ಬಟ್ಟೆ ಕಾರ್ಖಾನೆಯಲ್ಲಿ ದುಬಾರಿ ಡ್ರಗ್ಸ್ ತಯಾರಿಕೆ: ವಿದೇಶಿ ಜಾಲ ಬೇಧಿಸಿದ ದಿಲ್ಲಿ ಪೊಲೀಸ್
ಹೊಸದಿಲ್ಲಿ: ದಿಲ್ಲಿಯ ನೆರೆಯ ಗ್ರೇಟರ್ ನೋಯ್ಡಾದ ಬಟ್ಟೆ ಕಾರ್ಖಾನೆಯೊಂದರಲ್ಲಿ ದುಬಾರಿ ಬೆಲೆಯ ಡ್ರಗ್ಸ್ ಎಂಡಿಎಂಎ ತಯಾರಿಸುತ್ತಿದ್ದ ಜಾಲವೊಂದನ್ನು ಪೊಲೀಸರು ಭೇದಿಸಿದ್ದಾರೆ.
ಗ್ರೇಟರ್ ನೋಯ್ಡಾದ ಬೀಟಾ 1 ನಲ್ಲಿರುವ ಮಿತ್ರ ಸೊಸೈಟಿಯಿಂದ ನಡೆಸಲಾಗುತ್ತಿರುವ ಡ್ರಗ್ ತಯಾರಿಕಾ ಘಟಕದ ಮೇಲೆ ಗೌತಮ್ ಬುದ್ಧ ನಗರ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.
150 ಕೋಟಿ ರೂ. ಮೌಲ್ಯದ ಡ್ರಗ್ಸ್ ಹಾಗೂ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರು ವಿದೇಶಿಗರನ್ನು ಬಂಧಿಸಲಾಗಿದೆ.
ಸುಮಾರು ಹದಿನೈದು ದಿನಗಳಲ್ಲಿ ನಗರದಲ್ಲಿ ನಡೆದ ಎರಡನೇ ಕಾರ್ಯಾಚರಣೆ ಇದಾಗಿದ್ದು, ಮೇ 16 ರಂದು ಮತ್ತೊಂದು ಘಟಕದ ಮೇಲೆ ದಾಳಿ ನಡೆಸಲಾಗಿದೆ.
ಇಂದು ದಾಳಿ ನಡೆಸಿದ್ದ ಘಟಕದಲ್ಲಿ ಆರೋಪಿಗಳು ಬಟ್ಟೆ ಕಾರ್ಖಾನೆ ನಡೆಸುತ್ತಿರುವಂತೆ ನಟಿಸುತ್ತಿದ್ದರು. ಘಟಕಯು ಮನೆಯೊಂದರ ಮೇಲೆ ಕಾರ್ಯನಿರ್ವಹಿಸುತ್ತಿತ್ತು. ಆರೋಪಿಗಳು ಡ್ರಗ್ಸ್ ಅನ್ನು ಬಟ್ಟೆಯ ಕಟ್ಟುಗಳಲ್ಲಿ ಬಚ್ಚಿಟ್ಟು ಮುಂಬೈ, ಉತ್ತರದ ರಾಜ್ಯಗಳು ಮತ್ತು ನೇಪಾಳ ಮತ್ತು ಬಾಂಗ್ಲಾದೇಶಕ್ಕೂ ಕಳ್ಳಸಾಗಣೆ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
"ವಶಪಡಿಸಿಕೊಳ್ಳಲಾದ ಡ್ರಗ್ಸ್ ಹಾಗೂ ಕಚ್ಚಾ ಸಾಮಗ್ರಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 150 ಕೋಟಿ ರೂ. ಮೌಲ್ಯದ್ದಾಗಿದೆ. ಕಳೆದ 15 ದಿನಗಳಲ್ಲಿ ಗ್ರೇಟರ್ ನೋಯ್ಡಾದಲ್ಲಿ ಅಂದಾಜು 450 ಕೋಟಿ ರೂ. ಮೌಲ್ಯದ ಸುಮಾರು 50 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ'' ಎಂದು ಗೌತಮ್ ಬುದ್ಧ ನಗರ ಪೊಲೀಸ್ ಆಯುಕ್ತರಾದ ಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ.