ಗಂಗೊಳ್ಳಿ ಬೋಟ್ ಅಗ್ನಿ ದುರಂತಕ್ಕೆ ಒಂದು ವಾರ: ಇನ್ನೂ ಸಿಗದ ಪರಿಹಾರ..!
ಯೋಗೀಶ್ ಕುಂಭಾಶಿ/ಬಿ.ಬಿ.ಶೆಟ್ಟಿಗಾರ್
ಕುಂದಾಪುರ, ನ.19: ರಾಜ್ಯದ ಪಶ್ಚಿಮ ಕರಾವಳಿಯ ಪ್ರಮುಖ ಬಂದರು ಕೇಂದ್ರಗಳಲ್ಲಿ ಒಂದಾದ ಗಂಗೊಳ್ಳಿಯಲ್ಲಿ ದೀಪಾವಳಿ ದಿನ ನಡೆದ ಅಗ್ನಿ ಅವಘಡ ಮೀನುಗಾರಿಕೆಯನ್ನು ನೆಚ್ಚಿಕೊಂಡ ಸಾಕಷ್ಟು ಸಂಖ್ಯೆಯ ಮೀನುಗಾರರ ಬದುಕನ್ನು ಕಸಿದುಕೊಂಡಿದೆ. ಆಕಸ್ಮಿಕ ಬೆಂಕಿ ಅನಾಹುತದಿಂದ 9 ಮೀನುಗಾರಿಕಾ ಬೋಟು, ಸಣ್ಣ ದೋಣಿಗಳು, ಡೆಂಗಿ ಬೋಟುಗಳು, ಬಲೆಗಳು ಸುಟ್ಟು ಕರಕಲಾಗಿದ್ದು, ಈ ಘಟನೆಯಿಂದ ಮೀನುಗಾರರು ದಿಗ್ಭ್ರಾಂತರಾಗಿದ್ದಾರೆ.
<ಏನಿದು ಘಟನೆ..?: ಕಳೆದ ಸೋಮವಾರ (ನ.13) ಬೆಳಗ್ಗೆ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ವಾರ್ಪ್ ಪ್ರದೇಶದಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ಬೋಟುಗಳಿಗೆ ಆಕಸ್ಮಿಕ ಬೆಂಕಿ ತಗುಲಿತ್ತು. ಕ್ಷಣಾರ್ಧದಲ್ಲಿ ಬೆಂಕಿ ಕೆನ್ನಾಲಿಗೆ ಸುತ್ತಮುತ್ತ ವ್ಯಾಪಿಸಿ ಸುಮಾರು 9 ಬೋಟುಗಳನ್ನು ಆಹುತಿ ಪಡೆದಿದೆ. ಮಳೆಗಾಲಕ್ಕೂ ಮುಂಚೆ ಈ ಭಾಗದಲ್ಲಿ ಬೋಟುಗಳನ್ನು ನಿಲ್ಲಿಸಿ ಅವುಗಳ ದುರಸ್ತಿ ಕೆಲಸ ನಿರ್ವಹಿಸಲಾಗುತ್ತದೆ. ಹೀಗಾಗಿ ಈ ಬೋಟುಗಳು ಕೆಲ ತಿಂಗಳುಗಳಿಂದ ಇಲ್ಲಿಯೇ ಇದ್ದು ಮುಂದೆ ಒಂದೆರಡು ದಿನದಲ್ಲಿ ಮೀನುಗಾರಿಕೆಗೆ ತೆರಳಲು ಅಣಿಯಾಗಿತ್ತು.
