿ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಮೈಸಿಲಿಯಾದ ಜೊತೆಗೆ ಕ್ಲಮೈಡೋಸ್ಪೋರ್‌ಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನ್‌ಗಳು ಮತ್ತು ಇತರ ಪೋಷಕಾಂಶಗಳ ಮಿಶ್ರಣವನ್ನು ಒಳಗೊಂಡಿರುವ ಹೊಸ ವಿಧಾನವನ್ನು ಸಂಶೋಧಕರು ಬಳಸಿದ್ದಾರೆ. ಈ ಪ್ರಕ್ರಿಯೆಯು ತೆಳುವಾದ ಚರ್ಮದಂತಹ ವಸ್ತುವನ್ನು ಉತ್ಪಾದಿಸಿತು. ಕವಕಜಾಲವು ಕೆಲವು ವಿಧದ ಶಿಲೀಂಧ್ರಗಳಿಂದ ಉತ್ಪತ್ತಿಯಾಗುವ ದಾರದಂತಹ ರಚನೆಯಾಗಿದೆ. ಸಂಶೋಧನೆಯು ಶಿಲೀಂಧ್ರಗಳ ವಸಾಹತುಗಳು ಹೆಣೆದುಕೊಂಡಿರುವ ಕವಲೊಡೆಯುವ ಕವಕಜಾಲದೊಂದಿಗೆ ಉದ್ಭವಿಸಬಹುದು ಎಂದು ತೋರಿಸಿದೆ. ಇದರ ಪರಿಣಾಮವಾಗಿ ದೊಡ್ಡ ಜಡೆ ರಚನೆಗಳ ಬೆಳವಣಿಗೆ ಕಂಡುಬರುತ್ತದೆ. ಅಂತಹ ರಚನೆಗಳು ಸಾಮಾನ್ಯವಾಗಿ ನೆಲದಲ್ಲಿ ಕಂಡುಬರುತ್ತವೆ. ಹಸುವಿನ ಚರ್ಮವನ್ನು ಹೋಲುವ ಕಾರಣ ಕವಕಜಾಲದ ಮ್ಯಾಟ್‌ಗಳನ್ನು 'ಮೈಸಿಲಿಯಮ್ ಲೆದರ್' ಎಂದು ಕರೆಯಲಾಗುವ ವಸ್ತುವನ್ನು ಉತ್ಪಾದಿಸಲು ಸಾಧ್ಯ ಎಂದು ಸಂಶೋಧನೆಯು ತೋರಿಸಿದೆ.

ಕವಕಜಾಲದ ಬಟ್ಟೆಯು ಕ್ಲಮೈಡೋಸ್ಪೋರ್‌ಗಳ ಸ್ವಯಂ ಪುನರುತ್ಪಾದಕ ಶಕ್ತಿಯನ್ನು ಹೊಂದಿದೆ. ಸಂಶೋಧಕರು ಅದನ್ನು ಪಂಕ್ಚರ್ ಮಾಡಿದಾಗ ಅಥವಾ ಹಾನಿಗೊಳಿಸಿದಾಗ, ಬಟ್ಟೆಯು ಸ್ವತಃ ಸರಿಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಕಂಡುಕೊಂಡರು. ಆದಾಗ್ಯೂ ಕೆಲವು ಹಾನಿಯ ಗುರುತುಗಳು ಇನ್ನೂ ಗೋಚರಿಸುತ್ತಿದ್ದವು. ಆದರೆ ಬಟ್ಟೆಯ ದುರಸ್ತಿ ಕಾರ್ಯವು ನಿಧಾನಗತಿಯಲ್ಲಿರುವುದನ್ನು ಗಮನಿಸಿದರು. ಸಂಶೋಧಕರು ತಯಾರಿಸಿದ ಕವಕಜಾಲದ ಬಟ್ಟೆಯು ತುಂಬಾ ತೆಳ್ಳಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ ಮತ್ತು ಮತ್ತೆ ಬೆಳೆಯುವ ಪ್ರಕ್ರಿಯೆಯು ಈ ಕ್ಷಣದಲ್ಲಿ ನಿಂತಿರುವಂತೆ ಗೋಚರಿಸುತ್ತದೆ. ಪ್ರಕ್ರಿಯೆ ಪೂರ್ಣಗೊಳ್ಳಲು ಹಲವಾರು ದಿನಗಳನ್ನು ತೆಗೆದುಕೊಳ್ಳುತ್ತದೆ.

