ಬಿಹಾರ ಸಂಪುಟಕ್ಕೆ ಜಿತಿನ್ ರಾಮ್ ಮಾಂಜಿ ಪುತ್ರ ಸುಮನ್ ರಾಜೀನಾಮೆ

Update: 2023-06-13 16:49 GMT

ಹೊಸದಿಲ್ಲಿ: ಹಿಂದೂಸ್ತಾನಿ ಅವಾಮಿ ಮೋರ್ಚಾ ಅಧ್ಯಕ್ಷ ಸಂತೋಷ್ ಕುಮಾರ್ ಸುಮನ್ ಅವರು ಬಿಹಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಜಿ ಅವರ ಪುತ್ರನಾದ ಸುಮನ್ ಅವರು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸಂಪುಟದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ.

ತನ್ನ ಪಕ್ಷವನ್ನು ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳದ ಜೊತೆ ವಿಲೀನಗೊಳಿಸುವಂತೆ ಒತ್ತಡ ಹೇರಲಾಗುತ್ತಿದೆಯೆಂದು ಸುಮನ್ ಆರೋಪಿಸಿದ್ದಾರೆ. ‘‘ ನಮ್ಮ ಪಕ್ಷದ ಅಸ್ತಿತ್ವಕ್ಕೆ ಬೆದರಿಕೆಯುಂಟಾಗಿದೆ. ಹೀಗಾಗಿ ನಾನು ಈ ಹೆಜ್ಜೆಯಿಟ್ಟಿದ್ದೇನೆ’’ ಎಂದವರು ತನ್ನ ರಾಜೀನಾಮೆಗೆ ಕಾರಣ ನೀಡಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಾಟ್ನಾದಲ್ಲಿ ಜೂನ್ 23ರಂದು ನಡೆದ ಪ್ರತಿಪಕ್ಷಗಳ ಸಭೆಗೆ ತನ್ನ ಪಕ್ಷಕ್ಕೆ ಆಹ್ವಾನ ನೀಡಿರಲಿಲ್ಲವೆಂದು ಸುಮನ್ ಅವರು ಆರೋಪಿಸಿದ್ದಾರೆ. ಬಿಹಾರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿ ತನ್ನ ಪಕ್ಷವು ಉಳಿಯಬೇಕೇ ಎಂಬುದನ್ನು ನಿತೀಶ್ ನಿರ್ಧರಿಸಬೇಕಾಗಿದೆಯೆಂದು ಅವರು ತಿಳಿಸಿದ್ದಾರೆ.

234 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಹಿಂದೂಸ್ತಾನಿ ಅವಾಮಿ ಮೋರ್ಚಾ ನಾಲ್ವರು ಶಾಸಕರನ್ನು ಹೊಂದಿದೆ.

ಆರ್‌ಜೆಡಿ , ಜನತಾದಳ (ಸಂಯುಕ್ತ), ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ-ಎಲ್) ಹಾಗೂ ಸಿಪಿಎಂ ಪಕ್ಷಗಳು ಬಿಹಾರದ ಆಡಳಿತಾರೂಢ ಮಹಾಘಟಬಂಧನ್ ಸರಕಾರದ ಅಂಗಪಕ್ಷಗಳಾಗಿವೆ.

ಆರ್‌ಜೆಡಿ ವಕ್ತಾರ ಮೃತ್ಯುಂಜಯ ತಿವಾರಿ ಅವರು ಸುಮನ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ್ದು, ‘‘ ಸಂಪುಟ ತೊರೆಯುವಂತೆ ಸುಮನ್ ಅವರಿಗೆ ಬಿಜೆಪಿ ಕುಮ್ಮಕ್ಕು ನೀಡಿದೆ’’ ಎಂದು ಆರೋಪಿಸಿದ್ದಾರೆ.

ಸುಮನ್ ಅವರ ಪುತ್ರ ಜಿತಿನ್ ರಾಮ್ ಮಾಂಜಿ ಅವರು ಎಪ್ರಿಲ್ನಲ್ಲಿ ದಿಲ್ಲಿಯಲ್ಲಿ ಅಮಿತ್ಶಾ ಅವರನ್ನು ಭೇಟಿಯಾಗಿರುವುದು ಊಹಾಪೋಹಗಳಿಗೆ ಕಾರಣವಾಗಿತ್ತು.

Similar News