ಒಡೆಯರ ‘ದೇಶಪ್ರೇಮ’ದ ಕುರಿತು...

1824ರ ಅಕ್ಟೋಬರ್‌ನಲ್ಲಿ ಕಿತ್ತೂರಿನಲ್ಲಿ ಚೆನ್ನಮ್ಮನ ನಾಯಕತ್ವದಲ್ಲಿ ನಡೆದ ಹೋರಾಟವನ್ನು ಸದೆ ಬಡಿಯಲು ಒಡೆಯರ ಅಧೀನದಲ್ಲಿದ್ದ ಕುದುರೆ ಸವಾರ ಸೈನಿಕರ ತುಕಡಿಗಳಲ್ಲೊಂದಾದ ‘ಮೈಸೂರು ಕುದುರೆ’ಯ ಎರಡು ತುಕಡಿಗಳನ್ನು ಬ್ರಿಟಿಷರು ಕೋರಿದರು. ಕೋರಿಕೆಯ ಮೇರೆಗೆ ಮೈಸೂರಿನಿಂದ 700 ಕುದುರೆ ಸವಾರಿ-ಸೈನಿಕರು ಕರ್ನಲ್ ಡಿಕನ್ನನ ನೇತೃತ್ವದಲ್ಲಿ ಬೆಳಗಾವಿಯಲ್ಲಿದ್ದ ಬ್ರಿಟಿಷರ ಸೈನ್ಯದ ತುಕಡಿಯನ್ನು ಸೇರಿಕೊಂಡಿತು. ಕಿತ್ತೂರಿನ ಕೋಟೆಯನ್ನು ಭೇದಿಸಿ ಅದನ್ನು ವಶಪಡಿಸಿಕೊಳ್ಳಲಾಯಿತು. 12 ಲಕ್ಷ ರೂ. ಗಳಷ್ಟು ದೊಡ್ಡ ಪ್ರಮಾಣದ ನಿಧಿ ಬ್ರಿಟಿಷರ ಕೈವಶವಾಯಿತು. ಒಡೆಯರ ಬಗ್ಗೆ ಮಾತನಾಡುವ ಕನ್ನಡಿಗರು ಕಿತ್ತೂರು ಚೆನ್ನಮ್ಮನನ್ನು ಮರೆಯಬೇಕಲ್ಲವೇ?

Update: 2023-12-27 05:33 GMT

ಬೆಂಗಳೂರು ಮೈಸೂರುಗಳ ನಡುವೆ ಪ್ರಯಾಣಿಸುತ್ತಿದ್ದ ಒಂದು ರೈಲಿಗೆ ಇದ್ದ ಟಿಪ್ಪು ಎಕ್ಸ್‌ಪ್ರೆಸ್ ಎನ್ನುವ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಬದಲಾಯಿಸಿದ ಹಿಂದುತ್ವ ಭಕ್ತರು ಇತ್ತೀಚೆಗೆ ಮೈಸೂರಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕೆಂದು ಕರ್ನಾಟಕದ ಕಾಂಗ್ರೆಸ್ ಸರಕಾರ ನಿರ್ಧರಿಸಿದೆ ಎಂದು ವರದಿಯಾದ ತಕ್ಷಣ ಅದಕ್ಕೆ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಮೈಸೂರಿನ ಅರಸರಾಗಿದ್ದ ಒಡೆಯರ ಹೆಸರಿಡಬೇಕೆಂದು ವಾದಿಸುತ್ತಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಆ ಟಿಪ್ಪುವಿಗಿಂತ ಮೊದಲಿಗೆ ಮೊಗಲರ ನಂತರ ಬ್ರಿಟಿಷರ ಗುಲಾಮರಾಗಿದ್ದ ಒಡೆಯರು ಇವರಿಗೆ ಹೆಚ್ಚು ಪ್ರಿಯರೆ?

