ಪೊಲೀಸ್ ಹೊರಠಾಣೆಗೆ ದಾಳಿ, ಸಿಬ್ಬಂದಿ ಮೇಲೆ ಹಲ್ಲೆ: ಬಿಜೆಪಿ ಸಂಸದನ ವಿರುದ್ಧ ಪ್ರಕರಣ ದಾಖಲು
ಕನೌಜ್: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲು ಉನ್ನಾವೊ ಪೊಲೀಸರಿಗೆ ಸಹಾಯ ಮಾಡಿದ ಸ್ಥಳೀಯ ಪೊಲೀಸ್ ತಂಡದ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಕನೌಜ್‌ನ ಬಿಜೆಪಿ ಸಂಸದ ಸುಬ್ರತ್ ಪಾಠಕ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಠಕ್ ಮತ್ತು ಆತನ ಸಹಚರರು ಉನ್ನಾವೋ ಜಿಲ್ಲಾ ಪೊಲೀಸ್ ತಂಡವು ಬಂಧಿಸಿರುವ ಅಪಹರಣ ಆರೋಪಿಯನ್ನು ಬಿಡುಗಡೆ ಮಾಡುವ ಪ್ರಯತ್ನದಲ್ಲಿ ಪೊಲೀಸ್ ಔಟ್‌ಪೋಸ್ಟ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಉನ್ನಾವೊ ಪೊಲೀಸರು ಅಪಹರಣಕ್ಕೊಳಗಾದವರನ್ನು ಮತ್ತು ಅಪಹರಣಕಾರನನ್ನು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಸಂಸದ ಸುಬ್ರತ್ ಪಾಠಕ್ ಮತ್ತು ಸಹಚರರು ಪೊಲೀಸರ ಸಮವಸ್ತ್ರವನ್ನು ಹರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ಆಗಮಿಸಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಮೂವರು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಏಳು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಹಕೀಮ್ ಸಿಂಗ್ ಮತ್ತು ತರುಣ್ ಸಿಂಗ್ ಇದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಕೀಮ್ ಸಿಂಗ್ ಅವರ ದೂರಿನ ಆಧಾರದ ಮೇಲೆ, ಕನೌಜ್‌ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪಾಠಕ್ ಸೇರಿದಂತೆ 10 ಜನರು ಮತ್ತು 40 ಕ್ಕೂ ಹೆಚ್ಚು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಶುಕ್ರವಾರ ಸಂಜೆ, ಅಪಹರಣ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಆಗಮಿಸಿದ್ದ ಉನ್ನಾವೋ ಪೊಲೀಸರ ತಂಡಕ್ಕೆ ನೆರವಾಗುವಂತೆ ತಮ್ಮನ್ನು ಕೇಳಲಾಗಿತ್ತು ಎಂದು ಹಕೀಮ್ ಸಿಂಗ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಹಕೀಮ್ ಸಿಂಗ್, ಒಬ್ಬ ಕಾನ್‌ಸ್ಟೆಬಲ್ ಜೊತೆಗೆ ಸ್ಥಳಕ್ಕೆ ತೆರಳಿ ಉನ್ನಾವೋ ಪೊಲೀಸ್ ತಂಡವನ್ನು ಭೇಟಿಯಾದರು. ಅಷ್ಟರಲ್ಲಿ ಮತ್ತೊಬ್ಬ ಕಾನ್ ಸ್ಟೇಬಲ್ ಜೊತೆಗೆ ಸಬ್ ಇನ್ಸ್ ಪೆಕ್ಟರ್ ತರುಣ್ ಸಿಂಗ್ ಕೂಡ ಅಲ್ಲಿಗೆ ಬಂದಿದ್ದಾರೆ.
ಶುಕ್ರವಾರ ರಾತ್ರಿ, ಉನ್ನಾವೋದಿಂದ ಅಪಹರಣಕ್ಕೊಳಗಾಗಿದ್ದ ನೀಲೇಶ್ ಎಂಬ ವ್ಯಕ್ತಿಯನ್ನು ಪತ್ತೆ ಹಚ್ಚಲು ಉನ್ನಾವೋ ಪೊಲೀಸರು ಸುಳಿವಿನ ಮೇರೆಗೆ ಕನೌಜ್‌ಗೆ ತಲುಪಿದ್ದರು. ಕನೌಜ್‌ನ ಜಿಮ್ನಾಷಿಯಂನಲ್ಲಿ ನಿಲೇಶ್ ರನ್ನು ಇರಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಉನ್ನಾವೋ ಪೊಲೀಸರು ಕನೌಜ್‌ಗೆ ಆಗಮಿಸಿ ಶುಕ್ರವಾರ ರಾತ್ರಿ 10:30ರ ಸುಮಾರಿಗೆ ಜಿಮ್ನಾಷಿಯಂ ಮೇಲೆ ದಾಳಿ ನಡೆಸಿ ನಿಲೇಶ್‌ನನ್ನು ವಶಕ್ಕೆ ಪಡೆದುಕೊಂಡರು. ಪೊಲೀಸರು ಒಬ್ಬ ಆರೋಪಿಯನ್ನು ಕೂಡಾ ಬಂಧಿಸಿದ್ದಾರೆ. ನಂತರ ಉನ್ನಾವ್ ಪೊಲೀಸರು ಮಂಡಿ ಪೊಲೀಸ್ ಚೌಕಿ ತಲುಪಿದಾಗ ಸ್ಥಳೀಯ ಸಂಸದ ಬೆಂಬಲಿಗರೊಂದಿಗೆ ಪೊಲೀಸ್ ಹೊರಠಾಣೆಗೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅದಾಗ್ಯೂ, ಉನ್ನಾವ್ ಪೊಲೀಸರು ಆರೋಪಿಯನ್ನು ಮತ್ತು ಸಂತ್ರಸ್ತನನ್ನು ಅಲ್ಲಿಂದ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.