ಈ ಸಿದ್ಧಾಂತದಲ್ಲಿ ಕೇವಲ ಬಟ್ಟೆಗಳನ್ನಲ್ಲದೆ ಮನೆಯ ಪೀಠೋಪಕರಣಗಳಿಂದ ಚರ್ಮದವರೆಗೆ ಎಲ್ಲದರಲ್ಲೂ ಸ್ವಯಂ ದುರಸ್ತಿಯಾಗುವ ಅಂಶವನ್ನು ಬಳಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಸೂಕ್ಷ್ಮ ಮತ್ತು ಸ್ಥೂಲ ದೋಷಗಳನ್ನು ಸರಿಪಡಿಸಲು ಈ ಪುನರುತ್ಪಾದಕ ಕವಕಜಾಲದ ವಸ್ತುವಿನ ಸಾಮರ್ಥ್ಯವು ಪೀಠೋಪಕರಣಗಳು, ಆಟೋಮೋಟಿವ್ ಆಸನಗಳು ಮತ್ತು ಫ್ಯಾಷನ್‌ವೇರ್‌ಗಳಂತಹ ಚರ್ಮದ ಸರಕುಗಳ ಬದಲಿಗಳಲ್ಲಿ ಅನನ್ಯ ಉತ್ಪನ್ನ ಅನ್ವಯಿಕಗಳಿಗೆ ಆಸಕ್ತಿದಾಯಕ ನಿರೀಕ್ಷೆಗಳನ್ನು ತೆರೆಯುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ.

ಶಿಲೀಂಧ್ರ ಆಧಾರಿತ ಮಶ್ರೂಮ್ ಲೆದರ್‌ನಿಂದ ತಯಾರಿಸಿದ ಬಟ್ಟೆಯು ತನ್ನನ್ನು ತಾನೇ ಸರಿಪಡಿಸಿಕೊಳ್ಳಬಹುದು ಎಂದು ಹೊಸ ಅಧ್ಯಯನವು ಸೂಚಿಸುತ್ತದೆ. ಶಿಲೀಂಧ್ರ ಕವಕಜಾಲವನ್ನು ಬಳಸಿ ತಯಾರಿಸಿದ ವಸ್ತುಗಳು ಪುನರುತ್ಪಾದಕ ಗುಣಲಕ್ಷಣಗಳನ್ನು ಹೊಂದಿವೆ ಎಂದು ಕಂಡುಬಂದಿದೆ, ಆದರೂ ವಿಜ್ಞಾನಿಗಳು ಈ ವಿಧಾನವನ್ನು ಇನ್ನೂ ಪರಿಪೂರ್ಣಗೊಳಿಸಿಲ್ಲ. ಸಂಶೋಧನೆಯು ಸ್ವಯಂ ದುರಸ್ತಿ ಬಟ್ಟೆಯ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದೆ.

ಮಶ್ರೂಮ್ ಲೆದರ್ ಮಾಡಲು ಕವಕಜಾಲವನ್ನು ಬಳಸಿದುದು ಇದೇ ಮೊದಲೇನಲ್ಲ. ರೀಶಿ ಮತ್ತು ಬೋಲ್ಟ್ ಥ್ರೆಡ್‌ಗಳಂತಹ ಕಂಪೆನಿಗಳು ಈಗಾಗಲೇ ಕೈಚೀಲಗಳು, ಟೋಪಿಗಳು ಮತ್ತು ಜಾಕೆಟ್‌ಗಳಂತಹ ಉನ್ನತ ಮಟ್ಟದ ಚರ್ಮದ ವಸ್ತುಗಳನ್ನು ಉತ್ಪಾದಿಸಲು ಪ್ರಾರಂಭಿಸಿವೆ. ಕವಕಜಾಲದ ವಸ್ತುಗಳು ಶುಷ್ಕ ಮತ್ತು ಒಲಿಗೋಟ್ರೋಫಿಕ್ ಪರಿಸರದಲ್ಲಿ ಬದುಕಬಲ್ಲವು ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ಎರಡು ದಿನಗಳ ಚೇತರಿಕೆಯ ಅವಧಿಯ ನಂತರ ಕನಿಷ್ಠ ಮಧ್ಯಸ್ಥಿಕೆಯೊಂದಿಗೆ ಸ್ವಯಂ ಗುಣಪಡಿಸುವುದು ಸಾಧ್ಯ ಎಂದು ಸಂಶೋಧನಾ ತಂಡವು ವಿವರಿಸಿದೆ.