ಈ ಲೇಖನದ ಉದ್ದೇಶ ಒಡೆಯರನ್ನು ಹೀಗಳೆಯುವುದಲ್ಲ, ಒಡೆಯರ ಬಗ್ಗೆ ಒಂದು ಅಭಿಪ್ರಾಯವನ್ನು ಹೊಂದುವ ಮೊದಲು ಅವರ ಎರಡೂ ಮಗ್ಗುಲಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಅವರ ಒಂದು ಮಗ್ಗುಲನ್ನು ಹಿಂದುತ್ವ-ಭಕ್ತರು ಸಾಕಷ್ಟು ಬಹಿರಂಗ ಪಡಿಸಿದ್ದಾರೆ. ಅವರ ಇನ್ನೊಂದು ಮಗ್ಗುಲನ್ನು ತೋರಿಸುವುದು ಈ ಲೇಖನದ ಉದ್ದೇಶ. ಒಡೆಯರೇ ಉಪಕ್ರಮಿಸಿದ ಹಾಗೂ ಬಿ.ಎಲ್.ರೈಸ್ ಹಾಗೂ ನಂತರ ಹಯವದನರಾಯರು ಸಂಗ್ರಹಿಸಿ ಬರೆದ ‘ದ ಮೈಸೂರು ಗೆಝಟಿಯರ್’ನಿಂದ ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಒಡೆಯರ ಮನೆತನದ ಪೂರ್ವಜರೇನೂ ಮೈಸೂರಿನ ಸ್ಥಾನೀಯರಾಗಿರಲಿಲ್ಲ. ಇವರೂ ಹೊರಗಿನಿಂದ ಬಂದು ಮೈಸೂರನ್ನು ಕಬಳಿಸಿದವರೇ. ದಕ್ಷಿಣದಲ್ಲಿ ತಮ್ಮ ರಾಜ್ಯವನ್ನು ಕಟ್ಟಿಕೊಳ್ಳಲು ಗುಜರಾತಿನ ಯಾದವ ವಂಶದ ವಿಜಯ ಹಾಗೂ ಕೃಷ್ಣ ಎಂಬ ಇಬ್ಬರು ಕ್ಷತ್ರಿಯ ಯುವಕರು ಇಂದಿನ ಮೈಸೂರಿನ ದಕ್ಷಿಣ-ಪೂರ್ವದಲ್ಲಿ ಹಲವು ಮೈಲಿ ದೂರದಲ್ಲಿರುವ ‘ಹದಿನಾಡಿ’ಗೆ ಬಂದಿದ್ದರು. ಹದಿನಾಡಿನ ದೊರೆ ಮಾನಸಿಕ ಆರೋಗ್ಯ ಕಳೆದುಕೊಂಡು ಅಲೆಮಾರಿಯಾಗಿದ್ದುದರ ಲಾಭ ಪಡೆದು ಪಕ್ಕದ ಕುರಗಹಳ್ಳಿಯ ಪಾಳೇಗಾರ ಹದಿನಾಡಿನ ಪಾಳೇಗಾರನ ಏಕೈಕ ಮಗಳ ಜೊತೆ ತನ್ನ ಮದುವೆಯನ್ನು ಬಲವಂತವಾಗಿ ಏರ್ಪಡಿಸಿದ್ದ. ಇದನ್ನು ತಿಳಿದ ಆ ಯುವಕರಿಬ್ಬರು ಹೊಂಚುಹಾಕಿ ಮದುವೆಯ ಮಂಟಪದಲ್ಲಿಯೇ ಕುರಗಹಳ್ಳಿಯ ಪಾಳೇಗಾರನನ್ನೂ ಅವನ ಅನುಯಾಯಿಗಳನ್ನೂ ಕೊಂದು, ತಕ್ಷಣ ಕುರಗಹಳ್ಳಿಯ ಮೇಲೆ ದಾಳಿಮಾಡಿ ಅದನ್ನೂ ವಶಪಡಿಸಿಕೊಂಡಿದ್ದರು. ಅವರ ಈ ‘ಶೌರ್ಯ’ವನ್ನು ಮೆಚ್ಚಿದ ಹದಿನಾಡಿನ ಪಾಳೇಗಾರನ ಆ ಮಗಳು ವಿಜಯನನ್ನು ಮದುವೆಯಾದಳು.

ಅಂದು ಲಿಂಗಾಯತ ಜಂಗಮರಿಗೆ ಮರ್ಯಾದೆ ನೀಡಲು ಅವರನ್ನು ‘ವಡೇರ’ ಎಂದು ಸಂಬೋಧಿಸಲಾಗುತ್ತಿತ್ತು. ‘ಒಡೆಯರು’ ಎನ್ನುವುದು ಅದೇ ಶಬ್ದದ ಮಾರ್ಪಡಿಸಿದ ರೂಪವಾಗಿತ್ತು. ವಿಜಯ ‘ಒಡೆಯರು’ ಎಂಬ ಬಿರುದನ್ನು ಸ್ವೀಕರಿಸಿ ಹದಿನಾಡು ಹಾಗೂ ಕುರಗಹಳ್ಳಿಯ ಸುಮಾರು 33 ಹಳ್ಳಿಗಳಿಗೆ ಪಾಳೇಗಾರನಾದ. ಇವನನ್ನೇ ‘ಯದುರಾಯ’ ಎಂದು ಕರೆಯುತ್ತಾರೆ. ಮೈಸೂರಿನ ಒಡೆಯರ ವಂಶಕ್ಕೆ ಇವನನ್ನೇ ಮೂಲಪುರುಷ ಎಂದೂ ಪರಿಗಣಿಸುತ್ತಾರೆ. ಈತ ಕ್ರಿಸ್ತ ಶಕ 1399 ರಿಂದ 1423ರವರೆಗೆ ರಾಜ್ಯಭಾರ ನಡೆಸಿದ್ದ.

ಚಾಮರಾಜನಗರದಲ್ಲಿ ದೊರೆತ ಒಂದು ಶಿಲಾಲೇಖದ ಪ್ರಕಾರ ಶ್ರೀಕೃಷ್ಣನ ದ್ವಾರಕೆಯಿಂದ ಚಂದ್ರವಂಶದ ರಾಜಕುಮಾರರು ದಕ್ಷಿಣಕ್ಕೆ ಬಂದು ಮಹಿಶಪುರದಲ್ಲಿ ವಾಸ ಹೂಡಿ ಒಡೆಯರ ವಂಶವನ್ನು ಸ್ಥಾಪಿಸಿದರು. ಬಹುಶಃ ಇದೇ ಕಾರಣದಿಂದ ಇದುವರೆಗೂ ಸರಿಸುಮಾರು ಎಲ್ಲಾ ಒಡೆಯರು ಮದುವೆಯಾಗಿದ್ದು ಸ್ಥಾನೀಯ ಮಹಿಳೆಯರನ್ನಲ್ಲ, ಉತ್ತರ ಭಾರತದ ಮಹಿಳೆಯರನ್ನೇ.