ಬೆಂಕಿ ಅವಘಡದಿಂದ ಹೊತ್ತಿ ಉರಿದ 9 ಬೋಟುಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಪರ್ಸೀನ್ ಬೋಟುಗಳು, 370 ಮೊದಲಾದ ದುಬಾರಿ ಬೋಟುಗಳಿದ್ದು, ಉಳಿದಂತೆ ಸಣ್ಣ ದೋಣಿಗಳು, ಬಲೆಗಳು, ವಾರ್ಪ್ ಪ್ರದೇಶದಲ್ಲಿದಲ್ಲಿದ್ದ ಮೂರಕ್ಕೂ ಅಧಿಕ ಬೈಕ್‌ಗಳ ಸಹಿತ ವಿವಿಧ ಪರಿಕರಗಳು ಸುಟ್ಟು ಬೂದಿಯಾಗಿದ್ದವು. ಒಟ್ಟಾರೆಯಾಗಿ ಆದ ನಷ್ಟ 13ರಿಂದ 15 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಸಚಿವರು, ಜನಪ್ರತಿನಿಧಿಗಳ ಭೇಟಿ: ಘಟನೆ ನಡೆದ ದಿನವೇ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ ಸಹಿತ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಶ್ಪಾಲ್ ಸುವರ್ಣ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರು. ನಂತರದ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬಿ.ವೈ.ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕಳೆದ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮೊದಲಾದವರು ಭೇಟಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಸಂಸದರು, ಶಾಸಕರು ಪರಿಹಾರದ ಭರವಸೆ ನೀಡಿದ್ದು ಶೀಘ್ರದಲ್ಲಿ ಪರಿಹಾರ ಹಣ ದೊರೆತು ಕಮರಿದ ಬದುಕನ್ನುಮತ್ತೆ ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ.
ಕುಂದಾಪುರಕ್ಕೆ ಹತ್ತಿರವಿದ್ದರೂ ದೂರವಾದ ಗಂಗೊಳ್ಳಿ..!
ಕುಂದಾಪುರ ನಗರದ ಅಂಚಿನ ಪಂಚ ಗಂಗಾವಳಿ ನದಿಯಿಂದ ಗಂಗೊಳ್ಳಿಗೆ ದೋಣಿ ಮೂಲಕ ಸಾಗಲು ಅನತಿ ದೂರ. ಆದರೆ, ರಸ್ತೆ ಮಾರ್ಗವಾಗಿ ಸುಮಾರು 15 ಕಿ.ಮೀ. ಸುತ್ತುಹಾಕಿ ಸಾಗಬೇಕು. ಅವಘಡ ನಡೆದ ದಿನವೂ ಬೈಂದೂರಿನಿಂದ ಅಗ್ನಿಶಾಮಕ ದಳ ಬಂದಿದ್ದು, ಹೆಚ್ಚುವರಿ ಅಗ್ನಿಶಾಮಕ ವಾಹನದ ಅಗತ್ಯವಿದ್ದುದರಿಂದ ಕುಂದಾಪುರ ಹಾಗೂ ಉಡುಪಿಯಿಂದ ಆಗಮಿಸಿದ ಅಗ್ನಿಶಾಮಕ ವಾಹನಗಳು ಸುತ್ತು ಹಾಕಿ ಘಟನಾ ಸ್ಥಳಕ್ಕೆ ತೆರಳಬೇಕಾಯಿತು. ಇದರಿಂದ ಅಮೂಲ್ಯವಾದ ಸಮಯ ನಷ್ಟವಾಗಿತ್ತು. ಕುಂದಾಪುರದಿಂದ ಗಂಗೊಳ್ಳಿಗೆ ನೇರ ಸಂಪರ್ಕ ಸೇತುವೆ ನಿರ್ಮಾಣಕ್ಕೆ ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಇತ್ತೀಚೆಗೆ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ನಡುವೆಯೇ ಗಂಗೊಳ್ಳಿಯಲ್ಲಿ ದುರ್ಘಟನೆಯೊಂದು ನಡೆದಿದ್ದು, ಸಂಪರ್ಕ ಸೇತುವೆಯಿದ್ದರೆ ಇಂತಹ ಭಾರೀ ಪ್ರಮಾಣದ ಅನಾಹುತ ನಡೆಯುತ್ತಿರಲಿಲ್ಲ ಎಂಬುದು ಮೀನುಗಾರರು ಹಾಗೂ ನಾಗರಿಕರ ಅಭಿಪ್ರಾಯ. ಅಗ್ನಿಶಾಮಕ ಹೊರ ಠಾಣೆ ಮಾಡಿದರೆ ಇಂತಹ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಸ್ಥಳಕ್ಕಾಗಮಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಮೀನುಗಾರರು ಅಹವಾಲು ನೀಡಿದ್ದಾರೆ.