ಶಿಥಿಲ ಬೇರುಗಳ ನಡುವೆ ಹಸಿರೆಲೆಯ ಚೆಲುವು
ಬಡತನ, ಅಪೌಷ್ಟಿಕತೆ, ನಿರ್ವಸತಿಕತೆ, ದಾರಿದ್ರ್ಯ, ಹಸಿವೆ ಇವೆಲ್ಲವನ್ನೂ ನಮ್ಮ ಪೂರ್ವ ಜನ್ಮದ ಕರ್ಮ ಎಂದು ಭಾವಿಸುತ್ತಾ, ಮೌನವಾಗಿ ಅನುಭವಿಸುತ್ತಾ, ಸದ್ದಿಲ್ಲದೆ ನರಳುತ್ತಿರುವ ಅಪಾರ ಸಂಖ್ಯೆಯ ಜನಸ್ತೋಮದ ನಡುವೆ ಒಂದು ಸುಶಿಕ್ಷಿತ, ನಾಗರಿಕ, ಆಧುನಿಕ ಸಮಾಜವನ್ನೂ ಸ್ವತಂತ್ರ ಭಾರತ ತನ್ನ 75 ವರ್ಷಗಳ ಆಳ್ವಿಕೆಯಲ್ಲಿ ರೂಪಿಸಿದೆಯಲ್ಲವೇ? ಸಾಂವಿಧಾನಿಕ ಸವಲತ್ತುಗಳು, ಆರ್ಥಿಕ ಸೌಲಭ್ಯಗಳು ಹಾಗೂ ಸಾಮಾಜಿಕ ಸುರಕ್ಷತೆಯೊಂದಿಗೆ ಬದುಕುತ್ತಿರುವ ಈ ಹಿತವಲಯದ ಜನಸ್ತೋಮದ ದೃಷ್ಟಿಯಲ್ಲಿ ಕೆಳಸ್ತರದ ಸಮಾಜದಲ್ಲಿ ತಾಂಡವಾಡುತ್ತಿರುವ ಈ ಜೀವನೋಪಾಯದ ಸಮಸ್ಯೆಗಳು ನಗಣ್ಯವಾಗಿರುವಷ್ಟೇ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ನಿರಂತರ ಅತ್ಯಾಚಾರ ಹಾಗೂ ಕಗ್ಗೊಲೆಗಳೂ ನಗಣ್ಯವಾಗಿರುವುದು ಢಾಳಾಗಿ ಕಾಣಿಸುವಂತಹ ದುರಂತ ಸತ್ಯ.
ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಮಹಿಳಾ ನ್ಯಾಯಾಧೀಶೆಯೊಬ್ಬರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರಿಗೆ ಖಾಸಗಿಯಾಗಿ ಒಂದು ಪತ್ರ ಬರೆದು ತಮಗೆ ಜೀವ ಕಳೆದುಕೊಳ್ಳಲು ಅನುಮತಿ ನೀಡುವಂತೆ ಕೋರುತ್ತಾರೆ. ನ್ಯಾಯಾಂಗದ ವಿಶಾಲ ಆವರಣದಲ್ಲೇ ಬದುಕು ಕಟ್ಟಿಕೊಳ್ಳುತ್ತಿರುವ ಈ ನೊಂದ ಹೆಣ್ಣು ಜೀವ ತನ್ನ ಬದುಕಿನ ಪಯಣಕ್ಕೆ ಅಂತ್ಯ ಹಾಡಲು ಅಪೇಕ್ಷಿಸಿರುವುದಕ್ಕೆ ಕಾರಣ ಕೌಟುಂಬಿಕ ಸಮಸ್ಯೆಗಳಲ್ಲ ಅಥವಾ ಜೀವನ ನಿರ್ವಹಣೆಯ ಸವಾಲುಗಳೂ ಅಲ್ಲ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದಿಂದ ನೊಂದಿರುವ ಈ ಮಹಿಳೆ, ಬಾರಾಬಂಕಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಎದುರಿಸಿದ ಲೈಂಗಿಕ ಕಿರುಕುಳ ಮತ್ತು ನಿಂದನೆಯಿಂದ ಬೆಂದು ಹೋಗಿದ್ದು, ತನಗೆ ನ್ಯಾಯ ದೊರೆಯುತ್ತದೆ ಎಂಬ ಭರವಸೆಯನ್ನೇ ಕಳೆದುಕೊಂಡು, ಜೀವತ್ಯಾಗದ ನಿರ್ಧಾರಕ್ಕೆ ಬಂದು ನಿಂತಿದ್ದಾರೆ. ‘‘ನಾನೊಬ್ಬಳು ಅನಗತ್ಯ ಹುಳುವಿನಂತೆ ಭಾಸವಾಗುತ್ತಿದೆ... ಜೀವಂತ ಶವದಂತೆ ಆಗಿದ್ದೇನೆ...’’ ಎಂಬ ವರದಿಯಾಗಿರುವ ಈಕೆಯ ಮಾತುಗಳು ಗಾಢ ನಿದ್ರಾವಸ್ಥೆಯ ಸಮಾಜವನ್ನೂ ಬಡಿದೆಬ್ಬಿಸುವಂತಿದೆ.