ಕವಕಜಾಲದ ಬಟ್ಟೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು ಎಂದು ಸಂಶೋಧನಾ ತಂಡವು ಆಶಾವಾದಿಯಾಗಿದೆ. ವಿವಿಧ ಪದರಗಳನ್ನು ಸಂಯೋಜಿಸುವುದು ಅಥವಾ ಗ್ಲಿಸರಾಲ್‌ನಲ್ಲಿ ಬಟ್ಟೆಯನ್ನು ಬಲಪಡಿಸಲು ಮತ್ತು ಬಳಕೆಗೆ ಹೆಚ್ಚು ಸೂಕ್ತವಾಗುವಂತೆ ಮಾಡುವ ಮಾರ್ಗಗಳನ್ನು ಅವರು ಕಂಡುಕೊಂಡಿದ್ದಾರೆ.

ಫ್ಯಾಷನ್ ಎಂಬುದು ಇಂದು ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಫ್ಯಾಷನ್ ಬಟ್ಟೆಗಳು ಇಂದು ಎಲ್ಲರ ಆಸಕ್ತಿಯ ಕೇಂದ್ರಗಳಾಗಿವೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಪ್ರಕಾರ ಅಂತರ್‌ರಾಷ್ಟ್ರೀಯ ವಿಮಾನಗಳು ಮತ್ತು ಸಾಗಣೆಯನ್ನು ಸಂಯೋಜಿಸುವುದಕ್ಕಿಂತ ಹೆಚ್ಚಿನ ಶೇ. 10 ಜಾಗತಿಕ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗೆ ಫ್ಯಾಷನ್ ಕಾರಣವಾಗಿದೆ. ಇದು ಪ್ರಪಂಚದಲ್ಲಿ ಪ್ರತೀ ವರ್ಷ ಉತ್ಪಾದನೆಯಾಗುವ 300 ಮಿಲಿಯನ್ ಟನ್ ಪ್ಲಾಸ್ಟಿಕ್‌ನಲ್ಲಿ ಐದನೇ ಭಾಗವನ್ನು ಪ್ರತಿನಿಧಿಸುತ್ತದೆ. ಪಾಲಿಯೆಸ್ಟರ್ ಉಡುಪುಗಳು ಕ್ಷೀಣಿಸಲು 200 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರಿಂದ ಪರಿಸರ ಮಾಲಿನ್ಯಕ್ಕೆ ಬಟ್ಟೆಯು ಸಹ ಕಾರಣವಾಗಿದೆ ಎಂಬುದು ವಿಶ್ವಸಂಸ್ಥೆಯ ಲೆಕ್ಕಾಚಾರ.

ಈ ಹಿನ್ನೆಲೆಯಲ್ಲಿ ಸಂಶೋಧಕರು ತಯಾರಿಸಿದ ಸ್ವಯಂ ದುರಸ್ತಿ ಬಟ್ಟೆಯು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಪ್ರತೀ ವರ್ಷ ಬಿಸಾಡುವ ಬೃಹತ್ ಪ್ರಮಾಣದ ಬಟ್ಟೆಯಿಂದ ಉತ್ಪತ್ತಿಯಾಗುವ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಸುತ್ತದೆ. ಈ ಹೊಸ ಕೃತಕ ಜೀವಂತ ಬಟ್ಟೆಗಳಿಗೆ ಅಥವಾ ಜೀವಂತ ಕೋಶಗಳಿಗೆ ಧನ್ಯವಾದಗಳನ್ನು ಹೇಳುವ ಕಾಲ ಈಗ ಕೂಡಿಬರುತ್ತಿದೆ. ಪರಿಸರಕ್ಕೆ ಪೂರಕವಾದ ಇಂತಹ ಸಂಶೋಧನೆಗಳು ಇನ್ನಷ್ಟು ಹೊರಬರಲಿ, ಆ ಮೂಲಕ ಸುಸ್ಥಿರ ಭವಿಷ್ಯಕ್ಕಾಗಿ ನವೀನ ಮಾರ್ಗಗಳು ರೂಪುಗೊಳ್ಳಲಿ ಎಂಬುದೇ ಈ ಬರಹದ ಆಶಯ.

Similar News