ಮಣಿಪುರ: ಇಂಟರ್ನೆಟ್ ನಿಷೇಧ ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ
ಇಂಫಾಲ: ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಮಣಿಪುರದಲ್ಲಿ ಮತ್ತೆ ಮತ್ತೆ ಇಂಟರ್ನೆಟ್ ನಿಷೇಧಿಸುತ್ತಿರುವುದರ ವಿರುದ್ಧ ರಾಜ್ಯದ ಇಬ್ಬರು ನಿವಾಸಿಗಳು ಸಲ್ಲಿಸಿದ ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದೇ ರೀತಿಯ ಮನವಿಯನ್ನು ಉಚ್ಚ ನ್ಯಾಯಾಲಯ ಈಗಾಗಲೇ ವಿಚಾರಣೆ ನಡೆಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಹಾಗೂ ರಾಜೇಶ್ ಬಿಂದಾಲ್ ಅವರನ್ನೊಳಗೊಂಡ ರಜಾಕಾಲದ ಪೀಠ ಹೇಳಿದೆ. ‘‘ಉಚ್ಚ ನ್ಯಾಯಾಲಯ ಈ ವಿಷಯದ ಕುರಿತು ವಿಚಾರಣೆ ನಡೆಸುತ್ತಿದೆ. ಮತ್ತೆ ಇಲ್ಲಿ ಪುನರಾವರ್ತಿಸುವ ಅಗತ್ಯತೆ ಏನಿದೆ?’’ ಎಂದು ಪೀಠ ಪ್ರಶ್ನಿಸಿತು.
ಚೊಂಗ್ತಾಮ್ ವಿಕ್ಟರ್ ಸಿಂಗ್ ಹಾಗೂ ಮಾಯೇಂಗ್ಬಾಮ್ ಜೆಮ್ಸ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಶಾದನ್ ಫರಾಸತ್, ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ಇಂಟರ್ನೆಟ್ ನಿಷೇಧಿಸುತ್ತಿರುವುದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನಲ್ಲಿ ಹಾಗೂ ಇಂಟರ್ನೆಟ್ ಬಳಸಿಕೊಂಡು ಉದ್ಯಮ ನಡೆಸುವ ಹಕ್ಕಿನಲ್ಲಿ ತೀವ್ರವಾದ ಹಸ್ತಕ್ಷೇಪ ಎಂದು ಮನವಿ ಹೇಳಿದೆ.
ಮಣಿಪುರ ಸರಕಾರ ಇಂಟರ್ನೆಟ್ ಸ್ಥಗಿತವನ್ನು ಜೂನ್ 10ರ ವರೆಗೆ ಮಂಗಳವಾರ ವಿಸ್ತರಿಸಿದೆ. ಬ್ರಾಡ್ ಬ್ಯಾಂಡ್ ಸೇರಿದಂತೆ ಮೊಬೈಲ್ ಡಾಟಾ ಸೇವೆಯ ಸ್ಥಗಿತವನ್ನು ಜೂನ್ 10ರ ಸಂಜೆ 3 ಗಂಟೆ ವರೆಗೆ ವಿಸ್ತರಿಸಲಾಗಿದೆ ಎಂದು ಆಯುಕ್ತ ಎಚ್. ಜ್ಞಾನ ಪ್ರಕಾಶ್ ಆದೇಶ ನೀಡಿದ್ದಾರೆ. ಈ ನಿಷೇಧವನ್ನು ಮೇ 3ರಂದು ಹೇರಲಾಗಿತ್ತು.