ಉತ್ತರಾಖಂಡದಲ್ಲಿ ಭಾರೀ ಭೂಕುಸಿತ: ಸಂಕಷ್ಟದಲ್ಲಿ ಸಿಲುಕಿಕೊಂಡ ಕನಿಷ್ಠ 300 ಪ್ರಯಾಣಿಕರು
ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯಲ್ಲಿ ಭಾರೀ ಭೂಕುಸಿತದಿಂದಾಗಿ ಪ್ರಮುಖ ರಸ್ತೆ ಯೊಂದು ಸಂಪರ್ಕ ಕಡಿದುಕೊಂಡ ನಂತರ ಕನಿಷ್ಠ 300 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆಂದು ವರದಿಯಾಗಿದೆ.
ಭಾರೀ ಬಂಡೆಯ ಕುಸಿತದಿಂದಾಗಿ ಲಖನ್‌ಪುರ ಬಳಿಯ ಲಿಪುಲೇಖ್-ತವಾಘಾಟ್ ರಸ್ತೆಯು100 ಮೀಟರ್‌ಗಳಷ್ಟು ಕುಸಿತಗೊಂಡ ನಂತರ ಪ್ರಯಾಣಿಕರು ಧಾರ್ಚುಲಾ ಹಾಗೂ ಗುಂಜಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಎರಡು ದಿನಗಳ ನಂತರ ರಸ್ತೆ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.
ರಾಜ್ಯದ ಅಲ್ಮೋರಾ, ಬಾಗೇಶ್ವರ್, ಚಮೋಲಿ, ಚಂಪಾವತ್, ಡೆಹ್ರಾಡೂನ್, ಗರ್ವಾಲ್, ಹರಿದ್ವಾರ, ನೈನಿತಾಲ್, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ ಗರ್ವಾಲ್, ಉಧಮ್ ಸಿಂಗ್ ನಗರ ಹಾಗೂ ಉತ್ತರಕಾಶಿ ಜಿಲ್ಲೆಗಳಲ್ಲಿ ಧೂಳಿನ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪೊಲೀಸರು ಕೂಡ ಸೂಚನೆ ನೀಡಿದ್ದು, ಎಲ್ಲಾ ಯಾತ್ರಾರ್ಥಿಗಳಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಿದ್ದಾರೆ.
"ಯಾತ್ರಾರ್ಥಿಗಳು ದಯವಿಟ್ಟು ಸುರಕ್ಷಿತ ಸ್ಥಳಗಳಲ್ಲಿ ಉಳಿಯಿರಿ, ಅನಗತ್ಯವಾಗಿ ಪ್ರಯಾಣಿಸಬೇಡಿ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ. ಹವಾಮಾನವು ಸ್ಪಷ್ಟವಾದಾಗ ಮಾತ್ರ ಪ್ರಯಾಣಿಸಿ" ಎಂದು ಅವರು ಪೊಲೀಸರು ಸೂಚಿಸಿದ್ದಾರೆ.