ಈ ಘಟನೆಯು ನ್ಯಾಯಾಂಗದ ಪರಿಧಿಯಲ್ಲಿದ್ದು ಸುಪ್ರೀಂಕೋರ್ಟ್ ದೂರನ್ನು ಗಂಭೀರವಾಗಿ ಪರಿಗಣಿಸಿರುವುದೇ ಅಲ್ಲದೆ ತನಿಖೆಯು ಯಾವ ಹಂತದಲ್ಲಿದೆ ಎಂದು ಮಾಹಿತಿ ನೀಡುವಂತೆ ಅಲಹಾಬಾದ್ ಹೈಕೋರ್ಟ್ಗೆ ಸೂಚನೆ ನೀಡಿರುವುದು ಆಶಾವಾದವನ್ನು ಮೂಡಿಸುತ್ತದೆ. ಈ ಘಟನೆಯನ್ನು ಪ್ರತ್ಯೇಕಿಸಿ ವ್ಯಕ್ತಿಗತ ನೆಲೆಯಲ್ಲಿ ನೋಡುವುದಕ್ಕಿಂತಲೂ ನ್ಯಾಯಾಂಗವನ್ನು ಪ್ರತಿನಿಧಿಸುವ ಓರ್ವ ಮಹಿಳೆಯ ಈ ಆತಂಕ-ನಿರಾಸೆ-ಹತಾಶೆಯನ್ನು ವಿಶಾಲ ಸಮಾಜದ ಬಯಲಲ್ಲಿಟ್ಟು ನೋಡಿದಾಗ, ಈಕೆ ಏಕಾಂಗಿಯಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮಹಿಳಾ ಕುಸ್ತಿಪಟುಗಳೂ, ಮಣಿಪುರದ ಮಹಿಳೆಯರೂ ಇದನ್ನೇ ಧ್ವನಿಸಿದ್ದಾರೆ. ಅದರೆ ನವ ಭಾರತದ ಮುಂದುವರಿದ ಸಮಾಜದಲ್ಲಿ ಅಪರಾಧ ಎನ್ನುವುದು ಹಲವು ಆಯಾಮಗಳಲ್ಲಿ ನಿಷ್ಕರ್ಷೆಗೊಳಗಾಗಿದ್ದು ಪಾತಕ ಜಗತ್ತಿನಲ್ಲಿ ಹೆಚ್ಚು ಹೆಚ್ಚು ಸದಸ್ಯರು ಸಂತ್ರಸ್ತರಾಗಿ ಕೊನೆಯಾಗುತ್ತಿದ್ದಾರೆ. ‘ಅಪರಾಧ’ ಎನ್ನುವುದು ಒಂದು ಸಾಮಾಜಿಕ ಅನಿಷ್ಟ ಎನ್ನುವ ಪರಿಜ್ಞಾನವೇ ಇಲ್ಲದಂತೆ, ಸಾರ್ವಜನಿಕ ವಲಯದಲ್ಲಿ ಸಹ ಸ್ವೀಕೃತ ವಿದ್ಯಮಾನವಾಗಿರುವುದರಿಂದಲೇ ರಾಜಕೀಯವನ್ನು ಅಪರಾಧೀಕರಣದಿಂದ ಮುಕ್ತಗೊಳಿಸುವ ಕ್ಷೀಣ ಧ್ವನಿಯೂ ಕೇಳದಂತಾಗಿದೆ.
ರಾಜಕಾರಣ ಮತ್ತು ಅಪರಾಧ
ಮತ್ತೊಂದು ಪ್ರಸಂಗದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಉತ್ತರಪ್ರದೇಶದ ದುದ್ದಿ ಕ್ಷೇತ್ರದ ಬಿಜೆಪಿ ಶಾಸಕನಿಗೆ ಸೆಷನ್ಸ್ ನ್ಯಾಯಾಲಯ 25 ವರ್ಷ ಜೈಲು ಶಿಕ್ಷೆ ವಿಧಿಸಿದೆ. 2014ರಲ್ಲಿ ನಡೆದ ಈ ಘಟನೆಗೆ ಗುರಿಯಾಗಿದ್ದ ಬಾಲಕಿ ಈಗ ವಿವಾಹವಾಗಿದ್ದು ಎಂಟು ವರ್ಷದ ಮಗಳೊಂದಿಗೆ ಬಾಳ್ವೆ ನಡೆಸುತ್ತಿದ್ದಾಳೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳತ್ತ ನೋಡಿದಾಗ ಮಧ್ಯಪ್ರದೇಶದಲ್ಲಿ ಶೇ. 40ರಷ್ಟು ಚುನಾಯಿತ ಜನಪ್ರತಿನಿಧಿಗಳು ಅಂದರೆ 89 ಶಾಸಕರು ಅಪರಾಧದ ಹಿನ್ನೆಲೆ ಉಳ್ಳವರಾಗಿದ್ದಾರೆ. ಹಾಗೆಯೇ 205 ಶಾಸಕರು ಕೋಟ್ಯಧಿಪತಿಗಳೂ ಆಗಿದ್ದಾರೆ ಎನ್ನುವುದು ವಿಶೇಷ. ರಾಜಸ್ಥಾನದಲ್ಲಿ ಶೇ. 22ರಷ್ಟು ಶಾಸಕರು ಗಂಭೀರ ಅಪರಾಧಗಳ ಹಿನ್ನೆಲೆಯುಳ್ಳವರಾಗಿದ್ದು, ಒಟ್ಟು 61 ಶಾಸಕರ ವಿರುದ್ಧ ಕ್ರಿಮಿನಲ್ ಆರೋಪಗಳಿವೆ. ರಾಜಸ್ಥಾನದ ಸದನದಲ್ಲಿ ಈಗ 199 ಸದಸ್ಯರ ಪೈಕಿ 169 ಕೋಟ್ಯಧಿಪತಿಗಳಿದ್ದಾರೆ. ಛತ್ತೀಸ್ಗಡದ ವಿಧಾನಸಭೆಗೆ ಅಪರಾಧಗಳ ಮೂಟೆ ಹೊತ್ತ 17 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. 65 ಶಾಸಕರು, ಅಂದರೆ ಶೇ. 74ರಷ್ಟು ಪ್ರತಿನಿಧಿಗಳು ಕೋಟ್ಯಧಿಪತಿಗಳಾಗಿದ್ದಾರೆ. ತೆಲಂಗಾಣ ವಿಧಾನಸಭೆಗೆ ಚುನಾಯಿತರಾದವರ 119 ಶಾಸಕರ ಪೈಕಿ 82 ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ, 114 ಶಾಸಕರು ಕೋಟ್ಯಧಿಪತಿಗಳಾಗಿ ಗುರುತಿಸಿಕೊಂಡಿದ್ದಾರೆ. ರಾಜಕಾರಣವನ್ನು ಬದಿಗಿಟ್ಟು ನೋಡಿದರೂ ಅಪರಾಧ ಜಗತ್ತಿಗೂ ಸಂಪತ್ತಿನ ಕ್ರೋಡೀಕರಣಕ್ಕೂ ಇರುವ ನೇರ ಸಂಬಂಧವನ್ನು ಇದು ಸೂಚಿಸುತ್ತದೆ.
ಅಸೋಷಿಯೇಷನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಎಡಿಆರ್) ಎಂಬ ಸ್ವಾಯತ್ತ ಸಂಸ್ಥೆಯೊಂದು ನೀಡಿರುವ ಈ ವರದಿಯನ್ನು ಭೇದಿಸಿ ನೋಡುವ ಅವಶ್ಯಕತೆಯೇ ಇಲ್ಲ ಎನ್ನುವ ರೀತಿಯಲ್ಲಿ ಕರ್ನಾಟಕವನ್ನೂ ಸೇರಿದಂತೆ ಪ್ರತಿಯೊಂದು ರಾಜ್ಯದಲ್ಲೂ ರಾಜಕಾರಣ ಮತ್ತು ಅಪರಾಧ ಎನ್ನುವುದು ಪರಸ್ಪರ ಬೆಸೆದುಕೊಂಡಿರುವುದನ್ನು ಗಮನಿಸಬಹುದು. ಇಲ್ಲಿ ಪ್ರಕಟವಾಗುವ ಅಪರಾಧಗಳಿಗೆ ರಾಜಕೀಯ ಕಾರಣಗಳೂ ಇರಬಹುದು, ದುರುದ್ದೇಶಪೂರಿತ ಆರೋಪಗಳೂ ಇರಬಹುದು ಅಥವಾ ರಾಜಕೀಯ ವೈಷಮ್ಯದ ಆಯಾಮವೂ ಇರಲು ಸಾಧ್ಯ. ಇಡೀ ರಾಜಕೀಯ ವ್ಯವಸ್ಥೆಯನ್ನು ಏಕರೂಪಿಯಾಗಿ ನೋಡಲೂ ಆಗುವುದಿಲ್ಲ. ಕಪ್ಪು ಚುಕ್ಕೆಗಳ ನಡುವೆಯೇ ಅಲ್ಲಲ್ಲಿ ಶ್ವೇತ ಬಿಂದುಗಳೂ ಕಾಣಬಹುದು. ಆದರೆ ಒಂದು ಸಮಾಜವಾಗಿ ನೋಡಿದಾಗ ನಮಗೆ ತೋರುವುದೇನು? ಸ್ವಚ್ಛ ಭಾರತ ಅಭಿಯಾನ ಮೂಲತಃ ಆಗಬೇಕಿರುವುದು ಈ ವಿಶಾಲ ಬಯಲಿನಲ್ಲಿ ಎನಿಸುವುದಿಲ್ಲವೇ? ‘‘ನಾನು ಅಪರಾಧ ಮುಕ್ತನಾಗುವವರೆಗೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ, ಮತದಾರರ ಬಳಿ ಮತ ಯಾಚಿಸಲು ಹೋಗುವುದಿಲ್ಲ’’ ಎಂದು ಘೋಷಿಸುವ ಒಬ್ಬ ಸಂಭಾವ್ಯ ಪ್ರತಿನಿಧಿಯನ್ನಾದರೂ ನಾವು ಊಹಿಸಿಕೊಳ್ಳಲು ಕಾಣಲು ಸಾಧ್ಯವೇ ?
ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳು, ಆತ್ಮಹತ್ಯೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ನಿತ್ಯ ಸುದ್ದಿಯಾಗುತ್ತಿರುವ ಹಲ್ಲೆ/ಗುಂಪು ಥಳಿತ/ ಕೊಲೆಗಳು ನಮ್ಮ ಆಧುನಿಕ ಸಮಾಜ ಸಾಗುತ್ತಿರುವ ಹಾದಿಯನ್ನು ಸೂಚಿಸುತ್ತವೆ. ಕ್ಷುಲ್ಲಕ ಕಾರಣದ ಬೀದಿ ಜಗಳಗಳೂ ಕೊಲೆಯಲ್ಲಿ ಅಂತ್ಯವಾಗುತ್ತಿರುವ ನೂರಾರು ಘಟನೆಗಳು ನಮ್ಮ ನಡುವೆ ಪ್ರಕಟವಾಗುತ್ತಿವೆ. ಸಹಮಾನವನನ್ನು ಕೊಲೆ ಮಾಡಲು ಹಿಂಜರಿಯದ ಒಂದು ಮನಸ್ಥಿತಿಯನ್ನು ಸಮಾಜದ ಎಲ್ಲ ವರ್ಗಗಳಲ್ಲೂ, ಜಾತಿಗಳಲ್ಲೂ, ಆರ್ಥಿಕ ಸ್ತರಗಳಲ್ಲೂ ಗುರುತಿಸಬಹುದಾಗಿದೆ. ‘‘ಇದು ತಪ್ಪು, ಜೀವ ಹರಣ ಮಾಡದಿರಿ, ಸಹಮಾನವನ ಜೀವವನ್ನು ಗೌರವಿಸಿ ಸಹಬಾಳ್ವೆ ನಡೆಸಿ’’ ಎಂದು ಘಂಟಾಘೋಷವಾಗಿ ಹೇಳುವಂತಹ ಒಂದು ರಾಜಕೀಯ ವಾತಾವರಣವನ್ನು ಏಕೆ ಸೃಷ್ಟಿಸಲಾಗಿಲ್ಲ ? ವ್ಯಕ್ತಿಯೊಬ್ಬ ಹಾದಿ ತಪ್ಪುವ ಕೊನೆಯ ಕ್ಷಣದಲ್ಲಾದರೂ ಯಾವುದೋ ಒಬ್ಬ ರಾಜಕೀಯ ನೇತಾರನ ಕಡೆ ನೋಡಿ, ಸರಿದಾರಿಗೆ ಬರಲು ಪ್ರೇರಣೆ ನೀಡುವಂತಹ ಒಂದು ವ್ಯಕ್ತಿತ್ವವನ್ನು ನಮ್ಮ ವರ್ತಮಾನ ಸಮಾಜ ಏಕೆ ಸೃಷ್ಟಿಸಲಾಗಿಲ್ಲ?
ಸಮಾಜದ ಅಪರಾಧೀಕರಣ
ಇದರ ಮತ್ತೊಂದು ಮಜಲನ್ನು ಗಮನಿಸೋಣ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಚ್ಎಫ್ಎಸ್) ವರದಿಯ ಅನುಸಾರ ಕರ್ನಾಟಕದಲ್ಲಿ ಬಾಲ್ಯ ವಿವಾಹಗಳ ಪ್ರಮಾಣ ಬಾಲಕಿಯರದು ಶೇ. 24.7ರಷ್ಟಿದ್ದರೆ ಬಾಲಕರದು ಶೇ 7.2ರಷ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸದನದಲ್ಲಿ ಹೇಳಿದ್ದಾರೆ. ಬಾಲ್ಯ ವಿವಾಹವನ್ನು ನಿಷೇದಿಸುವ ಕಾನೂನು ಜಾರಿಯಲ್ಲಿದ್ದರೂ, ಎರಡು ಶತಮಾನಗಳ ಹಿಂದೆಯೇ ಈ ಪಿಡುಗಿನ ವಿರುದ್ಧ ಧ್ವನಿ ಎತ್ತಿದ್ದ ನಮ್ಮ ಸಮಾಜದಲ್ಲಿ ಇಂದಿಗೂ ಈ ಪ್ರಾಚೀನ ಪದ್ಧತಿ ಜಾರಿಯಲ್ಲಿರುವುದು ಏನನ್ನು ಸೂಚಿಸುತ್ತದೆ? ಇದರೊಟ್ಟಿಗೆ ಸಾವಿರಾರು ಹೆಣ್ಣು ಭ್ರೂಣಗಳ ಹತ್ಯೆಯ ಬ್ರಹ್ಮಾಂಡ ಕರ್ಮಕಾಂಡವನ್ನೂ ಇಟ್ಟು ನೋಡಿದಾಗ, ನಮ್ಮ ನಾಗರಿಕತೆಯ ಸಂಕಥನದಲ್ಲಿ ಈ ವಿದ್ಯಮಾನಗಳು ‘ಅಪರಾಧ’ ಎಂಬ ವ್ಯಾಖ್ಯಾನಕ್ಕೇ ಒಳಪಡುತ್ತಿಲ್ಲವೇನೋ ಎನಿಸುವುದಿಲ್ಲವೇ? ಈ ಎರಡೂ ಸಮಸ್ಯೆಗಳನ್ನು ವಿಶಾಲ ಸಮಾಜವೂ ಸಹ ‘ಮಹಿಳೆಯರ’ ಸಮಸ್ಯೆ ಎಂದು ಭಾವಿಸಿರುವುದೇ ನಮ್ಮ ಬೌದ್ಧಿಕ ದಾರಿದ್ರ್ಯಕ್ಕೆ ಕನ್ನಡಿ ಹಿಡಿದಂತಿದೆ ಎನಿಸುವುದಿಲ್ಲವೇ ?