ಒಡೆಯರನ್ನೂ ಸೇರಿಸಿ ದಕ್ಷಿಣದ ಹಲವಾರು ಪಾಳೇಗಾರರು ಅಂದು ಶ್ರೀರಂಗಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯ ಅಧೀನದಲ್ಲಿದ್ದರು. ಸುಮಾರು 1610ರಲ್ಲಿ ಒಡೆಯರು ವಿಜಯನಗರ ಸಾಮ್ರಾಟನಾಗಿದ್ದ ಎರಡನೇ ಶ್ರೀರಂಗನ ಪ್ರತಿನಿಧಿ ತಿರುಮಲನಿಂದ ಶ್ರೀರಂಗಪಟ್ಟಣವನ್ನು ಕಿತ್ತುಕೊಂಡು ಅಲ್ಲಿದ್ದ ರತ್ನಖಚಿತ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಪ್ರಾರಂಭಿಸಿದರು. ಮೈಸೂರಿನ ಬದಲಿಗೆ ಶ್ರೀರಂಗಪಟ್ಟಣವನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ನಂತರ ನಿಧಾನಕ್ಕೆ ವಿಜಯನಗರಕ್ಕೆ ಕಪ್ಪ ಕೊಡುವುದನ್ನು ನಿಲ್ಲಿಸತೊಡಗಿದರು. ಒಂದು ಬಾರಿ ಪ್ರತಿನಿಧಿ ಒಡೆಯರನ್ನು ಬಂಧಿಸಲು ಬಂದಾಗ ಒಡೆಯರು ತಪ್ಪಿಸಿಕೊಂಡು ಓಡಿಹೋಗಿದ್ದರು.

ಟಿಪ್ಪು ಸಾವಿರಾರು ಪರಧರ್ಮೀಯರ ಕೊಲೆ ಮಾಡಿದ ಎಂದು ಹೇಳಲಾಗುತ್ತದೆ. ಒಡೆಯರು ಸಾವಿರಾರು ಸ್ವಧರ್ಮೀಯರನ್ನೇ ಕೊಲೆ ಮಾಡಿದ್ದರು. 1672ರಲ್ಲಿ ಅಧಿಕಾರ ವಹಿಸಿಕೊಂಡ ಚಿಕ್ಕದೇವರಾಜ ಒಡೆಯರು ತೆರಿಗೆ ಹೆಚ್ಚಿಸಿದ್ದಕ್ಕಾಗಿ ಹೋರಾಟ ಪ್ರಾರಂಭಿಸಿದ ಜಂಗಮ-ಲಿಂಗಾಯತರನ್ನು ಆ ಬಗ್ಗೆ ಚರ್ಚೆ ಮಾಡಲೆಂದು ಅವರ ತೀರ್ಥಸ್ಥಾನವಾದ ನಂಜನಗೂಡಿಗೆ ಕರೆಸಿ ಅಲ್ಲಿಗೆ ಬಂದ 400 ಜಂಗಮರನ್ನು ಮೋಸದಿಂದ ಕೊಚ್ಚಿಹಾಕಿದ್ದರು. ತಮ್ಮ ಸೈನ್ಯಕ್ಕೆ ‘‘ಜನಸಮೂಹದ ಮಧ್ಯೆ ನಿರ್ದಾಕ್ಷಿಣ್ಯವಾಗಿ ಮೊದಲಿಗೆ ಕಾವಿ ಬಟ್ಟೆ ಧರಿಸಿದವರನ್ನು (ಅಂದರೆ ಜಂಗಮರನ್ನು) ಕೊಚ್ಚಿಹಾಕಲು ಸ್ಪಷ್ಟ ಆದೇಶ ನೀಡಿದ್ದರು. 700ಕ್ಕಿಂತ ಹೆಚ್ಚು ಲಿಂಗಾಯತರ ಮಠಗಳನ್ನು ನಷ್ಟಪಡಿಸಿದ್ದರು’’ ಎಂದು ಬರೆಯುತ್ತಾರೆ ವಿಲ್ಕ್ಸ್.

1697ರಲ್ಲಿ ಔರಂಗಜೇಬನ ದರಬಾರಿನಲ್ಲಿದ್ದ ಒಡೆಯರ ಸ್ನೇಹಿತನಾಗಿದ್ದ ಖಾಸಿಮ್ ಖಾನ್ ಸತ್ತು ಹೋದ. ಆದುದರಿಂದ ತಾವು ಹೊಸದಾಗಿ ವಶಪಡಿಸಿಕೊಂಡಿದ್ದ ಪ್ರದೇಶಗಳ ಮೇಲಿನ ತಮ್ಮ ಅಧಿಕಾರಕ್ಕೆ ‘ಮನ್ನಣೆ’ ಪಡೆಯುವ ಉದ್ದೇಶದಿಂದ ಚಿಕ್ಕದೇವರಾಜ ಒಡೆಯರು 1699ರಲ್ಲಿ ಔರಂಗಜೇಬನ ದರಬಾರಿಗೆ ತನ್ನ ಪ್ರತಿನಿಧಿಗಳನ್ನು ಕಳಿಸಿದರು. ಅವರು ಔರಂಗಜೇಬನು ಒಡೆಯರಿಗೆ ನೀಡಿದ ‘ಜುಗ ದೇವ ರಾಜ್’ ಎಂಬ ಮುದ್ರೆಯನ್ನು ಹಾಗೂ ಒಡೆಯರು ಹಸ್ತಿದಂತದ ಸಿಂಹಾಸನದ ಮೇಲೆ ಕುಳಿತುಕೊಳ್ಳಬಹುದು ಎಂಬ ‘ಅನುಮತಿ’ಯನ್ನು ಪಡೆದುಕೊಂಡು 1700ರಲ್ಲಿ ಮರಳಿ ಬಂದರು. 1704ರ ಹೊತ್ತಿಗೆ ಎರಡನೆಯ ಕಂಠೀರವ ನರಸರಾಜರ ಆಳ್ವಿಕೆಯ ಹೊತ್ತಿಗೆ ಮೈಸೂರು ಮೊಗಲರ ಅಧೀನವಾಗಿ ಅವರಿಗೆ ಕಪ್ಪ ಕೊಡಲು ಪ್ರಾರಂಭಿಸಿತ್ತು.

