ಅಮಿತ್ ಶಾರನ್ನು ಭೇಟಿಯಾದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು; ತೆಲಂಗಾಣ ಚುನಾವಣೆಯಲ್ಲಿ ಮೈತ್ರಿ ಸಾಧ್ಯತೆ
ಹೊಸದಿಲ್ಲಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಶನಿವಾರ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ತೆಲಂಗಾಣ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಕುರಿತು ಚರ್ಚಿಸಿದರು.
ಸುಮಾರು ಅರ್ಧ ಗಂಟೆ ಕಾಲ ಸಭೆ ನಡೆಯಿತು.
ಈ ವರ್ಷ ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಟಿಡಿಪಿ ಮೈತ್ರಿ ಮಾಡಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಟಿಡಿಪಿ 2014 ರಲ್ಲಿ ಎನ್‌ಡಿಎ ಭಾಗವಾಗಿತ್ತು. ಆದರೆ 2019 ರ ಚುನಾವಣೆಯ ಮೊದಲು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಷಯದ ಮೇಲೆ ಮಾರ್ಚ್ 2018 ರಲ್ಲಿ ಆಡಳಿತ ಮೈತ್ರಿಕೂಟವನ್ನು ತ್ಯಜಿಸಿತು. ಆದಾಗ್ಯೂ, ಪೋರ್ಟ್ ಬ್ಲೇರ್‌ನಲ್ಲಿ ಇತ್ತೀಚೆಗೆ ನಡೆದ ಮುನ್ಸಿಪಲ್ ಚುನಾವಣೆಯ ನಂತರ ಎರಡೂ ಪಕ್ಷಗಳು ಒಗ್ಗೂಡಿದವು.
ಟಿಡಿಪಿ ಸಂಸ್ಥಾಪಕ ಹಾಗೂ ಆಂಧ್ರಪ್ರದೇಶದಲ್ಲಿ ಏಳು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಎನ್‌ಟಿ ರಾಮರಾವ್ ಅವರನ್ನು ಪ್ರಧಾನಿ ಮೋದಿ ಅವರು ಕಳೆದ ತಿಂಗಳು ತಮ್ಮ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ಎನ್ ಟಿ ರಾಮ್ ರಾವ್ ಅವರ ಜನ್ಮ ವಾರ್ಷಿಕೋತ್ಸವದಂದು ನೆನಪಿಸಿಕೊಂಡರು.