ಬಡತನ, ಅಪೌಷ್ಟಿಕತೆ, ನಿರ್ವಸತಿಕತೆ, ದಾರಿದ್ರ್ಯ, ಹಸಿವೆ ಇವೆಲ್ಲವನ್ನೂ ನಮ್ಮ ಪೂರ್ವ ಜನ್ಮದ ಕರ್ಮ ಎಂದು ಭಾವಿಸುತ್ತಾ, ಮೌನವಾಗಿ ಅನುಭವಿಸುತ್ತಾ, ಸದ್ದಿಲ್ಲದೆ ನರಳುತ್ತಿರುವ ಅಪಾರ ಸಂಖ್ಯೆಯ ಜನಸ್ತೋಮದ ನಡುವೆ ಒಂದು ಸುಶಿಕ್ಷಿತ, ನಾಗರಿಕ, ಆಧುನಿಕ ಸಮಾಜವನ್ನೂ ಸ್ವತಂತ್ರ ಭಾರತ ತನ್ನ 75 ವರ್ಷಗಳ ಆಳ್ವಿಕೆಯಲ್ಲಿ ರೂಪಿಸಿದೆಯಲ್ಲವೇ? ಸಾಂವಿಧಾನಿಕ ಸವಲತ್ತುಗಳು, ಆರ್ಥಿಕ ಸೌಲಭ್ಯಗಳು ಹಾಗೂ ಸಾಮಾಜಿಕ ಸುರಕ್ಷತೆಯೊಂದಿಗೆ ಬದುಕುತ್ತಿರುವ ಈ ಹಿತವಲಯದ ಜನಸ್ತೋಮದ ದೃಷ್ಟಿಯಲ್ಲಿ ಕೆಳಸ್ತರದ ಸಮಾಜದಲ್ಲಿ ತಾಂಡವಾಡುತ್ತಿರುವ ಈ ಜೀವನೋಪಾಯದ ಸಮಸ್ಯೆಗಳು ನಗಣ್ಯವಾಗಿರುವಷ್ಟೇ ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ನಿರಂತರ ಅತ್ಯಾಚಾರ ಹಾಗೂ ಕಗ್ಗೊಲೆಗಳೂ ನಗಣ್ಯವಾಗಿರುವುದು ಢಾಳಾಗಿ ಕಾಣಿಸುವಂತಹ ದುರಂತ ಸತ್ಯ. ಈ ಸಿಕ್ಕುಗಳಿಗೆ ಕಾರಣವಾಗಿರುವ ಪಿತೃಪ್ರಧಾನತೆಯಿಂದ, ಮಾರುಕಟ್ಟೆ ಆರ್ಥಿಕ ಮೌಲ್ಯೀಕರಣದ ಚೌಕಟ್ಟಿನಿಂದ ಸಮಾಜವೇ ವಿಮೋಚನೆ ಪಡೆಯಬೇಕಿದೆ ಅಲ್ಲವೇ?
ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನುಷ ಕೃತ್ಯ, ಅಮಾಯಕ ಮಹಿಳೆಯನ್ನು ಬೆತ್ತಲಾಗಿಸುವ ಹೀನ ಪ್ರವೃತ್ತಿ ಅಥವಾ ಎಳೆಬಾಲೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ-ಅತ್ಯಾಚಾರ ಇವೆಲ್ಲವೂ ನಮ್ಮ ಸಮಾಜದ ಮೂಲ ಬೇರುಗಳಲ್ಲಿದ್ದಿರಬಹುದಾದ ಮಾನವೀಯ ಮೌಲ್ಯಗಳು ಶಿಥಿಲವಾಗುತ್ತಿರುವುದರ ಸಂಕೇತ ಎನಿಸಬೇಕಲ್ಲವೇ? ನಿತ್ಯ ಸುದ್ದಿಯಾಗುತ್ತಿರುವ ಕೊಲೆಗಳಲ್ಲಿ ಯುವ ಸಮೂಹವೇ ಎದ್ದು ಕಾಣುತ್ತಿರುವುದು ಸಮಾಜದ ಅಂತಃಪ್ರಜ್ಞೆಯನ್ನು ಪ್ರಕ್ಷುಬ್ಧಗೊಳಿಸಬೇಕಲ್ಲವೇ? ಮದ್ಯಪಾನದ ವ್ಯಸನ, ಮಾದಕ ದ್ರವ್ಯಗಳ ವ್ಯಾಪಕ ಬಳಕೆ ಈ ರೀತಿಯ ಸಾಮಾಜಿಕ ಕ್ಷೋಭೆಗೆ, ಕೊಲೆ ಅತ್ಯಾಚಾರಗಳಿಗೆ ಕಾರಣವಾಗುವುದು ಸಮಸ್ಯೆಯ ಒಂದು ಆಯಾಮ ಮಾತ್ರ. ಇನ್ನೊಂದು ಆಯಾಮವನ್ನು ಆಸ್ತಿ-ಸಂಪತ್ತು ಗಳಿಸುವ ಆರ್ಥಿಕ ವಲಯದ ಲಾಲಸೆಗಳನ್ನು, ಪಿತೃಪ್ರಧಾನತೆಯ ಮೌಲ್ಯಗಳನ್ನು ಗುರುತಿಸಬಹುದು. ಮತ್ತೊಂದೆಡೆ ಸಮಾಜದಲ್ಲಿ ಹೆಚ್ಚಾಗುತ್ತಿರುವ ಜಾತಿ ಶ್ರೇಷ್ಠತೆ, ಮತದ್ವೇಷ, ಧಾರ್ಮಿಕ ಅಸಹಿಷ್ಣುತೆ ಮತ್ತು ರಾಜಕೀಯ ವೈಷಮ್ಯಗಳು ‘‘ಸಹಮಾನವನನ್ನು ಕೊಲ್ಲುವುದು ಅಪರಾಧವೇನಲ್ಲ’’ ಎಂಬ ಮನೋಭಾವ ಕಲ್ಪಿತ ಸಕಾರಣಗಳೊಂದಿಗೆ ದಟ್ಟವಾಗುತ್ತಿರುವುದನ್ನೂ ಗಮನಿಸಬೇಕಿದೆ.
