ಮಣಿಪುರ ಹಿಂಸಾಚಾರ: ಸೇನಾ ಯೋಧನಿಗೆ ಗಾಯ

Update: 2023-06-19 17:48 GMT

 ಗುವಾಹಟಿ: ಪ್ರಕ್ಷುಬ್ಧ ಮಣಿಪುರದಲ್ಲಿ ಸೋಮವಾರ ದುಷ್ಕರ್ಮಿಗಳ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಸೇನಾ ಯೋಧನೋರ್ವ ಗಾಯಗೊಂಡಿದ್ದಾನೆ.

ನಸುಕಿನಲ್ಲಿ ಅಪರಿಚಿತ ಬಂದೂಕುಧಾರಿಗಳ ಗುಂಪೊಂದು ಗ್ರಾಮವೊಂದರ ಮೇಲೆ ದಾಳಿ ನಡೆಸಲು ಇಂಫಾಲ ಪಶ್ಚಿಮ ಜಿಲ್ಲೆಯ ಕಾಂಟೊ ಸಬಲ್‌ಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ದುಷ್ಕರ್ಮಿಗಳು ಗ್ರಾಮದಲ್ಲಿಯ ಮೂರು ಮನೆಗಳಿಗೂ ಬೆಂಕಿ ಹಚ್ಚಿದ್ದಾರೆ.

ಗುಂಡೇಟಿನಿಂದ ಕಾಲಿಗೆ ಗಾಯಗೊಂಡಿರುವ ಯೋಧನನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆತನ ದೇಹಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕಾಂಟೊ ಸಬಲ್‌ನಿಂದ ಚಿನ್‌ಮಾಂಗ್ ಗ್ರಾಮದತ್ತ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ್ದರು. ಪ್ರದೇಶದಲ್ಲಿ ಗ್ರಾಮಸ್ಥರ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೇನಾಪಡೆಗಳು ನಿಯಂತ್ರಿತ ಪ್ರತಿದಾಳಿಯನ್ನು ನಡೆಸಿದ್ದವು ಎಂದು ಸೇನೆಯ ಸ್ಪಿಯರ್ ಕಾರ್ಪ್ಸ್ ಟ್ವೀಟಿಸಿದೆ.

ಈ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದ್ದು,ಜಂಟಿ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದರು.

ರಾಜ್ಯದಲ್ಲಿ ಮುಂದುವರಿದಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು ಶಾಂತಿಗಾಗಿ ತನ್ನ ಮನವಿಯನ್ನು ಪುನರುಚ್ಚರಿಸಿದ್ದಾರೆ.

 ‘ನಸುಕಿನ 1:30ರ ಸುಮಾರಿಗೆ ನನಗೆ ಘಟನೆಯ ಬಗ್ಗೆ ಮಾಹಿತಿ ಲಭಿಸಿದ್ದು,ತಕ್ಷಣ ಹಿರಿಯ ಸೇನಾಧಿಕಾರಿ ಜೊತೆ ಮಾತನಾಡಿದ್ದೆ. ವಿಷಯವನ್ನು ಪರಿಶೀಲಿಸುವುದಾಗಿ ಅವರು ನನಗೆ ಭರವಸೆ ನೀಡಿದಾರೆ. ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬಳಿಕ ಬೆಂಕಿಯನ್ನು ನಂದಿಸಲಾಗಿದೆ’ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಭದ್ರತಾ ಸ್ಥಿತಿಯನ್ನು ಪುನರ್‌ಪರಿಶೀಲಿಸಲು ಶೀಘ್ರವೇ ಸಭೆಯೊಂದನ್ನು ಕರೆಯುವುದಾಗಿ ಅವರು ತಿಳಿಸಿದರು.

Similar News