ನಾಯಿ ಮಾಂಸ ಸೇವನೆ ನಿಷೇಧ ಆದೇಶವನ್ನು ರದ್ದುಪಡಿಸಿದ ಗುವಾಹಟಿ ಹೈಕೋರ್ಟ್
ಗುವಾಹಟಿ: ನಾಯಿ ಮಾಂಸದ ಮಾರಾಟದ ಮೇಲೆ ಸಾರಾಸಗಟು ನಿಷೇಧ ಹೇರುವ 2020ರ ನಾಗಾಲ್ಯಾಂಡ್ ಸರಕಾರದ ಆದೇಶವನ್ನು ಗೌಹಾಟಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಆದೇಶವು ‘‘ನಾಯಿಗಳ ವಾಣಿಜ್ಯಿಕ ಆಮದು ಮತ್ತು ವ್ಯಾಪಾರವನ್ನು, ನಾಯಿ ಮಾರುಕಟ್ಟೆಯನ್ನು; ಹಾಗೂ ಮಾರುಕಟ್ಟೆಗಳಲ್ಲಿ ನಾಯಿ ಮಾಂಸದ ವಾಣಿಜ್ಯಿಕ ಮಾರಾಟ ಮತ್ತು ರೆಸ್ಟೋರೆಂಟ್ ಗಳಲ್ಲಿ ನಾಯಿ ಮಾಂಸದ ಖಾದ್ಯಗಳನ್ನು ನಿಷೇಧಿಸುತ್ತದೆ’’. ನಾಯಿ ಮಾಂಸವನ್ನು ನಿಷೇಧಿಸುವ ನಿರ್ಧಾರಕ್ಕೆ ನಾಗಾಲ್ಯಾಂಡ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ವಿಶೇಷವಾಗಿ, ತಮ್ಮ ಸಾಂಪ್ರದಾಯಿಕ ಕಾನೂನು ಮತ್ತು ಸಾಮಾಜಿಕ ಆಚರಣೆಗಳನ್ನು ಅನುಸರಿಸುವ ಮತ್ತು ಅವುಗಳನ್ನು ಸಂರಕ್ಷಿಸಿಕೊಂಡು ಬರುವ ಹಕ್ಕನ್ನು ನಾಗಾ ಬುಡಕಟ್ಟು ಪಂಗಡಗಳಿಗೆ ನೀಡುವ ಸಂವಿಧಾನದ 371(ಎ) ವಿಧಿಯನ್ನು ನಿಷೇಧವು ಉಲ್ಲಂಘಿಸುತ್ತದೆ ಎಂದು ಹೇಳಲಾಗಿತ್ತು.
2011ರ ಆಹಾರ ಸುರಕ್ಷತೆ ಮತ್ತು ಮಾನದಂಡ ನಿಯಂತ್ರಣದಲ್ಲಿ, ನಾಯಿ ಮಾಂಸ ಸೇವನೆ ಬಗ್ಗೆ ಏನೂ ಹೇಳಲಾಗಿಲ್ಲ ಎಂದು ತನ್ನ ತೀರ್ಪಿನಲ್ಲಿ ಗೌಹಾಟಿ ಹೈಕೋರ್ಟ್ ಹೇಳಿದೆ.
‘‘ಇದೇನೂ ಅಚ್ಚರಿಯ ಸಂಗತಿಯಲ್ಲ. ಯಾಕೆಂದರೆ, ಈಶಾನ್ಯದ ರಾಜ್ಯಗಳ ಕೆಲವು ಭಾಗಗಳಲ್ಲಿ ಮಾತ್ರ ನಾಯಿ ಮಾಂಸವನ್ನು ಸೇವಿಸಲಾಗುತ್ತದೆ ಮತ್ತು ದೇಶದ ಇತರ ಭಾಗಗಳಲ್ಲಿ ನಾಯಿ ಮಾಂಸವನ್ನು ಸೇವಿಸುವ ಕಲ್ಪನೆಯೇ ಅಪ್ರಸ್ತುತವಾಗಿದೆ’’ ಎಂದು ನ್ಯಾಯಾಲಯ ಹೇಳಿತು.
ನಾಗಾಲ್ಯಾಂಡ್ ನಲ್ಲಿ ಕೆಲವು ಬುಡಕಟ್ಟು ಪಂಗಡಗಳು ನಾಯಿ ಮಾಂಸವನ್ನು ಸೇವಿಸುತ್ತವೆ ಎನ್ನುವುದನ್ನು ಒಪ್ಪದಿರಲು ಯಾವುದೇ ಕಾರಣಗಳಿಲ್ಲ. ಇದು ಹಲವು ಪುಸ್ತಕಗಳಲ್ಲೂ ದಾಖಲಾಗಿದೆ ಎಂದು ಹೈಕೋರ್ಟ್ ಹೇಳಿತು.
‘‘ನಾಯಿ ಮಾಂಸವು ವೈದ್ಯಕೀಯ ಗುಣಗಳನ್ನು ಹೊಂದಿದೆ ಎಂಬ ನಂಬಿಕೆಯೂ ಇದೆ. ನಾಯಿ ಮಾಂಸದ ಸೇವನೆಯು ಒಪ್ಪಿತ ಸಂಪ್ರದಾಯ ಎಂಬಂತೆ ಕಂಡುಬರುತ್ತದೆ. ಆಧುನಿಕ ಕಾಲದಲ್ಲೂ ನಾಯಿ ಮಾಂಸವು ನಾಗಾ ಜನರ ಆಹಾರವಾಗಿದೆ ಎಂಬಂತೆ ಕಾಣುತ್ತದೆ. ಅರ್ಜಿದಾರರು ನಾಯಿಗಳನ್ನು ಸಾಗಿಸುವ ಮತ್ತು ನಾಯಿ ಮಾಂಸವನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನೋಪಾಯ ಸಂಪಾದಿಸುತ್ತಾರೆ’’ ಎಂದು ನ್ಯಾಯಾಲಯ ಹೇಳಿತು.
ನಾಗಾಲ್ಯಾಂಡ್ ನಲ್ಲಿ ನಾಯಿಗಳ ಅವ್ಯಾಹತ ಹತ್ಯೆ ಮತ್ತು ಅವುಗಳ ಮಾಂಸ ಸೇವನೆ ಬಗ್ಗೆ ಲೋಕಸಭಾ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ ಕಳವಳ ವ್ಯಕ್ತಪಡಿಸಿದ ಬಳಿಕ ನಾಯಿ ಮಾಂಸ ಸೇವನೆಗೆ ನಿಷೇಧ ವಿಧಿಸಲಾಗಿತ್ತು.