ಮೌಲ್ಯಗಳ ಅಪಮೌಲ್ಯೀಕರಣ
ಈ ಸಾಮಾಜಿಕ ಮೌಲ್ಯಗಳ ಅಧಃಪತನ, ಸಾಂಸ್ಕೃತಿಕ ಮೌಲ್ಯಗಳ ಅವನತಿಗೆ ಕಾರಣ ಏನು? ಹೆಚ್ಚು ಬೇಡ, ಮೂರು ದಶಕಗಳ ಹಿಂದಿನ ಸಮಕಾಲೀನ ಭಾರತದ ಪುಟಗಳನ್ನು ತಿರುವಿಹಾಕಿದರೂ ‘‘ನಮ್ಮ ಸಮಾಜ ಹೀಗಿರಲಿಲ್ಲವಲ್ಲಾ’’ ಎಂಬ ಉದ್ಗಾರ ಹೊರಡುತ್ತದೆ ಅಲ್ಲವೇ? ಯಾವುದೇ ಸಮಾಜ ಶೈಕ್ಷಣಿಕವಾಗಿ ಔನ್ನತ್ಯ ಪಡೆಯುತ್ತಾ ಹೋದಂತೆಲ್ಲಾ, ಮನುಜ ಸಮಾಜದಲ್ಲಿ ಸಹಜವಾಗಿ ಇರಬಹುದಾದ, ಬೇರೂರಿರಬಹುದಾದ ಅಮಾನುಷತೆಯ ಮನಸ್ಥಿತಿಗಳನ್ನು ಹೋಗಲಾಡಿಸುವುದರಲ್ಲಿ ತೊಡಗಬೇಕಲ್ಲವೇ? ಇದು ಸಾಧ್ಯವಾಗಿಲ್ಲ ಎನ್ನುವುದಾದರೆ ಕಾರಣಗಳನ್ನಾದರೂ ಶೋಧಿಸಬೇಕು. 75 ಸ್ವತಂತ್ರ ವಸಂತಗಳನ್ನು ಪೂರೈಸಿ ಶತಮಾನೋತ್ಸವದತ್ತ ಸಾಗುತ್ತಿರುವ ಆಧುನಿಕ ನಾಗರಿಕತೆಯಲ್ಲಿ ಇಂದಿಗೂ ಪ್ರಾಚೀನ ಧೋರಣೆಗಳು, ಮಧ್ಯಕಾಲೀನ ಕ್ರೌರ್ಯಗಳು, ಪುರಾತನ ನಂಬಿಕೆ-ಮೌಢ್ಯಗಳು, ಹಳಸಲಾಗಿರುವ ಆಚರಣೆಗಳು ಪ್ರಚಲಿತವಾಗಿವೆ ಎಂದರೆ ನಾವು ಸಾಧಿಸಿರುವ ಶೈಕ್ಷಣಿಕ ಔನ್ನತ್ಯ-ಬೌದ್ಧಿಕ ಎತ್ತರ ಅರ್ಥಹೀನ ಎನಿಸುವುದಿಲ್ಲವೇ ?
ಇದಾವುದೂ ಶೂನ್ಯದಲ್ಲಿ ಉದ್ಭವಿಸುವ ವಿದ್ಯಮಾನಗಳಲ್ಲ. ಪ್ರಾಚೀನತೆಯಿಂದ ಆಧುನಿಕತೆಗೆ ಸಾಗುವ ಅಭ್ಯುದಯದ ಹಾದಿಯಲ್ಲಿ ಕಾಣಬಹುದಾದಂತಹ ಮನುಜ ಸಹಜ ಗುಣಲಕ್ಷಣಗಳನ್ನೇ ನಾವೂ ನೋಡುತ್ತಿದ್ದೇವೆ. ಆದರೆ ನಾಗರಿಕತೆ ಮತ್ತು ಆಧುನಿಕತೆಯನ್ನು ಮೈಗೂಡಿಸಿಕೊಂಡಿರುವ ಒಂದು ಸಮಾಜ ಇಂತಹ ಅವಲಕ್ಷಣಗಳನ್ನು ಕಾಲಕಾಲಕ್ಕೆ ನಿವಾರಿಸಿಕೊಳ್ಳುತ್ತಾ ಸಾಗಬೇಕಲ್ಲವೇ? ಇದಕ್ಕೆ ಪೂರಕವಾದ ರಾಜಕೀಯ ವಾತಾವರಣ, ಸಾಂಸ್ಕೃತಿಕ ಭೂಮಿಕೆ, ಸಾಮಾಜಿಕ ಚೌಕಟ್ಟು ಹಾಗೂ ಬೌದ್ಧಿಕ ವಲಯಗಳನ್ನು ಸೃಷ್ಟಿಸಿಕೊಳ್ಳಬೇಕಲ್ಲವೇ? ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಮೂಡಿಸುವ ಮೂಲಕವೇ ಈ ಪ್ರಯತ್ನಗಳು ಸಾಕಾರಗೊಳ್ಳಲು ಸಾಧ್ಯ.
ಇಲ್ಲಿ ನಮಗೆ ರಾಜಕೀಯ ನಾಯಕತ್ವ ಮುಖ್ಯವಾಗುತ್ತದೆ. ಕೇವಲ ಮೂರೇ ದಶಕಗಳ ಅವಧಿಯಲ್ಲಿ ಮೌಲ್ಯಾಧಾರಿತ ನೆಲೆಯಿಂದ ಮೌಲ್ಯರಹಿತ ನೆಲೆಗೆ ಜಿಗಿದಿರುವ ಭಾರತದ ಅಧಿಕಾರ ರಾಜಕಾರಣವು ಈ ನಿಟ್ಟಿನಲ್ಲಿ ತನ್ನ ಅಂತಃಸತ್ವವನ್ನೇ ಕಳೆದುಕೊಂಡು ಬೆತ್ತಲಾಗಿ ನಿಂತಿದೆ.
