ರೈಲು ದುರಂತದಲ್ಲಿ ಮಗ ಮೃತಪಟ್ಟಿಲ್ಲ ಎಂಬ ದೃಢ ವಿಶ್ವಾಸದಲ್ಲಿದ್ದ ತಂದೆಗೆ ಶವಾಗಾರದಲ್ಲಿ ಜೀವಂತವಾಗಿ ಸಿಕ್ಕ ಮಗ!
ಒಡಿಶಾ ರೈಲು ದುರಂತದಲ್ಲಿ ನಡೆದ ಮನಕಲಕುವ ಘಟನೆ
ಹೊಸದಿಲ್ಲಿ: ಒಡಿಶಾ ರೈಲು ದುರಂತದಲ್ಲಿ ತನ್ನ ಮಗ ಸತ್ತಿದ್ದಾನೆಂದು ನಂಬಲು ಸಿದ್ಧನಿಲ್ಲದ ವ್ಯಕ್ತಿಯೊಬ್ಬರು ಪುತ್ರನನ್ನು ಹುಡುಕಿಕೊಂಡು 200 ಕಿ.ಮೀ.ಗೂ ಅಧಿಕ ದೂರ ಸಂಚರಿಸಿ ಕೊನೆಗೂ ಆತನನ್ನು ಶವಾಗಾರದಲ್ಲಿ ಜೀವಂತವಾಗಿ ಪತ್ತೆ ಹಚ್ಚಿದ ಘಟನೆ ವರದಿಯಾಗಿದೆ.
ಹೇಲರಾಮ್ ಮಲಿಕ್ ಎಂಬ ವ್ಯಕ್ತಿ ತನ್ನ ಪುತ್ರ ಬಿಸ್ವಜೀತ್‌ನನ್ನು ಶಾಲಿಮಾರ್ ರೈಲು ನಿಲ್ದಾಣದಲ್ಲಿ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿಸಿ ವಾಪಸಾದ ಕೆಲವೇ ಗಂಟೆಗಳಲ್ಲಿ ರೈಲು ಅಪಘಾತದ ಕುರಿತು ಮಾಹಿತಿ ದೊರಕಿತ್ತು.
ಹೌರಾದಲ್ಲಿ ವ್ಯಾಪಾರಿಯಾಗಿರುವ ಹೇಲರಾಂ ತಕ್ಷಣ ತಮ್ಮ 24 ವರ್ಷದ ಪುತ್ರನಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದ ಬಿಸ್ವಜೀತ್ ತೀರಾ ನಿತ್ರಾಣದ ದನಿಯಲ್ಲಿ ಮಾತನಾಡಿದ್ದ. ಆತ ಜೀವಂತವಿದ್ದ ಆದರೆ ಬಹಳಷ್ಟು ನೋವು ಅನುಭವಿಸುತ್ತಿದ್ದಾನೆ ಎಂದು ತಿಳಿದ ಹೇಲರಾಂ ತಡ ಮಾಡದೆ ಸ್ಥಳೀಯ ಆ್ಯಂಬುಲೆನ್ಸ್ ಚಾಲಕ ಪಾಲಶ್ ಪಂಡಿತ್ ಎಂಬಾತನನ್ನು ಸಂಪರ್ಕಿಸಿ 230 ಕಿಮೀ ದೂರದ ಅಪಘಾತ ಸಂಭವಿಸಿದ ಬಾಲಾಸೋರ್ ಎಂಬಲ್ಲಿಗೆ ಪ್ರಯಾಣಿಸಿದ್ದರು. ಜೊತೆಗೆ ತನ್ನ ಮೈದುನ ದೀಪಕ್ ದಾಸ್‌ನನ್ನೂ ಕರೆದೊಯ್ದಿದ್ದರು. ಶುಕ್ರವಾರ ರಾತ್ರಿ ತಲುಪಿದ ಅವರು ಗಾಯಾಳುಗಳು ದಾಖಲಾಗಿದ್ದ ಎಲ್ಲಾ ಆಸ್ಪತ್ರೆಗಳಲ್ಲಿ ವಿಚಾರಿಸಿದರೂ ಬಿಸ್ವಜೀತ್ ಕುರಿತು ಮಾಹಿತಿ ದೊರಕಿರಲಿಲ್ಲ.
ಆಸ್ಪತ್ರೆಗಳಲ್ಲಿ ಕಾಣಿಸದೇ ಇದ್ದರೆ ಮೃತದೇಹಗಳನ್ನಿರಿಸಲಾಗಿರುವ ಬಹನಗ ಹೈಸ್ಕೂಲಿಗೆ ತೆರಳಬೇಕು ಎಂದು ಯಾರೋ ತಿಳಿಸಿದಂತೆ ಅಲ್ಲಿಗೆ ತೆರಳಿದ್ದರು.
ಅಲ್ಲಿನ ತಾತ್ಕಾಲಿಕ ಶವಾಗಾರದಲ್ಲಿ ಹಲವಾರು ಜನರು ತಮ್ಮವರಿಗಾಗಿ ಹುಡುಕುತ್ತಿದ್ದರು. ಆದರೆ ಅದಾಗಲೇ ಒಂದು ಮೃತದೇಹದ ಕೈ ಅದುರುತ್ತಿದ್ದುದನ್ನು ಕಂಡು ಜನ ಬೊಬ್ಬೆ ಹಾಕಿದರು. ಹೇಲರಾಂ ಮತ್ತಿತರರು ಅಲ್ಲಿಗೆ ಧಾವಿಸಿದಾಗ ಅದು ಬೇರೆ ಯಾರೂ ಅಲ್ಲದೆ ಬಿಸ್ವಜೀತ್ ಆಗಿದ್ದ ಎಂದು Times of India ವರದಿ ಮಾಡಿದೆ.
ತಕ್ಷಣ ಆತನನ್ನು ಆ್ಯಂಬುಲೆನ್ಸ್‌ನಲ್ಲಿ ಹಾಕಿ ಕಟಕ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಬಾಂಡ್‌ಗೆ ಸಹಿ ಹಾಕಿ ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ. ಈಗಾಗಲೇ ಮೊಣಕಾಲಿಗೆ ಶಸ್ತ್ರಕ್ರಿಯೆ ನಡೆಸಲಾಗಿದ್ದು ಇನ್ನೂ ಕೆಲ ಶಸ್ತ್ರಕ್ರಿಯೆಗಳು ಬಾಕಿಯಿವೆ ಎನ್ನಲಾಗಿದೆ.
ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ವೇಳೆ ನಿಶ್ಚಲನಾಗಿದ್ದ ಬಿಸ್ವಜೀತ್ ಮೃತಪಟ್ಟಿದ್ದಾನೆಂದು ಭಾವಿಸಿ ಆತನ ದೇಹವನ್ನು ಶವಾಗಾರಕ್ಕೆ ಸಾಗಿಸಿರಬೇಕೆಂದು ಅಂದಾಜಿಸಲಾಗಿದೆ.