ಆಧಾರ್ ಅಪ್ಡೇಟ್‌ ಮಾಡುವುದಿದ್ದರೆ ಇನ್ನು ಮುಂದೆ ಹಣ ಪಾವತಿಸಬೇಕು !

Update: 2023-06-14 17:06 GMT

ಹೊಸದಿಲ್ಲಿ: ಹತ್ತು ವರ್ಷಗಳ ಹಿಂದೆ ನೀಡಲಾದ ಆಧಾರ್ ಕಾರ್ಡ್ ಅನ್ನು  ಉಚಿತವಾಗಿ ಅಪ್ಡೇಟ್ ಮಾಡುವ ಕೊಡುಗೆಯು ಬುಧವಾರ ಕೊನೆಗೊಂಡಿದೆ.

ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಅಭಿಯಾನವನ್ನು ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ (UIDAI) ಮಾರ್ಚ್ ನಲ್ಲಿ ಆರಂಭಿಸಿತ್ತು. ಜೂನ್ 14ರವರೆಗೆ ಪೌರರು ತಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್‌ ಮಾಡುವ ಕೊಡುಗೆಯನ್ನು ನೀಡಿತ್ತು.

ಆಧಾರ್ ಕಾರ್ಡ್ ನ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡುವ UIDAIನ ಸೀಮಿತ ಅವಧಿಯ ಕೊಡುಗೆಯು ಬುಧವಾರ ಕೊನೆಗೊಂಡಿದೆ. ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದಿದ್ದು, ಆನಂತರ ಅದನ್ನು ಅಪ್ಡೇಟ್ ಮಾಡದೆ ಇದ್ದವರಿಗೆ ಈ ನಿಯಮ ಅನ್ವಯಿಸುತ್ತದೆ. ಈ ಸೌಲಭ್ಯವನ್ನು ಪಡೆಯಲು ಬಯಸುವವರು ತಮ್ಮ ಗುರುತು ಹಾಗೂ ವಿಳಾಸದ ಪುರಾವೆಯನ್ನು (UIDAI)ನ ಅಧಿಕೃತ ವೆಬ್ಸೈಟ್ ನಲ್ಲಿ ಸಲ್ಲಿಸಬೇಕಾಗುತ್ತದೆ. ಇನ್ನು ಮುಂದೆ ಪ್ರತಿಯೊಂದು ಆಧಾರ್ ಕಾರ್ಡ್ ಅಪ್ಡೇಟ್‌ ಗೊಳಿಸಲು ಸಾಮಾನ್ಯವಾಗಿ 50 ರೂ. ಶುಲ್ಕ ತಗಲುತ್ತದೆ ಎಂದು ಯುಐಡಿಎಐ ಹೇಳಿಕೆಯಲ್ಲಿ ತಿಳಿಸಿದೆ.

ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದಿರುವವರು , ಆನಂತರ ಅದನ್ನು ಅಪ್ಡೇಟ್ ಮಾಡದೇ ಇದ್ದಲ್ಲಿ, ಅವರು ತಮ್ಮ ಗುರುತು ಹಾಗೂ ವಿಳಾಸದ ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ಆಧಾರ್ನ ಅಧಿಕೃತ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ (UIDAI) ತಿಳಿಸಿದೆ.

ಆಧಾರ್‌ ಕಾರ್ಡ್ ಅಪ್ಡೇಟ್ ಮಾಡುವವರು ಸೇವಾ ಕೋರಿಕೆ ಸಂಖ್ಯೆ (Service Request Number)ಯನ್ನು ಬರೆದಿಡಬೇಕು. ಯಾಕೆಂದರೆ, ಆಧಾರ್ ಅಪ್ಡೇಟ್ ಕೋರಿಕೆಯು ಯಾವ ಹಂತದಲ್ಲಿದೆಯೆಂಬುದನ್ನು ತಿಳಿದುಕೊಳ್ಳಲು ಇದರಿಂದ ಪ್ರಯೋಜನವಾಗಲಿದೆ ಎಂದು ಯುಐಡಿಎಐ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆಧಾರ್ ವಿವರಗಳನ್ನು ಅಪ್ಡೇಟ್ ಮಾಡುವುದು ಯಾಕೆ ಅಗತ್ಯ?

ಆಧಾರ್ ಒಂದು ಮುಖ್ಯವಾದ ಗುರುತಿನ ಪುರಾವೆಯಾಗಿರುವುದರಿಂದ, ಅದರ ವಿವರಗಳು ಅಪ್ಡೇಟ್ ಆಗಿರುವುದು ಅತ್ಯಂತ ಅಗತ್ಯ. ಉದಾಹರಣೆಗೆ ಒಂದು ವೇಳೆ ಒಂದು ಮಗುವಿಗೆ ಐದು ವರ್ಷಕ್ಕಿಂತ ಕೆಳಗಿನ ಪ್ರಾಯದಲ್ಲಿ ಆಧಾರ್ ಗೆ ನೋಂದಣಿ ಮಾಡಿದ್ದಲ್ಲಿ, ಅದು 5 ವರ್ಷ ದಾಟಿದಾಗ ಹಾಗೂ 15 ವರ್ಷ ಪೂರ್ಣಗೊಂಡಾಗ, ಹೀಗೆ ಎರಡು ಸಲ ಆಧಾರ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ ಎಂದು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Similar News