1734ರಲ್ಲಿ ಹೆಮ್ಮನಹಳ್ಳಿ ಮನೆತನದ ಏಳನೆಯ ಚಾಮರಾಜ ಒಡೆಯರು ಮಹಾರಾಜರಾದರು. ಅವರಿಗೆ ದೇವರಾಜ ಸೇನಾಪತಿಯಾಗಿದ್ದ. ಅವನನ್ನು ದಳವಾಯಿ ಎಂದು ಕರೆಯುತ್ತಿದ್ದರು. ನಂಜರಾಜ ಎನ್ನುವವನು ಪ್ರಧಾನಿಯಾಗಿದ್ದ. ಅವನನ್ನು ಸರ್ವಾಧಿಕಾರಿ ಎಂದು ಕರೆಯುತ್ತಿದ್ದರು. ಏಳನೆಯ ಚಾಮರಾಜರು ಎಷ್ಟು ಅನರ್ಹರಾಗಿದ್ದರೆಂದರೆ ದೇವರಾಜ ಹಾಗೂ ನಂಜರಾಜ ಅವರು ಒಡೆಯರನ್ನು ಬಂಧಿಸಿ ಕಬ್ಬಾಳದುರ್ಗದಲ್ಲಿ ಇಟ್ಟಿದ್ದರು. ಒಡೆಯರು ಬಂಧನದಲ್ಲಿದ್ದಾಗಲೇ ನಿಧನರಾಗಿದ್ದರು.

ಚಿಕ್ಕವರಿದ್ದಾಗ ಮಹಾರಾಜರ ಪಟ್ಟಕ್ಕೇರಿದ ಚಿಕ್ಕಕೃಷ್ಣರಾಜ ಒಡೆಯರು ಯುವಕರಾದ ಮೇಲೆ 1756ರಲ್ಲಿ ತನ್ನ ಮಂತ್ರಿಗಳನ್ನು ಬಂಧಿಸಿ ನಿಜವಾದ ಅಧಿಕಾರವನ್ನು ವಹಿಸಿಕೊಳ್ಳಲು ಸಂಚು ಹೂಡಿದ್ದು ಪತ್ತೆಯಾಗಿ ಸರ್ವಾಧಿಕಾರಿಯಾಗಿದ್ದ ನಂಜರಾಜರು ಅರಮನೆಗೆ ನುಗ್ಗಿ ಚಿಕ್ಕದೇವರಾಜ ಒಡೆಯರನ್ನು ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒತ್ತಾಯಿಸಿ ಅವರ ಮುಖದ ಮುಂದೆಯೇ ಅವರ ಪಕ್ಷಪಾತಿಗಳ ಮೂಗು ಮತ್ತು ಕಿವಿಗಳನ್ನು ಕತ್ತರಿಸಿದರು.

ಒಡೆಯರ ‘ದೇಶಪ್ರೇಮ’ದ ಬಗ್ಗೆ ಎರಡು ಉದಾಹರಣೆಗಳನ್ನು ಕೊಡಬಹುದು. 1824ರ ಅಕ್ಟೋಬರ್‌ನಲ್ಲಿ ಕಿತ್ತೂರಿನಲ್ಲಿ ಚೆನ್ನಮ್ಮನ ನಾಯಕತ್ವದಲ್ಲಿ ನಡೆದ ಹೋರಾಟವನ್ನು ಸದೆ ಬಡಿಯಲು ಒಡೆಯರ ಅಧೀನದಲ್ಲಿದ್ದ ಕುದುರೆ ಸವಾರ ಸೈನಿಕರ ತುಕಡಿಗಳಲ್ಲೊಂದಾದ ‘ಮೈಸೂರು ಕುದುರೆ’ಯ ಎರಡು ತುಕಡಿಗಳನ್ನು ಬ್ರಿಟಿಷರು ಕೋರಿದರು. ಕೋರಿಕೆಯ ಮೇರೆಗೆ ಮೈಸೂರಿನಿಂದ 700 ಕುದುರೆ ಸವಾರಿ-ಸೈನಿಕರು ಕರ್ನಲ್ ಡಿಕನ್ನನ ನೇತೃತ್ವದಲ್ಲಿ ಬೆಳಗಾವಿಯಲ್ಲಿದ್ದ ಬ್ರಿಟಿಷರ ಸೈನ್ಯದ ತುಕಡಿಯನ್ನು ಸೇರಿಕೊಂಡಿತು. ಕಿತ್ತೂರಿನ ಕೋಟೆಯನ್ನು ಭೇದಿಸಿ ಅದನ್ನು ವಶಪಡಿಸಿಕೊಳ್ಳಲಾಯಿತು. 12 ಲಕ್ಷ ರೂ. ಗಳಷ್ಟು ದೊಡ್ಡ ಪ್ರಮಾಣದ ನಿಧಿ ಬ್ರಿಟಿಷರ ಕೈವಶವಾಯಿತು. ಒಡೆಯರ ಬಗ್ಗೆ ಮಾತನಾಡುವ ಕನ್ನಡಿಗರು ಕಿತ್ತೂರು ಚೆನ್ನಮ್ಮನನ್ನು ಮರೆಯಬೇಕಲ್ಲವೇ?

ಹಿಂದುತ್ವ ಭಕ್ತರ ನಾಯಕ ಸಾವರ್ಕರ್ ಅವರು ‘ಭಾರತದ ಸ್ವಾತಂತ್ರ್ಯ ಯುದ್ಧ’ ಎಂದು ಕರೆದಿದ್ದ ಸಿಪಾಯಿಗಳ ದಂಗೆ 1857ರಲ್ಲಿ ಭುಗಿಲೆದ್ದಿತು ಹಾಗೂ ಬ್ರಿಟಿಷರ ಗಟ್ಟಿಯಾದ ಗೆಳೆಯರೆಂದು ರುಜುವಾತು ಮಾಡಿದ ಮಹಾರಾಜರ ಅನುಕರಣೀಯ ನಡವಳಿಕೆಯಿಂದ ದಕ್ಷಿಣ ಭಾರತದ ಸಂರಕ್ಷಣೆ ಆಶ್ವಸ್ಥವಾಯಿತು. 1858ರ ನವೆಂಬರಿನಲ್ಲಿ ಅವರು ಮೈಸೂರಿನ ಸಾರ್ವಜನಿಕ ಖಜಾನೆಯನ್ನು ಸ್ಥಳಾಂತರಿಸಲು ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ಗ್ರಾಮಾಂತರ ಅರಮನೆಯನ್ನು ಬ್ರಿಟಿಷ್ ಕಮಿಶನರ್ ಅವರ ಸುಪರ್ದಿ ಮಾಡಿದ್ದರು. ಇದಲ್ಲದೆ ಸಿಪಾಯಿಗಳ ವಿದ್ರೋಹವನ್ನು ಹತ್ತಿಕ್ಕಲು ಬ್ರಿಟಿಷರ ಬಳಕೆಗಾಗಿ 2,000 ಸಿಲ್ಲದಾರ ಕುದುರೆ ಸವಾರರನ್ನು ಕಳಿಸಿದ್ದರು.

