ಉತ್ತರಪ್ರದೇಶ: ಉಷ್ಣಮಾರುತದಿಂದ ಮತ್ತೆ 11 ಮಂದಿ ಮೃತ್ಯು

Update: 2023-06-20 02:37 GMT

ಲಕ್ನೋ: ಉತ್ತರ ಪ್ರದೇಶದ ಬಲಿಯಾ ಪ್ರದೇಶದಲ್ಲಿ ಉಷ್ಣಮಾರುತದ ಕಾರಣದಿಂದ ವಿವಿಧ ಅಸ್ವಸ್ಥತೆಗಳಿಗಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದ ಮತ್ತೆ 11 ಮಂದಿ ಮೃತಪಟ್ಟಿದ್ದು, ಬಲಿಯಾದವರ ಒಟ್ಟು ಸಂಖ್ಯೆ 68ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಪ್ರದೇಶದ ಆರೋಗ್ಯ ಇಲಾಖೆಯ ತನಿಖಾ ತಂಡವನ್ನು ಪೂರ್ವ ಉತ್ತರ ಪ್ರದೇಶ ಜಿಲ್ಲೆಗೆ ಕಳುಹಿಸಲಾಗಿದ್ದು, ಸಾವಿನ ಕಾರಣವನ್ನು ದೃಢಪಡಿಸುವಂತೆ ಸೂಚಿಸಲಾಗಿದೆ. ತಂಡ ಸೋಮವಾರ ವಿವಿಧ ಕಡೆಗಳಿಗೆ ತೆರಳಿ ತಪಾಸಣೆ ನಡೆಸಿದೆ.

ಈ ಭಾಗದಲ್ಲಿ ಉಷ್ಣಮಾರುತದ ಹೊಡೆತಕ್ಕೆ ಭಾರಿ ಸಂಖ್ಯೆಯ ಜನ ಅಸ್ವಸ್ಥಗೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಭಾನುವಾರದ ವರೆಗೆ ಉಷ್ಣಮಾರುತದಿಂದ ಮೃತಪಟ್ಟವರ ಸಂಖ್ಯೆ ಎರಡು ಮಾತ್ರ ಎಂದು ಬಲಿಯಾ ಮುಖ್ಯ ವೈದ್ಯಾಧಿಕಾರಿ ಡಾ.ಜಯಂತ್ ಕುಮಾರ್ ಹೇಳಿದ್ದಾರೆ.

ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಡಾ.ಎ.ಕೆ.ಸಿಂಗ್ ಹಾಗೂ ವೈದ್ಯಕೀಯ ಆರೈಕೆ ವಿಭಾಗದ ನಿರ್ದೇಶಕ ಕೆ.ಎನ್.ತಿವಾರಿ ಅವರನ್ನೊಳಗೊಂಡ ಸಮಿತಿ ಅತ್ಯಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿರುವ ಬನ್ಸಿದ್ ತಾಲೂಕಿಗೆ ಭೇಟಿ ನೀಡಿದೆ.

ಎರಡು ಅಧಿಕಾರಿಗಳ ತಂಡ ಜಿಲ್ಲಾಸ್ಪತ್ರೆಗೂ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಿದ್ದು, ಆಸ್ಪತ್ರೆಯಲ್ಲಿ ವ್ಯವಸ್ಥೆ ಸುಧಾರಿಸುತ್ತಿದೆ. ಐದು ಹೆಚ್ಚುವರಿ ಏರ್‍ಕೂಲರ್‍ಗಳನ್ನು ವಾರ್ಡ್‍ನಲ್ಲಿ ಅಳವಡಿಸಲಾಗಿದೆ ಎಂದು ತಿವಾರಿ ವಿವರಿಸಿದ್ದಾರೆ. ಸಾವಿನ ಸಂಖ್ಯೆಯ ಬಗ್ಗೆ ಪ್ರತಿಕ್ರಿಯಿಸಿ, "ಇದು ಕಾಕತಾಳೀಯವೂ ಆಗಿರಬಹುದು. ಏಕೆಂದರೆ ಈ ಪೈಕಿ ಬಹುತೇಕ ಮಂದಿ ವೃದ್ಧರು ಇತರ ಸಹ ಅಸ್ವಸ್ಥತೆಗಳನ್ನೂ ಹೊಂದಿದ್ದರು" ಎಂದು ಹೇಳಿದರು. ಆದಾಗ್ಯೂ ಸಾವುಗಳು ಉಷ್ಣಮಾರುತದ ಹೊಡೆತದಿಂದ ಸಂಭವಿಸಿವೆ ಎಂಬ ವರದಿಗಳನ್ನು ವೈದ್ಯಕೀಯ ಆರೈಕೆ ವಿಭಾಗದ ನಿರ್ದೇಶಕರು ಅಲ್ಲಗಳೆದಿದ್ದಾರೆ.

Similar News