ನವ ಉದಾರವಾದದ ಆರ್ಥಿಕ ನೆಲೆಗಳು, ಮಾರುಕಟ್ಟೆ ಮೌಲ್ಯಗಳು ನಮ್ಮ ಸಾಂಸ್ಕೃತಿಕ ವಲಯವನ್ನೂ ಸೇರಿದಂತೆ ಇಡೀ ಸಮಾಜವನ್ನೇ ವ್ಯಾವಹಾರಿಕವಾಗಿ ವಿನಿಮಯಕ್ಕೊಳಗಾಗುವಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದು, ಆಧುನಿಕ ಸುಶಿಕ್ಷಿತ ಸಮಾಜವನ್ನೂ ಪ್ರಾಚೀನತೆಗೆ ಕರೆದೊಯ್ಯುತ್ತಿರುವುದು ಈ ಮೌಲ್ಯರಹಿತ ರಾಜಕಾರಣಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಈ ವಿಷಮ ಸನ್ನಿವೇಶದಲ್ಲೇ ಸಮಾಜವು ನೈತಿಕ ಅವನತಿಯತ್ತ ಸಾಗುತ್ತಿರುವುದನ್ನು ಅಸ್ಪಶ್ಯತೆಯ ಆಚರಣೆಯಲ್ಲಿ, ಸಾಮಾಜಿಕ ಬಹಿಷ್ಕಾರಗಳಲ್ಲಿ, ಹೆಣ್ಣು ಭ್ರೂಣ ಹತ್ಯೆಗಳಲ್ಲಿ, ಅತ್ಯಾಚಾರ-ಬೆತ್ತಲೆ ಮೆರವಣಿಗೆಗಳಲ್ಲಿ ಹಾಗೂ ಅವ್ಯಾಹತ ಕೊಲೆ ಪ್ರಕರಣಗಳಲ್ಲಿ ಗುರುತಿಸಬೇಕಾಗಿದೆ.
ನಾಗರಿಕ ಪ್ರಜ್ಞೆಯ ಹಪಾಹಪಿ
ಈ ಸಂಕೀರ್ಣ ಸಮಸ್ಯೆಗಳಿಗಿಂತಲೂ ಹೆಚ್ಚು ಸಮಸ್ಯಾತ್ಮಕವಾಗಿ ಕಾಣುವುದು ನಮ್ಮ ನಾಗರಿಕತೆಯ ಪ್ರಜ್ಞೆ ಮತ್ತು ಪರಿಸರ. ಆಧುನಿಕತೆಯ ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸಂವಹನವನ್ನು ತನ್ನದಾಗಿಸಿಕೊಂಡಿರುವ ಒಂದು ಸಮಾಜ ಮನುಜ ಸೂಕ್ಷ್ಮತೆಯನ್ನೇ ಕಳೆದುಕೊಂಡಿರುವುದೇ ಅಲ್ಲದೆ, ಈ ತಂತ್ರಜ್ಞಾನ ಕ್ರಾಂತಿಯ ಫಲಾನುಭವಿ ಸಮಾಜವೊಂದು ತನ್ನ ಸುತ್ತಲಿನ ವಿದ್ಯಮಾನಗಳಿಗೆ ಜಾಣಕುರುಡು ಪ್ರದರ್ಶಿಸುತ್ತಿರುವುದನ್ನು ಗಂಭೀರವಾಗಿ ನೋಡಬೇಕಿದೆ. ಮಣಿಪುರದ ಬೆತ್ತಲೆಗೆ ಕುರುಡಾಗುವ ಒಂದು ರಾಜಕೀಯ ವ್ಯವಸ್ಥೆ ಬೆಳಗಾವಿಯ ಬೆತ್ತಲೆಯನ್ನು ಮೂರನೆಯ ಕಣ್ಣಿಂದ ನೋಡುತ್ತದೆ. ಅಂದರೆ ಎಂತಹ ಅಮಾನುಷ ಹೀನಕೃತ್ಯವಾದರೂ ಅದನ್ನು ಸಾಪೇಕ್ಷವಾಗಿ ನೋಡುವ ಮೂಲಕ ಅಲಕ್ಷಿಸುವ/ರಂಜನೀಯಗೊಳಿಸುವ/ಬಳಸಿಕೊಳ್ಳುವ ಒಂದು ಕಲೆ ರಾಜಕಾರಣಕ್ಕೆ ಸಿದ್ಧಿಸಿದೆ. ಇದೇ ಮನಸ್ಥಿತಿಯೇ ವಿಶಾಲ ಸಮಾಜದಲ್ಲೂ ವ್ಯಾಪಿಸಿದ್ದು ಎಲ್ಲ ಅಪರಾಧಗಳೂ ಅಸ್ಮಿತೆಯ ಆಧಾರದಲ್ಲೇ ಚರ್ಚೆಗೊಳಗಾಗುತ್ತದೆ. ಈ ಸಾಪೇಕ್ಷತೆಯೇ ಇಂದು ಅಪರಾಧದ ಜಗತ್ತಿನ ವಿಸ್ತರಣೆ ಹಾಗೂ ವ್ಯಾಪ್ತಿಗೆ ಮೂಲ ಕಾರಣವೂ ಆಗಿದೆ. ತೊಟ್ಟಿಗೆ ಬಿಸಾಡಲಾದ ಹೆಣ್ಣುಭ್ರೂಣಕ್ಕೂ ಸಾಕ್ಷಿ ಕೇಳುವ, ಅತ್ಯಾಚಾರಕ್ಕೊಳಗಾದ ಹೆಣ್ಣು ಜೀವದಿಂದಲೂ ಸಾಕ್ಷಿ ಕೇಳುವ ಒಂದು ಸಮಾಜದಲ್ಲಿ ಸಂವೇದನೆಯನ್ನು ಗುರುತಿಸುವುದಾದರೂ ಹೇಗೆ ?