ಒಡೆಯರ ಮಹಾರಾಣಿ ಲಕ್ಷ್ಮೀಅಮ್ಮಣ್ಣಿಯವರು ಹೈದರಲಿಯನ್ನು ಸೋಲಿಸಲು ಬ್ರಿಟಿಷರೊಡನೆ 1782ರ ಅಕ್ಟೋಬರ್ 28ರಂದು ಒಪ್ಪಂದ ಮಾಡಿಕೊಂಡಿದ್ದರು. ನಂತರ ಒಡೆಯರು, ಹೈದರಾಬಾದಿನ ನಿಜಾಮ, ಪುಣೆಯ ಮರಾಠರು ಹಾಗೂ ಬ್ರಿಟಿಷರೊಡನೆ ಸೇರಿ 1799ರಲ್ಲಿ ಟಿಪ್ಪುವನ್ನು ಸೋಲಿಸಿದ್ದರು. ಈ ಯುದ್ಧದಲ್ಲಿಯೇ ಟಿಪ್ಪು ವೀರಮರಣವನ್ನು ಪಡೆದಿದ್ದ. ಟಿಪ್ಪು ಮರಣದ ನಂತರ ಒಡೆಯರು ಬ್ರಿಟಿಷರೊಂದಿಗೆ ಸಬ್ಸಿಡಿಯರಿ ಒಪ್ಪಂದ ಮಾಡಿಕೊಂಡು ಭಿಕ್ಷೆಯಲ್ಲಿ ತಮ್ಮ ಅರಸೊತ್ತಿಗೆಯನ್ನು ಮರಳಿ ಪಡೆದಿದ್ದರು.

ಬ್ರಿಟಿಷರಿಂದ ಭಿಕ್ಷೆಯಲ್ಲಿ ತಮ್ಮ ಅರಸೊತ್ತಿಗೆಯನ್ನು ಮರಳಿ ಪಡೆದ ಒಡೆಯರು ರಾಜ್ಯವನ್ನು ಸುಗಮವಾಗಿ ನಡೆಸಿಕೊಂಡು ಹೋಗುವಲ್ಲಿ ಎಷ್ಟು ಅನರ್ಹರಾಗಿದ್ದರೆಂದರೆ, ಟಿಪ್ಪು ಸತ್ತ ನಂತರ 30 ವರ್ಷಗಳ ಒಳಗೆ ಮೈಸೂರಿನ ಜನ ಮಹಾರಾಜರ ವಿರುದ್ಧ ದಂಗೆ ಎದ್ದರು. ಅದನ್ನು ಒಡೆಯರು ನಿಯಂತ್ರಿಸಲು ಸಾಧ್ಯವಾಗದೇ ಇದ್ದುದರಿಂದ ಬ್ರಿಟಿಷರು ಒಡೆಯರ ಎಲ್ಲಾ ಅಧಿಕಾರಗಳನ್ನೂ ಸಬ್ಸಿಡಿಯರಿ ಒಪ್ಪಂದದ ಅಡಿಯಲ್ಲಿ ತಾವೇ ವಹಿಸಿಕೊಂಡರು. ಒಡೆಯರು ಬ್ರಿಟಿಷರಿಗೆ ಎಷ್ಟೊಂದು ವಿಧೇಯರಾಗಿದ್ದರೆಂದರೆ ಅಕ್ಟೋಬರ್ 1831ರಲ್ಲಿ ಕೃಷ್ಣರಾಜ ಒಡೆಯರು ದಸರಾ ಹಬ್ಬ ಆಚರಿಸುತ್ತಿದ್ದ ಸಮಯದಲ್ಲಿ ಲಾರ್ಡ್ ವಿಲಿಯಂ ಬೆಂಟಿಂಕ್ ಮಹಾರಾಜರಿಗೆ ಪತ್ರ ಬರೆದು ಮೈಸೂರಿನ ಆಡಳಿತವನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕೆಂದು ಹೇಳಿದಾಗ ತುಟಿ ಪಿಟಕ್ಕೆನ್ನದೆ ಮಹಾರಾಜರು ತಕ್ಷಣ ಬಿಟ್ಟುಕೊಟ್ಟರು. ಆದರೆ ಮೈಸೂರಿನ ತಮ್ಮ ಅರಮನೆಯಲ್ಲಿ ತಮ್ಮ ಬದುಕನ್ನು ನಿರಾತಂಕವಾಗಿ ಮುಂದುವರಿಸಿದರು.

