ಡೆಹ್ರಾಡೂನ್: ಉತ್ತರಾಖಂಡ ತೊರೆಯುವಂತೆ ಬೆದರಿಕೆಗಳ ನಡುವೆ ಜೂ.18ರಂದು ಮುಸ್ಲಿಮರ ಮಹಾಪಂಚಾಯತ್

Update: 2023-06-12 16:06 GMT

ಡೆಹ್ರಾಡೂನ್: ಹಿಂದುತ್ವವಾದಿಗಳು ತಮ್ಮ ಸಮುದಾಯವನ್ನು ಗುರಿಯಾಗಿಸಿಕೊಂಡಿರುವುದನ್ನು ಪ್ರತಿಭಟಿಸಲು ಉತ್ತರಾಖಂಡದ ಡೆಹ್ರಾಡೂನ್ ನಲ್ಲಿಯ ಮುಸ್ಲಿಮ್ ನಾಯಕರು ಜೂ.18ರಂದು ‘ಮಹಾಪಂಚಾಯತ್’ನ್ನು ಹಮ್ಮಿಕೊಂಡಿದ್ದಾರೆ.

ಉತ್ತರಾಖಂಡವನ್ನು ತೊರೆಯುವಂತೆ ನಗರದಲ್ಲಿಯ ಮುಸ್ಲಿಮ್ ವ್ಯಾಪಾರಿಗಳಿಗೆ ಹಿಂದುತ್ವ ಗುಂಪುಗಳ ಬೆದರಿಕೆಗಳ ನಡುವೆಯೇ ಸಮುದಾಯದ ನಾಯಕರು ಈ ಬೃಹತ್ ಸಮಾವೇಶಕ್ಕೆ ಕರೆ ನೀಡಿದ್ದಾರೆ. ಪುರೋಲಾ ಪ್ರದೇಶದಲ್ಲಿ ಓರ್ವ ಮುಸ್ಲಿಮ್ ಮತ್ತು ಓರ್ವ ಹಿಂದು ಸೇರಿದಂತೆ ಇಬ್ಬರು ಯುವಕರು 14ರ ಹರೆಯದ ಹಿಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದರೆನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಉತ್ತರಕಾಶಿಯನ್ನು ತೊರೆಯುವಂತೆ ಜೂ.5ರಂದು ಮುಸ್ಲಿಮ್ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಅಪಹರಣವು ‘ಲವ್ ಜಿಹಾದ್ ’ಪ್ರಕರಣವಾಗಿತ್ತು ಎಂದು ಹಿಂದುತ್ವ ಗುಂಪುಗಳು ಆರೋಪಿಸಿವೆ.

ಎಚ್ಚರಿಕೆಯ ಪೋಸ್ಟರ್ ಗಳನ್ನು ಪುರೋಲಾ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಅಂಟಿಸಲಾಗಿದ್ದು, ಇದರಿಂದ ಆತಂಕಗೊಂಡಿದ್ದ ಹಲವಾರು ಮುಸ್ಲಿಮ್ ವ್ಯಾಪಾರಿಗಳು ಪಟ್ಟಣವನ್ನು ತೊರೆದಿದ್ದಾರೆ. ಮುಸ್ಲಿಮರ ಒಡೆತನದ ಅಂಗಡಿಗಳನ್ನು ಗುರುತಿಸಲು ಅವುಗಳ ಬಾಗಿಲಿಗೆ ಕಪ್ಪುಬಣ್ಣದಿಂದ ಗುರುತನ್ನು ಹಾಕಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಜೂ.18ರಂದು ನಡೆಯಲಿರುವ ಮಹಾಪಂಚಾಯತ್ ನಲ್ಲಿ ರಾಜ್ಯಾದ್ಯಂತದಿಂದ ಜನರು ಭಾಗವಹಿಸಲಿದ್ದಾರೆ ಎಂದು ಮುಸ್ಲಿಮರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಮುಸ್ಲಿಮ್ ಸೇವಾ ಸಂಘಟನ್ ನ ಮಾಧ್ಯಮ ವಿಭಾಗದ ಉಸ್ತುವಾರಿ ವಸೀಮ್ ಅಹ್ಮದ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಅಪಹರಣ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು, ಆದರೆ ಅದಕ್ಕಾಗಿ ಇಡೀ ಸಮುದಾಯವನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಹೇಳಿದ ಡೆಹ್ರಾಡೂನ್ ನಲ್ಲಿ ಮೌಲ್ವಿಯಾಗಿರುವ ಮುಹಮ್ಮದ್ ಅಹ್ಮದ್ ಕಾಸ್ಮಿ ಅವರು,‘ನಾವು ಮಹಾಪಂಚಾಯತ್ ಮೂಲಕ ಅಮಾಯಕರನ್ನು ಶಿಕ್ಷಿಸಬೇಡಿ ಎಂದು ಮನವಿ ಮಾಡಿಕೊಳ್ಳಲಷ್ಟೇ ಬಯಸಿದ್ದೇವೆ ’ಎಂದು ತಿಳಿಸಿದರು.