ಈ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರ ನಮ್ಮೊಳಗೇ ಇದೆ. ಚಾಲ್ತಿಯಲ್ಲಿರುವ ರಾಜಕೀಯ ಸಂಸ್ಕೃತಿಯಿಂದಾಚೆಗೆ ಸಮಾಜದ ಸುಧಾರಣೆಗಾಗಿ, ಸಾಂಸ್ಕೃತಿಕ ಔನ್ನತ್ಯಕ್ಕಾಗಿ, ಮಾನವೀಯ ಮೌಲ್ಯಗಳಿಗಾಗಿ ಶ್ರಮಿಸುವ ಲಕ್ಷಾಂತರ ಜನರು, ನೂರಾರು ಸಂಘಟನೆಗಳು ನಮ್ಮ ನಡುವೆ ಇರುವುದು ವಾಸ್ತವ. ಉತ್ತಮ ಆರೋಗ್ಯಕರ ಭವಿಷ್ಯದ ನಿರ್ಮಾಣಕ್ಕಾಗಿ ಪಣತೊಟ್ಟು ನಿಂತಿರುವ ‘‘ಪ್ರಗತಿಪರ-ಪುರೋಗಾಮಿ-ಜನಪರ’’ ಸಂಘಸಂಸ್ಥೆಗಳು, ಪಕ್ಷಗಳು ಹೇರಳವಾಗಿವೆ. ಕಲುಷಿತ ವಾತಾವರಣದಲ್ಲಿ, ಮಲಿನವಾಗುತ್ತಿರುವ ಸಾಂಸ್ಕೃತಿಕ ಪರಿಸರದಲ್ಲಿ, ಎಲ್ಲವನ್ನೂ ವಿನಿಮಯ ಮೌಲ್ಯಕ್ಕೊಳಪಡಿಸುವ ಮಾರುಕಟ್ಟೆ ಆರ್ಥಿಕತೆಯಲ್ಲಿ, ಈ ಸಂಘ ಸಂಸ್ಥೆಗಳು ಪ್ರವಾಹದ ವಿರುದ್ಧ ಈಜುತ್ತಿರುವುದು ಸ್ಪಷ್ಟ. ಆದರೆ ಇಲ್ಲಿರುವ ಚಾರಿತ್ರಿಕ ಜವಾಬ್ದಾರಿಯನ್ನು ಮನಗಾಣಬೇಕಿದೆ.
ಇಲ್ಲಿಯೂ ಢಾಳಾಗಿ ಕಾಣುವ ನಾವೇ ನಿರ್ಮಿಸಿಕೊಂಡಿರುವ ಅಸ್ಮಿತೆಗಳ ಗೋಡೆಗಳನ್ನು ಕೆಡವಿ, ಶಿಥಿಲವಾಗುತ್ತಿರುವ ಸಮಾಜದ ಬೇರುಗಳನ್ನು ಮಾಲಿನ್ಯ ಮುಕ್ತ ಮಾಡುವ ಈ ಜವಾಬ್ದಾರಿ ಈ ಸಂಘಟನೆಗಳ/ಪಕ್ಷಗಳ ಮೇಲಿದೆ. ಇದನ್ನು ನಿಭಾಯಿಸಲು ಯಾವುದೇ ಪ್ರಣಾಳಿಕೆ/ತತ್ವ/ಸಿದ್ಧಾಂತಗಳಿಗಿಂತಲೂ ಅಗತ್ಯವಾಗಿ ಬೇಕಿರುವುದು ವೈಚಾರಿಕತೆ-ವೈಜ್ಞಾನಿಕ ಮನಸ್ಥಿತಿಯನ್ನು ಸೃಷ್ಟಿಸುವಂತಹ ತೆರೆದ ಕಣ್ಣುಗಳು-ವಿಶಾಲ ಹೃದಯ ಹಾಗೂ ಮಾನವೀಯ ಪ್ರಜ್ಞೆ. ಆಧುನಿಕ ಹಿತವಲಯದ ಸಮಾಜ ಕಳೆದುಕೊಂಡಿರುವುದೂ ಇವುಗಳನ್ನೇ. ಸಾಮಾಜಿಕ ಮನ್ವಂತರ-ಪರಿವರ್ತನೆಗಾಗಿ ಹೆಜ್ಜೆ ಇಟ್ಟಿರುವ ಪ್ರತಿಯೊಂದು ಸಂಘಟನೆಯೂ ತಳಮಟ್ಟದಲ್ಲಿ ಈ ಕಾರ್ಯಸೂಚಿಯೊಂದಿಗೆ ಮುನ್ನಡೆದರೆ ಬಹುಶಃ ಶಿಥಿಲ ಬೇರುಗಳನ್ನು ಗಟ್ಟಿಗೊಳಿಸಿ ಚೆಂದದ ಹಸಿರೆಲೆಗಳಲ್ಲಿ ನೈಜ-ಪ್ರಾಕೃತಿಕ ಹಸಿರು ಕಾಣಲು ಸಾಧ್ಯ.