ಈ ರೀತಿ ಅಧಿಕಾರದಿಂದ ಚ್ಯುತರಾದ ಒಡೆಯರು ತಮ್ಮ ಅರಸೊತ್ತಿಗೆಯನ್ನು ಆಂಶಿಕವಾಗಿಯೂ ಮರಳಿ ಪಡೆಯಬೇಕಾದರೆ 50 ವರ್ಷಗಳೇ ಬೇಕಾದವು. ಬ್ರಿಟಿಷರು ನೇರವಾಗಿ ಅಧಿಕಾರ ವಹಿಸಿಕೊಂಡ ಈ 50 ವರ್ಷಗಳ ಅವಧಿಯಲ್ಲಿ ಬ್ರಿಟಿಷರು ಮೈಸೂರು ಸಂಸ್ಥಾನದಲ್ಲಿ ಅತ್ಯುತ್ತಮ ಆಡಳಿತ ವ್ಯವಸ್ಥೆಗೆ ಬುನಾದಿ ಹಾಕಿದರು ಎಂದು ಬರೆಯುತ್ತಾರೆ ವಿ.ಪಿ. ಮೆನನ್ ತಮ್ಮ ಪುಸ್ತಕ ‘ದ ಸ್ಟೋರಿ ಆಫ್ ದ ಇಂಟಿಗ್ರೇಶನ್ ಆಫ್ ದ ಇಂಡಿಯನ್ ಸ್ಟೇಟ್ಸ್’ನಲ್ಲಿ.

ನಾಲ್ವಡಿ ಕೃಷ್ಣರಾಜ ಒಡೆಯರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಿಂದುತ್ವ ಭಕ್ತರು ಬಹಳ ಹೊಗಳುತ್ತಾರೆ. ಶತಮಾನದ ಪ್ರಾರಂಭದಿಂದಲೇ ಇಡೀ ಭಾರತದಲ್ಲಿ ಪ್ರಾರಂಭವಾಗಿದ್ದ ಸ್ವಾತಂತ್ರ್ಯ ಹೋರಾಟದ ಪರವಾಗಿ ನಾಲ್ವಡಿ ಅವರು ಏನು ಮಾಡಿದರು? ಬದಲಿಗೆ ಬ್ರಿಟಿಷರಿಗೆ ಅತ್ಯಂತ ವಿಧೇಯರಾಗಿ ನಡೆದುಕೊಂಡರು. ಅವರ ಬ್ರಿಟಿಷ್ ವಿಧೇಯತೆಯ ಬಗ್ಗೆ ಒಂದೆರಡು ಉದಾಹರಣೆಗಳು:

1860ರಲ್ಲಿ ಯುರೋಪಿಯನ್ನರ ಚಿಕ್ಕ ಗುಂಪೊಂದು ಮೈಸೂರಿಗೆ ಬಂದಿಳಿದಾಗ ಅವರಿಗೆ ಒಂದು ಭೋಜನಕೂಟವನ್ನು ಏರ್ಪಡಿಸುವ ಮೂಲಕ ಮಹಾರಾಜರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಅವರ ವಸತಿಗಾಗಿ ಹಾಗೂ ಖಜಾನೆಯ ಸಂರಕ್ಷಣೆಗಾಗಿ ತಮ್ಮ ಒಂದು ಅರಮನೆಯನ್ನು ಒದಗಿಸಿದರಲ್ಲದೆ ನೀಲಗಿರಿಯಿಂದ ಬಳ್ಳಾರಿಗೆ 74ನೆಯ ಹೈಲ್ಯಾಂಡರ್ಸ್ ಅವರ ಬಲವಂತದ ಮಾರ್ಚ್‌ಗೆ ಸಹಾಯಕವಾಗುವಂತೆ ಆನೆಗಳು ಮೊದಲಾದ ತಮ್ಮ ವೈಯಕ್ತಿಕ ಸರಂಜಾಮನ್ನು ಒದಗಿಸಿದರು.

ಮೈಸೂರಿನ ರೆಸಿಡೆಂಟ್ ಕಮಿಶನರ್ ಸರ್ ಮಾರ್ಕ್ ಕಬ್ಬನ್ ಅವರಿಗೆ ಒಡೆಯರು ದಿನಾಂಕ 15, ಮಾರ್ಚ್ 1860ರಲ್ಲಿ ಬರೆದ ಪತ್ರದಲ್ಲಿ ‘‘ನನ್ನನ್ನು ಬ್ರಿಟಿಷರು ರಕ್ಷಿಸಿದ ಹಾಗೆ ಅವರ ಕಲ್ಯಾಣ ಹಾಗೂ ಸ್ಥಿರತೆಗಳೊಂದಿಗೆ ನನ್ನ ಬದುಕು ಹಾಗೂ ಆಸ್ತಿಗಳು ಸಂಬದ್ಧವಾಗಿವೆ. ಆದುದರಿಂದ ಸಾಧ್ಯವಾದಷ್ಟು ನಾನು ಯಾವಾಗಲೂ ನಿಮಗೆ ಸಹಾಯ ನೀಡಲು ಸಿದ್ಧನಿರುತ್ತೇನೆಂಬುದರ ಬಗ್ಗೆ ಆಶ್ವಸ್ಥರಾಗಿರಿ’’ ಎಂದು ಬರೆದಿದ್ದರು.