ಈ ನಡುವೆ ಉತ್ತರಕಾಶಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವವಾದಿಗಳ ದ್ವೇಷಪೂರಿತ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

‘ಜಿಹಾದಿಗಳನ್ನು ಉತ್ತರಾಖಂಡದಿಂದ ತೊಲಗಿಸಬೇಕು ’ಎಂದು ಫೇಸ್ಬುಕ್ ವೀಡಿಯೊದಲ್ಲಿ ಆಗ್ರಹಿಸಿರುವ ಹಿಂದುತ್ವವಾದಿ ಪ್ರಬೋಧಾನಂದ ಗಿರಿ, ಈ ಜಿಹಾದಿಗಳು ರಾಜಕಾರಣಿಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ‘ಜಿಹಾದಿಗಳನ್ನು ತೊಲಗಿಸಿ, ಉತ್ತರಾಖಂಡವನ್ನು ಉಳಿಸಿ ’ ಘೋಷಣೆಯನ್ನು ಮೊಳಗಿಸುವಂತೆ ರಾಜ್ಯದ ಜನತೆಯನ್ನು ಕೇಳಿಕೊಂಡಿದ್ದಾನೆ. 2021ರಲ್ಲಿ ಹರಿದ್ವಾರದಲ್ಲಿ ನಡೆದಿದ್ದ ಧರ್ಮಸಂಸತ್ ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷಭಾಷಣ ಮಾಡಿದ್ದ ಆರೋಪಿಗಳಲ್ಲಿ ಗಿರಿ ಸೇರಿದ್ದಾನೆ.

ತೆಹ್ರಿ ಗಡ್ವಾಲ್ ಜಿಲ್ಲಾಧಿಕಾರಿಗಳಿಗೆ ಜೂ.5ರಂದು ಬರೆದಿರುವ ಪತ್ರದಲ್ಲಿ,ಮುಸ್ಲಿಮ್ ವ್ಯಾಪಾರಿಗಳು ಪಟ್ಟಣವನ್ನು ತೊರೆಯದಿದ್ದರೆ ಜೂ.20ರಂದು ಪ್ರತಿಭಟನೆಯನ್ನು ನಡೆಸಿರುವುದಾಗಿ ತಿಳಿಸಿರುವ ಬಜರಂಗ ದಳವು,ಅದಕ್ಕಾಗಿ ಅನುಮತಿಯನ್ನು ಕೋರಿದೆ.

ಅಪಹರಣ ಆರೋಪಿಗಳಾದ ಸ್ಥಳೀಯ ವ್ಯಾಪಾರಿ ಉಬೈದ್ ಖಾನ್ (24) ಮತ್ತು ಬೈಕ್ ಮೆಕ್ಯಾನಿಕ್ ಜಿತೇಂದ್ರ ಸೈನಿ (23) ಎನ್ನುವವರನ್ನು ಮೇ 27ರಂದು ಬಂಧಿಸಿದ ಬಳಿಕ ಉತ್ತರಕಾಶಿಯಲ್ಲಿ ಕೋಮು ಉದ್ವಿಗ್ನತೆ ಆರಂಭಗೊಂಡಿತ್ತು. ಮೇ 26ರಂದು ಈ ಅಪಹರಣ ಯತ್ನ ನಡೆದಿತ್ತು.

Similar News