ನಾಲ್ವಡಿಯರನ್ನು ಅಂದು ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಕರ್ಝನ್ 8, ಆಗಸ್ಟ್ 1902ರಲ್ಲಿ ಮೈಸೂರಿನ ಸಿಂಹಾಸನದ ಮೇಲೆ ಕೂರಿಸಿದರು. ಆಗ ಅವರಿಗೆ 18 ವರ್ಷ ವಯಸ್ಸು. ಆ ಸಂದರ್ಭದಲ್ಲಿ ಬ್ರಿಟಿಷರಿಗೆ ಅಭಿನಂದನೆ ಹೇಳುತ್ತ ನಾಲ್ವಡಿಯವರು ‘‘ನಮ್ಮ ಪ್ರಾಚೀನ ರಾಜವಂಶದ ರೋಮಾಂಚಕ ಅದೃಷ್ಟದೊಂದಿಗೆ ಹೆಣೆದುಕೊಂಡಿರುವ ಮೈಸೂರಿನ ಇತಿಹಾಸವು ತನ್ನ ಆಡಳಿತಗಾರನಲ್ಲಿ ಎಂದೆಂದಿಗೂ ಬ್ರಿಟಿಷ್ ಸಿಂಹಾಸನಕ್ಕೆ ಕೃತಜ್ಞತೆಯ ಭಾವನೆಯನ್ನು ಪ್ರೇರೇಪಿಸಬೇಕು, ಇದು ನಿಷ್ಠೆಗೆ ಒಂದು ವಿಶೇಷ ಗುಣವನ್ನು ಸೇರಿಸುತ್ತದೆ, ಅದಾವುದೆಂದರೆ ಆ ಕೃತಜ್ಞತೆಯನ್ನು ಕೃಪಾಳುಗಳಾದ ಚಕ್ರವರ್ತಿ ಏಳನೆಯ ಎಡ್ವರ್ಡ್ ಅವರಿಗೆ ಸಾರ್ವಜನಿಕವಾಗಿ ಅಭಿವ್ಯಕ್ತಿಸುವುದು ನನ್ನ ಮೊದಲ ಕರ್ತವ್ಯವಾಗಿದೆ’’ ಎನ್ನುವುದು ಎಂದಿದ್ದರು.

ನಾಲ್ವಡಿ ಕೃಷ್ಣರಾಜರು ಈ ಹಿಂದುತ್ವ ಭಕ್ತರು ಹೇಳುವ ಯಾವ ಗುರುಕುಲದಲ್ಲಿಯೂ ಶಿಕ್ಷಣ ಪಡೆಯಲಿಲ್ಲ. ಅವರು ಶಿಕ್ಷಣ ಪಡೆದದ್ದು ಇಂಡಿಯನ್ ಸಿವಿಲ್ ಸರ್ವಿಸ್‌ನಲ್ಲಿದ್ದ ಸರ್ ಸ್ಟುಅರ್ಟ್ ಎಂ.ಫ್ರೇಸರ್ ಅವರ ಸಾನಿಧ್ಯದಲ್ಲಿ. ಅವರು ಮದುವೆಯಾದದ್ದೂ ಯಾವುದೇ ಸ್ಥಾನೀಯ ಕನ್ನಡತಿಯನ್ನಲ್ಲ. ಅವರು ಮದುವೆಯಾಗಿದ್ದು ರಜಪೂತರ ಝಾಲಾ ಪಂಗಡಕ್ಕೆ ಸೇರಿದ ವಾಧ್ವಾನ್ ಪರಿವಾರದ ವಾನಾದ ಥಾಲಾ ಬಾನೇ ಸಿಂಗ್ ಅವರ ಮಗಳನ್ನು.

1857ರ ಮಹಾದಂಗೆಯ ನಂತರ ಇಂಗ್ಲೆಂಡಿನ ಬ್ರಿಟಿಷ್ ಸರಕಾರ ಭಾರತದ ಆಡಳಿತವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಕಿತ್ತುಕೊಂಡು 1858ರಲ್ಲಿ ತಾನೇ ವಹಿಸಿಕೊಂಡಿತ್ತು. ಅದಾಗಿ 50 ವರ್ಷಗಳು ಸಂದಾಗ ಒಡೆಯರು ಅದನ್ನು ವಿಜೃಂಭಣೆಯಿಂದ ಆಚರಿಸಿದರು. ಬ್ರಿಟಿಷ್ ಚಕ್ರವರ್ತಿಯ ರಾಜಾಜ್ಞೆಯನ್ನು ಎಲ್ಲೆಡೆ ಜನರಿಂದ ಓದಿಸಿದರು, ಮುದ್ರಿಸಿ ಹಂಚಿದರು, ಬಡವರಿಗೆ ಅನ್ನ ಸಂತರ್ಪಣೆ ಮಾಡಿದರು.

ಅದೇ ರೀತಿ ಬ್ರಿಟಿಷ್ ಚಕ್ರವರ್ತಿ ಏಳನೆಯ ಎಡ್ವರ್ಡ್ ಸತ್ತ ಸುದ್ದಿ 7 ಮೇ 1910ರಂದು ಮೈಸೂರು ತಲುಪಿತು. ಆಗ ಒಡೆಯರು ಐದು ದಿನಗಳ ರಜೆಯನ್ನು ಘೋಷಿಸಿದರು. ಮೈಸೂರಿನ ರಾಜ-ಧ್ವಜವನ್ನು ಅರ್ಧ-ಎತ್ತರಕ್ಕೆ ಹಾರಿಸಲಾಯಿತು. ಮೈಸೂರು ಹಾಗೂ ಬೆಂಗಳೂರಿನ ಅರಮನೆಗಳಲ್ಲಿ 68 ತೋಪುಗಳನ್ನು ಹಾರಿಸಲಾಯಿತು. ನಂತರ 9 ಮೇ 1910ರಂದು ಐದನೆಯ ಜಾರ್ಜ್ ಅವರನ್ನು ಇಂಗ್ಲೆಂಡಿನ ರಾಜ ಹಾಗೂ ಭಾರತದ ಚಕ್ರವರ್ತಿ ಎಂದು ಘೋಷಿಸಿದಾಗ ಒಡೆಯರು ಚಕ್ರವರ್ತಿಗಳ ಗೌರವಾರ್ಥ 101 ತೋಪುಗಳನ್ನು ಹಾರಿಸಿದ್ದರು. 12 ಡಿಸೆಂಬರ್ 1911ರಲ್ಲಿ ಐದನೆಯ ಜಾರ್ಜ್ ದಿಲ್ಲಿಯಲ್ಲಿ ಮೊದಲ ಬಾರಿಗೆ ತಮ್ಮ ದರಬಾರನ್ನು ನಡೆಸಿದಾಗ ತಮ್ಮ ವಿಧೇಯತೆಯನ್ನು ಪ್ರಕಟ ಪಡಿಸಲು ಒಡೆಯರೂ ದರಬಾರಿನಲ್ಲಿ ಪಾಲ್ಗೊಂಡಿದ್ದರು.

ಮೊದಲ ಜಾಗತಿಕ ಮಹಾಯುದ್ಧದಲ್ಲಿ ಒಡೆಯರು ಎರಡು ಕೋಟಿಗಳಷ್ಟು ರೂಪಾಯಿಗಳನ್ನು ಬ್ರಿಟಿಷರಿಗೆ ಸಹಾಯ ಧನವಾಗಿ ನೀಡಿದರಲ್ಲದೇ 5,000 ಜನರನ್ನು ಬ್ರಿಟಿಷರ ಸೈನ್ಯಕ್ಕೆ ಸೇರಿಸಿದರು. ಮೈಸೂರಿನ ಸೈನ್ಯವನ್ನೂ ಬ್ರಿಟಿಷರಿಗೆ ನೀಡಿದರು.

ಟಿಪ್ಪು ಮೈಸೂರಿನ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಕಿತ್ತು ಹಾಕಿ ಫಾರಸೀ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಎಂದು ಹಿಂದುತ್ವ ಭಕ್ತರು ಸುಳ್ಳು ಹರಡುತ್ತಾರೆ. ಆದುದರಿಂದ ಕೊನೆಯದಾಗಿ ಒಡೆಯರ ಕನ್ನಡ ಪ್ರೇಮದ ಬಗ್ಗೆ ಒಂದೆರಡು ಮಾತುಗಳು. ಕಂಠೀರವ ನರಸರಾಜರು 1646ನಲ್ಲಿ ಟಂಕಿಸಿದ ನಾಣ್ಯದ ಒಂದು ಪಾರ್ಶ್ವದಲ್ಲಿ ‘ಕಂಠೀರಾಯ’ ಎಂದು ಕನ್ನಡದ ಲಿಪಿಯಲ್ಲಿ ಬರೆಸದೆ ದೇವನಾಗರಿ ಲಿಪಿಯಲ್ಲಿ ಬರೆಸಿದ್ದರು. ನಂತರ ಮೂರನೆಯ ಕೃಷ್ಣರಾಜ ಒಡೆಯರು ಟಂಕಿಸಿದ ನಾಣ್ಯದಲ್ಲೂ ತಮ್ಮ ಹೆಸರನ್ನು ದೇವನಾಗರಿ ಲಿಪಿಯಲ್ಲಿ ಬರೆಸಿದ್ದರು.

ಒಡೆಯರು ತಮ್ಮ ರಾಜಮುದ್ರೆಯಲ್ಲಿ ಫಾರಸೀ ಭಾಷೆಯನ್ನು, ಲಿಪಿಯನ್ನು ಬಳಸುತ್ತಿದ್ದರು. ಟಿಪ್ಪು ಸತ್ತ ನಂತರ ಬ್ರಿಟಿಷರೊಡನೆ ರಾಣಿ ಲಕ್ಷ್ಮಮ್ಮಣ್ಣಿಯವರು ಒಪ್ಪಂದ ಮಾಡಿಕೊಂಡಿದ್ದು ಮೈಸೂರಿನ ಕನ್ನಡ ಭಾಷೆಯಲ್ಲಲ್ಲ, ಮೊಗಲರ ಪರ್ಶಿಯನ್ ಭಾಷೆಯಲ್ಲಿ. ಕನ್ನಡಿಗರ ಹಣದಿಂದ ಶ್ರೀರಂಗಪಟ್ಟಣದ ಹತ್ತಿರ ಸೇತುವೆ ಕಟ್ಟಿಸಿ ಅದಕ್ಕೆ ‘ವೆಲ್ಲೆಸ್ಲೀ ಸೇತುವೆ’ ಎಂದು ಹೆಸರು ಕೊಟ್ಟು ಅದರ ಫಲಕವನ್ನು ಫಾರಸೀ ಭಾಷೆ ಹಾಗೂ ಲಿಪಿಯಲ್ಲಿ ಬರೆಸಿದ್ದೂ ಒಡೆಯರೇ. ರಾಮನಗರಕ್ಕೆ ಮೈಸೂರಿನ ಬ್ರಿಟಿಷ್ ರೆಸಿಡೆಂಟರಾದ ಸರ್ ಬ್ಯಾರಿ ಕ್ಲೋಸ್ ಅವರ ಹೆಸರಿನಲ್ಲಿ ‘ಕ್ಲೋಸ್‌ಪೇಟೆ’ ಎಂದು ಹೆಸರು ಕೊಟ್ಟವರೂ ಒಡೆಯರೇ. 27 ಡಿಸೆಂಬರ್ 1807ರಲ್ಲಿ ನಮ್ಮ ಕನ್ನಡಿಗ ಒಡೆಯರು ತಮ್ಮ ಕನ್ನಡಿಗ ದಿವಾನ್ (ಇದೂ ಫಾರಸೀ ಶಬ್ದ, ಕನ್ನಡದಲ್ಲಿ ಮಂತ್ರಿ) ಪೂರ್ಣಯ್ಯನವರಿಗೆ ಯಳಂದೂರಿನ ಜಹಾಗೀರನ್ನು ಬರೆದು ಕೊಟ್ಟ ಸನದು ಕನ್ನಡದಲ್ಲಲ್ಲ, ಫಾರಸೀ ಭಾಷೆಯಲ್ಲಿತ್ತು.

ಟಿಪ್ಪು ಹೆಸರನ್ನು ವಿರೋಧಿಸುವವರು ಒಡೆಯರ ಬಗೆಗಿನ ಈ ವಿಷಯಗಳನ್ನೂ ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಬಾಪು ಹೆದ್ದೂರಶೆಟ್ಟಿ

contributor

Similar News